ದಿನದ ಸುದ್ದಿ

ಡಾ.ಕೆ.ಎ.ಓಬಳೇಶ್ ಅವರ “ವಿಮೋಚನೆಗಾಗಿ ತುಡಿದವರು” ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ

Published

on

ಸುದ್ದಿದಿನ, ದಾವಣಗೆರೆ : ಡಾ.ಕೆ.ಎ.ಓಬಳೇಶ್ ರಚಿಸಿರುವ “ವಿಮೋಚನೆಗಾಗಿ ತುಡಿದವರು” ಬೀದಿ ನಾಟಕವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹರಿಹರ ತಾಲ್ಲೂಕು ಸಿರಿಗೆರೆ ಹಾಗೂ ಹೊನ್ನಾಳಿ ತಾಲ್ಲೂಕು ತರಗನಹಳ್ಳಿಯಲ್ಲಿ ಮೊದಲ ಪ್ರದರ್ಶನಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ರವಿಚಂದ್ರ ಅವರು ‘ ಸಾಮಾಜಿಕ ಅರಿವು ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ, ಅಸಮಾನತೆಯನ್ನು ಅಳಿಸಿ ಹಾಕಿ ಸಾಮಾಜಿಕ‌ ಸಮಾನತೆಯನ್ನು ಸಾಧಿಸುವ ಸಂದರ್ಭದಲ್ಲಿ ಅಸ್ಪೃಶ್ಯತೆ ಅಡ್ಡಿಯಾಗಿದೆ. ಇಂತಹ ಅನಿಷ್ಟ ಪದ್ದತಿಯನ್ನು ತೊಲಗಿಸುವುದು ಈ ಯೋಜನೆ ಉದ್ದೇಶ ಎಂಬುದಾಗಿ ತಿಳಿಸಿದರು.

‘ವಿಮೋಚನೆಗಾಗಿ ತುಡಿದವರು’ ಬೀದಿ ನಾಟಕದ ರಚನೆಕಾರರಾದ ಡಾ.ಕೆ.ಎ.ಓಬಳೇಶ್ ಅವರು ಮಾತನಾಡಿ, ಬುದ್ಧನಿಂದ ಬಾಬಾಸಾಹೇಬ್ ಅಂಬೇಡ್ಕರ್ ತನಕ ಭಾರತದಲ್ಲಿ ಹಲವಾರು ದಾರ್ಶನಿಕರು ಅಸಮಾನತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿ ಸಮಾನತೆಯ ಆಶಯಗಳನ್ನು ಬಿತ್ತಿದ್ದಾರೆ. ಆದರೆ ನಮ್ಮೊಳಗಿನ‌ ಈ ಅನಿಷ್ಟ ಪದ್ಧತಿ ಇನ್ನೂ ದೂರವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬುದ್ಧ ಭಾರತದ ನೆಲದಲ್ಲಿ ಬಿತ್ತಿದ ವೈಚಾರಿಕತೆ ಜಗತ್ತಿಗೆ ಮಾದರಿಯಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ವಿಶ್ವವೇ ಮಹಾಜ್ಞಾನಿ ಎಂದು ಒಪ್ಪಿಕೊಂಡಿದೆ. ಆದರೆ ಇವರ ವಿಚಾರಗಳನ್ನು ನಾವು ಅರಿಯುವಲ್ಲಿ‌ ವಿಫಲವಾಗಿದ್ದೇವೆ. ಆದ್ದರಿಂದ ಬುದ್ಧ, ಬಸವ, ಅಂಬೇಡ್ಕರ್ ಅವರ ಸಮಾನತೆಯ ತುಡಿತಗಳನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ‌ ಈ‌ ನಾಟಕವನ್ನು ರೂಪಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಮತ್ತು‌ ಸಂಸ್ಕೃತಿ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದರು.

ಹೆಗ್ಗೆರೆ ರಂಗಪ್ಪ ಮತ್ತು ತಂಡ ಹಾಗೂ ರಾಜು ಮತ್ತು ತಂಡದವರು ಬೀದಿ ನಾಟಕವನ್ನು ಪ್ರಸ್ತುತ ಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version