ನೆಲದನಿ
ಮೇ 4-5, ಗದಗ | 6ನೇ ಮೇ ಸಾಹಿತ್ಯ ಮೇಳದಲ್ಲಿ ತೆಲುಗಿನ ಜನಪ್ರಿಯ ಕವಿ ‘ಗೋರೆಟಿ ವೆಂಕನ್ನ’
ತೆಲುಗಿನ ಜನಪ್ರಿಯ ಕವಿ, ಹಾಡುಗಾರ, ಚಲನಚಿತ್ರ ಗೀತರಚನಕಾರ, ಹೋರಾಟಗಾರ ಗೋರೆಟಿ ವೆಂಕನ್ನ (1963).‘ಹಾಡುಕವಿ’ಯೆಂದೇ ಖ್ಯಾತರಾಗಿರುವ ಅವರು ಈಗ ತೆಲಂಗಾಣ ರಾಜ್ಯದ ಭಾಗವಾಗಿರುವ ಮಹಬೂಬನಗರ ಜಿಲ್ಲೆಯ ಗೋರೆಟಿ ಈರಮ್ಮ-ನರಸಿಂಹ ದಂಪತಿಗಳ ಮಗನಾಗಿ ಗೌರಾರಾಮ ಹಳ್ಳಿಯಲ್ಲಿ ಜನಿಸಿದರು.
ಬಾಲ್ಯದಿಂದಲೂ ರೈತರ, ಕೂಲಿಕಾರರ ನಡುವೆ ಸ್ಥಳೀಯ, ಜನಪದ ಹಾಡುಗಳನ್ನು ಹಾಡುತ್ತ ಬೆಳೆದರು. ಕ್ರಮೇಣ ಜನಹೋರಾಟಗಳ ಹಿನ್ನೆಲೆಯಲ್ಲಿ ಸ್ವಂತ ರಚನೆಗಳನ್ನು ರಚಿಸಿ ಅವನ್ನು ಹಾಡಲು ಮೊದಲು ಮಾಡಿದರು. ಅವರ ರಚನೆಗಳ ಮೇಲೆ ದೇವುಲಪಲ್ಲಿ ಕೃಷ್ಣ ಶಾಸ್ತ್ರಿ, ನಂದೂರಿ ಸುಬ್ಬರಾವ್, ಕೊಣಕಲ್ಲ ವೆಂಕಟರತ್ನಂ ಅವರ ಪ್ರಭಾವ ಇದೆಯೆಂದು ಗುರುತಿಸಲಾಗುತ್ತದೆ.
ಪ್ರಕೃತಿ ಮತ್ತು ಜನರೇ ಅವರ ಹಾಡುಗಳಲ್ಲಿ ತುಂಬಿದ್ದಾರೆ. ನೆಲದ ಚೆಲುವು, ಗ್ರಾಮಜೀವನದ ಸೊಬಗು, ತೆಲಂಗಾಣ ಸಂಸ್ಕೃತಿ ವೈಶಿಷ್ಟ್ಯಗಳು ಅವರ ಹಾಡಿನಲ್ಲಿವೆ. ಎಂದೇ ಅವರ ಹಾಡುಗಳು ಜನ ಸಾಮಾನ್ಯರ ಮೆಚ್ಚಿಗೆಗೆ ಪಾತ್ರವಾಗಿ ಪ್ರಸಿದ್ಧವಾದವು. ಅವರ ಖ್ಯಾತಿ ಸಿನಿಮಾ ರಂಗವನ್ನೂ ಸೆಳೆದು ಹಲವು ತೆಲುಗು ಚಲನಚಿತ್ರಗಳಿಗೆ ಗೀತರಚನೆ ಮಾಡಿದರು. ಅಲ್ಲದೆ ರೇಲಾ ರೆ ರೇಲಾ ಎಂಬ ಟಿವಿ ಜನಪದ ಗೀತೆಗಳ ಸರಣಿ ಕಾರ್ಯಕ್ರಮದ ತೀರ್ಪುಗಾರರಾಗುವ ಮೂಲಕ ನಾಡಿನಾದ್ಯಂತ ಜನಪ್ರಿಯತೆ ಗಳಿಸಿದರು. ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ಸಮಯದಲ್ಲಿ ಅದನ್ನು ಬೆಂಬಲಿಸಿ ಅನೇಕ ಹೋರಾಟಗೀತೆಗಳನ್ನು ಅವರು ರಚಿಸಿದರು.
ಏಕು ನಾದಂ ಮೋತ, ರೇಲ ಪೂತಲು, ಅಲಸಂದ್ರ ವಂಕ, ರಾವಿನೀಡ, ಪೂಸಿನ ಪುನ್ನಂ ಮೊದಲಾದ ಕವನಸಂಗ್ರಹಗಳು ಪ್ರಕಟವಾಗಿವೆ. ಹಲವು ಹಾಡಿನ ಸಂಗ್ರಹಗಳೂ ಹೊರಬಂದು ಜನಪ್ರಿಯವಾಗಿವೆ.
ಇದೇ ಮೇ 4-5ರಂದು ಗದಗದ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ 6ನೇ ಮೇ ಸಾಹಿತ್ಯ ಮೇಳದ ‘ಅಭಿವೃದ್ಧಿ ಭಾರತ: ಕವಲುದಾರಿಗಳ ಮುಖಾಮುಖಿ’ ಸಂವಾದ ಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಮೇ 5ರಂದು ವೆಂಕನ್ನ ಹಾಡಲಿದ್ದಾರೆ, ಆಡಲಿದ್ದಾರೆ. ಇರಲೇಬೇಕು ನೀವು ಅಂದು ಅವರೊಡನೆ, ನಮ್ಮೊಡನೆ ಹೆಜ್ಜೆ-ದನಿಗೂಡಿಸಲಿಕ್ಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243