ಬಹಿರಂಗ
ಬೆತ್ತಲೆ ಸೇವೆ ವಿರೋಧಿಸಿದ ಆ ದಿನಗಳು
20-03-1986 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ‘ಬೆತ್ತಲೆ ಸೇವೆ ವಿರೋಧಿಸಿದ ಡಿಎಸ್ ಎಸ್ ಕಾರ್ಯಕರ್ತರ ಮೇಲೆ ಭಕ್ತರು ಹಲ್ಲೆ ನಡೆಸಿದರು. ರಕ್ಷಣೆಗೆ ಬಂದಿದ್ದ ಮಹಿಳಾ ಪೋಲೀಸರನ್ನೂ ಬೆತ್ತೆಲೆಗೊಳಿಸಿದ್ದರು. ಭಕ್ತರನ್ನು ಹುರಿದುಂಬಿಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಯಿತು. ನೂರಾರು ಕಾರ್ಯಕರ್ತರು ಅಂದು ಭಕ್ತರ ಆಕ್ರೋಶದಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದೇ ಹೆಚ್ಚು. ಅಂದು ಪೆಟ್ಟು ತಿಂದವರು ಇಂದೂ ಅನೇಕರಿದ್ದಾರೆ.
ಅಂದಿನ ಗಲಭೆಗೆ ಕಾರಣಕರ್ತರಾಗಿದ್ದವರು
- 1. ಚಂದ್ರಗುತ್ತಿ ರೇಣುಕಾಂಬ ಧರ್ಮದತ್ತಿ ಸಂಸ್ಥೆಯ ಸದಸ್ಯರು (ಇವರ ಲಾಭದ ಮೂಲ ಬೆತ್ತಲೆ ಸೇವೆ ಜಾತ್ರೆಯಾಗಿತ್ತು)
- 2. ಜೋಗಮ್ಮಗಳು (ಇವರ ಹೊಟ್ಟೆಪಾಡು ಜಾತ್ರೆಯ ಮೇಲೆ ನಿಂತಿತ್ತು)
- 3. ವಿಶ್ವ ಹಿಂದೂ ಪರಿಷತ್ತು (ತಳ ಸಮುದಾಯಗಳು ಘನತೆಯಿಂದ ಬದುಕಬಾರದು ಎಂಬುದೇ ಇವರ ಅಜೆಂಡಾ)
ಅಂದು ಹೋರಾಟದ ಮುಂಚೂಣಿಯಲ್ಲಿದ್ದ ಬಿ.ಕೃಷ್ಣಪ್ಪ ‘ಬೆತ್ತಲೆ ಸೇವೆಗೆ ಜಯವಾಗಲಿ‘ ಎಂದು ಮೈಕ್ ಹಿಡಿದು ಕೂಗುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಳ್ಳುತ್ತಾರೆ. ವಿಚಾರಿಸಿದಾಗ ಅವನು ತನ್ನ ಹೆಸರು ಕೃಷ್ಣರಾವ್, ತಾನು ಸಾಗರದ ವಿಶ್ವ ಹಿಂದೂ ಪರಿಷತ್ತಿನ ಸದಸ್ಯ ಎಂದು ಹೇಳುತ್ತಾನೆ. ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದ ಪಿ.ವಿ.ಕೃಷ್ಣಭಟ್ ಎಂಬಾತ ಕೂಡಾ ಭಕ್ತರನ್ನು ಹೋರಾಟಗಾರರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದ. ಹೋರಾಟದಿಂದಾಗಿ ಬೆತ್ತಲೆ ಸೇವೆ ನಿಷೇಧಗೊಂಡಿತು. ಇಂದು ನನ್ನ ಸಮುದಾಯದ ಹಾಗೂ ಸಾಗರ, ಸೊರಬ ಶಿಕಾರಿಪುರ ಮುಂತಾದ ಕಡೆಗಳ ತಳ ಸಮುದಾಯಗಳ ಸಾವಿರಾರು ಹೆಣ್ಮಕ್ಕಳ ಮಾನ ಉಳಿಯಿತು. ಸಮಾಜದ ಮೇಲ್ವರ್ಗದ ಜನರೆದುರು ಬೆತ್ತಲೆ ಯಾಗಿ ಅವರ ವಿಕೃತ ಖುಷಿಗೆ ಈಡಾಗುವುದು ತಪ್ಪಿತು. ಬೆತ್ತಲೆ ಸೇವೆ ಸಂಪ್ರದಾಯವಲ್ಲವೇ, ಪರಂಪರೆ ಅಲ್ಲವೇ? ಖಂಡಿತಾ ಹೌದು. ಅದನ್ನು ಹುಟ್ಟು ಹಾಕಿದವರೂ ವೈದಿಕರೇನೂ ಆಗಿರಲಿಕ್ಕಿಲ್ಲ. ಆದರೆ ಆಧುನಿಕ ಕಾಲಘಟ್ಟದಲ್ಲಿ ಇದೇ ಸಂಪ್ರದಾಯ, ಪರಂಪರೆ ನಮ್ಮ ಹೆಣ್ಮಕ್ಕಳ ಘನತೆಗೆ ಕುತ್ತು ತಂದಾಗ ಅದನ್ನು ವಿರೋಧಿಸಲೇಬೇಕಾಯಿತು.
ಅಂದ ಹಾಗೆ ಬೆತ್ತಲೆ ಸೇವೆ ಪದ್ಧತಿಯ ವಿರುದ್ಧ ಮೊದಲು ಜನಜಾಗೃತಿ ನಡೆಸಿ, ನಂತರ ಅದನ್ನು ಬಿ.ಕೃಷ್ಣಪ್ಪನವರ ಗಮನಕ್ಕೆ ತಂದಿದ್ದು ಅಂದರೆ ಸಾಗರದ ಡಿಎಸ್ ಎಸ್ ಸಂಚಾಲಕರಾಗಿದ್ದ ಶಿವಾನಂದ ಕುಗ್ವೆ. ಅವರು ನನ್ನ ಅಪ್ಪ ಎನ್ನುವುದು ನನಗೆ ಹೆಮ್ಮೆ. ನಮ್ಮ ಊರಿನ ಹಾಗೂ ಸುತ್ತಮುತ್ತಲಿನ ಅನೇಕ ಹೆಣ್ಣು ಮಕ್ಕಳು ಜೋಗತಿಯರಿಂದ ಬ್ರೈನ್ ವಾಶ್ ಆಗಿ ತಾವೂ ಜೋಗತಿಯರಾಗಿ ತಿರುಗತೊಡಗಿದಾಗ, ಹಾಗೂ ಅನೇಕ ದಲಿತ ಶೂದ್ರ ಹೆಣ್ಮಕ್ಕಳನ್ನು ಸ್ವಂತ ತಂದೆ ತಾಯಿಗಳೇ ಬಸವಿಯರಾಗಿ ಮಾಡುವ, ಬೆತ್ತಲೆ ಪೂಜೆ ಮಾಡಲು ಒತ್ತಾಯ ಮಾಡತೊಡಗಿದ್ದನ್ನು ಕಂಡು ಸಾಗರದ ಡಿಎಸ್ ಎಸ್ ಘಟಕ ಹಳ್ಳಿಗಳಲ್ಲಿ ವೈಚಾರಿಕ ಜಾಗೃತಿ ಅಭಿಯಾನ ನಡೆಸಿತ್ತು. ನಂತರ ಶಿವಮೊಗ್ಗದ ಡಿಎಸ್ ಎಸ್ ಮುಖಂಡರಾಗಿದ್ದ ರಾಚಪ್ಪ ಅವರೂ ಜೊತೆಯಾದರು.ಮುಂದೆ ಕೃಷ್ಣಪ್ಪನವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಚಳುವಳಿ ನಡೆದಿದ್ದು, ಅದಕ್ಕೆ ಕೆಲವರು ಹಲವರು ಬೆಂಬಲಿಸಿದ್ದು, ಕೆಲವರು ತಟಸ್ಥ ನೀತಿ ಅನುಸರಿಸಿದ್ದು, ಅನಂತ ಮೂರ್ತಿಯಂತವರು ಸಹ ಬೆತ್ತಲೆ ಸೇವೆಗೆ ವಿರೋಧ ಏಕೆ ಕೂಡದು ಎಂದೆಲ್ಲಾ ಬರೆದಿದ್ದು ಈಗ ಇತಿಹಾಸ.
ಶಬರಿ ಮಲೆಯಲ್ಲಿ ಮಹಿಳೆಯರ ಘನತೆಯನ್ನು ರಕ್ಷಿಸುವ ಒಂದು ನ್ಯಾಯಾಲಯದ ತೀರ್ಪಿಗೆ ಬರುತ್ತಿರುವ ನಾಯರ್ ಗಳ ಹಾಗೂ ಸಂಘ ಪರಿವಾರದ ಕುಮ್ಮಕ್ಕಿನ ವಿರೋಧ ನೋಡಿದಾಗ ಮೇಲಿನ ವಿಷಯ ಪ್ರಸ್ತುತ ಎನಿಸಿ ಬರೆದೆ.
– ಹರ್ಷಕುಮಾರ್ ಕುಗ್ವೆ
ಪತ್ರಕರ್ತರು
ಉಡುಪಿ