ನೆಲದನಿ

ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ ‘ಅಲ್ಲಮಪ್ರಭು’

Published

on

ಕಲ್ಪನೆಯ ಚಿತ್ರ

ಅಲ್ಲಮಪ್ರಭು 12ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿದರು. ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶೋಧಿಸಲೆತ್ನಿಸಿದವರು.

ಅಲ್ಲಮಪ್ರಭು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು 12ನೇ ಶತಮಾನದಲ್ಲಿ ಜನಿಸಿದರು ಎಂದು ದಾಖಲೆಗಳು ಹೇಳುತ್ತವೆ.

12ನೆಯ ಶತಮಾನದ ಶಿವಶರಣರಲ್ಲಿ ಅಲ್ಲಮಪ್ರಭು ಉಚ್ಚಸ್ಥಾನದಲ್ಲಿದ್ದವರು. ಅರಸು ಮನೆತನದಲ್ಲಿಯೆ ಹುಟ್ಟಿ ಬೆಳೆದವರಾದರೂ, ಮನೆ ಬಿಟ್ಟು ತೆರಳಿ ಆಧ್ಯಾತ್ಮಸಾಧಕನಾದರೆಂದು ಹೇಳಲಾಗುತ್ತಿದೆ. ಬಸವಣ್ಣನ ಕಲ್ಯಾಣಕ್ಕೆ ಬಂದ ಅಲ್ಲಮಪ್ರಭು ಅಲ್ಲಿ ಅನುಭವಮಂಟಪದ ಶೂನ್ಯಸಿಂಹಾಸನದ ಅಧ್ಯಕ್ಷರಾಗುತ್ತಾರೆ.

ಅಲ್ಲಮನ ವಚನಚಂದ್ರಿಕೆಯಲ್ಲಿ 1294 ವಚನಗಳು ಲಭ್ಯವಾಗಿವೆ. ಅಲ್ಲಮಪ್ರಭು ತನ್ನ ಕೊನೆಯ ದಿನಗಳಲ್ಲಿ ಶ್ರೀಶೈಲಕ್ಕೆ ಹೋಗಿ ಅಲ್ಲಿಯ ವನದಲ್ಲಿ ಶಿವೈಕ್ಯರಾದರೆಂಬುದು ಪ್ರತೀತಿ. ಬಸವಣ್ಣನವರ ಸಮಕಾಲೀನರಾದ ಅಲ್ಲಮಪ್ರಭುವಿನ ವಚನಗಳ ಅಂಕಿತ ‘ಗುಹೇಶ್ವರ’ ಅಥವಾ ‘ಗೊಹೇಶ್ವರ’. ಇವರ ವಚನಗಳಲ್ಲಿ ಗಹನವಾದ ಆಧ್ಯಾತ್ಮ ಹಾಗೂ ತಾತ್ವಿಕ ವಿಚಾರಗಳಿವೆ.

ಅಲ್ಲಮನ ಆಧ್ಯಾತ್ಮಿಕ ಅನುಭವಗಳ ಅಸಾಮಾನ್ಯತೆಯಿಂದ ಇವರ ವಚನಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಇವರದು ಬಹುಮಟ್ಟಿಗೆ ರೂಪಕ ಭಾಷೆ. ಈ ಭಾಷೆ ಇವರ ವೈಶಿಷ್ಟ್ಯವೂ ಹೌದು. ಚಾಮರಸನು ತನ್ನ ಪ್ರಭುಲಿಂಗಲೀಲೆ ಎನ್ನುವ ಕಾವ್ಯದಲ್ಲಿ ಅಲ್ಲಮಪ್ರಭುವಿನ ಐತಿಹ್ಯವನ್ನು ವರ್ಣಿಸಿದ್ದಾನೆ.

ಅಲ್ಲಮನ ಜೀವನ ಚರಿತ್ರೆಯನ್ನು ನಿಖರವಾಗಿ ನಿರೂಪಿಸಲು ಸಾಧ್ಯವಾಗಲಾರದಷ್ಟು ಐತಿಹ್ಯಗಳು ಆ ವ್ಯಕ್ತಿತ್ವವನ್ನು ಸುತ್ತುವರಿದಿವೆ. ಅಲ್ಲಮನ ಬಗ್ಗೆ ಹದಿಮೂರನೇ ಶತಮಾನದ ಹರಿಹರ ಮಹಾಕವಿಯು, ಪ್ರಭುದೇವರ ರಗಳೆಯಲ್ಲಿ ಸಾಕಷ್ಟು ವಿವರಣೆಗಳನ್ನು ನೀಡಿರುವನಾದರೂ, ಅಲ್ಲಮನ ಪ್ರಭಾವಲಯದಿಂದ ಪೂರ್ಣವಾಗಿ ಹೊರ ಬಂದು, ಒಂದು ಸಹಜ ಚಿತ್ರಣವನ್ನು ಕೊಡುವಲ್ಲಿ ಹರಿಹರನಂತಹ ವಾಸ್ತವವಾದಿ ಕವಿ ಸಹ ಸೋಲುತ್ತಾನೆ.

ಇನ್ನು ಚಾಮರಸರು ಅಲ್ಲಮಪ್ರಭುದೇವನನ್ನು ಈ ಲೋಕದ ಮಾನವ ಚೇತನವೆಂದು ಒಪ್ಪಿಕೊಳ್ಳುವುದೇ ಇಲ್ಲ. ಅವನು ‘ಕೈಲಾಸದಿಂದ ಬಂದ ಶಿವನ ಚಿತ್ಕಳೆ’ ಎಂದೇ ಚಿತ್ರಿಸುತ್ತಾನೆ. ಇವರಿಬ್ಬರಲ್ಲದೆ ಎಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯೂ ಅಲ್ಲಮಪ್ರಭುವಿನ ಬಗ್ಗೆ ಕಾವ್ಯ ರಚನೆ ಮಾಡಿದ್ದಾನೆ. ಇನ್ನು ಚಾಮರಸನು ರಚಿಸಿರುವ ಪ್ರಭುಲಿಂಗಲೀಲೆಯು ತಮಿಳು, ಮರಾಠಿ ಮುಂತಾದ ಭಾಷೆಗಳಿಗೆ ಬಲು ಹಿಂದೆಯೇ ಅನುವಾದಗೊಂಡು ಪ್ರಖ್ಯಾತಿ ಪಡೆದಿತ್ತು.

ಈ ಮಹಾಕವಿಗಳಲ್ಲದೆ, ಅಲ್ಲಮಪ್ರಭುವಿನ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ವೀರಶೈವ ಸಾಹಿತ್ಯವೇ ಇಲ್ಲವೆನ್ನಬಹುದು. ಇಡಿಯ ವಚನ ಸಾಹಿತ್ಯದಲ್ಲಿಯೇ, ಸಾಹಿತ್ಯದ ಪರಿಭಾಷೆಯನ್ನು ಸರಿಯಾದ ಮಾರ್ಗದಲ್ಲಿ ದುಡಿಸಿಕೊಂಡವರಲ್ಲಿ ಅಕ್ಕಮಹಾದೇವಿ ಮತ್ತು ಅಲ್ಲಮಪ್ರಭು ಇಬ್ಬರೂ ಅಪ್ರತಿಮರು. ಅಲ್ಲಮಪ್ರಭು ಎಂಬ ಅಪ್ರತಿಮ ಚೇತನ ನಮ್ಮ ಶಿವಮೊಗ್ಗದವರು ಎಂಬುದು ಶಿವಮೊಗ್ಗದ ಪ್ರತಿಯೊಬ್ಬ ನಾಗರಿಕನ ಹೆಮ್ಮೆ.

ಹೆಚ್ಚಿನ ಮಾಹಿತಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ

ಅಲ್ಲಮಪ್ರಭುವಿನ ವಚನಗಳು

ಅಲ್ಲಮಪ್ರಭು ದೇವರ ವಚನಗಳು

ಪರಾಮರ್ಶನ

ಅಲ್ಲಮಪ್ರಭು

www.scribd.com

https://www.scribd.com

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version