ಲೈಫ್ ಸ್ಟೈಲ್
ಪಕ್ಷಿ ಪರಿಚಯ | ಕರಿ ರೆಕ್ಕೆಯ ಗಿಡುಗ
- ಭಗವತಿ ಎಂ.ಆರ್
ಗಾತ್ರದಲ್ಲಿ ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ಮಧ್ಯಮ ಗಾತ್ರದ ಗಿಡುಗ ಜಾತಿಗೆ ಸೇರಿದ ಬಿಳಿಯ ಬಣ್ಣದ ಪಕ್ಷಿ- ಕರಿ ರೆಕ್ಕೆಯ ಗಿಡುಗ. ಅಪರೂಪವಾಗಿ ಕಂಡರೂ, ಬಯಲು ಪ್ರದೇಶಗಳಲ್ಲಿ, ಕುರುಚಲು ಕಾಡುಗಳಲ್ಲಿ, ಹುಲ್ಲುಗಾವಲುಗಲ್ಲಿ ವಾಸಿಸುವ ಪಕ್ಷಿ ಇದು.
ಆಕಾಶದಲ್ಲಿ ಒಂದೇ ಜಾಗದಲ್ಲಿ ನಿಂತು ರೆಕ್ಕೆ ಬಡಿಯುವ ಅದರ ಚೆಂದವನ್ನು ನೋಡಿಯೇ ಸವಿಯಬೇಕು. ಅದು ರೆಕ್ಕೆ ಬಡಿಯುವ ಸೊಬಗಿಗೆ ಕಣ್ಣು ಕೀಲಿಸಿ ನೋಡುತ್ತಿದ್ದರೆ, ಯಾವ ಮಾಯದಲ್ಲೋ ಕೆಳಗಿಳಿದು ಬಂದು ಕೊಂಬೆಯ ಮೇಲೆ ಕೂತಿರುತ್ತದೆ.
ಕಣ್ಣಿಗೆ ತುಸು ಹೆಚ್ಚೇ ಕಾಡಿಗೆ ಬಳಿದಂತೆ ಕಂಡರೂ ಅದರ ಕಣ್ಣು ಕಡುಗೆಂಪು, ಕಣ್ಣಪಾಪೆ ಕಪ್ಪು ಬಣ್ಣ. ಸಾಮಾನ್ಯವಾಗಿ ಮರಗಳ ಎತ್ತರದ ಒಂಟಿ ಕೊಂಬೆಯ ಮೇಲೆ, ವಿದ್ಯುತ್ ತಂತಿಗಳ ಮೇಲೆ ಕುಳಿತು ಗಮನ ಸೆಳೆಯುತ್ತದೆ. ಆಹಾರ ಅರಸುವಾಗ ಕೆಳಮಟ್ಟದಲ್ಲಿ ಹಾರಾಡುತ್ತಾ ಬೇಟೆ ಕಣ್ಣಿಗೆ ಬಿದ್ದಾಗ ಚಂಗನೆ ಎಗರುತ್ತದೆ.
ಇದಕ್ಕೆ ಕನ್ನಡದಲ್ಲಿ ‘ರಾಮದಾಸ ಹದ್ದು‘, ಸ್ಥಳೀಯವಾಗಿ ‘ಕರಿ ರೆಕ್ಕೆಯ ಗಿಡುಗ’ ಎಂದು ಕರೆಯುತ್ತಾರೆ. ಇದರ ರೆಕ್ಕೆಯ ಬಣ್ಣ ಬೂದುಮಿಶ್ರಿತ ಕಪ್ಪು. ಬಾಗಿದ ಚೂಪು ಕೊಕ್ಕು ಇದಕ್ಕಿದೆ. ಇದು ಬಲಶಾಲಿಯಾದರೂ ಸ್ವಭಾವದಲ್ಲಿ ಸಂಕೋಚದ ಹಕ್ಕಿ.
ಇದರ ರೆಕ್ಕೆಯ ತುದಿ ಕಪ್ಪು ಬಣ್ಣವಿರುವುದರಿಂದಲೇ ಬಹುಶಃ ಇಂಗ್ಲೀಷಿನಲ್ಲಿ Black- shouldered kite ಮತ್ತು Balck-winged kite ಎಂತಲೂ ಕರೆಯುತ್ತಾರೆ. ಇವು ವಲಸೆ ಪಕ್ಷಿ ಅಲ್ಲವಾದರೂ ಆಹಾರ ಲಭ್ಯತೆಯ ಆಧಾರದ ಮೇಲೆ ಇವುಗಳ ಸಂಚಾರ, ಹಾರಾಟ ಇರುತ್ತದೆ.
ತೀಕ್ಷ್ಣವಾದ ಕಣ್ಣುಗಳ ನೋಟದೊಂದಿಗೆ ಎತ್ತರದ ಮರದ ಮಧ್ಯೆ ಸದ್ದಿಲ್ಲದೆ ಕೂತ ಬೂದುಬಣ್ಣದ ಈ ಪಕ್ಷಿಯನ್ನು ದೂರದಿಂದ ಗುರುತಿಸುವುದು ತುಸು ಕಷ್ಟವೇ. ಆಕಾಶದ ಹಿನ್ನೆಲೆಯಲ್ಲಿ ಒಂಟಿ ಕೊಂಬೆಯ ಕೂತರಂತೂ ಹತ್ತಿರ ಹೋದರೇನೆ ಇದನ್ನು ಗುರುತಿಸಲು ಸಾಧ್ಯ.
ಚುರುಕಿನ ನೋಟದ ಈ ಪಕ್ಷಿಯನ್ನು ಆದಷ್ಟೂ ಸೂಕ್ಷವಾಗಿ ಅಂತರವಿಟ್ಟುಕೊಂಡು ಸಮೀಪಿಸದಿದ್ದರೆ ನೀಲಿ ಆಕಾಶದ ಮರೆಯಲ್ಲಿ ಅದು ಹಾರಿ ಲೀನವಾಗಿ ಬಿಡುವುದಂತೂ ನಿಶ್ಚಿತ. ಇದರ ಸಂಕೋಚ ಸ್ವಭಾವ ಇದನ್ನು ಸದಾ ಜನರಿಂದ ದೂರವಿಡುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243