ದಿನದ ಸುದ್ದಿ

ಯಡವನಾಡು ಬಳಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆ

Published

on

ಸುದ್ದಿದಿನ,ಮಡಿಕೇರಿ : ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಬಳಿ ವಿಜಯನಗರ ಅರಸರ ಕಾಲದ ಶಾಸನ ಪತ್ತೆಯಾಗಿದೆ. ಯಡವನಾಡುವಿನ ಅರಣ್ಯದಲ್ಲಿ ಸ್ಥಳ ಪರಿಶೀಲನೆಗೆ ತೆರಳಿದಾಗ ಕ್ರಿ.ಶ. 15-16ನೇ ಶತಮಾನಕ್ಕೆ ಸೇರಿದ ಶಾಸನ ಪತ್ತೆಯಾಗಿದೆ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯುರೇಟರ್ ಬಿ.ಪಿ.ರೇಖಾ ಅವರು ತಿಳಿಸಿದ್ದಾರೆ.

ಮೂರು ಪಟ್ಟಿಕೆಗಳಿರುವ ಶಿಲ್ಪವಾಗಿದ್ದು, ಮೂವರು ವೀರರಿಗೂ ಎದುರು ಇರುವ ಇಬ್ಬರು ವೀರರಿಗೂ ಹೋರಾಟದ ದೃಶ್ಯ. ಇವರಲ್ಲಿ ಇಬ್ಬರು ಅಶ್ವಾರೋಹಿಗಳಾಗಿದ್ದು ಕೈಯಲ್ಲಿ ಈಟಿಯಂಥ ಆಯುಧಗಳಿವೆ.

ಇನ್ನಿಬ್ಬರು ಯೋಧರ ಕೈಯಲ್ಲಿ ಖಡ್ಗ, ಗುರಾಣಿಗಳಿವೆ. ಉಳಿದೊಬ್ಬ ಬಿಲ್ಲಿಗೆ ಬಾಣಹೂಡಿ ಬಿಡುತ್ತಿದಾನೆ. ಎಲ್ಲರೂ ಚಲನೆಯ ಸ್ಥಿತಿಯಲ್ಲಿರುವ ಶಾಸನ ಪತ್ತೆಯಾಗಿದೆ. ಮಧ್ಯದ ಪಟ್ಟಿಕೆಯಲ್ಲಿ ಮೃತ ವೀರ ಪುಷ್ಪಕ ವಿಮಾನದಲ್ಲಿ ಕುಳಿತ ಭಂಗಿಯಲ್ಲಿದ್ದು ಉಭಯ ಪಾಶ್ರ್ವಗಳಲ್ಲಿ ಚಾಮರ ಧಾರಿಣಿ ಅಪ್ಸರೆಯರು ಆಕಾಶದಲ್ಲಿ ಹಾರುವಂತೆ ಚಿತ್ರಿತವಾಗಿದೆ. ಮೊದಲ ಪಟ್ಟಿಕೆಯಲ್ಲಿ ಚಂದ್ರ, ಸೂರ್ಯ, ಬಸವ ಸ್ತಂಭ ಶಿವಲಿಂಗ ಕೈ ಮುಗಿದು ಕುಳಿತಿರುವ ವ್ಯಕ್ತಿ ಹಾಗೂ ಕಳಶ ಕೆತ್ತನೆಗಳಿವೆ.

ಶಾಸನ ಶಿಲೆ ತುಂಬ ಸವೆದು ಹೋಗಿದ್ದು, ಲಿಪಿ ಲಕ್ಷಣಗಳನ್ನು ಆಧರಿಸಿ 15-16 ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಬಹುದಾಗಿದೆ. ಯಾವುದೇ ರಾಜವಂಶ ಅಥವಾ ಅರಸ ಪಾಳೇಗಾರರ ಉಲ್ಲೇಖವಿಲ್ಲ ಎಂದು ರೇಖಾ ಅವರು ತಿಳಿಸಿದ್ದಾರೆ.

ಶಾಸನ ಪಾಠ ಇಂತಿದೆ

ಒಂದನೇಯ ಪಟ್ಟಿ 1. ಸ್ವಸ್ತಿ ಜಯಾಬ್ಯುದಯಶಾ . 2. ತುರ (ತ್ತೋ)ದಸು. ಬವರದಲಿಸತ್ತ 3. …ಜೆ… 2 ನೆಯ ಪಟ್ಟಿ: 4. ರಬಹು. ಪೆ ….5….ಯ..ತಿಗೋಹಳಿ..6. …ಭುಕೊಂದಲಿ.. (ಣಂ)ಗೇರಿಯ ..3 ನೆಯ ಪಟ್ಟಿ 7. . . .ತ್ತ ..

ಶಾಸನಪತ್ತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಜೆ.ಯಾಧವ, ಶಾಸನ ತಜ್ಞರಾದ ಮೈಸೂರಿನ ಡಾ.ಎಚ್.ಎಂ.ನಾಗರಾಜ್ ರಾವ್ ಹಾಗೂ ಸ್ಥಳೀಯರು ಸಹಕರಿಸಿದ್ದಾರೆ. ಶಾಸನವನ್ನು ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಕ್ಯುರೇಟರ್ ಬಿ.ಪಿ.ರೇಖಾ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243 

Trending

Exit mobile version