ದಿನದ ಸುದ್ದಿ

ಯೂರೋಪ್‌ನ ಮೂರು ದೇಶಗಳ ಪ್ರವಾಸ ; ಇಂದು ಡೆನ್ಮಾರ್ಕ್ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಯೂರೋಪ್‌ನ ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಡೆನ್ಮಾರ್ಕ್‌ನ ಕೂಪನ್ ಹೇಗನ್‌ಗೆ ಆಗಮಿಸಲಿದ್ದಾರೆ.

ಅವರು ಡೆನ್ಮಾರ್ಕ್ ಪ್ರಧಾನಿ ಮಿಟ್ಟೆ ಫೆಡ್ರಿಕ್‌ಸೆನ್ ಅವರನ್ನು ಭೇಟಿ ಮಾಡಲಿದ್ದಾರೆ. ನಿಯೋಗ ಮಟ್ಟದ ಮಾತುಕತೆಯ ನಂತರ ಹಲವು ತಿಳುವಳಿಕೆ ಪತ್ರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ. ನಂತರ ಪ್ರಧಾನಿ ಉದ್ಯಮಿಗಳೊಂದಿಗಿನ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮುದಾಯ ಕಾರ್ಯಕ್ರಮದಲ್ಲಿ ಹಾಜರಾಗಲಿರುವ ಪ್ರಧಾನಿ, ನಂತರ ಎರಡನೇ ರಾಣಿ ಮಾರ್ಗರೇಟ್ ಅವರೊಂದಿಗೆ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರವಾಸದ ಮೊದಲನೆಯ ದಿನವಾದ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಬರ್ಲಿನ್‌ನಲ್ಲಿ ಜರ್ಮನ್ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಇಂಧನ ಹಾಗೂ ಪರಿಸರ ಕ್ಷೇತ್ರಗಳ ಮಹತ್ವ ಪೂರ್ಣ ಒಪ್ಪಂದಗಳಿಗೆ ಸಹಿ ಹಾಕಿದರು. ಈ ವೇಳೆ ಉಭಯ ನಾಯಕರು ಜಂಟಿ ಹೇಳಿಕೆ ನೀಡಿ, ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯನ್ನು ಪ್ರತಿಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಹೊಸ ದಿಕ್ಕು ದೊರೆತಿದೆ. ಪರಿಸರ, ಇಂಧನ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಹಸಿರು ಇಂಧನ ವಲಯದಲ್ಲಿ, ಜರ್ಮನಿ, ಭಾರತದಲ್ಲಿ 2030ರ ವರೆಗೆ,10ಬಿಲಿಯನ್ ಯುರೋ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಕೋವಿಡೋತ್ತರದಲ್ಲಿ ಭಾರತದ ಆರ್ಥಿಕತೆ ತ್ವರಿತಗತಿಯಲ್ಲಿ ಸುಧಾರಣೆಯಾಗುತ್ತಿದೆ. ಉಕ್ರೇನ್- ರಷ್ಯಾ ಸಂಘರ್ಷ ಇತ್ಯರ್ಥಕ್ಕೆ ಮಾತುಕತೆಯೊಂದೇ ಪರಿಹಾರ. ಇಲ್ಲಿ ಗೆಲುವು ಯಾರದು ಎಂಬುದು ಮುಖ್ಯವಲ್ಲ. ನಾವು ಶಾಂತಿಯ ಪರವಾಗಿರುವವರು. ಯಾರೇ ಗೆದ್ದರೂ, ಮಾನವೀಯ ನಷ್ಟಗಳು ತಪ್ಪಿದ್ದಲ್ಲ. ಈಗಾಗಲೇ ತೈಲ ಬೆಲೆ ಗಗನಕ್ಕೇರಿವೆ. ಹಲವಾರು ಸಮಸ್ಯೆಗಳು ಎದುರಾಗಿವೆ ಎಂದರು.

ಓಲಾಫ್ ಸ್ಕೋಲ್ಜ್, ಭಾರತ, ಜರ್ಮನಿಯ ಬಹುಮುಖ್ಯ ಪಾಲುದಾರ ರಾಷ್ಟ್ರವಾಗಿದೆ. ಕೆಲವೇ ಮುಂದುವರಿದ ರಾಷ್ಟ್ರಗಳಿಂದ, ವಿಶ್ವದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಎಲ್ಲಾ ದೇಶಗಳ ಒಗ್ಗೂಡುವಿಕೆ ಮತ್ತು ಸಹಭಾಗಿತ್ವದ ಮತ್ತು ಭವಿಷ್ಯದ ಸಂಬಂಧಗಳನ್ನು ಗುಣಾತ್ಮಕ ಗುರುತಿಸುವಿಕೆಯಿಂದ ಅಭಿವೃದ್ಧಿ ಸಾಧ್ಯ ಎಂದರು.

ಏಷ್ಯಾದಲ್ಲಿ ಭಾರತ, ಚಲನಶೀಲ ಆರ್ಥಿಕತೆಯನ್ನು ಹೊಂದಿದ ರಾಷ್ಟ್ರ, ಜರ್ಮನಿಯ ಹಲವು ಕಂಪನಿಗಳು ಅಲ್ಲಿ ಕಾರ್ಯಾಚರಿಸುತ್ತಿವೆ. 7 ಸಾವಿರಕ್ಕೂ ಹೆಚ್ಚು ಭಾರತೀಯರು, ಜರ್ಮನಿಯ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉಭಯ ದೇಶಗಳ ನಡುವೆ ಸುದೀರ್ಘವಾದ ದ್ವಿಪಕ್ಷೀಯ ಒಪ್ಪಂದಗಳಿಗೆ ಭದ್ರತೆ, ಹವಾಮಾನ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಯುಕ್ತವಾಗಿ ಕೆಲಸ ಮಾಡುತ್ತಿದ್ದೇವೆ. ಆ ಸಂಬಂಧಗಳನ್ನು ಮುಂದುವರಿಸಲು ಬಯಸುತ್ತೇವೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version