ರಾಜಕೀಯ

ಬಿಜೆಪಿ 20 ಸ್ಥಾನಗಳನ್ನೂ ಗೆಲ್ಲುವುದಿಲ್ಲ: ಕಾರ್ಯಕರ್ತರ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಲೇವಡಿ

Published

on

ಸುದ್ದಿದಿನ,ಬೆಂಗಳೂರು: ಬಿಬಿಎಂಪಿ ಚುನಾವಣೆ ಈ ಕೂಡಲೇ ನಡೆದರೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು 20 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎನ್ನುವ ಆಂತರಿಕ ವರದಿಗೆ ಹೆದರಿರುವ ಕಾರಣ ಚುನಾವಣೆ ಮುಂದೂಡಲು ಹುನ್ನಾರ ನಡೆಸುತ್ತಿವೆ.

ರಾಜ್ಯ ಚುನಾವಣಾ ಆಯೋಗವೂ ತನ್ನ ಜವಾಬ್ದಾರಿ ಮರೆತು ಪರೋಕ್ಷವಾಗಿ ಸರ್ಕಾರದ ಪರ ನಿಂತಿದೆ* ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ಲೇವಡಿ ಮಾಡಿದರು.

ಇಂದು ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಷ್ಟು ಹೊತ್ತಿಗಾಗಲೇ ಸರಿಯಾದ ಕ್ರಮದಲ್ಲಿ ಸರ್ಕಾರ ನಡೆದುಕೊಂಡಿದ್ದರೇ ಬಿಬಿಎಂಪಿ ಚುನಾವಣೆ ಮುಗಿದು ಹೋಗಿರುತ್ತಿತ್ತು.

ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಆಸಕ್ತಿ ತೋರಿಸುತ್ತಿರುವ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಕನಿಷ್ಠ 2 ವರ್ಷ ಮುಂದೂಡಲು ಯತ್ನಿಸುತ್ತಿದೆ, ಇತರೆ ಪಕ್ಷಗಳಿಂದ ಬಿಜೆಪಿ ಸೇರಿರುವ ಅಕ್ರಮ ಕೂಟಗಳು ಸೇರಿಕೊಂಡು ಆಪರೇಷನ್ ಕಮಲದಲ್ಲಿ ಕಳೆದುಕೊಂಡ ದುಡ್ಡನ್ನು ಬಿಬಿಎಂಪಿಯಲ್ಲಿ ಕೊಳ್ಳೆ ಹೊಡೆಯಲು ಚುನಾವಣೆ ಮುಂದೂಡಲಾಗುತ್ತಿದೆ ಇದೊಂದು ಪ್ರಜಾಪ್ರಭುತ್ವ ವಿರೊಧಿ ನಡೆ ಎಂದು ದೂರಿದರು.

ಕಳೆದ ಬಿಬಿಎಂಪಿ 2015ರ ಆ.3ರಂದು ಅಧಿಸೂಚನೆ ಪ್ರಕಟವಾಗಿತ್ತು. ನಾಮಪತ್ರ ಸಲ್ಲಿಕೆಗೆ ಆ.10 ಕೊನೆಯ ದಿನವಾಗಿತ್ತು. ಆ.22ರಂದು ಚುನಾವಣೆ ನಡೆದಿತ್ತು. ಆ. 25ರಂದು ಫಲಿತಾಂಶ ಪ್ರಕಟವಾಗಿತ್ತು. ಪ್ರಸ್ತುತ ಕೊರೋನಾ ನೆಪ ಮಾಡಿಕೊಂಡು ಸರ್ಕಾರ ರಾಗ ಎಳೆಯುತ್ತಿದೆ. ರಾಜ್ಯ ಚುನಾವಣಾ ಆಯೋಗ ಇಂತಹ ವೇಳೆಯಲ್ಲಿ ತನ್ನ ವಿವೇಚನೆಯನ್ನು ಬಳಸಿ ಚುನಾವಣಾ ದಿನಾಂಕ ಘೋಷಣೆ ಮಾಡಬಹುದು, ಈ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಎರಡೆರಡು ಬಾರೀ ಬಿಎಲ್ಓಗಳು, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಂಡು ಮತದಾರರ ಪಟ್ಟಿಯ ಅನ್ವಯ ಕೊರೋನಾ ನಡುವೆಯೂ ‘ಆರೋಗ್ಯ ಸಮೀಕ್ಷೆ’ ನಡೆಸಿರುವ ಸರ್ಕಾರ ಮತದಾರರ ಮಾಹಿತಿ ಕದ್ದಿದೆ, ಈಗ ಮತದಾರರ ಪಟ್ಟಿ ವಿಂಗಡಿಸಲು ಕೊರೋನಾ ಕಾರಣ ನೀಡುತ್ತಿದೆ.

ಇದೆಲ್ಲ ನೋಡಿದರೇ ಸರ್ಕಾರ ತೆರೆಮರೆಯಲ್ಲಿ ಚುನಾವಣಾ ತಯಾರಿ ನಡೆಸುತ್ತಿದೆ, ಆದ ಕಾರಣ 198 ಕ್ಷೇತ್ರಗಳ ಮುಖಂಡರು ಚುನಾವಣೆಗೆ ಸಿದ್ದರಾಗಬೇಕು, ಆಪ್ ಕೇರ್, ನಮ್ಮೂರ ಚರ್ಚೆ ಹೀಗೆ ತಳಮಟ್ಟದಲ್ಲಿ ಕೆಲಸ ಮಾಡಿರುವ ನಮ್ಮ ಆಮ್ ಆದ್ಮಿ ಪಕ್ಷ ಬಹುಮತದೊಂದಿಗೆ ಅಧಿಕಾರ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಹಿಂದೆ ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನಾಗಿ ಲಕ್ಷ್ಮೀನಾರಾಯಣ ಎಂಬುವರನ್ನು ನೇಮಕ ಮಾಡಿದಾಗ ಕೋಟ್ಯಂತರ ರೂ ಟೆಂಡರ್ ದಾಖಲೆಗಳು ಬೆಂಕಿಗೆ ಆಹುತಿಯಾಗಿದ್ದವೂ. ಪ್ರಸ್ತುತ ಈ ಅಧಿಕಾರಿಯೇ ಮುಖ್ಯಮಂತ್ರಿಗಳ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಮತ್ತೊಮ್ಮೆ ವಾಮಮಾರ್ಗದ ಮೂಲಕ ಆಡಳಿತಾಧಿಕಾರಿ ನೇಮಿಸಿ ಕೊರೋನಾ ಕಾಲದಲ್ಲಿ ತಾನು ಮಾಡಿದ ಹಗರಣಗಳನ್ನು ಮುಚ್ಚಿ ಹಾಕುವ ಕುತಂತ್ರ ಮಾಡುತ್ತಿದೆ.

ಸರ್ಕಾರ ಶೀಘ್ರದಲ್ಲೇ ಚುನಾವಣಾ ದಿನಾಂಕ ಘೋಷಣೆ ಮಾಡದಿದ್ದರೆ ಮುಖ್ಯ ಚುನಾವಣಾ ಆಯೋಗ ಸೇರಿದಂತೆ ಹೈಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜಕೀಯ ವ್ಯವಹಾರಗಳ ಉಸ್ತುವಾರಿ ಲಕ್ಷ್ಮೀಕಾಂತ್ ರಾವ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, , ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ, ಉಪಾಧ್ಯಕ್ಷ ಸುರೇಶ್ ರಾಥೋಡ್ ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version