ರಾಜಕೀಯ
ಸಂವಿಧಾನ ಮತ್ತು ಧರ್ಮ : ಸದ್ಯದ ಅಪವ್ಯಾಖ್ಯಾನ
ಸಮಸ್ಯೆಯೊಂದನ್ನು ನಿರ್ಲಕ್ಷಿಸಿದಾಗ ಅದು ತನ್ನ ಪ್ರಾಬಲ್ಯ ಹಿಗ್ಗಿಸಿಕೊಳ್ಳಲಾರಂಭಿಸುತ್ತದೆ. ಸಕಾಲಿಕ ಪರಿಹಾರೋಪಾಯ ಶೋಧಿಸಿಕೊಂಡು ಎದುರುಗೊಳ್ಳದಿದ್ದರೆ ಅದು ಬೃಹದಾಕಾರ ಪಡೆದುಕೊಳ್ಳುತ್ತದೆ. ಬಿಡಿಸಲಾಗದ ಬಿಕ್ಕಟ್ಟಾಗಿ ಮಾರ್ಪಾಡಾಗಿ ನಾನಾ ಸಂಕಟಗಳನ್ನು ನೆಲೆಗೊಳಿಸಿಬಿಡುತ್ತದೆ. ಪರಿಹಾರದ ಮಾರ್ಗ ಯಾವುದು ಎಂಬುದು ಗೊತ್ತಿದ್ದರೂ ಅದನ್ನು ಅನುಸರಿಸುವುದಕ್ಕೆ ಕಷ್ಟಸಾಧ್ಯ ಎಂಬ ಭಾವವನ್ನು ಸಾರ್ವತ್ರಿಕಗೊಳಿಸುವಷ್ಟರ ಮಟ್ಟಿಗೆ ಆ ಸಂಕಟಗಳು ತೀವ್ರವಾಗಿ ಬಾಧಿಸುತ್ತವೆ. ಹೀಗೆ ಸಂಕಟಗೊಳಪಟ್ಟ ವ್ಯಕ್ತಿಗತ ಸಂಕೀರ್ಣತೆ ಸಾಮೂಹಿಕ ಸ್ವರೂಪ ಆವಾಹಿಸಿಕೊಂಡು ಜನಸಮುದಾಯಗಳನ್ನು ದಿಗ್ಮೂಢರನ್ನಾಗಿಸುತ್ತದೆ. ಆಂತರ್ಯದೊಳಗೆ ಮೂಡುವ ಅಸಮಾಧಾನ ಸಹನೆಯನ್ನು ಕಳೆದಿಡುತ್ತದೆ. ಆ ಸಂದರ್ಭದ ಅಸಹನೆಯು ಹಿಂಸೆಯೊಂದಿಗಿನ ದೃಷ್ಟಿಕೋನಗಳನ್ನು ಚಿಗುರಿಸಿಕೊಳ್ಳಲು ನೆರವಾಗುತ್ತದೆ. ಈ ಹಂತದಲ್ಲಿಯೇ ದ್ವಂದ್ವ, ಅಸ್ಪಷ್ಟತೆ, ಅವಿವೇಕತನ, ಅಸಂಬದ್ಧತೆ ಮತ್ತು ಕ್ರೌರ್ಯದ ನಡವಳಿಕೆಗಳು ದೇಶದ ಸಾಮಾಜಿಕ ಅಸ್ಮಿತೆಯನ್ನೇ ಧ್ವಂಸಗೊಳಿಸುತ್ತವೆ. ಭಾರತ ಅಂಥದ್ದೊಂದು ಅಪಾಯಕಾರಿ ಪ್ರವೃತ್ತಿಯ ಮಿತಿಯೊಂದಿಗೆ ಹೆಜ್ಜೆಯಿರಿಸುತ್ತಿದೆ. ಇದನ್ನು ತಿಳಿದುಕೊಂಡು ಸರಿಹಾದಿ ತೋರುವ ದಾರ್ಶನಿಕತೆಯನ್ನು ನಿರೂಪಿಸಬೇಕಾದ ನಾಯಕರಲ್ಲದ ನಾಯಕರೆನ್ನಿಸಿಕೊಂಡವರು ಸಮಸ್ಯಾತ್ಮಕತೆಯನ್ನು ಸ್ಥಾಯಿಯಾಗಿಸಿ ತಮ್ಮ ಅಸ್ತಿತ್ವವನ್ನು ಶಾಶ್ವತಗೊಳಿಸಿಕೊಳ್ಳುವ ಹಂಬಲಗೊಳೊಂದಿಗೇ ಗುರುತಿಸಿಕೊಂಡಿದ್ದಾರೆ.
ಈ ದೇಶವನ್ನು ಕಾಡುತ್ತಿರುವ ಸಮಸ್ಯೆಗಳು ಯಾವುವು ಎಂಬುದು ಅವುಗಳ ವ್ಯತಿರಿಕ್ತ ಪರಿಣಾಮಗಳಿಗೆ ಈಡಾದವರೂ ಸೇರಿದಂತೆ ಹಲವರಿಗೆ ಗೊತ್ತಿದೆ. ಈ ಸಮಸ್ಯೆಗಳ ಮೂಲ ಎಲ್ಲಿಯದು ಎಂಬುದರ ಅರಿವೂ ಇದೆ. ಇಡೀ ದೇಶದಲ್ಲಿ ಸಮಸ್ಯೆಗಳೇ ಇಲ್ಲ ಎಂಬಂಥ ಪರಮೋಚ್ಛ ಭ್ರಮೆಯ ವರ್ತುಲಕ್ಕೆ ಸಿಲುಕೊಳ್ಳಬಾರದು ಎಂಬ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದಕ್ಕೆ ಅನುಕೂಲ ಒದಗಿಸಿಕೊಡುವ ನಕಾರಾತ್ಮಕತೆಯ ಅನುಭವವು ಪ್ರತಿಯೊಬ್ಬರಿಗೂ ಆಗುತ್ತಲೇ ಇರುತ್ತದೆ. ಆದರೆ, ಅದನ್ನು ಹಲವರು ಅಭಿವ್ಯಕ್ತಿಸುವುದಿಲ್ಲ. ಬದಲಾವಣೆ ಬಯಸುವ ಚಿಂತಕರು ಮತ್ತು ಜನಸಾಮಾನ್ಯ ವಲಯ ಆ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆ ಅವರು ಮುಕ್ತ ಆಲೋಚನೆಯನ್ನು ಹರಿಬಿಟ್ಟಾಗ ಅದು ಅಪಾಯಕಾರಿ ಎಂದು ತಪ್ಪಾಗಿ ಅರ್ಥೈಸುವ ಜಾಯಮಾನದ ನಡೆಯನ್ನು ರಾಜಕೀಯ ವಲಯ ಈಗೀಗ ನೆಚ್ಚಿಕೊಳ್ಳುತ್ತಿದೆ. ಇಂಥ ನಡೆಯ ಕಾರಣಕ್ಕಾಗಿಯೇ ಸಂವಿಧಾನ ಮತ್ತು ಧರ್ಮ ಪರಸ್ಪರ ಸಂಘರ್ಷಿಸುವ ನೆಲೆಗಳಾಗಿ ಚರ್ಚಿಸಲ್ಪಡುತ್ತಿವೆ. ಇವೆರಡರ ಉದಾತ್ತ ಅರ್ಥವನ್ನು ಒಡೆದು ಸಂಕುಚಿತಗೊಳಿಸಿದ ಅಪವ್ಯಾಖ್ಯಾನವನ್ನೇ ಜನಸಮುದಾಯ ನೆಚ್ಚಿಕೊಳ್ಳುವಂತೆ ಒತ್ತಡ ಹಾಕುತ್ತಿವೆ. ಇದೇ ಬಗೆಯ ಅನುಕೂಲಕರ ಸಮಯಾವಕಾಶವನ್ನು ಕಾಯ್ದುಕುಳಿತಂತೆ ರಾಜಕೀಯ ವಲಯ ತನ್ನ ದಾಳಗಳನ್ನು ಪ್ರಯೋಗಿಸುತ್ತಿದೆ.
ಸದ್ಯದ ವ್ಯತಿರಿಕ್ತ ಸ್ಥಿತಿಗತಿಗಳು ಅತ್ಯಂತ ನಿಖರವಾಗಿ ಬಿಟ್ಟುಕೊಡುತ್ತಿರುವ ಸುಳಿವುಗಳು ಹಲವಿವೆ. ಅವುಗಳಲ್ಲಿ ಧರ್ಮ ಮತ್ತು ದೇವರಿಗೆ ಸಂಬಂಧಿಸಿದಂತೆ ಇರುವ ವ್ಯಕ್ತಿಗತ ಸಂಕುಚಿತತೆಯನ್ನು ಸಾಂಸ್ಥಿಕಗೊಳಿಸಿ ಪ್ರಭಾವವನ್ನು ವ್ಯಾಪಕಗೊಳಿಸುವ ಪ್ರಯತ್ನವೂ ಒಂದು. ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದು, ಆಯಾ ಧರ್ಮಗಳವರ ನಂಬಿಕೆಯ ಆವರಣದಲ್ಲಿ ಆದ್ಯತೆ ಪಡೆದಿರುವ ದೇವರುಗಳ ಆರಾಧನೆಯ ಅವಕಾಶಗಳನ್ನು ಸ್ವಾರ್ಥಕ್ಕೆ ತಿರುಗಿಸಿಕೊಳ್ಳುವುದು ಈಗೀಗ ಸಾರ್ವತ್ರಿಕವಾಗಿದೆ. ಸಮಸ್ಯೆಯೊಂದು ವ್ಯಕ್ತಿಯನ್ನು ಭಾಧಿಸುತ್ತಿರುತ್ತದೆ. ವ್ಯಕ್ತಿಗತ, ಕೌಟುಂಬಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯಾತ್ಮಕ ಸಂಕೀರ್ಣತೆಗಳೊಂದಿಗಿನ ವಾಸ್ತವಿಕತೆಯೇ ಆ ಸಮಸ್ಯೆಗೆ ಕಾರಣವಾಗಿರುತ್ತದೆ. ಆದರೆ, ಧರ್ಮ ಮತ್ತು ದೇವರನ್ನು ಅಪವ್ಯಾಖ್ಯಾನಕ್ಕೊಳಪಡಿಸಿ ಆ ಬಗ್ಗೆ ಸಂಕುಚಿತವಾಗಿ ಅರ್ಥೈಸಿ ಭಯಹುಟ್ಟಿಸಲಾಗುತ್ತದೆ. ಹೀಗೆ ಭಯವನ್ನು ಹುಟ್ಟಿಸಿ ಸ್ವಾರ್ಥ ಸಾಧಿಸಿಕೊಳ್ಳುವ ಹಿತಾಸಕ್ತಿಗಳ ಅಸ್ತಿತ್ವದಲ್ಲಿಯೇ ಮಹತ್ವದ ಸುಳಿವನ್ನು ಗೊತ್ತುಮಾಡಿಕೊಳ್ಳಬಹುದು. ಈ ಹಿತಾಸಕ್ತಿಗಳು ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ಸ್ಥಾಯಿಯಾಗಿಸಿ ಜನರೊಳಗಿನ ಆಲೋಚಿಸುವ ಶಕ್ತಿಯನ್ನೇ ತಡೆದು ನಿಲ್ಲಿಸುತ್ತವೆ. ಆವರ ಆಲೋಚನೆಯ ಸಾಧ್ಯತೆಗಳನ್ನು ಮೊಟಕುಗೊಳಿಸಿ ಧರ್ಮವಲ್ಲದ ಸಂಗತಿಗಳ ಕಡೆಗೆ ತಿರುಗಿಸುತ್ತವೆ. ಅವರ ಮನಸ್ಸಿನಲ್ಲಿ ದೇವರುಗಳ ಬಗ್ಗೆ ಭಯದ ಭಾವ ಮೂಡಿಸುತ್ತವೆ. ಆರಾಧಿಸದಿದ್ದರೆ ಶಿಕ್ಷೆ ಗ್ಯಾರಂಟಿ, ದೇವರೇ ಮುನಿಸಿಕೊಂಡರೆ ಮುಂದಿದೆ ವ್ಯತಿರಿಕ್ತ ಪರಿಣಾಮ ಎಂಬ ಅತಾರ್ಕಿಕತೆಯನ್ನೇ ಮಂಡಿಸಿ ದಾರಿ ತಪ್ಪಿಸುತ್ತವೆ.
ಮೊದಲೇ ಸಮಸ್ಯೆಗಳ ಮಧ್ಯೆ ನರಳುತ್ತಿರುವವರ ಮುಂದೆ ಧರ್ಮದಲ್ಲಿಲ್ಲದ ಸಂಗತಿಗಳನ್ನು ವೈಭವೀಕರಿಸಿ ಹೇಳಿದರೆ ಸ್ವಾರ್ಥದ ಉದ್ದೇಶಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಕಾರ್ಯಸೂಚಿ ಅತ್ಯಂತ ಎಚ್ಚರದಲ್ಲಿ ಯಶಸ್ವಿಯಾಗಿ ನಿರ್ವಹಿಸಲ್ಪಡುತ್ತದೆ. ಹೀಗಾದರೆ ಹೀಗಾಗುತ್ತದೆ ಎಂದು ತಾರ್ಕಿಕವಾಗಿ ಮಾತನಾಡುವವರಂತೆ ನಟಿಸುವವರೇ ರಂಜನಾಮಾಧ್ಯಮೋದ್ಯಮದ ಮೂಲಗಳಾಗುತ್ತಾರೆ. ಸಮಾಜದ ವಿವಿಧ ಜನವರ್ಗಗಳು ಇಂಥವರನ್ನು ಆರಾಧಿಸಿಕೊಂಡೇ ಇದ್ದರೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂಬ ರಾಜಕೀಯ ವಲಯದ ನಿರೀಕ್ಷೆಗಳು ಈ ಹಂತದಲ್ಲಿಯೇ ಈಡೇರಿಬಿಡುತ್ತವೆ. ಸಮಸ್ಯೆಯನ್ನು ಶಾಶ್ವತವಾಗಿ ಉಳಿಯುವಂತೆ ನೋಡಿಕೊಂಡು ಅದು ಬಿಕಟ್ಟಿನ ಸ್ವರೂಪ ಪಡೆದುಕೊಂಡಾಗಲೂ ಪರಿಹಾರದ ನಾಟಕವಾಡಿ ಧರ್ಮ, ದೇವರ ಕುರಿತಾಗಿ ಭಯಭೀತಿ ಸೃಷ್ಟಿಸಿ ಸಾಮಾಜಿಕ ಚಲನೆಯನ್ನು ನಿಲ್ಲಿಸಿಬಿಡುವ ರಾಜಕೀಯ ಉದ್ದೇಶಗಳು ಯಶಸ್ಸು ಪಡೆದುಬಿಡುತ್ತವೆ. ಇದೇ ರಾಜಕೀಯ ಪ್ರವೃತ್ತಿ ಇಂದು ಸಂವಿಧಾನಕ್ಕೆ ಸವಾಲೆಸೆಯುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.
ಇದು ಎಲ್ಲ ಕಾಲದ ಸಮಸ್ಯೆಯೂ ಹೌದು. ಬಹುಷಃ ಈ ಕಾರಣಕ್ಕಾಗಿಯೇ ಇರಬಹುದು; ಈಗಾಗಲೇ ಆಗಿಹೋದ ದಾರ್ಶನಿಕರು ದೇವರು ಮತ್ತು ಧರ್ಮದ ಕುರಿತ ನಂಬಿಕೆಯ ಜಗತ್ತನ್ನು ಆಧರಿಸಿಯೇ ತಾತ್ವಿಕತೆಯನ್ನು ಪ್ರತಿಪಾದಿಸಿದರು. ಭೌತಿಕ ಜಗತ್ತಿನ ಒಳಗೇ ಮನುಷ್ಯಸಹಜ ದೌರ್ಬಲ್ಯಗಳೊಂದಿಗಿನ ಊನಗಳನ್ನು ತಮ್ಮೊಳಗಿನ ದಾರ್ಶನಿಕತೆಯೊಂದಿಗೆ ಎದುರುಗೊಂಡರು. ನಿಜವಾದ ಧರ್ಮ ಏನು ಎಂಬುದನ್ನು ಅರ್ಥೈಸಿದರು. ದೇವರ ಅಸ್ತಿತ್ವವು ಒಳಿತಿನೊಂದಿಗೇ ಇದೆ ಎಂಬ ವಿವೇಕವನ್ನು ಕಟ್ಟಿಕೊಡಲು ಪ್ರಯತ್ನಿಸಿದರು. ನಿಸರ್ಗದ ಅನೇಕ ಕೌತುಕಮಯ ಸಂಗತಿಗಳನ್ನು ಕಾಡಿಸಿಕೊಂಡು ಅವುಗಳನ್ನು ಜೀವಪರ ಅಂತಃಕರಣದೊಂದಿಗೆ ಮನುಷ್ಯ ಬದುಕಿನ ಉದ್ಧಾರಕ್ಕೆ ಬಳಸಿಕೊಳ್ಳಬಹುದಾದ ಒಳನೋಟಗಳ ಮೇಲೆ ಬೆಳಕು ಚೆಲ್ಲಿದರು. ಧರ್ಮ-ದೇವರ ಬಗೆಗಿನ ನಂಬಿಕೆಯ ಜಗತ್ತನ್ನು ಅಲುಗಾಡಿಸದೇ ಅಂತಸ್ಥಗೊಂಡಿರುವ ಮೂಢನಂಬಿಕೆಯ ಬೇರುಗಳನ್ನು ಕಿತ್ತೆಸೆಯಲು ತಾತ್ವಿಕ ಮಾರ್ಗವನ್ನು ಕಂಡುಕೊಂಡರು. ಆ ಮೂಲಕ ಧರ್ಮ ಮತ್ತು ದೇವರನ್ನು ಉದಾತ್ತತೆಯೊಂದಿಗೆ ತಾದಾತ್ಮ್ಯಗೊಳಿಸುವ ಚಲನಾತ್ಮಕ ಆಕೃತಿಗಳನ್ನು ಕೊಡುಗೆಗಳನ್ನಾಗಿ ನೀಡಿದರು. ಈಗ ಈ ಸಾಧ್ಯತೆಯ ತದ್ವಿರುದ್ಧದ ದಿಕ್ಕುಗಳೇ ಪರಮಮಾರ್ಗಗಳಾಗಿ ಪರಿಗಣಿತವಾಗುತ್ತಿವೆ. ಅವೇ ಪರಮೋಚ್ಛ ಎಂಬ ಬಿಂಬಗಳನ್ನು ಅತ್ಯಂತ ಚಾಣಾಕ್ಷಯುತವಾಗಿ ಕಟ್ಟಿಕೊಡಲಾಗುತ್ತಿದೆ. ಅಂಥ ಎಲ್ಲ ಸಂಕುಚಿತತೆಯನ್ನು ರಾಜಕೀಯ ಪೋಷಿಸುತ್ತಿದೆ. ಧರ್ಮ-ದೇವರನ್ನು ನೆಚ್ಚಿಕೊಂಡ ಜನರ ನಂಬಿಕೆಯ ಜಗತ್ತನ್ನು ಮೌಢ್ಯಕ್ಕೆ ತಿರುಗಿಸಿ ಅಪನಂಬಿಕೆಗಳನ್ನು ಮುನ್ನೆಲೆಗೆ ತಂದು ತನ್ನನ್ನು ವಿಜೃಂಭಿಸಿಕೊಳ್ಳುತ್ತಿದೆ.
ಧರ್ಮ ಮತ್ತು ದೇವರು – ಇವೆರಡೂ ಭಾವನಾತ್ಮಕ ಸಾಂಸ್ಥಿಕತೆಯನ್ನು ಅಳವಡಿಸಿಕೊಂಡು ನಿರಂತರವಾಗಿ ಜನರನ್ನು ಶೋಷಿಸಲು ಬಳಕೆಯಾದ ಇತಿಹಾಸವಿದೆ. ಅದನ್ನು ಮರೆಗೆ ಸರಿಸಿ ಅಧಿಕಾರ, ಹಣ ಮತ್ತು ಪ್ರತಿಷ್ಠೆಗಳನ್ನು ಸ್ಥಾಯಿಯಾಗಿಸಿಕೊಳ್ಳಲು ರಾಜಕೀಯ ಕೇಂದ್ರಗಳು ಪ್ರಯತ್ನಿಸಿ ಯಶಸ್ವಿಯಾಗುತ್ತಲೇ ಇವೆ. ಅವುಗಳಿಗೆ ಅನುಗುಣವಾಗಿಯೇ ತಮ್ಮನ್ನು ಪ್ರತಿಷ್ಠಾಪಿಸಿಕೊಂಡ ವಿವಿಧ ಜಾತಿಗಳ ಜನಸಮೂಹ ಅವು ನಿರೀಕ್ಷಿಸುವ ಸಂಕುಚಿತತೆಯ ಮನೋಧರ್ಮಕ್ಕೆ ಪಕ್ಕಾಗುತ್ತಲೇ ಇದೆ. ಬದಲಾವಣೆಯ ಪ್ರಬಲ ಅಸ್ತ್ರ ಎಂದು ಪರಿಗಣಿಸಲ್ಪಟ್ಟ ಶಿಕ್ಷಣ ಮತ್ತು ಅದರ ಮೂಲಕ ವ್ಯಾಪಕಗೊಳ್ಳುತ್ತದೆ ಎಂದುಕೊಂಡಿದ್ದ ಮೌಲ್ಯಾತ್ಮಕ ಪ್ರಭೆಯನ್ನು ಮತ್ತೆ ಮತ್ತೆ ಸೋಲಿಸುತ್ತಿರುವುದು ಇದೇ ಸಂಕುಚಿತತೆಯೇ. ಇದನ್ನೇ ಅಧಿಕಾರ ಕೇಂದ್ರಗಳ ಕಡೆಗೆ ನೋಟ ನೆಟ್ಟ ರಾಜಕೀಯ ವಲಯದ ಪ್ರತಿನಿಧಿಗಳು ತಮ್ಮ ಬಂಡವಾಳವಾಗಿಸಿಕೊಳ್ಳುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಧರ್ಮದಲ್ಲಿ ಇಲ್ಲದೇ ಇರುವ ಜೀವವಿರೋಧಿ ಅಮಾನವೀಯ ಸಾಂಪ್ರದಾಯಿಕತೆಯನ್ನು ಸಂವಿಧಾನಕ್ಕಿಂತಲೂ ಮಿಗಿಲು ಎಂದು ಪ್ರತಿಪಾದಿಸುತ್ತಿದ್ದಾರೆ. ಆ ಪ್ರತಿಪಾದನೆಯನ್ನು ಸಮಾಜದ ವಿವಿಧ ಜನವರ್ಗಗಳು ಒಪ್ಪಿಕೊಳ್ಳಲೇಬೇಕು ಎಂಬ ವಿತಂಡವಾದವನ್ನು ಮುಂದಿಡುತ್ತಿದ್ದಾರೆ.
ಈ ನಕಾರಾತ್ಮಕ ಹೆಜ್ಜೆಗಳಿಗೆ ಪರ್ಯಾಯವಾಗಿ ವಿಶ್ವಾಸಾರ್ಹವಾದ ಸಂವಿಧಾನಬದ್ಧ ರಾಜಕೀಯ ಸಂಸ್ಕøತಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಧರ್ಮವಲ್ಲದ ಸಂಗತಿಗಳನ್ನು ವೈಭವೀಕರಿಸಿ ಮುನ್ನೆಲೆಗೆ ತಂದ ವಲಯದವರೂ ತಾವು ಬದಲಾಗಬೇಕಾದ ಆಲೋಚನೆಗಳನ್ನು ಹರಿಬಿಡುತ್ತಿದ್ದಾರೆ ಎಂಬುದೇನೋ ಸಮಾಧಾನ ತರುವ ಸಂಗತಿ. ಈ ದೇಶದ ಸಾಂಸ್ಕøತಿಕ ವೈವಿಧ್ಯತೆಯ ಮಹತ್ವವನ್ನು ತಡವಾಗಿಯಾದರೂ ಹೇಳುತ್ತಿದ್ದಾರೆ ಎಂದುಕೊಳ್ಳಬಹುದು. ಎಲ್ಲ ಧರ್ಮಗಳವರನ್ನು ಗೌರವಿಸಬೇಕು ಎನ್ನುವ ಭಾವವನ್ನು ಸಂವಹಿಸುತ್ತಿದ್ದಾರೆ ಎಂದು ಖುಷಿಪಡಬಹುದು. ಅಂಥ ಆಶಾದಾಯಕ ನುಡಿಗಳು ನಡೆಯಲ್ಲೂ ಮೇಳೈಸಿಕೊಳ್ಳಬೇಕು.
ಹಾಗಾಗುವುದಕ್ಕೆ ಭಾರತದ ರಾಜಕಾರಣ ಅಷ್ಟು ಸುಲಭವಾಗಿ ಬಿಡುವುದಿಲ್ಲ. ಇಲ್ಲಿಯ ರಾಜಕಾರಣಕ್ಕೆ ಬದಲಾವಣೆಗಿಂತ ಸ್ಥಗಿತತೆಯೇ ಹೆಚ್ಚು ಅಚ್ಚುಮೆಚ್ಚು. ಧರ್ಮ-ದೇವರು ಕೇಂದ್ರಿತ ಸಾಂಪ್ರದಾಯಿಕತೆಯೊಂದಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಗಳು ಜಟಿಲವಾದಷ್ಟೂ ಅದಕ್ಕೆ ಎಲ್ಲಿಲ್ಲದ ಖುಷಿ. ಜನರು ಈ ಸಾಂಪ್ರದಾಯಿಕತೆಯ ತೊಳಲಾಟಗಳಲ್ಲೇ ಕಾಲ ಕಳೆದರೆ ನಿಜವಾದ ಬೆಳವಣಿಗೆಗೆ ಸಂಬಂಧಿಸಿದ ಚಿಂತನೆಯೇ ಹುಟ್ಟುವುದಿಲ್ಲ. ಆಗ ಜನರು ಎಚ್ಚೆತ್ತುಕೊಳ್ಳುವ ಪ್ರಮೇಯವೇ ಎದುರಾಗುವುದಿಲ್ಲ. ಇದು ದೇವರು-ಧರ್ಮಗಳ ರಕ್ಷಾಕವಚಗಳನ್ನು ಹಾಕಿಕೊಂಡು ಜನರ ಭಯವಿಹ್ವಲತೆಯನ್ನು ಬೇರೂರಿಸಿ ಮತ್ತಷ್ಟು ಗಟ್ಟಿಯಾಗಿಸಿ ಉಸಿರುಗಟ್ಟಿಸುವ ಆಟ. ತಮ್ಮನ್ನು ಸೋಲಿಸುವ ವೈಚಾರಿಕತೆ ಸನಿಹದಲ್ಲಿಯೇ ಇದೆ ಎನ್ನುವ ಸುಳಿವು ಸಿಕ್ಕ ತಕ್ಷಣವೇ ಧರ್ಮರಕ್ಷಣೆ ಮತ್ತು ದೇವರನ್ನು ಕೃತಾರ್ಥರನ್ನಾಗಿಸುವ ಕೈಂಕರ್ಯಗಳ ನೆಪದಲ್ಲಿ ಭಯವನ್ನು ಸೃಷ್ಟಿಸಿ ವಂಚಿಸುವ ಆಟ. ಇಂಥ ಆಟವನ್ನು ನಿಲ್ಲಿಸಬೇಕಾದರೆ ಪ್ರತಿಕಾಲಘಟ್ಟದಲ್ಲೂ ಸೋಲುತ್ತಲೇ ಇರುವ ಬಹುಸಂಖ್ಯಾತ ಶೋಷಿತ ಸಮುದಾಯದ ಜನರು ಸಂವಿಧಾನದ ಆವರಣಕ್ಕೆ ಮರಳಬೇಕು. ತಮ್ಮ ಸಮಸ್ಯೆಗಳಿಗೆ ಪರಿಹಾರ ತೋರುವ ಪರಿವರ್ತನಾಶೀಲ ಚಿಂತನಶೀಲ ಸದಾಶಯಗಳೊಂದಿಗೆ ಮುಖಾಮುಖಿಯಾಗಬೇಕು. ಧ್ಯಾನಸ್ಥ ಸ್ಥಿತಿಯಲ್ಲಿ ಸಂವಿಧಾನವನ್ನು ಅಂತರ್ಗತಗೊಳಿಸಿಕೊಳ್ಳಬೇಕು.
ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಇಷ್ಟೊತ್ತಿಗಾಗಲೇ ಅತ್ಯಂತ ಚಾಣಾಕ್ಷಯುತವಾಗಿ ಪರೀಕ್ಷೆಗೊಡ್ಡಿ ತನ್ನ ಸಂವಿಧಾನಬದ್ಧ ಶಕ್ತಿಯನ್ನು ವಿಸ್ತರಿಸಿಕೊಳ್ಳಬಹುದಾಗಿದ್ದ ರಾಜಕೀಯ ಪಕ್ಷಗಳು ಮತ್ತೆ ಅಧಾರ್ಮಿಕ ಸಂಕುಚಿತತೆಯೊಂದಿಗಿನ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಸಾಂಪ್ರದಾಯಿಕ ಶಕ್ತಿಗಳ ಜೊತೆಗೇ ಕೈಜೋಡಿಸಿ ತಮ್ಮ ಅಧಿಕಾರ ಪಡೆಯುವ ಹಂಬಲಗಳನ್ನು ಜೀವಂತಗೊಳಿಸಿಕೊಳ್ಳುತ್ತಿವೆ. ಮತ್ತವೇ ಜಾತಿ ವೈರುಧ್ಯಗಳು. ಮತ್ತದೇ ಅಧಾರ್ಮಿಕ ಸಂಘರ್ಷ. ಮೇಲು-ಕೀಳುಗಳ ಅಂತರ್ಯುದ್ಧದ ಕಪಟಕಿರುಕುಳ ಯಾನ. ಸಂವಿಧಾನವನ್ನು ಗೆಲ್ಲಿಸುವ ಇಚ್ಛಾಶಕ್ತಿಯ ಕೊರತೆ. ಅಲ್ಲಲ್ಲಿ ಕಂಡುಬರುವ ಮಾನವೀಯತೆಯ ಒರತೆಗಳನ್ನು ಉದ್ದೇಶಪೂರ್ವಕವಾಗಿ ಇಲ್ಲವಾಗಿಸಿಬಿಡುವ ಹುನ್ನಾರಗಳ ತಕಧಿಮಿಗುಟ್ಟುವ ಕ್ರೂರನರ್ತನ. ಉದಾತ್ತ ತಾತ್ವಿಕತೆಯ ಪರಿಭಾಷೆಗಳನ್ನು ಅಪವ್ಯಾಖ್ಯಾನಗೊಳಿಸುವ ಸಾಂಪ್ರದಾಯಿಕತೆ ಅಸ್ತಿತ್ವ ಇನ್ನೆಷ್ಟು ದಿನ? ಕಾಲವೇ ಉತ್ತರಿಸಬೇಕು ಎಂದು ಸುಮ್ಮನೆ ಕುಳಿತುಕೊಳ್ಳಬೇಕೇ? ಯೋಚಿಸಲಾರಂಭಿಸಬೇಕೇ……?
(-ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ,ಇ-ಮೇಲ್ ವಿಳಾಸ: nkpadmanabh@gmail.com
ಮೊಬೈಲ್: 9972998300)

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.
ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.
ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ


