ಬಹಿರಂಗ
ಜಯಮಾಲ ಅವರ ಬದುಕೇ ಮಕ್ಕಳಿಗೆ ಪಾಠವಾಗಲು ಅರ್ಹವಾಗಿದೆ..!
- ನವೀನ್ ಸೂರಿಂಜೆ
ಬರಗೂರು ರಾಮಚಂದ್ರಪ್ಪ ಅವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದಾಗ ಜಯಮಾಲ ಅವರು ಬರೆದ ಪಾಠವನ್ನು ಪಠ್ಯವಾಗಿಸಿದ್ದಕ್ಕೆ ಅಸಹ್ಯ ವ್ಯಂಗ್ಯಗಳನ್ನು ಬಲಪಂಥೀಯರು ಮಾಡುತ್ತಿದ್ದಾರೆ. ಚಿತ್ರನಟಿ ಎಂಬ ಕಾರಣಕ್ಕಾಗಿ ರಾಜಕಾರಣಿಯೂ ಆಗಿರುವ ಜಯಮಾಲರನ್ನು ಕೆಟ್ಟ ಪದಗಳಿಂದ ನಿಂದಿಸಿ ಅವರ ಅರ್ಹತೆಯ ಮಾನದಂಡವನ್ನು ಕೀಳಭಿರುಚಿಯಲ್ಲಿ ಹಂಗಿಸಲಾಗುತ್ತಿದೆ.
ಜಯಮಾಲ ಅವರು ಕೇವಲ ನಟನೆ ಬರುವ ನಟಿ ಮಾತ್ರವಲ್ಲ. ಅವರು ಎಂ.ಎ, ಪಿಹೆಚ್.ಡಿ ಪದವೀಧರರು. ಮಂಗಳೂರಿನ ಪಣಂಬೂರಿನಲ್ಲಿ ಜನಿಸಿದ ಜಯಮಾಲ ಅವರು ಬಿಲ್ಲವ ಸಮುದಾಯಕ್ಕೆ ಸೇರಿದವರು. ರಾಜ್ಯಶಾಸ್ತ್ರದಲ್ಲಿ (ಎಂಟೈರ್ ಪೊಲಿಟಿಕಲ್ ಸೈನ್ಸ್ ಅಲ್ಲ) ಎಂಎ ಪದವಿ ಪಡೆದು, ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಬಗೆಗಿನ ಅಧ್ಯಯನ ನಡೆಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (ಬಿಜೆಪಿ ನಾಯಕರೊಬ್ಬರ ರೀತಿ ಅಸ್ತಿತ್ವವಿಲ್ಲದ ವಿವಿಯಿಂದ ಗೌರವ ಡಾಕ್ಟರೇಟರ್ ಅಲ್ಲ) ಪಡೆದಿದ್ದಾರೆ.
ನಟಿಯಾಗಿ ಜಯಮಾಲ ಅವರು ತನ್ನ ಹದಿಮೂರನೆ ವಯಸ್ಸಿನಲ್ಲಿ ‘ಕಾಸ್‍ದಾಯೆ ಕಂಡಿನಿ’ ಎಂಬ ತನ್ನ ಮೊದಲ ತುಳು ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ನಿರ್ಮಾಪಕಿಯಾಗಿ ಜಯಮಾಲ ನಿರ್ಮಾಣದ ‘ತಾಯಿಸಾಹೇಬ’ ಚಿತ್ರವು ಕನ್ನಡ ಚಿತ್ರರಂಗವನ್ನು ಇಡೀ ದೇಶ ನೋಡುವಂತೆ ಮಾಡಿತ್ತು. ರಾಷ್ಟ್ರಪತಿಯವರ ಸ್ವರ್ಣಕಮಲ ಪ್ರಶಸ್ತಿಯ ಜೊತೆಗೆ ಈ ಚಿತ್ರಕ್ಕೆ ಒಟ್ಟು 24 ಪ್ರಶಸ್ತಿಗಳು ಬಂದಿದೆ. ಆ ಬಳಿಕದ ‘ತುತ್ತೂರಿ’ ಚಿತ್ರಕ್ಕೆ ” ಅತ್ಯುತ್ತಮ ಪರಿಸರ ಮಕ್ಕಳ ಚಿತ್ರ” ರಾಷ್ಟ್ರಪ್ರಶಸ್ತಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಬಂದಿದೆ.
ಜಯಮಾಲರವರು ಪಡೆದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.
1973 ರಲ್ಲಿ ಅತ್ಯುತ್ತಮ ಕಲಾವಿದೆ ಪ್ರಶಸ್ತಿ, 1994 ರಲ್ಲಿ ಶಾಂತಿ ಪ್ರಶಸ್ತಿ, 1995 ರಲ್ಲಿ ಆರ್ಯಭಟ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಸೌಹಾರ್ದ ಪ್ರಶಸ್ತಿ ಪಡೆದರು. 1998 ರಲ್ಲಿ ತಾಯಿಸಾಹೇಬ ಚಿತ್ರಕ್ಕೆ ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ. ಅದೇ ವರ್ಷ ಅದೇ ಸಿನೇಮಾಕ್ಕೆ ವಿಶೇಷ ರಾಷ್ಟ್ರಪ್ರಶಸ್ತಿ.1999 ರಲ್ಲಿ ಎರಡು ಫಿಲಂ ಫೇರ್ ಪ್ರಶಸ್ತಿಗಳನ್ನು ಜಯಮಾಲ ತನ್ನದಾಗಿಸಿಕೊಂಡಿದ್ದರು. ಅದೇ ವರ್ಷ ಸಿನಿ ಎಕ್ಸ್ ಪ್ರೆಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರು.
ಜಯಮಾಲ ಅವರು 1999 ರಲ್ಲಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯನ್ನು ಪಡೆದರು. 2001 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಇವರು ಅದೇ ವರ್ಷ ನಟನೆಗಾಗಿ ಬಂಗಾರದ ಪದಕ ಪ್ರಶಸ್ತಿ ಪಡೆದರು. 2006 ರಲ್ಲಿ ತುತ್ತೂರಿ ಸಿನೇಮಕ್ಕೆ ಅತ್ಯುತ್ತಮ ಪರಿಸರ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ. ಅದೇ ವರ್ಷ ಅದೇ ಸಿನೇಮಾಕ್ಕೆ 15ನೇ ಟೋಕಿಯೋ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪರಿಸರ ಕಾಳಜಿಯುಳ್ಳ ಚಿತ್ರ ಪ್ರಶಸ್ತಿ. ಅದೇ ವರ್ಷ ಮತ್ತೆ ಅದೇ ತುತ್ತೂರಿ ಸಿನೇಮಾಕ್ಕೆ ಢಾಕಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರೇಕ್ಷಕ ಪ್ರಶಸ್ತಿ ಪಡೆದಿದ್ದಾರೆ.
ಅವೆಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ಥಾಪಿಸಿದ ಬೀದಿ ಮಹಿಳೆಯರ ಪುನರ್ವಸತಿ ಕೇಂದ್ರವಾಗಿರುವ ಮೈಸೂರಿನ “ಶಕ್ತಿಧಾಮ”ದಲ್ಲಿ ಜಯಮಾಲ ಅವರು ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಇದರ ಮಧ್ಯೆ ಏಡ್ಸ್ ಪೀಡಿತರ ನೆರವು, ಪ್ರೋತ್ಸಾಹ ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದಂತಹ “ಭವಿಷತ್ ಬೆಳಕು” ಎಂಬ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. 2016ರಲ್ಲಿ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಕುರಿತಂತೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ರಾಜ್ಯ ಸರ್ಕಾರ ನೇಮಿಸಿದ ಸಮಿತಿಗೆ ಜಯಮಾಲ ಅಧ್ಯಕ್ಷರಾಗಿದ್ದು, ನಿಗದಿತ ಅವಧಿಯಲ್ಲಿ ವರದಿ ಸಲ್ಲಿಕೆ ಮಾಡಿ ಲೈಂಗಿಕ ಕಾರ್ಯಕರ್ತೆಯರ ಬದುಕು ಸುಧಾರಣೆಗೆ ಹಲವು ಶಿಫಾರಸ್ಸುಗಳನ್ನು ಮಾಡಿದ್ದಾರೆ.
ಮಹಿಳೆಯೆಂದು, ಅದರಲ್ಲೂ ಚಿತ್ರನಟಿಯೆಂದು ಜಯಮಾಲರನ್ನು ಕೆಟ್ಟ ಶಬ್ದಗಳಲ್ಲಿ ಹಂಗಿಸುವ ಮೊದಲು, ಅವರು ಮಾಡಿರುವ ಕೆಲಸವನ್ನು ನಾವು ಮಾಡುವುದು ಬಿಡಿ, ಮಾಡುವಂತೆ ಊಹಿಸಬಲ್ಲೆವಾ ಎಂದು ಯೋಚಿಸಬೇಕಿದೆ. ಹಾಗಾಗಿ ಜಯಮಾಲ ಅವರು ಬರೆದ ಪಾಠ ಮಾತ್ರವಲ್ಲ, ಇವರ ಬದುಕೇ ಮಕ್ಕಳಿಗೆ ಪಾಠವಾಗಲು ಅರ್ಹವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243