ದಿನದ ಸುದ್ದಿ

ಯುವಜನತೆ ನವ ಚರಿತ್ರೆ ಬರೆಯಲಿ : ಡಾ. ಎ. ಬಿ ರಾಮಚಂದ್ರಪ್ಪ ಆಶಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ದೇಶದ ಆಸ್ತಿ ಹಾಗೂ ಶಕ್ತಿಯಾದ ಯುವ ಜನತೆ ದುಶ್ಚಟ ಮತ್ತು ವ್ಯಕ್ತಿ ಆರಾಧನೆಗೆ ದಾಸರಾಗದೆ, ಬೌದ್ಧಿಕ ದಾರಿದ್ರ್ಯಕ್ಕೆ ತುತ್ತಾಗದೆ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಂಡು ಅಭಿವೃದ್ಧಿಗಾಗಿ ತಮ್ಮ ಶಕ್ತಿ ವಿನಿಯೋಗಿಸಿ ಶ್ರಮಿಸಬೇಕಿದೆ ಎಂದು ನಿವೃತ್ತ ಉಪನ್ಯಾಸಕ ಹಾಗೂ ಚಿಂತಕರಾದ ಡಾ. ಎ. ಬಿ. ರಾಮಚಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.

ರಾಜ್ಯ ಯುವ ಸಂಘಗಳ ಒಕ್ಕೂಟದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ದಿನಾಂಕ: 08/10/2021 ರ ಶುಕ್ರವಾರ ಸಂಜೆ 6 ಗಂಟೆಗೆ ಯುವ ಚೇತನ ಶೀರ್ಷಿಕೆಯಡಿ ಜೂಮ್ ಆಪ್ ನಲ್ಲಿ ಆಯೋಜಿಸಲಾಗಿದ್ದ ಆನ್ ಲೈನ್ ಕಾರ್ಯಕ್ರಮದಲ್ಲಿ ಪ್ರಗತಿಗಾಗಿ ಯುವಶಕ್ತಿ ವಿಷಯ ಕುರಿತು ಮಾತನಾಡಿದ ಅವರು ಯೌವನದ ಹಂತ ದಲ್ಲಿ ಅಪರಿಮಿತ ಅಂತಃಶಕ್ತಿ ಅಡಗಿರುತ್ತದೆ. ಸರಿಯಾದ ಮಾರ್ಗದಲ್ಲಿ ಅದರ ಸದ್ಭಳಕೆಯಾಗಬೇಕು ಎಂದರು.

ಜಾತಿ, ಮತ, ಪಟ್ಟಭದ್ರ ಹಿತಾಸಕ್ತಿಗಳು ಸೇರಿದಂತೆ ಯಾವುದೇ ವಿಧದ ಕಪಿಮುಷ್ಟಿಯ ಸುಳಿಗೆ ಸಿಲುಕದೆ ಯುವ ಜನತೆ ಸ್ವತಂತ್ರ ನಾಯಕರಾಗಿ ರೂಪುಗೊಳ್ಳಬೇಕು. ಶಿಕ್ಷಣದ ಜೊತೆ ಶಿಸ್ತು, ಸಂಯಮ, ಸಂಘಟನೆ, ಸುಸಂಸ್ಕಾರಯುತ ಚಾರಿತ್ರ್ಯ ನಿರ್ಮಾಣ ಮಾಡಿಕೊಳ್ಳುವ ಕಡೆ ಚಿತ್ತ ನೆಟ್ಟಿರಬೇಕು ಎಂದು ಸಲಹೆ ನೀಡಿದರು.

ಅಪಾರ ಪ್ರತಿಭೆ ಇರುವ ಇಂದಿನ ಯುವ ಜನತೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಅಂತೆಯೇ ಆಯಕಟ್ಟಿನ ಹುದ್ಧೆ ಮತ್ತು ಸ್ಥಾನಮಾನ ಪಡೆಯುವಲ್ಲೂ ಯಶಸ್ಸು ಸಾಧಿಸಬೇಕು ಎಂದ ಅವರು ಗತ ಇತಿಹಾಸ ಅರಿತು ನವ ಚರಿತ್ರೆ ಬರೆಯುವ ಮನಸ್ಸು ಯುವ ಜನತೆಯಲ್ಲಿ ಮೂಡಲಿ ಎಂದು ಆಶಿಸಿದರು.

ಶುಭ ಸಂದೇಶದ ನುಡಿಯಾಡಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಎಸ್. ಬಾಲಾಜಿ ಅವರು ಯುವ ಜನತೆಯ ಶಕ್ತಿ, ಯುಕ್ತಿ, ಪ್ರತಿಭೆಯ ಸದ್ಭಳಕೆ ಗೆ ಮಾರ್ಗದರ್ಶನ ನೀಡಿ ಅವರನ್ನು ಸನ್ಮಾರ್ಗಕ್ಕೆ ಹಚ್ಚುವ ಕಾರ್ಯದಲ್ಲಿ ನಮ್ಮ ಒಕ್ಕೂಟ ನಿರತವಾಗಿದೆ. ಈ ದಿಸೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪ್ರೇರಣೆ ನೀಡುವ ಉದ್ದೇಶದಿಂದ ಆಯೊಜಿಸಲಾಗುವ ಉಪನ್ಯಾಸ ಮತ್ತು ಕಾರ್ಯಾಗಾರ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಇಂದಿನ ಯುವ ಜನತೆಯ ಉತ್ತಮ ಆಸಕ್ತಿಗೆ
ಹಿಡಿದ ಕನ್ನಡಿಯಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಒಕ್ಕೂಟದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾದ ಎನ್ ಕೆ ಕೊಟ್ರೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಪಾಧ್ಯಕ್ಷರಾದ ಗಂಗಾಧರ್ ಬಿ ಎಲ್ ನಿಟ್ಟೂರ್ ಪ್ರಾಸ್ತಾವಿಕ ನುಡಿಯಾಡುವ ಜೊತೆ ನಿರ್ವಹಿಸಿದರು.

ಭೋಜರಾಜ, ಶಿವಮೂರ್ತಿ, ಬದಪ್ಪ, ರಾಜ್ ಶೇಖರ್, ಅನಿಶ್ ಪಾಷ, ಮೌನೇಶ್, ಅರವಿಂದ್, ಜಯಣ್ಣ, ಶಿವಕುಮಾರ್, ಸಂಗಮೇಶ ಸೇರಿದಂತೆ ಒಕ್ಕೂಟದ ರಾಜ್ಯ ಮತ್ತು ವಿವಿಧ ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version