ದಿನದ ಸುದ್ದಿ
ಸಂವಿಧಾನ ಅಳವಡಿಕೆಗೆ 75 ವಸಂತಗಳು; ಕೇಂದ್ರ ಸರ್ಕಾರದಿಂದ ವರ್ಷಪೂರ್ತಿ ಕಾರ್ಯಕ್ರಮಗಳ ಆಯೋಜನೆ
ಸುದ್ದಿದಿನಡೆಸ್ಕ್:ಭಾರತ ಸಂವಿಧಾನ ಅಂಗೀಕಾರವಾಗಿ, 75 ನೇ ವರ್ಷ ತುಂಬಿದ ಸ್ಮರಣಾರ್ಥ, ನಾಳೆಯಿಂದ ವರ್ಷಪೂರ್ತಿ ಆಚರಣೆಗಳನ್ನು ಸರ್ಕಾರ ಘೋಷಿಸಿದೆ. 2024 ವರ್ಷವು ಸಂವಿಧಾನ ಅಂಗೀಕಾರವಾದ 75ನೇ ವಾರ್ಷಿಕೋತ್ಸವವನ್ನು ಗುರುತಿಸುತ್ತದೆ.
ನವೆಂಬರ್ 26, 1949 ರಂದು, ಸಂವಿಧಾನ ರಚನಾ ಸಭೆಯು ಅಂಗೀಕರಿಸಿ, 26 ಜನವರಿ 1950 ರಂದು ಸಂವಿಧಾನ ಜಾರಿಗೊಂಡಿತು. ಇದೇ ಸ್ಮರಣಾರ್ಥ, ಮುಂದಿನ ವರ್ಷ ದೆಹಲಿಯಲ್ಲಿಂದು ನವೆಂಬರ್ 26ರವರೆಗೆ ದೇಶದಾದ್ಯಂತ ಆಚರಣೆಗಳು ಮುಂದುವರೆಯಲಿವೆ.
ಈ ಸಂಭ್ರಮಾಚರಣೆಯ ಅಂಗವಾಗಿ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ವಿವರಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಭವ್ಯವಾದ ಕಾರ್ಯಕ್ರಮವನ್ನು ನಾಳೆ ಆಯೋಜಿಸಲಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು, ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದೇಶದ ಪ್ರತಿ ಜಿಲ್ಲೆ, ಗ್ರಾಮಗಳಲ್ಲಿ ಕಾರ್ಯಕ್ರಮ ಆಚರಿಸಿ, ಸಂವಿಧಾನದ ಪ್ರಸ್ತಾವನೆಯನ್ನು ಓದಲಾಗುವುದು. ಸರಳ ಭಾಷೆಯಲ್ಲಿ ಸಂವಿಧಾನವನ್ನು ಜನರಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ನಮ್ಮ ಸಂವಿಧಾನ ಪ್ರಜಾಪ್ರಭುತ್ವದ ಅತಿದೊಡ್ಡ ಶಕ್ತಿಯಾಗಿದ್ದು, ದೇಶಕ್ಕೆ ಸಂವಿಧಾನದ ಕೊಡುಗೆ ಅಮೂಲ್ಯ ಎಂದು ಅವರು ಮಾಹಿತಿ ನೀಡಿದರು.
ಕೇಂದ್ರ ಕಾನೂನು ಮತ್ತು ನ್ಯಾಂಯಾAಗ ಇಲಾಖೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಈ ಹಿಂದೆ ನವೆಂಬರ್ 26ನ್ನು ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು. 2015 ರಿಂದ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಂವಿಧಾನದ ಮೌಲ್ಯಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಈ ಆಚರಣೆಯ ಆಶಯವಾಗಿದೆ ಎಂದು ಹೇಳಿದರು.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಸಂವಿಧಾನ ನಮ್ಮೆಲ್ಲರ ಸ್ವಾಭಿಮಾನವಾಗಿದ್ದು, ಸಹೋದರತ್ವದ ಭಾವನೆಯನ್ನು ಮೂರ್ತರೂಪಕ್ಕೆ ತಂದ ಜೀವಂತಿಕೆಯಾಗಿದೆ. ಭವಿಷ್ಯದ ಆಧಾರ ಶಿಲೆಯಾಗಿರುವ ಸಂವಿಧಾನದ ಕುರಿತು ಆಯೋಜಿಸಿರುವ ಈ ಕಾರ್ಯಕ್ರಮವನ್ನು ದೇಶದ ಹಿತಕ್ಕಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243