ದಿನದ ಸುದ್ದಿ
5ನೇ ಹಂತದ ಲೋಕಸಭೆ ಚುನಾವಣೆ; ಶೇಕಡ 60.09ರಷ್ಟು ಮತದಾನ
ಸುದ್ದಿದಿನ ಡೆಸ್ಕ್ : ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ನಿನ್ನೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇಕಡ 60.09 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.
ಈ ಹಂತದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಹರಡಿರುವ 49 ಸಂಸದೀಯ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಇದರಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ ಏಳು, ಒಡಿಶಾ ಮತ್ತು ಬಿಹಾರದ ತಲಾ ಐದು, ಜಾರ್ಖಂಡ್‌ನ ಮೂರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ತಲಾ ಒಂದು ಸ್ಥಾನಗಳು ಸೇರಿವೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ರಾತ್ರಿ 11.30ರ ವೇಳೆಗೆ ಶೇಕಡ 57 ರಷ್ಟು ಮತದಾನವಾಗಿದೆ. ಇದು ಕಳೆದ 35 ವರ್ಷಗಳಲ್ಲೇ ಅತಿ ಹೆಚ್ಚು ಮತದಾನವಾಗಿದ್ದು, ಸಂಪೂರ್ಣ ಶಾಂತಿಯುತವಾಗಿದೆ.
ಬಿಹಾರದಲ್ಲಿ ಶೇಕಡ 55 ರಷ್ಟು ಮತದಾನವಾಗಿದ್ದರೆ, ಜಾರ್ಖಂಡ್‌ನಲ್ಲಿ ಶೇಕಡಾ 63 ರಷ್ಟು, ಲಡಾಖ್‌ನಲ್ಲಿ ಶೇಕಡ 70 ರಷ್ಟು ಮತದಾನವಾಗಿದೆ, ಮಹಾರಾಷ್ಟ್ರದಲ್ಲಿ 54 ಕ್ಕಿಂತ ಹೆಚ್ಚು, ಒಡಿಶಾದಲ್ಲಿ ಶೇಕಡ 69 ರಷ್ಟು, ಉತ್ತರ ಪ್ರದೇಶದಲ್ಲಿ ಸುಮಾರು ಶೇಕಡ 58 ರಷ್ಟು ಮತದಾನವಾಗಿದೆ. ಮತ್ತು ಪಶ್ಚಿಮ ಬಂಗಾಳದಲ್ಲಿ ಸುಮಾರು ಶೇಕಡ 76 ರಷ್ಟು ಮತದಾನವಾಗಿರುವ ಕುರಿತು ವರದಿಯಾಗಿದೆ.
ಈ ಹಂತದ ಮುಕ್ತಾಯದೊಂದಿಗೆ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 428 ಸಂಸದೀಯ ಕ್ಷೇತ್ರಗಳ ಮತದಾನ ಪೂರ್ಣಗೊಂಡಿದೆ. ಅರುಣಾಚಲ ಪ್ರದೇಶ, ಸಿಕ್ಕಿಂ, ಆಂಧ್ರಪ್ರದೇಶದ ರಾಜ್ಯ ವಿಧಾನಸಭೆಗಳು ಮತ್ತು ಒಡಿಶಾ ರಾಜ್ಯ ವಿಧಾನಸಭೆಯ 63 ಕ್ಷೇತ್ರಗಳಿಗೂ ಮತದಾನ ಪೂರ್ಣಗೊಂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243