ನೆಲದನಿ

ಬಡವರ ಗುಡಿಸಲಲ್ಲಿ ಹೋರಾಟದ ಹಣತೆ ಹಚ್ಚಿಟ್ಟಿದ್ದ ಪ್ರೊಫೆಸರ್ ಬಿ. ಕೃಷ್ಣಪ್ಪ

Published

on

  • ಬಿ.ಎಲ್.ರಾಜು, ಪ್ರಾಧ್ಯಾಪಕರು, ಸಾಗರ

ಪ್ಪತ್ತರ ದಶಕದಲ್ಲಿ ಕರ್ನಾಟಕಕ್ಕೆ, ಕನ್ನಡದ ತಳಸಮುದಾಯಗಳ ಕೇರಿ ಕೇರಿಗಳಿಗೆ, ಮನಸುಗಳಿಗೆ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಕ್ರಾಂತಿಕಾರಕ ವಿಚಾರಗಳನ್ನು ಕೊಟ್ಟು, ಸಾವಿರಾರು ವರ್ಷಗಳ ಕಾಲ ಅಸ್ಪೃಶ್ಯತೆ, ಅವಮಾನ, ಹಸಿವು, ಬಡತನ, ಜೀತಗಾರಿಕೆ, ಹಿಂಸೆ, ದೌರ್ಜನ್ಯಗಳನ್ನು ಅನುಭವಿಸಿ ಶಾಶ್ವತವಾಗಿ ಅಕ್ಷರಶಃ ಗುಲಾಮರಂತೆ ಬದುಕಿದ್ದ ದಲಿತರನ್ನು ಎಚ್ಚರಿಸಿ, ಅವರ ಗುಡಿಸಲುಗಳಲ್ಲಿ ಹೋರಾಟದ ಕಿಡಿ ಮತ್ತು ಕಿಚ್ಚನ್ನು ಹಚ್ಚಿದ ಧೀಮಂತ ದಲಿತ ನಾಯಕನಿದ್ದರೆ ಅದು ಪ್ರೊಫೆಸರ್ ಬಿ ಕೃಷ್ಣಪ್ಪನವರು ಮಾತ್ರ. ಬಿಕೆಯವರ ಸಂಘರ್ಷದ ಕರೆಗೆ ಓಗೊಟ್ಟ ದಲಿತರು ಹಿಂದುಳಿದವರು ಮತ್ತು ಮಹಿಳೆಯರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಒಂದುಗೂಡಿದರು ಮತ್ತು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ ಬಂದು ಸೇರಿದರು.

ಬಿಕೆ ಎನ್ನುವುದು ಈ ನೆಲದ ದಲಿತರ ರಕ್ತದ ಕಣಕಣದಲ್ಲೂ ಬಹಳ ಪ್ರೀತಿಯಿಂದ ಮಾರ್ದನಿಸುತ್ತದೆ. ಯಾವುದೇ ಊರಿಗೆ ಬೇಕಾದರೂ ಹೋಗಿ ಬಿಕೆ ಎಂದರೆ ಸಾಕು ಜನ ಈ ಹೊತ್ತಿಗೂ ರೋಮಾಂಚಿತರಾಗುತ್ತಾರೆ. ಅಷ್ಟರ ಮಟ್ಟಿಗೆ ಪ್ರೊಫೆಸರ್ ಇಲ್ಲಿಯ ಮನೆಮನಗಳ ಸ್ಪೂರ್ತಿ, ಪ್ರೇರಣೆ ಮತ್ತು ಪ್ರಭಾವವಾಗಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಈ ದೇಶದ ಚರಿತ್ರೆ, ಪುರಾಣ, ರಾಜಕಾರಣ, ಸಮಾಜ, ಸಂಸ್ಕೃತಿ, ಆರ್ಥಿಕತೆ ಹೀಗೆ ಹತ್ತು ಹಲವು ಸಂಗತಿಗಳನ್ನು ಬಹಳ ಆಳವಾಗಿ ಅಧ್ಯಯನ ಮಾಡಿ ದಲಿತರ ಬಿಡುಗಡೆಯ ಚಿಂತನೆಯನ್ನು ಮತ್ತು ರಾಜಕಾರಣವನ್ನು ಕಟ್ಟಿಕೊಟ್ಟ ಡಾ. ಬಿ ಆರ್ ಅಂಬೇಡ್ಕರ್ ಅವರು ಈ ದೇಶದ ಮೂಲೆ ಮೂಲೆಗೆ, ಹಟ್ಟಿ, ಹಾಡಿಗಳಿಗೆ ತಲುಪಲು ಈಗಿರುವಂತೆ ಅಂದು ಯಾವ ಮಾಧ್ಯಮಗಳೂ ಇರದಿದ್ದ ಕಾರಣ ಬಹುತೇಕ ಅಶಿಕ್ಷಿತರಾಗಿ , ಅನಕ್ಷರಸ್ಥ ರಾಗಿದ್ದ ದಲಿತರಿಗೆ ಅಪರಿಚಿತರಾಗಿಯೇ ಉಳಿದಿದ್ದರು.

ಇಂತಹ ಕ್ರಾಂತಿಕಾರಿ ಮತ್ತು ಮನುಕುಲದ ಬಿಡುಗಡೆಯ ಕನಸುಗಾರನ ಬೃಹತ್ ಚಿಂತನೆ ಮತ್ತು ದರ್ಶನಗಳು ಅಕ್ಷರರೂಪದಲ್ಲಿ ಇದ್ದವು. ಆ ಎಲ್ಲ ಚಿಂತನೆಗಳನ್ನು ಅಕ್ಷರವೇ ಇಲ್ಲದಿದ್ದ ದಲಿತರ ಬೃಹತ್ ಸಮೂಹಕ್ಕೆ ಮೌಖಿಕ ಪರಂಪರೆಯ ಅಸ್ತ್ರ ಗಳಾದ ಭಾಷಣ, ಹಾಡು, ಕಥೆ, ಲಾವಣಿಗಳ ಮುಖಾಂತರ ಮನವರಿಕೆ ಮಾಡಿಕೊಟ್ಟಿದ್ದು ಪ್ರೊ. ಬಿ.ಕೃಷ್ಣಪ್ಪ. ಅಷ್ಟೇ ಅಲ್ಲ, ಇಲ್ಲಿಯ ತನ್ನ ಅನಾಥ, ಬಾಯಿಯಿಲ್ಲದ ದಲಿತ ಲೋಕಕ್ಕೆನಾಯಕತ್ವ ನೀಡಿ, ಅದನ್ನು ಶತಶತಮಾನಗಳಿಂದ ಸುಲಿಗೆ ಮಾಡುತ್ತಲೇ ಬಂದ ಶೋಷಕರು, ಪುರೋಹಿತಶಾಹಿಗಳು, ಭೂಮಾಲಿಕರು, ಜಾತಿವಾದಿಗಳು, ಪಾಳೆಗಾರರ, ಜನವಿರೋಧಿ ಮತ್ತು ಜಡಗೊಂಡ ಪ್ರಭುತ್ವದ ವಿರುದ್ಧ ನಿಲ್ಲಿಸಿ ಐತಿಹಾಸಿಕ ದಲಿತ ಸಂಘರ್ಷವನ್ನು ಕಟ್ಟಿದ್ದೂ ಸಹ ಬಿಕೆಯವರೆ.

ಈ ಅಪ್ರತಿಮ ಹೋರಾಟಗಾರ ಪ್ರೊ. ಬಿ.ಕೃಷ್ಣಪ್ಪನವರು ಈ ನೆಲದಲ್ಲಿ ನಡೆಸಿದ ಹೋರಾಟಗಳು, ಧರಣಿಗಳು ಪ್ರತಿಭಟನೆಗಳು ಸಾವಿರ ಸಾವಿರ ಸಂಖ್ಯೆಯಲ್ಲಿವೆ. ಇವತ್ತಿಗೂ ನೊಂದವರ ಎದೆಯಲ್ಲಿ ಹೋರಾಟದ ಕಿಚ್ಚನ್ನು, ಧೈರ್ಯವನ್ನು ಕೊಡುವ ಕೃಷ್ಣಪ್ಪನವರು ವರ್ತಮಾನದ ಮಹಾನ್ ಪ್ರೇರಕ ಶಕ್ತಿ. ಅವರು ಮಾಡಿದ ಹೋರಾಟಗಳು ಮತ್ತು ಚಿಂತನೆಗಳು ಆಳುವ ಸರ್ಕಾರದ ಆಲೋಚನೆಗಳನ್ನು ಬದಲಾಯಿಸುವಷ್ಟು ಮಟ್ಟಿಗೆ ಪ್ರಭಾವಶಾಲಿಯಾಗಿದ್ದವು.

ಅವೇ ಎಷ್ಟು ಸಲ ಸರ್ಕಾರದ ನೀತಿ ನಿರೂಪಣೆಗಳಾಗಿಯೂ, ಕಾಯ್ದೆ ಕಾನೂನುಗಳಾಗಿಯೂ ಬದಲಾಗಿವೆ. ದಲಿತರ ಭೂಮಿ ಪರಬಾರೆ ನಿಷೇಧ ಕಾಯ್ದೆ, ದಲಿತರ ಮೇಲಿನ ದೌರ್ಜನ್ಯ ವಿರೋಧಿ ಕಾಯಿದೆ, ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇಧ, ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯ, ದಲಿತ ಭೂರಹಿತರಿಗೆ ಸರಕಾರಿ ಭೂಮಿ ಹಂಚಿಕೆ…. ಹೀಗೆ ಲೆಕ್ಕವಿಲ್ಲದಷ್ಟು ಸುಧಾರಣೆಗಳು ನೀತಿ ನಿರೂಪಣೆಗಳು ಬಿ.ಕೆ.ಅವರ ಹೋರಾಟದ ಫಲವೆಂದರೆ ತಪ್ಪಲ್ಲ.

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆಯೇ, ಕರ್ನಾಟಕದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಕೂಡಾ ಮಹಾನ್ ಸಾಮಾಜಿಕ ಸುಧಾರಕ, ರಾಜಕೀಯ ಚಿಂತಕ, ದಲಿತರ ನಾಯಕ, ಅಪ್ರತಿಮ ವಾಗ್ಮಿ, ಅಪರೂಪದ ಸಾಹಿತಿ, ನಾಡಿನಾದ್ಯಂತ ಲಕ್ಷ ಲಕ್ಷ ಜನರನ್ನು ಹೋರಾಟಕ್ಕೆ ಕಳಿಸಿದ ಧೀಮಂತ ಜನನಾಯಕ. ಸಾಮಾಜಿಕ ನ್ಯಾಯ ಪ್ರತಿಪಾದಕ ಮತ್ತು ಮಹಾನ್ ಮಾನವತಾವಾದಿ.

ಹೀಗೆ ಎಲ್ಲವೂ ಆಗಿದ್ದ ಬಿಕೆ ಅವರ ಜನ್ಮ ದಿನ ಇದೇ ಜೂನ್ 9ರಂದು. ಎಲ್ಲರಿಗೂ ಪ್ರೊಫೆಸರ್ ಜನ್ಮ ದಿನದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version