ದಿನದ ಸುದ್ದಿ
ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ
ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.
ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243