ಬಹಿರಂಗ

ಆರ್ಯರು ಭಾರತೀಯರಾಗಲು ಹೇಗೆ ಸಾಧ್ಯ..?

Published

on

  • ಡಿ. ಶಶಿಧರ

ಪ್ರೀತಿಯ ಕಲ್ಲಡ್ಕ ಪ್ರಭಾಕರ್ ಭಟ್ಟರೆ, ಮುಸ್ಲಿಮರು ಭಾರತಕ್ಕೆ ಅತಿಥಿಯಾಗಿ ಬಂದವರು ಅತಿಥಿಯಾಗಿಯೇ ಇರಬೇಕು ಎಂಬ ನಿಮ್ಮ ಹೇಳಿಕೆ ಗಮನಿಸಿದೆ. ನಿಮಗೆ ಭಾರತದ ನೈಜ ಇತಿಹಾಸದ ಕೊರತೆ ಇಷ್ಟೊಂದು ಇದೆ ಎಂದು ನಾನು ಭಾವಿಸಿರಲಿಲ್ಲ. ಪ್ರಾಯಶಃ ನಿಮಗೆ ಬಾಲ ಗಂಗಾಧರ ತಿಲಕರ ಬಗ್ಗೆ ಗೊತ್ತಿರಬಹುದೆಂದೂ, ತಿಲಕರು ಹೊಂದಿದ್ದ ಧಾರ್ಮಿಕ ಭಾವನೆಗಳ ಪರಿಚಯ ಇರಬಹುದೆಂದು ನಂಬುತ್ತ, ತಿಲಕರೇ ಸ್ವತಃ ಬರೆದಿರುವ “The Arctic Home in the Vedas. ಎಂಬ ಪುಸ್ತಕ ಓದಲು ಮನವಿ ಮಾಡುತ್ತೇನೆ.

ಆ ಪುಸ್ತಕದಲ್ಲಿ ಉತ್ತರ ದ್ರುವದ ಮೂಲದವರಾದ ಆರ್ಯರು ಉತ್ತರ ದ್ರುವದ ಶೀತವನ್ನು ತಡೆದುಕೊಳ್ಳಲಾಗದೆ ಭಾರತ ಮತ್ತು ಇತರ ಭೂ ಭಾಗಗಳಿಗೆ ವಲಸೆ ಬಂದರು ಎಂದು ಆ ಪುಸ್ತಕದಲ್ಲಿ ತಿಲಕರು ಹೇಳಿಕೊಂಡಿದ್ದಾರೆ.ತಿಲಕರ ವಾದ ನೀವು ಒಪ್ಪದೇ ಹೋದರೆ ಅವರಿಗೆ ದೇಶದ್ರೋಹಿಯ ಪಟ್ಟ ಕಟ್ಟಿದರೂ ನನ್ನದೇನೂ ತಕರಾರಿಲ್ಲ.

ಈ ಪುಸ್ತಕ ಓದಿದ ನಂತರ, ಯಾರು ದನ ಕಾಯುತ್ತ ಹೊಟ್ಟೆ ಪಾಡಿಗೆ ನಮ್ಮ ಭಾರತದ ನೆಲಕ್ಕೆ ಅತಿಥಿಯಾಗಿ ಬಂದು ಮೂಲ ನಿವಾಸಿಗಳ ಬದುಕಿಗೆ ಕಂಟಕರಾದರು ಎಂಬ ಸತ್ಯ ತಿಳಿದರೆ, ಯಾರು ಈ ದೇಶದಲ್ಲಿ ಅತಿಥಿಗಳಾಗಿ ಬದುಕಬೇಕೆಂಬ ಪ್ರಶ್ನೆಗೆ ಭಟ್ಟರು ಉತ್ತರ ಕಂಡುಕೊಳ್ಳಬಹುದೇನೋ!?. ಋಗ್ವೇದಕ್ಕಿಂತ ಮುಂಚೆ ಯುರೋಪಿನ ಆಸ್ಟ್ರೀಯಾದ ಹಂಗೇರಿಯಲ್ಲಿ ವಾಸವಿದ್ದ ಯುರೋಪ್ಪಿಯನ್ನರಾದ ಆರ್ಯರು ಭಾರತೀಯರಾಗಲು ಹೇಗೆ ಸಾಧ್ಯ?.

ಮೊಲ್ಲಾರ್, ನೆಹರಿಂಗ್,ಪೋಕೂರೈನ್, ಬ್ರಾಂಡೆನ್ ಸ್ಪೈನ್, ಡಾ.ಬಿಕೆ ಘೋಷ್ ಮುಂತಾದ ಇತಿಹಾಸ ತಜ್ಞರು ತಿಳಿಸುವಂತೆ, ಆರ್ಯರು ದಕ್ಷಿಣ ರಷ್ಯಾದಿಂದ ವಲಸೆ ಬಂದವರು ಎಂದು ಅಭಿಪ್ರಾಯ ಪಟ್ಟಿರುವಾಗ ಪ್ರಭಾಕರ್ ಭಟ್ಟರು ಭಾರತೀಯರಾಗಲು ಹೇಗೆ ಸಾಧ್ಯ?. ಇವೆಲ್ಲ ವಾದಗಳಿಗಿಂತ ಇನ್ನೊಂದು ಪ್ರಮುಖವಾದ ಚರ್ಚೆಯನ್ನು ಭಟ್ಟರು ಗಮನಿಸಲೇಬೇಕು.

ನಿಮ್ಮ ಫ್ಯಾಸಿಸ್ಟ್ ಮನಸ್ಥಿತಿಯನ್ನು ಬೆಳಸಿಕೊಳ್ಳಲು ಮೂಲ ಪ್ರೇರಣೆ ಮತ್ತು ಕಾರಣೀಭೂತರಾದ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ ಪ್ರಕಾರ ನಾಜಿಗಳ ಸಂತತಿಯೇ ಆರ್ಯರು ಎಂದು ಹೇಳಿರಬೇಕಾದರೆ, ಭಾರತಕ್ಕೆ ಅತಿಥಿಯಾಗಿ ಬಂದವರು ಯಾರೆಂದು ಭಟ್ಟರು ಅರ್ಥ ಮಾಡಿಕೊಳ್ಳಬೇಕಲ್ಲವೆ?.

ಖಂಡಿತವಾಗಿಯೂ ನಾವು ಹಿಟ್ಲರ್ ನ ವಾದವನ್ನು ಒಪ್ಪಲೇಬೇಕು.ಯಾಕೆಂದರೆ ಹಿಟ್ಲರ್ ನ ನಾಜಿವಾದಕ್ಕೂ ಆರ್ಯರ ಕೋಮುವಾದಕ್ಕೂ ಯಾವುದೇ ರೀತಿಯ ವ್ಯತ್ಯಾಸ ಕಂಡು ಬರಲು ಸಾಧ್ಯವೇ ಇಲ್ಲ. ನಾಜಿಗಳು ಯಹೂದಿಗಳ ವಿರುದ್ದ ಪಿತೂರಿ ನಡೆಸಿದರೆ, ಇಂದು ಭಟ್ಟರಂತಹ ಕೋಮುವಾದಿಗಳು ಮುಸ್ಲಿಮರ ವಿರುದ್ಧ ಕತ್ತಿ ತ್ರಿಶೂಲ ಹಿಡಿಯುತ್ತಿದ್ದಾರೆ. ಹಿಟ್ಲರ್ ನ ಪ್ರಕಾರವೇ ಹೇಳುವದಾದರೆ ಆರ್ಯರು ನಾಜಿಗಳ ಸಂತತಿ ಎಂದಾದರೆ ಭಾರತದ ಮೂಲ ನಿವಾಸಿಗಳು ಯಾರೆಂದು ಬೇರೆ ಹೇಳಬೇಕಿಲ್ಲ ಅಲ್ಲವೆ?.

ಕ್ರಿ.ಪೂ. 2000 ದಿಂದ ಕ್ರಿ.ಪೂ. 800 ರವರೆಗೆ ಸತತವಾಗಿ ಆರ್ಯರು ಭಾರತಕ್ಕೆ ಅತಿಥಿಯಾಗಿ ಬಂದಿರಬೇಕಾದರೆ, ಮೂಲ ನಿವಾಸಿಗಳಾದ ಭಾರತೀಯರನ್ನೇ ಅತಿಥಿಗಳೆಂದು ಕರೆಯುವ ಕಲ್ಲಡ್ಕ ಭಟ್ಟರ ಮತೆಗೇಡಿತನಕ್ಕೆ ಏನೆಂದು ಕರೆಯಬೇಕು?.

ನಾಲ್ಕೂ ವೇದಗಳ ಕಾಲದ ಚರಿತ್ರೆಯನ್ನು ಗಮನಿಸಿದಾಗ ಎಷ್ಟೊಂದು ಹೀನವಾದ ಬದುಕನ್ನು ಬಾಳಿದ ಇವರು ಹರಪ್ಪ, ಸಿಂಧೂ ಬಯಲಿನ ನಾಗರಿಕತೆಯನ್ನು ಕಟ್ಟಿದ ದೇಶದ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಮೂಲಕ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದ ದ್ರಾವಿಡರ ದ್ರೋಹಿಗಳು ಯಾರೆಂದು ಭಟ್ಟರು ಹೇಳಲೇಬೇಕು.

ಕಟ್ಟು ಕತೆಯ ಇತಿಹಾಸ ಸೃಷ್ಟಿ ಮಾಡುವದು ನಿಮಗೆ ತುಂಬಾ ಸುಲಭ ಆದರೆ, ನೈಜ ಇತಿಹಾಸ ಅರಗಿಸಿಕೊಳ್ಳುವುದಕ್ಕೆ ಎಷ್ಟೊಂದು ಕಷ್ಟ ಅಲ್ಲವೆ?. ದ್ರಾವಿಡರು ಕಟ್ಟಿ ಬೆಳೆಸಿದ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಆರ್ಯರು ತಾವು ಕಟ್ಟಿದ್ದೇವೆಂದು ಹೇಳಿಕೊಳ್ಳುವದನ್ನು ಕಂಡು ಕಲ್ಲಡ್ಕ ಭಟ್ಟರಂತಹವರ ಮೇಲೆ ತುಂಬಾ ಕನಿಕರ ಹುಟ್ಟುತ್ತಿದೆ. ಯಾಕೆಂದರೆ, ಸಿಂಧೂ ಬಯಲಿನ ನಾಗರಿಕತೆ ಹುಟ್ಟಿದ್ದಾದರೂ ಎಲ್ಲಿಂದ? ಎಂಬ ಪ್ರಶ್ನೆಗೆ ಉತ್ತರವನ್ನೂ ಹುಡುಕಬೇಕಲ್ಲವೆ?.

ಮೊಹೆಂಜೊದಾರೋ (ಲರ್ಖಾನ ಜಿಲ್ಲೆ), ಹರಪ್ಪ (ಮೊಂಟೆಗೊಮರಿ ಜಿಲ್ಲೆ) , ಸಿಂಧೂ ನದಿ ದಂಡೆಯ ಅಮ್ರಿ, ಚಾನ್ಹುದಾರೋ, ಕೋಟಡಿಜಿ, ಸುಕ್ತಜೆಂಡರ್(ಅರಬ್ಬಿ ಸಮುದ್ರ ಬಂದರು) , ರಾಖಿಗಿರಿ, ಕರಾಚಿ, ಬಾಲಾಕೋಟ್, ಧೋಲವೀರ, ಜಕಾರ್ ನಗರಗಳು ಯಾವ ದೇಶದಲ್ಲಿ ಇವೆ?.

ಸಿಂಧೂ ಬಯಲಿನ ನಾಗರಿಕತೆಯನ್ನೇ ಹಿಂದೂ ಧರ್ಮದ ಸಂಸ್ಕೃತಿ ಎಂದು ಬಿಂಬಿಸುವದಾದರೆ, ಸಿಂಧೂ ನಾಗರಿಕತೆ ಹುಟ್ಟಿದ್ದು ಈಗಿನ ಪಾಕಿಸ್ತಾನದಲ್ಲಿ ಅಲ್ಲವೆ?.ಮೇಲೆ ತಿಳಿಸಿದ ನಗರಗಳು ಇಂದಿಗೂ ಪಾಕಿಸ್ತಾನದಲ್ಲಿ ಇವೆ ಅಲ್ಲವೆ?.

ಸರಿ, ಹರಪ್ಪ ಅಥವಾ ಸಿಂಧೂ ಬಯಲಿನ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಹುಟ್ಟು ಹಾಕಿದ್ದು ಆರ್ಯರೆಂದೇ ಒಪ್ಪಿಕೊಳ್ಳೋಣ, ಹಾಗಾದರೆ ಆರ್ಯರು ಈಗ ಎಲ್ಲಿ ವಾಸಿಸಬೇಕು?. ಸಿಂಧೂ ಬಯಲಿನ ನಾಗರಿಕತೆ ಕಟ್ಟುವಲ್ಲಿ ಆರ್ಯರ ಪಾಲು ಇದ್ದದ್ದು ನಿಜವೇ ಆಗಿದ್ದರೆ ಆರ್ಯರೆಲ್ಲ ಇರಬೇಕಾಗಿರುವ ಭೂಮಿ ಪಾಕಿಸ್ತಾನ ಅಲ್ಲವೆ?.ಆದ್ದರಿಂದ ಆರ್ಯರು ಭಾರತವನ್ನು ಬಿಟ್ಟು ಮೇಲೆ ತಿಳಿಸಿದ ಪಾಕಿಸ್ತಾನದ ಭೂಮಿಗೆ ಹೋಗಿ ನೆಲೆ ಕಂಡುಕೊಳ್ಳಲಿ.

ಅಖಂಡ ಭಾರತದಲ್ಲಿ ವಾಸವಾಗಿರುವ ಮುಸ್ಲಿಮರು ಬೇರೆ ಯಾವುದೇ ದೇಶದಿಂದ ಭಾರತಕ್ಕೆ ಅತಿಥಿಯಾಗಿ ಬಂದವರಲ್ಲ. ಎಲ್ಲಿಂದಲೋ ಬಂದ ಆರ್ಯರ ದೌರ್ಜನ್ಯ ದಬ್ಬಾಳಿಕೆ ಅತ್ಯಾಚಾರ ದಿಂದ ಬೇಸತ್ತು ಕ್ರಿ.ಪೂ. ಆರನೇಯ ಶತಮಾನದಿಂದ ಬೌದ್ಧ ಮತ್ತು ಜೈನ ಧರ್ಮಗಳ ಮೂಲಕ ಆರ್ಯರ ವಿರುದ್ದದ ಸಾಮಾಜಿಕ ಹಾಗೂ ಧಾರ್ಮಿಕ ಚಳುವಳಿಗೆ ದ್ರಾವಿಡರು ನಾಂದಿ ಹಾಡಿದ ಇತಿಹಾಸ ಮರೆಮಾಚಲು ಹೇಗೆ ಸಾಧ್ಯ?.

ಆರ್ಯರ ಇಬ್ಬಂದಿ ನೀತಿಯಿಂದ ಅನೇಕ ಧಾರ್ಮಿಕ ಪಂಥಗಳೂ ಹುಟ್ಟಿಕೊಂಡವು ಎಂಬುವದೂ ಮರೆಯಬಾರದಲ್ಲವೆ?. ಮೌರ್ಯ ಸಾಮ್ರಾಜ್ಯದ ಅವಧಿಯಲ್ಲಿ ಆರ್ಯರು ಮಾಡಿದ ವಿಶ್ವಾಸ ಘಾತುಕತನದಿಂದ ಬೌದ್ಧ ಧರ್ಮ ಅವನತಿಗೆ ಕಾರಣವಾಯಿತು ಎಂಬ ಸತ್ಯ ಮರೆ ಮಾಚಲು ಸಾಧ್ಯವೆ?.

ಕ್ರಿಸ್ತ ಪೂರ್ವದಲ್ಲಿಯೇ ತಮ್ಮ ಅನಾಚಾರಗಳಿಂದ ಬೇಸತ್ತು ಬೌದ್ಧ ಮತ್ತು ಜೈನ ಸಂಪ್ರದಾಯಗಳು ಅಸ್ತಿತ್ವಕ್ಕೆ ಬಂದ ನಂತರ, ಕಿ.ಶ. 570 ರಿಂದ 632 ರ ನಡುವೆ ಇಸ್ಲಾಂ ಧರ್ಮ ಅಸ್ತಿತ್ವಕ್ಕೆ ಬಂದಿದೆ.‌ಅದಕ್ಕಿಂತ ಮುಂಚೆಯೇ ಆರ್ಯರ ವಿರುದ್ದ ಭಾರತೀಯರ ಧಾರ್ಮಿಕ ಚಳುವಳಿಗಳು ಹುಟ್ಟಿಕೊಂಡಿದ್ದವು.
ಕ್ರಿ.ಶ. 643 ರ ನಂತರ ಅರಬ್ಬರ ದಾಳಿಯಿಂದ ಭಾರತದಲ್ಲಿ ಇಸ್ಲಾಂ ಧರ್ಮ ಪ್ರವೇಶಿಸಿತು ಎನ್ನುವುದೂ ಸುಳ್ಳಲ್ಲ.

ಇಸ್ಲಾಂ ಧರ್ಮಕ್ಕೆ ಸೇರಿದ ಅರಬ್ಬರಾಗಲಿ , ಟರ್ಕರಾಗಲಿ, ಅಫಗನ್ನರಾಗಲಿ,ಮೊಗಲರಾಗಲಿ ತನ್ನ ದೇಶದ ಇಸ್ಲಾಂರನ್ನು ಭಾರತಕ್ಕೆ ತರಲಿಲ್ಲ, ಅಂದರೆ ಕಲ್ಲಡ್ಕ ಭಟ್ಟರ ಪ್ರಕಾರ ಅತಿಥಿಗಳಾಗಿ ಬರಲಿಲ್ಲ. ಆದರೆ ಅವರೆಲ್ಲ ಭಾರತದ ಭೂಪಟದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪನೆಯ ನಂತರ ಭಾರತದ ಮೂಲ ನಿವಾಸಿಗಳು ಇಸ್ಲಾಂ ಧರ್ಮಕ್ಕೆ ಸೇರಿದ್ದೂ ಸುಳ್ಳಲ್ಲ.

ಮತಾಂತರವಾಗಲು ಮುಖ್ಯ ಕಾರಣವೆಂದರೆ, ಆಗಲೇ ಸಾವಿರಾರು ವರ್ಷಗಳಿಂದ ದಾಳಿಯ ಮೂಲಕ ದ್ರಾವಿಡರ ದೇಶವನ್ನು ವಶ ಪಡಿಸಿಕೊಂಡಿದ್ದ ಯುರೋಪಿನ ಆರ್ಯರ ಉಪಟಳಕ್ಕೆ ಬೇಸತ್ತು ಮುಸ್ಲಿಮ್ ರಾಜರ ಆಳ್ವಿಕೆಯ ಭೂ ಭಾಗದಲ್ಲಿ ಮತಾಂತರಗೊಂಡ ಭಾರತೀಯರೇ ಇಂದಿನ ಮುಸ್ಲಿಮರು ಎಂಬುವದನ್ನು ಮರೆಯಬಾರದು ಕಲ್ಲಡ್ಕ ಭಟ್ಟರೆ!.

ಈಗ ಹೇಳಿ, ಯಾರು ಭಾರತೀಯರು? ಯಾರು ದನ ಕಾಯುತ್ತ ಬಂದು ಭಾರತವನ್ನು ಆಳಿ, ನಿಮ್ಮ ಅಮಾನವೀಯ ಫ್ಯಾಸಿಸ್ಟ್ ಮನಸ್ಥಿತಿಯಿಂದ ಭಾರತೀಯರನ್ನು ಗುಲಾಮರನ್ನಾಗಿಸಿಕೊಂಡು, ಭಾರತದ ಮೂಲ ನಿವಾಸಿಗಳ ವಿರುದ್ಧ ಮಾತನಾಡಲು ಯಾವ ನೈತಿಕತೆ ಇದೆ?. ಯಾರು ಈ ದೇಶವನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಬೇಕು ಎಂಬುವದನ್ನು ದೇಶದ ಮೂಲ ನಿವಾಸಿಗಳೇ ತೀರ್ಮಾನವನ್ನು ನೀಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version