ದಿನದ ಸುದ್ದಿ
ದೇಶದ ಎಲ್ಲ ಗ್ರಾಮಗಳಿಗೆ 5ಜಿ ತಂತ್ರಜ್ಞಾನ ಮೂಲಕ ಬ್ರಾಡ್‌ಬಾಂಡ್ ಸೇವೆ : ಪ್ರಧಾನಿ ಮೋದಿ
ಸುದ್ದಿದಿನ, ಬೆಂಗಳೂರು : ಬೆಂಗಳೂರಿನಲ್ಲಿ ಶುಕ್ರವಾರ ಮೂರು ದಿನಗಳ ಸಿಮಿಕಾನ್-2022 ಸಮ್ಮೇಳನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಪ್ರಸ್ತುತ ಜಗತ್ತಿನಲ್ಲಿ ಸೆಮಿ ಕಂಡಕ್ಟರ್ ನಿರ್ಣಾಯಕ ಪಾತ್ರ ವಹಿಸುತ್ತಿದ್ದು, ಜಾಗತಿಕ ಸೆಮಿ ಕಂಡಕ್ಟರ್ ಪೂರೈಕೆ ಸರಪಳಿಯಲ್ಲಿ ಭಾರತವನ್ನು ಪ್ರಮುಖ ಪಾಲುದಾರ ರಾಷ್ಟ್ರವನ್ನಾಗಿ ಮಾಡಲು ಸಾಮೂಹಿಕ ಪ್ರಯತ್ನ ಅಗತ್ಯ ಎಂದು ಹೇಳಿದರು.
ಉನ್ನತ ತಂತ್ರಜ್ಞಾನ, ಅತ್ಯುತ್ತಮ ಗುಣಮಟ್ಟ ಹಾಗೂ ಅಧಿಕ ವಿಶ್ವಾಸಾರ್ಹತೆಯೊಂದಿಗೆ ಕಾರ್ಯನಿರ್ವಹಿಸಲು ಭಾರತ ಬದ್ಧವಾಗಿದೆ. ಸೆಮಿಕಂಡಕ್ಟರ್ ತಂತ್ರಜ್ಞಾನ ವಲಯದಲ್ಲಿ ಹೂಡಿಕೆಗೆ ಭಾರತ ಸೂಕ್ತ ರಾಷ್ಟ್ರವಾಗಿದೆ.
ಭಾರತ 1.3 ಶತಕೋಟಿ ಜನರಿಗೆ ಡಿಜಿಟಲ್ ಮೂಲಸೌಕರ್ಯ ಸಂಪರ್ಕ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಹಣಕಾಸು ಒಳಗೊಳ್ಳುವಿಕೆ, ಬ್ಯಾಂಕಿಂಗ್ ಹಾಗೂ ಡಿಜಿಟಲ್ ಪಾವತಿಯಲ್ಲಿ ಕ್ರಾಂತಿಕಾರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆರೋಗ್ಯದಿಂದ ಕಲ್ಯಾಣದವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಬಲೀಕರಣಕ್ಕೆ ಆದ್ಯತೆ ನೀಡಿದ್ದು, ಎಲ್ಲ ವಲಯಗಳಲ್ಲಿ ಪರಿವರ್ತನೆಗೆ ಆದ್ಯತೆ ನೀಡಲಾಗಿದೆ.
ಈ ಬೆಳವಣಿಗೆ ಮೂಲಕ ದೇಶದ ಎಲ್ಲ ಹಳ್ಳಿಗಳಿಗೆ 5ಜಿ ತಂತ್ರಜ್ಞಾನದ ಮೂಲಕ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳುತ್ತಿದ್ದು, ಶುದ್ಧ ಇಂಧನ ತಂತ್ರಜ್ಞಾನ ಒಳಗೊಂಡಂತೆ ಮುಂದಿನ ಪೀಳಿಗೆಯ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಕ್ರಾಂತಿಕಾರಕ ಹೆಜ್ಜೆ ಇಡಲಿದೆ ಎಂದು ಹೇಳಿದರು.
ಜಗತ್ತಿನ ಅತ್ಯಂತ ತ್ವರಿತ ಬೆಳವಣಿಗೆ ಕಾಣುತ್ತಿರುವ ನವೋದ್ಯಮ ಪರಿಸರ ವಲಯದಿಂದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. 2026ರ ವೇಳೆಗೆ ಸೆಮಿ ಕಂಡಕ್ಟರ್ ವಲಯದಲ್ಲಿ 80 ಶತಕೋಟಿ ಡಾಲರ್ ವಹಿವಾಟು ನಡೆಯುವ ನಿರೀಕ್ಷೆ ಇದ್ದು,2030ರ ವೇಳೆಗೆ 110 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ. ಸರ್ಕಾರ ಸುಗಮ ವ್ಯವಹಾರ ನಡೆಸುವ ನಿಟ್ಟಿನಲ್ಲಿ ವ್ಯಾಪಕ ಸುಧಾರಣೆಗಳನ್ನು ತರಲಾಗುತ್ತಿದೆ.
21ನೇ ಶತಮಾನದ ಅಗತ್ಯಗಳಿಗೆ ಅನುಗುಣವಾಗಿ ಯುವ ಭಾರತೀಯರಿಗೆ ಕೌಶಲ್ಯ ಮತ್ತು ತರಬೇತಿಯನ್ನು ಕಲ್ಪಿಸುವ ಜೊತೆಗೆ ಜಗತ್ತಿನ ಸೆಮಿಕಂಡಕ್ಟರ್ ವಿನ್ಯಾಸ ತಂತ್ರಜ್ಞರ ಪೈಕಿ ಶೇಕಡ ೨೦ರಷ್ಟು ಪಾಲನ್ನು ಭಾರತ ಹೊಂದಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243