ದಿನದ ಸುದ್ದಿ
ಸಹಕಾರ ಇಲಾಖೆಯಿಂದ 61 ಜನ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ವಿತರಣೆ
ಸುದ್ದಿದಿನ,ಕಲಬುರಗಿ:ಲಾಭದಲ್ಲಿರುವ ಸಹಕಾರಿ ಬ್ಯಾಂಕ್ ಮತ್ತು ಸಂಘ-ಸಂಸ್ಥೆಗಳಿಂದ ಸಹಕಾರ ಇಲಾಖೆಯು ದೇಣಿಗೆ ಸಂಗ್ರಹಿಸಿ ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹಧನ ನೀಡಲು ಉದ್ದೇಶಿಸಲಾಗಿದೆ. ಇದರ ಪ್ರಯುಕ್ತ ಸಾಂಕೇತಿಕವಾಗಿ ಸಹಕಾರ ಇಲಾಖೆಯಿಂದ ಈಗಾಗಲೇ 61 ಜನ ಆಶಾ ಕಾರ್ಯಕರ್ತೆಯರಿಗೆ ಒಟ್ಟು 1,83,000 ರೂ.ಗಳ ಪ್ರೋತ್ಸಾಹಧನವನ್ನು ಚೆಕ್ ಮೂಲಕ ವಿತರಣೆ ಮಾಡಲಾಗಿದೆ ಎಂದು ಕಲಬುರಗಿ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.
ಕಲಬುರಗಿ, ಆಳಂದ, ಸೇಡಂ ತಾಲೂಕುಗಳಲ್ಲಿ ಬರುವ ಗ್ರಾಮಗಳ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಕಮಲಾಪುರ ತಾಲೂಕಿನ ಮಹಾಗಾಂವ, ಮಡಕಿ, ಸೇಡಂ ತಾಲೂಕಿನ ಕೋಡ್ಲಾ ಹಾಗೂ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸುವ ಮೂಲಕ ಸಾಂಕೇತಿಕವಾಗಿ ಪ್ರೋತ್ಸಾಹಧನದ ಚೆಕ್ ವಿತರಣೆ ಮಾಡಲಾಗಿದೆ. ಆಯಾ ತಾಲೂಕಿನ ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಸಂಘದ ಆಡಳಿತ ಮಂಡಳಿ, ತಾಲೂಕಾ ಆರೋಗ್ಯ ಅಧಿಕಾರಿಗಳು, ತಾಲೂಕು ತಹಸೀಲ್ದಾರರು ಹಾಗೂ ಪೋಲಿಸ್ ಠಾಣಾ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿರುತ್ತಾರೆ.
ಈ ಪ್ರೋತ್ಸಾಹಧನ ಪಾವತಿಗಾಗಿ ಜಿಲ್ಲೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳ ಮೂಲಕ ತಾಲೂಕುವಾರು, ಪ್ರಾಥಮಿಕ ಆರೋಗ್ಯ ಕೇಂದ್ರವಾರು ಹಾಗೂ ಗ್ರಾಮವಾರು ಕಾರ್ಯನಿರತ ಆಶಾ ಕಾರ್ಯಕರ್ತೆಯರ ಮಾಹಿತಿಯನ್ನು ಪಡೆಯಲಾಗಿದೆ. ವಿವರ ಇಂತಿದೆ. ಕಲಬುರಗಿ- 342, ಆಳಂದ-290, ಅಫಜಲಪೂರ-194, ಜೇವರ್ಗಿ-278, ಸೇಡಂ-184, ಚಿತ್ತಾಪೂರ-311, ಚಿಂಚೋಳಿ 242 ಸೇರಿದಂತೆ ಹೀಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1847 ಆಶಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ 3000 ರೂ.ರಂತೆ ಪ್ರೋತ್ಸಾಹ ಧನ ವಿತರಣೆ ಮಾಡಲು ಒಟ್ಟು ರೂ. 55,41,000 ರೂ.ಗಳ ದೇಣಿಗೆ ಸಂಗ್ರಹಿಸಲು ಗುರಿ ಹೊಂದಲಾಗಿದೆ.
ಆಶಾ ಕಾರ್ಯಕರ್ತೆಯರಿಗೆ ದೇಣಿಗೆ ಸಂಗ್ರಹಿಸಿ ಪ್ರೋತ್ಸಾಹಧನ ನೀಡಲು ಕಲಬುರಗಿ ನಗರದಲ್ಲಿ ಲಾಭದಲ್ಲಿರುವ ಸಹಕಾರ ಬ್ಯಾಂಕುಗಳು, ಸಂಘ ಸಂಸ್ಥೆಗಳಿಂದ ಸಹಕಾರ ಸಂಘಗಳ ಉಪ ನಿಬಂಧಕರು ಕಲಬುರಗಿ ಇವರ ಹೆಸರಿಗೆ ಚೆಕ್ ಮೂಲಕ ಈಗಾಗಲೇ 15 ಲಕ್ಷ ರೂ. ವರೆಗೆ ದೇಣಿಗೆ ಸಂಗ್ರಹ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಪ್ರತಿ ಎಲ್ಲಾ ತಾಲೂಕಿನಲ್ಲಿ ಬರುವ ಸಹಕಾರ ಸಂಘಗಳ ಮೂಲಕ ಆಶಾ ಕಾರ್ಯಕರ್ತೆಯರಿಗೆ ಹಂತ ಹಂತವಾಗಿ ಚೆಕ್‍ಗಳ ಮೂಲಕ ಪ್ರೋತ್ಸಾಹ ಧನ ವಿತರಣೆ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243