ಬಹಿರಂಗ

ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!

Published

on

  • ಡಾ. ಗಿರೀಶ್ ಮೂಗ್ತಿಹಳ್ಳಿ, ಸಂಶೋಧಕರು, ಚಿಕ್ಕಮಗಳೂರು

ಫೆಬ್ರವರಿ- 27-2021 ರಂದು ಮಾನ್ಯ ಪ್ರಧಾನ ಮಂತ್ರಿ ಅವರು, “ಬೀರ್ ಚಿಲಾರಾಯ್ ಅವರು ಅಪ್ರತಿಮ ಶೌರ್ಯ ಮತ್ತು ದೇಶಭಕ್ತಿಗೆ ಸಮಾನಾರ್ಥಕವಾಗಿದ್ದರು. ಅವರು ಮಹೋನ್ನತ ಯೋಧರಾಗಿದ್ದರು. ಜನರಿಗಾಗಿ ಜೀವನಪೂರ್ತಿ ಹೋರಾಟ ನಡೆಸಿದ್ದ ಅವರು, ತಾವು ನಂಬಿದ್ದ ತತ್ವಗಳನ್ನು ಕೊನೆಯ ತನಕ ಪಾಲಿಸಿಕೊಂಡು ಬಂದಿದ್ದರು.

ಅವರ ಕೆಚ್ಚೆದೆಯ ಧೈರ್ಯವು ಮುಂಬರುವ ಪೀಳಿಗೆಗೆ ಸದಾ ಪ್ರೇರಣೆಯಾಗಿ ಮುಂದುವರಿಯಲಿದೆ. ಬೀರ್ ಚಿಲಾರಾಯ್ ಜಯಂತಿಯಂದು ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೇನೆ.” ಎಂದು ಟ್ವೀಟ್ ಮಾಡಿದ್ದರು. ಯಾರು ಈ ಬೀರ್ ಚಿಲಾರೈ? ಎಂದು ಹುಡುಕಿದಾಗ ಅವನ ಬಗೆಗೆ ದಕ್ಕಿರುವ ವಿಚಾರವಿದು.

ಅಸ್ಸಾಂ ನ ಕೋಚ್ ರಾಜವಂಶದ ಸ್ಥಾಪಕ ಆಡಳಿತಗಾರನಾಗಿದ್ದ ಮಹಾರಾಜ ವಿಶ್ವ ಸಿಂಘನ ಮೂರನೇ ಮಗ, ಕಮಟಾ ಸಾಮ್ರಾಜ್ಯದ ರಾಜ ನಾರ ನಾರಾಯಣ ನ ಕಿರಿಯ ಸಹೋದರನೇ ಶುಕ್ಲಧ್ವಾಜ. ಹುಣ್ಣಿಮೆಯ ದಿನದಂದು ಜನಿಸಿದ ಶುಕ್ಲಧ್ವಾಜನು ಉನ್ನತ ಶಿಕ್ಷಣ ಸಾಧಿಸಲು ಹಿರಿಯ ಸಹೋದರ ಮಲ್ಲಾದೇವನ ಜತೆ ವಾರಣಾಸಿಗೆ ಹೋದನು. ಸಂಗೀತ, ಸಾಹಿತ್ಯ, ವ್ಯಾಕರಣ, ಕಾನೂನು, ಜ್ಯೋತಿಷಿ ಮುಂತಾದ ವಿಷಯಗಳಲ್ಲಿ ಪರಿಣತಿ ಹೊಂದಿದನು.

ಅನಂತರ ನಾರ ನಾರಾಯಣನ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದನು. ಇವನ ಸೈನ್ಯದಲ್ಲಿ ಕಮಾಂಡರ್ -ಇನ್- ಚೀಫ್ ಆಗಿ ಕಾರ್ಯಭಾರ ನಿರ್ವಹಿಸಿದನು. ಜನರಲ್ ಆಗಿ ಇವನ ಚಲನೆಯು ಚಿಲಾ( ಗಾಳಿಪಟ)ದಷ್ಟು ವೇಗವಾಗಿದ್ದರಿಂದ ಇವನಿಗೆ ‘ಚಿಲರೈ’ ಎಂಬ ಹೆಸರು ಬಂತು.

ಚಿಲಾರೈ ನ ಶೌರ್ಯವು ಭೂಟಿಯಾ, ಕಾಚಾರಿ ಸಾಮ್ರಾಜ್ಯ ಮತ್ತು ಅಹೋಮ್ಸ್ ( ಕೋಚೆನ್ ಮತ್ತು ಅಹೋಮ್ಸ್ ನಡುವೆ ಹಲವಾರು ಕದನಗಳಲ್ಲಿ ಹೋರಾಡಿದರೂ ಎರಡೂ ಕಡೆಯಿಂದ ಎಣಿಸಬಹುದಾದ ವಿಜಯಗಳೊಂದಿಗೆ) ಕೋಚ್ ಪ್ರಾಬಲ್ಯವನ್ನು ಖಚಿತಪಡಿಸಿತು.1563ರಲ್ಲಿ ಚಿಲಾರೈ ನೇತೃತ್ವದಲ್ಲಿ ಕೋಚೆನ್ ಬ್ರಹ್ಮಪುತ್ರ ನದಿಯನ್ನು ದಾಟಿ ಗಾರ್ಗಾಂವ್ ನ ಅಹೋಮ್ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ತನ್ನ ಸೈನಿಕರಿಗೆ ಭೂಮಿಯಲ್ಲಿ ಮತ್ತು ನೀರಿನಲ್ಲಿ ಹೋರಾಡಲು ಆಜ್ಞಾಪಿಸಿ ದನು. ಸೋತ ರಾಜನ ನಡುವೆ ಒಪ್ಪಂದವಾಯಿತು.

ನಾರ ನಾರಾಯಣನು ಕ್ಯಾಚರ್ ರಾಜನನ್ನು ಸೋಲಿಸಿ ತನ್ನ ಆಳ್ವಿಕೆಯನ್ನು ತಂದನು. ಇಂಥ ಪ್ರಬಲ ರಾಜನೊಂದಿಗೆ ಹೋರಾಡದಿರಲು ನಿರ್ಧರಿಸಿದ ಮಣಿಪುರದ ರಾಜನು ಇವನಿಗೆ ಶರಣಾದನು. ನಂತರ ಚಿಲಾರೈ ಜಯಂತಿಯಾ, ತ್ರಿಪುರ ಮತ್ತು ಸಿಲ್ಹೆಟ್ ರಾಜ್ಯಗಳ ಮೇಲೆ ದಾಳಿ ಮಾಡಿದನು.ರಾಜರನ್ನು ಸೋಲಿಸಿ ಕೊಂದನು. ಇದರಿಂದ ಭಯಭೀತರಾದ ಖೈರಾಮ್ ಮತ್ತು ದಿಮೋರಿಯಾ ದೊರೆಗಳು ತಮ್ಮ ಸಣ್ಣ ರಾಜ್ಯಗಳನ್ನು ಒಪ್ಪಿಸಿದರು. ಚಿಲಾರೈನ ಇಂಥ ಶೌರ್ಯದ ಸಹಾಯದಿಂದ ರಾಜ ನಾರ ನಾರಾಯಣನ ಸಾಮ್ರಾಕ್ಯ ವಿಸ್ತಾರವಾಯಿತು.

೧೫೬೮ರಲ್ಲಿ ಸೊಲೆಮನ್ ಆಳ್ವಿಕೆ ನಡೆಸಿದ ಗೌರ್ ಮೇಲೆ ನಾರ ನಾರಾಯಣ ದಾಳಿ ಮಾಡಿದನು. ಆದರೆ ಕಾಲಾಪಹಾರ್ ಎದುರು ಸೋಲನ್ನು ಅನುಭವಿಸಿದರು. ಕಾಲಾಪಹಾರ್ ತನ್ನ ಸೈನ್ಯದೊಂದಿಗೆ ತಮಜ್ ಪುರದತ್ತ ಸಾಗುತ್ತಿರುವಾಗ ಕಾಮಾಕ್ಯ ಸೇರಿದಂತೆ ಅನೇಕ ದೇವಾಲಯಗಳನ್ನು ನಾಶಪಡಿಸಿದನು.

ಕೋಚ್ ಸಾಮ್ರಾಜ್ಯದ ಬಹುಪಾಲು ಭಾಗವನ್ನು ಅಫ್ಘನ್ನರು ವಶಪಡಿಸಿಕೊಂಡರು. ಆದಾಗ್ಯೂ ಚಿಲಾರೈ ಮತ್ತು ನಾರ ನಾರಾಯಣ ಇಬ್ಬರೂ ಸೇರಿ ಕಾಮಾಕ್ಯ ದೇವಾಲಯವನ್ನು ಪುನರ್ನಿರ್ಮಾಣ ಮಾಡಿದರು. ಶಂಕಾರ್ದೇವನ ಮಹಾವೈಷ್ಣವ ಚಳವಳಿಗೆ ಪ್ರೋತ್ಸಾಹ ನೀಡಿದರು.

ಮೊಘಲ್ ಚಕ್ರವರ್ತಿ ಅಕ್ಬರ್ ನು ಇವರ ಬಳಿ ಸಹಾಯ ಕೋರಿದಾಗ ನಾರ ನಾರಾಯಣನು ಎರಡನೇ ಬಾರಿಗೆ ಗೌರ್ ಮೇಲೆ ದಾಲಿ ಮಾಡಿದನು. ಅನಂತರ ಸಿಸ್ಯಾ ಸಂಘಾ ರಾಯ್ಕತ್ ಮತ್ತು ಭೂತಾನ್ ರಾಜ ಡೆಬ್ರಾಜ್ ಅವರೊಂದಿಗೆ ಮೈತ್ರಿ ಮಾಡಿಕೊಂಡರು. ಚಿಲಾರೈ ಘೋರ್ ಘಾಟ್ ಅನ್ನು ವಶವಡಿಸಿಕೊಂಡನು.

ರಾಜ ಗೌರ ಪಾಷನನ್ನು ಸೋಲಿಸಿದ ನಂತರ ರಾಜ್ಯವನ್ನು ನಾರ ನಾರಾಯಣ ಮತ್ತು ಅಕ್ಬರ್ ನಡುವೆ ಹಂಚಲಾಯಿತು. ಗೌರ್ ನ ಎರಡನೇ ಆಕ್ರಮಣದ ಸಮಯದಲ್ಲಿ ಗಡ್ಡೆ ನೋವಿನಿಂದ ಬಳಲುತ್ತಿದ್ದ ಚಿಲಾರೈ ಗಂಗಾನದಿ ದಡದಲ್ಲಿ ಅಸು ನೀಗಿದನು(1577). ಚಿಲಾರೈ ನ ಇಂಥ ಧೈರ್ಯಶಾಲಿ ಕಾರ್ಯಗಳೇ ಕೋಚ್ ಸಾಮ್ರಾಜ್ಯವನ್ನು ಉತ್ತುಂಗಕ್ಕೆ ಏರಿಸಿತ್ತು.

ಅಸ್ಸಾಂ ಸರ್ಕಾರವು ಮಹಾನ್ ಕಮಾಂಡರ್-ಇನ್- ಚೀಫ್ ಆದ ಚಿಲಾರೈ ಜನ್ಮದಿನವನ್ನು 2004ರಲ್ಲಿ ‘ಬಿರ್ ಚಿಲಾರಾಯ್ ದಿವಸ್’ ಎಂದು ಘೋಷಿಸಿತು. ಇದರ ಅಂಗವಾಗಿ ಅಸ್ಸಾಂನ ಧೈರ್ಯಶಾಲಿ ವ್ಯಕ್ತಿಗಳಿಗೆ ಅತ್ಯುನ್ನತ ಗೌರವವಾಗಿ ‘ಬಿರ್ ಚಿಲಾರೈ ಪ್ರಶಸ್ತಿ’ ಯನ್ನು ನೀಡುತ್ತಿರುವುದು ಗಮನಾರ್ಹ ಸಂಗತಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version