ದಿನದ ಸುದ್ದಿ

ಕ್ಯಾರಿಬ್ಯಾಗ್‍ ಗೆ 7 ರೂ ಬಿಲ್ ; ಗ್ರಾಹಕರಿಗೆ 5ಸಾವಿರ ದಂಡ ನೀಡಲು ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರಿಟೇಲ್ ಲಿಮಿಟೆಡ್ ಕಂಪನಿಗೆ ಆದೇಶ

Published

on

ಸುದ್ದಿದಿನ,ದಾವಣಗೆರೆ : ಎರಡು ಜೊತೆ ಶೂ ಹಾಗೂ ಬ್ಯಾಗ್ ಖರೀದಿಸಿದಾಗ ಅನುಮತಿ ಇಲ್ಲದೇ ಕ್ಯಾರಿಬ್ಯಾಗ್‍ನ ಶುಲ್ಕ ರೂ.7 ಅನ್ನು ಬಿಲ್ ಜೊತೆಗೆ ಸೇರಿಸಿ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಗ್ರಾಹಕರಿಗೆ ರೂ.5 ಸಾವಿರ ಪರಿಹಾರ ಹಾಗೂ ರೂ.3 ಸಾವಿರ ದಾವೆಯ ಖರ್ಚನ್ನು ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರಿಟೇಲ್ ಲಿಮಿಟೆಡ್ ಕಂಪನಿ ‘ಪ್ಯಾಂತಲೂನ್ಸ್’ ಮಳಿಗೆಗೆ ನಿರ್ದೇಶನ ನೀಡಿದೆ.

ಹರಿಹರದ ವಕೀಲರಾದ ನೀತು ಎಚ್.ಬಿ. ಅವರು 2020ರ ಫೆಬ್ರುವರಿ 1 ರಂದು ಶಾಮನೂರು ರಸ್ತೆಯಲ್ಲಿರುವ ಆದಿತ್ಯ ಬಿರ್ಲಾ ಫ್ಯಾಷನ್ ಆಂಡ್ ರಿಟೇಲ್ ಲಿಮಿಟೆಡ್ ಕಂಪನಿ ‘ಪ್ಯಾಂತಲೂನ್ಸ್’ ಮಳಿಗೆಯಲ್ಲಿ ಎರಡು ಶೂ ಹಾಗೂ ಬ್ಯಾಗ್ ಖರೀದಿಸಿದ್ದರು. ರೂ.2,004 ಬಿಲ್‍ನಲ್ಲಿ ಕ್ಯಾರಿಬ್ಯಾಗ್‍ಗಾಗಿ ರೂ.7 ಅನ್ನು ಸೇರಿಸಲಾಗಿತ್ತು.

ಕ್ಯಾರಿಬ್ಯಾಗ್ ಮೇಲೆ ಕಂಪನಿಯ ಹೆಸರು ನಮೂದಿಸಿರುವುದರಿಂದ ಬ್ಯಾಗ್‍ನ ಶುಲ್ಕವನ್ನು ಪಡೆಯದಂತೆ ಮಾಡಿದ್ದ ಮನವಿಗೆ ಮಳಿಗೆಯ ಅಧಿಕಾರಿಗಳು ಕಿವಿಗೊಡಲಿಲ್ಲ. ಬದಲಾಗಿ ಉಳಿದ ಗ್ರಾಹಕರ ಎದುರಿನಲ್ಲೇ ಅಪಹಾಸ್ಯ ಮಾಡಿದ್ದರು. ಹೀಗಾಗಿ ನೀತು ಅವರು 2020ರ ಮೇ 20ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಚ್.ಎನ್.ಮೀನಾ ಹಾಗೂ ಸದಸ್ಯ ತ್ಯಾಗರಾಜನ್ ಸಿ.ಎಸ್ ಅವರು ಕಂಪನಿಯು ಸೇವಾಲೋಪವೆಸಗಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರತಿವಾದಿಗಳಾದ ಮುಂಬೈನ ಅದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರಿಟೇಲ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಂಪನಿಯ ದಾವಣಗೆರೆಯ ಮಳಿಗೆಯ ಪ್ರಧಾನ ವ್ಯವಸ್ಥಾಪಕ ಅವರು ಕ್ಯಾರಿಬ್ಯಾಗ್‍ಗೆ ವಿಧಿಸಿದ್ದ ರೂ.7 ಅನ್ನು ವಾಪಸ್ ನೀಡಬೇಕು. ಜೊತೆಗೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡಿರುವುದಕ್ಕೆ ರೂ.5 ಸಾವಿರ ಪರಿಹಾರ ಮತ್ತು ದಾವೆ ವೆಚ್ಚವಾಗಿ ರೂ.3 ಸಾವಿರವನ್ನು 30 ದಿನಗಳ ಒಳಗೆ ನೀಡಬೇಕು. ಸಕಾಲಕ್ಕೆ ಪಾವತಿಸದಿದ್ದರೆ ಶೇ.6ರಷ್ಟು ಬಡ್ಡಿ ಸಹಿತರ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಮಳಿಗೆಗೆ ಕಾಲ ಕಾಲಕ್ಕೆ ತೆರಳಿ ಕ್ಯಾರಿ ಬ್ಯಾಗ್‍ಗೆ ಶುಲ್ಕ ಪಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕ್ಯಾರಿ ಬ್ಯಾಗ್‍ಗೆ ಶುಲ್ಕ ಪಡೆಯುವುದಿಲ್ಲ ಎಂಬ ಫಲಕ ಹಾಕಬೇಕು ಎಂದು ಅದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಗ್ರಾಹಕರ ಪರವಾಗಿ ವಕೀಲ ವಿಜಯೇಂದ್ರ ಎಂ.ಎನ್.ವಾದ ಮಂಡಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version