ಲೋಕಾರೂಢಿ
ಜನರ ರಕ್ತ ಹೀರಿ ಪ್ರಾಣ ತೆಗೆಯುವುದರಲ್ಲಿ ಡೆಂಗ್ಯೂ ಸೊಳ್ಳೆಗಳನ್ನೂ ಮೀರಿಸುವ ಬೆಂಗಳೂರಿನ ರಕ್ತ ಬ್ಯಾಂಕ್ ಗಳು..!
- ಸಾರ್ವಜನಿಕ ಆರೋಗ್ಯದ ಕುರಿತು ಸರ್ಕಾರದ ನಿರ್ಲಕ್ಷ್ಯ – ಒಂದು ತಾಜಾ ಅನುಭವ
ಇದು ಮಳೆಗಾಲ ಎಂದೇ ತಿಳಿಯಬಹುದು! ರೈತರ ಜಮೀನುಗಳಿಗೆ ಬೇಕಾದಷ್ಟು, ನಮ್ಮ ನದಿಗಳು, ಅಣೆಕಟ್ಟೆಗಳು ತುಂಬುವಷ್ಟು ಮಳೆ ಬೀಳದಿದ್ದರೂ ಕಾಯಿಲೆ ತರುವ ಕ್ರಿಮಿಕೀಟಗಳಂತೂ ವೃದ್ಧಿಯಾಗಿರುವುದು ನಿಜ. ಎಲ್ಲೆಲ್ಲೂ ಸೊಳ್ಳೆಕಾಟ, ಅದರ ಜೊತೆ ಡೆಂಗ್ಯೂ, ಚಿಕನ್ ಗುನ್ಯಾ, ವೈರಲ್ ಜ್ವರ, ಇತ್ಯಾದಿಗಳು ಜನರನ್ನು ಕಿತ್ತು ತಿನ್ನುತ್ತಿವೆ. ರಾಜ್ಯದಲ್ಲಿ ಈ ರೋಗಗಳು ಹಲವಾರು ಬಲಿಗಳನ್ನು ಪಡೆದಿವೆ ಕೂಡ. ಸರ್ಕಾರ ಈ ಕಾಯಿಲೆಯ ಬಗ್ಗೆ ಅಲ್ಲಲ್ಲಿ ಒಂದಷ್ಟು ಪ್ರಚಾರ ಕೈಗೊಂಡಿರಬಹುದೇ ಹೊರತು ಅದಕ್ಕಿಂತ ಮಿಗಿಲಾಗಿ ಜನರ ಜೀವಗಳನ್ನು ಉಳಿಸುವಂತಹ ಬೇರಾವ ಮಹತ್ವದ ಕಾರ್ಯವನ್ನೂ ಮಾಡಿದೆ ಎಂದು ಜನಸಾಮಾನ್ಯರು ನಂಬಲು ಸಾಧ್ಯವಾಗುತ್ತಿಲ್ಲ.
ಕಳೆದ ವಾರ ನನ್ನ ಗೆಳತಿ ಜ್ವರ, ಮೈಕೈ ನೋವಿನಿಂದ ಬಳಲುತ್ತ ಮನೆಯ ಬಳಿಯ ವೈದ್ಯರಲ್ಲಿ ತಪಾಸಣೆ ಮಾಡಿಸಿದಾಗ ಅವರು ಆಕೆಗೆ ಔಷಧ ಕೊಟ್ಟು ಒಂದೆರಡು ದಿನ ಕಾದು ನೋಡೋಣ ಎಂದರು. ಬಹುಶಃ antibiotic ಕೊಟ್ಟಿದ್ದರಿಂದಲೋ ಏನೋ ಕೆಲವು ರೋಗಲಕ್ಷಣಗಳು ಹತ್ತಿಕ್ಕಿದಂತಾದವು. ವೈದ್ಯರೂ ಅದನ್ನು ವೈರಲ್ ಜ್ವರ ಎಂದೇ ತಿಳಿದು ಹೆಚ್ಚೇನೂ ಗಮನ ನೀಡಲಿಲ್ಲ. ಇದೆಲ್ಲವೂ ನಡೆದಿದ್ದು ಆಸ್ಪತ್ರೆಗಳ ಮಹಾನಗರಿ ಬೆಂಗಳೂರಿನಲ್ಲೇ! ನಂತರ ಚಳಿ ಜ್ವರ ಮುಂದುವರಿದ ಕಾರಣ ನನ್ನ ಗೆಳತಿ ಮತ್ತೊಮ್ಮೆ ಅದೇ ವೈದ್ಯರ ಬಳಿ ಹೋಗಿ ತನಗೆ ರಕ್ತ ಪರೀಕ್ಷೆ ಮಾಡಿಸಲು ಕೇಳಿಕೊಂಡಳು. ವೈದ್ಯರ ಸೂಚನೆಯಂತೆ ರಕ್ತ ಪರೀಕ್ಷೆಯೂ ಮಾಡಿಸಲಾಯಿತು.
ಆಗ ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆ 20,000 ಇದ್ದದ್ದು ಕಂಡುಬಂದಿತು. ಪ್ಲೇಟ್ಲೆಟ್ ಸಂಖ್ಯೆ ಆರೋಗ್ಯವಂತ ಮಹಿಳೆಯರಲ್ಲಿ ಸಾಮಾನ್ಯವಾಗಿ 1.5 ಲಕ್ಷದಿಂದ 4.5 ಲಕ್ಷದ ವರೆಗೆ ಇರುತ್ತದೆ. ಆದರೆ ಡೆಂಗ್ಯು ಜ್ವರದಂತಹ ರೋಗಗ್ರಸ್ಥ ಸ್ಥಿತಿಗಳಲ್ಲಿ ಪ್ಲೇಟ್ಲೇಟ್ ಸಂಖ್ಯೆ ಯದ್ವಾತದ್ವಾ ಕುಸಿಯುತ್ತದೆ. ಇದು ಜೀವಕ್ಕೆ ಅಪಾಯಕಾರಿ. ಏಕೆಂದರೆ ದೇಹದಲ್ಲಿ ರಕ್ತಸ್ರಾವವನ್ನು ನಿಯಂತ್ರಿಸುವಲ್ಲಿ ರಕ್ತದಲ್ಲಿರುವ ಪ್ಲೇಟ್ಲೆಟ್ ಕಣಗಳು ಅತಿ ಮಹತ್ವದ ಪಾತ್ರ ವಹಿಸುತ್ತವೆ. ರಕ್ತದಲ್ಲಿ ಪ್ಲೇಟ್ಲೆಟ್ ಪ್ರಮಾಣ ಕಡಿಮೆಯಾದ ಪರಿಸ್ಥಿತಿಯಲ್ಲಿ, ಏನಾದರೂ ಗಾಯವಾಗಿ ಶರೀರದಿಂದ ರಕ್ತ ಸೋರಿಕೆಯಾದರೆ ಸಹಜವಾಗಿ ರಕ್ತ ಹೆಪ್ಪುಗಟ್ಟುವ ಕ್ರಿಯೆ ನಡೆಯುವುದೇ ಇಲ್ಲ. ರಕ್ತ ಸ್ರಾವದಿಂದಲೇ ಮನುಷ್ಯ ಸಾಯಲೂಬಹುದು. ಆಂತರಿಕ ರಕ್ತಸ್ರಾವವಾದರಂತೂ ತಿಳಿಯುವುದೂ ಕಷ್ಟವೇ. ಇದು ಡೆಂಗ್ಯು ಜ್ವರದ ಅಪಾಯಕಾರಿ ಸೂಚನೆಗಳಲ್ಲಿ ಪ್ರಮುಖವಾದುದು.
ನನ್ನ ಗೆಳತಿಯ ರಕ್ತ ಪರೀಕ್ಷೆಯ ವರದಿಯನ್ನು ನೋಡಿದಾಕ್ಷಣವೇ ನಮ್ಮ ಪರಿಚಯದ ವೈದ್ಯರನ್ನು ಸಂಪರ್ಕಿಸಿ ಅವರು ಕೆಲಸ ಮಾಡುವ ಆಸ್ಪತ್ರೆಗೆ ಅವಳನ್ನು ಕರೆದುಕೊಂಡು ಹೋದೆವು. ಅವಳ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವಳನ್ನು ತುರ್ತು ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಆರಂಭಿಸಿದರು. ಅದು ರಾತ್ರಿ ಸಮಯ. ನನ್ನ ಗೆಳತಿಯ ತಂಗಿ ಅವಳ ಜೊತೆ ಆಸ್ಪತ್ರೆಯಲ್ಲಿ ಉಳಿದಿದ್ದಳು. ಈಗ ಪ್ಲೇಟ್ಲೆಟ್ ಸಂಖ್ಯೆ ಇನ್ನಷ್ಟು ಕುಸಿದು 10 ಸಾವಿರಕ್ಕೆ ಇಳಿದಿದ್ದಾಗಿ ಹೇಳಿದ ಆಸ್ಪತ್ರೆಯ ವೈದ್ಯರು, ತಕ್ಷಣವೇ ರಕ್ತ ಕೊಡಬೇಕಾಗಿ, ಅದಕ್ಕಾಗಿ ರಕ್ತ ಬ್ಯಾಂಕ್ ನಿಂದ ಪ್ಲೇಟ್ಲೆಟ್ ಕೊಂಡು ತರಬೇಕೆಂದು ಹೇಳಿದರು. ಅಲ್ಲದೆ ರಕ್ತ ನೀಡಲು ಬಿ ಪಾಸಿಟಿವ್ ಗುಂಪಿನ ಒಬ್ಬ ವ್ಯಕ್ತಿಯೂ ಬೇಕೆಂದು ಹೇಳಿದ್ದರು. ನನ್ನ ಗೆಳತಿಯ ತಂಗಿಯದ್ದೂ ಅದೇ ಗುಂಪಾಗಿದ್ದರಿಂದ, ಮತ್ತು ಅವಳು ಆರೋಗ್ಯವಂತೆಯೂ ಆಗಿದ್ದರಿಂದ, ತಾನೇ ರಕ್ತದಾನ ಮಾಡುವುದಾಗಿ ಆಸ್ಪತ್ರೆಯಲ್ಲಿ ಹೇಳಿ ರಕ್ತ ಬ್ಯಾಂಕ್ ಗೆ ಹೊರಟಳು. ಆಸ್ಪತ್ರೆಯ ಸಮೀಪದಲ್ಲೇ ಇದ್ದ ಒಂದು ರಕ್ತ ನಿಧಿಗೆ ಹೋಗಿ ಪ್ಲೇಟ್ಲೆಟ್ ಬೇಕೆಂದು ಆಸ್ಪತ್ರೆಯಲ್ಲಿ ಕೊಟ್ಟಿದ್ದ ಚೀಟಿಯನ್ನು ಅಲ್ಲಿ ಕೊಟ್ಟಳು. “ಪ್ಲೇಟ್ಲೆಟ್ ಇದೆ, ಕೊಡುತ್ತೇವೆ, ಆದರೆ ಒಬ್ಬರು ರಕ್ತದಾನಿ ಬೇಕು” ಎಂದು ಅವರು ತಿಳಿಸಿದರು. ತಾನೇ ರಕ್ತ ದಾನ ಮಾಡುತ್ತೇನೆಂದು ಇವಳು ಹೇಳಿದಾಗ, ಅಲ್ಲಿ “ನಿಮ್ಮಿಂದ ರಕ್ತ ಪಡೆಯಲು ಆಗದು, ಪುರುಷರೇ ಬೇಕು” ಎಂದು ಹೇಳಲಾಯಿತು. ಆತಂಕದಲ್ಲಿದ್ದು, ಒಬ್ಬಳೇ ಹೋಗಿದ್ದ ಇವಳಿಗಾದರೂ ಹೀಗೆ ಯಾಕೆ, ಏನು ಎಂದು ವಿಚಾರಿಸುವಷ್ಟೂ ಸಮಯವಿರಲಿಲ್ಲ. “ಪರಿಸ್ಥಿತಿ ಗಂಭೀರವಿದೆ. ಈಗ ಸದ್ಯ ಪ್ಲೇಟ್ಲೆಟ್ ಕೊಟ್ಟುಬಿಡಿ, ಬೆಳಿಗ್ಗೆಯೊಳಗೆ ಒಬ್ಬರು ದಾನಿಯನ್ನು ಕರೆದುಕೊಂಡು ಬರುತ್ತೇನೆ” ಎಂದು ಮನವಿ ಮಾಡಿಕೊಂಡಳು.
ಆಗ ಆತ ಹನ್ನೊಂದುವರೆ ಸಾವಿರ ರೂಪಾಯಿಗಳನ್ನು ಪಡೆದು ಒಂದು ಪ್ಯಾಕೆಟ್/ ಯುನಿಟ್ ಪ್ಲೇಟ್ಲೆಟ್ ಗಳನ್ನು ಕೊಟ್ಟು, B+ve ಗುಂಪಿನ ರಕ್ತದಾನಿಯನ್ನು ಕರೆತಂದರೆ ಸಾವಿರ ರೂಪಾಯಿ ಹಿಂದಿರುಗಿಸುವುದಾಗಿ ಹೇಳಿದ. ಅವಳಿಗೆ ತನ್ನ ಅಕ್ಕನ ಜೀವ ಉಳಿಸುವುದು ಈಗ ಎಲ್ಲಕ್ಕಿಂತ ಮುಖ್ಯವಾಗಿತ್ತು. ರಕ್ತ ಬ್ಯಾಂಕಿನ ಫ್ರಿಜ್ ನಲ್ಲಿ ಸಂರಕ್ಷಿಸಿದ್ದ ರಕ್ತದ ಕಣಗಳನ್ನು ಕೊಂಡು ಆಸ್ಪತ್ರೆಗೆ ಓಡಿದಳು. ಅವಳ ಬಳಿ ಆಗ ರಕ್ತನಿಧಿಯವನು ಕೇಳಿದಷ್ಟು ಹಣವಿತ್ತು, ಹಾಗಾಗಿ ಬೇಕಾದ ರಕ್ತದ ಕಣಗಳ ಪ್ಯಾಕೆಟ್ ಕ್ಷಣದಲ್ಲೇ ಸಿಕ್ಕಿತು. ಹಣವಿಲ್ಲದಿದ್ದರೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯ ಗತಿ ಏನು? ಮಾರನೆಯ ದಿನ ಇತರ ರಕ್ತ ಬ್ಯಾಂಕ್ ಗಳಲ್ಲಿ ವಿಚಾರಿಸೋಣ ಎಂದು ಕೇಳಿದರೆ ಎಲ್ಲೆಡೆ ಪ್ಲೇಟ್ಲೆಟ್ ಗಳ ಒಂದು ಪ್ಯಾಕೆಟ್ ರಕ್ತಕಣಗಳಿಗೆ 10 ಸಾವಿರ ರೂಪಾಯಿಗಳ ದರವನ್ನು ಉಲ್ಲೇಖಿಸಲಾಯಿತು. ಇದನ್ನು ಸರ್ಕಾರವೇ ನಿಗದಿ ಮಾಡಿದೆ ಎಂದು ಕೆಲವರು ಹೇಳಿದರು! ಇದರ ಬಗ್ಗೆ ನನಗಂತೂ ಅಧಿಕೃತ ಮಾಹಿತಿಯಿಲ್ಲ. ಅದನ್ನು ಇನ್ನಷ್ಟೇ ಪಡೆಯಬೇಕು. ಅವರು ಹೇಳಿದ್ದೇನಾದರೂ ನಿಜವೇ ಆಗಿದ್ದರೆ, ಸೊಳ್ಳೆಗಳಲ್ಲ ಜನರ ಜೀವವನ್ನು ಹೀರುತ್ತಿರುವುದು. ಆದರೆ ಸರ್ಕಾರವೇ ರಕ್ತ ಬ್ಯಾಂಕ್ ಗಳ ಜೊತೆ ಸೇರಿ ನಾಚಿಕೆಯಿಲ್ಲದೆ ಈ ಕೆಲಸವನ್ನು ಮಾಡುತ್ತಿದೆ.
ಕಾಯಿಲೆ ಬಂದವರೆಲ್ಲರೂ ಬೇರೆಬೇರೆ ಕಾರಣಗಳಿಂದಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಲಾಗುವುದಿಲ್ಲ. ಅಲ್ಲಿನ ವ್ಯವಸ್ಥೆ ಹೇಗಿದೆ ಎಂದೂ ಖಚಿತವಾಗಿ ಹೇಳಲೂ ಕೂಡ ಸಾಧ್ಯವಿಲ್ಲ. ಆರೋಗ್ಯ ವಿಕೋಪಕ್ಕೆ ಹೋದಾಗ ಮನೆಯ ಸಮೀಪ ಇರುವ ಯಾವುದಾದರೂ ಆಸ್ಪತ್ರೆಗೆ ಜನ ಹೋಗುವುದು ಸ್ವಾಭಾವಿಕ. ಅದು ಖಾಸಗಿ ಆಸ್ಪತ್ರೆಯೂ ಆಗಿರಬಹುದು. ಒಮ್ಮೆ ಸರ್ಕಾರ ಖಾಸಗಿ ಆಸ್ಪತ್ರೆಗಳು, ರಕ್ತನಿಧಿಗಳನ್ನು ನಡೆಸಲು ಅನುಮತಿ ನೀಡಿದ ಮೇಲೆ ಜನರಿಗೆ ಕೈಗೆಟುಕುವ ದರಗಳಲ್ಲಿ ಆರೋಗ್ಯ ಸೇವೆ ದೊರಕುವಂತೆ ಎಚ್ಚರ ವಹಿಸುವುದೂ ಸರ್ಕಾರದ್ದೇ ಜವಾಬ್ದಾರಿಯಾಗುತ್ತದೆ. ರಕ್ತದಾನದ ಹೆಸರಿನಲ್ಲಿ ಜನರ ರಕ್ತ ಹೀರುವ ದಂಧೆಯನ್ನು ಸರ್ಕಾರ ಅಗತ್ಯವಾಗಿ ನಿಯಂತ್ರಿಸಬೇಕು. ರಕ್ತ ಪರೀಕ್ಷೆಗೆ ತಗಲುವ ವೆಚ್ಚವನ್ನು ವೈಜ್ಞಾನಿಕವಾಗಿ ಸರ್ಕಾರ ನಿಗದಿಪಡಿಸಬೇಕು. ಅದು ದುಬಾರಿಯಾದರೆ ಸರ್ಕಾರ ಸಹಾಯಧನ ನೀಡಿ ಅವಶ್ಯಕ ರಕ್ತ/ ರಕ್ತಕಣಗಳನ್ನು ಜನರಿಗೆ ಉಚಿತವಾಗಿ ಇಲ್ಲವೇ ಕಡಿಮೆ ದರಗಳಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ರಕ್ತದಾನವನ್ನು ಪವಿತ್ರವೆಂದು ನಂಬಿರುವ ನಮ್ಮ ಜನ ಉಚಿತವಾಗಿ ರಕ್ತದಾನ ಮಾಡುತ್ತಾರೆ. ಆದರೆ ಅದೇ ರಕ್ತವನ್ನು ಪರೀಕ್ಷೆ ಮಾಡಿ ರೋಗಿಗಳಿಗೆ ನೀಡುವ ನೆಪದಲ್ಲಿ ಹತ್ತಾರು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿಕೊಳ್ಳುವ ದಂಧೆಗೆ ಸರ್ಕಾರ ತಡೆಯೊಡ್ಡಿ, ಜನರ ಜೀವಗಳನ್ನು ಉಳಿಸಬೇಕಿದೆ.
ಡೆಂಗ್ಯೂ ಜ್ವರ ಕೇವಲ ಶ್ರೀಮಂತರು, ಸ್ಥಿತಿವಂತರನ್ನು ಬಾಧಿಸುವುದಿಲ್ಲ. ಹಾಗೆ ನೋಡಿದರೆ ಡಾಲರ್ಸ್ ಕಾಲನಿಯ ಬಂಗಲೆಗಳಿಗಿಂತ ನೈರ್ಮಲ್ಯ ಕೊರತೆಯಿರುವ ಸ್ಲಂಗಳಲ್ಲಿ ಈ ಜ್ವರ ಕಾಡುವುದು ಹೆಚ್ಚು. ಅಷ್ಟೇ ಅಲ್ಲ, ರಾಜ್ಯದಲ್ಲಿ ಅದರಲ್ಲೂ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದೆ ಸೊಳ್ಳೆಗಳದ್ದೇ ರಾಜ್ಯಭಾರವಾಗಿದೆ… ಏಕೆಂದರೆ ನಮ್ಮ ಆಡಳಿತಗಾರರು ಕಾಣೆಯಾಗುತ್ತಿದ್ದಾರೆ, ಮುಂಬಯಿನ ರೆಸಾರ್ಟ್ ಗಳಿಗೆ ಓಡಿಹೋಗುತ್ತಿದ್ದಾರೆ, ರೋಗವಿಲ್ಲದಿದ್ದರೂ ಅಲ್ಲಿನ ಆಸ್ಪತ್ರೆಗಳನ್ನು ಸೇರುತ್ತಿದ್ದಾರೆ! ವಿಧಾನಸಭೆಯಲ್ಲಿ ಕುರ್ಚಿಗಳನ್ನು ಕಿತ್ತುಕೊಳ್ಳುವ ಮತ್ತು ಭದ್ರಪಡಿಸಿಕೊಳ್ಳುವ ಭಾರೀ ಸರ್ಕಸ್ ನಡೆಯುತ್ತಿದೆ, ನಾವೆಲ್ಲರೂ ಅಂತಹ ಪ್ರಹಸನಕ್ಕೆ ಇದೀಗ ಮೂಕಸಾಕ್ಷಿಗಳಾಗಿದ್ದೇವೆ. ನಾವೇ ಚುನಾಯಿಸಿರುವ ಜನಪ್ರತಿನಿಧಿಗಳ ಪೈಕಿ ನಮ್ಮ ಬದುಕಿನ ಬಗ್ಗೆ ಮಾತನಾಡುವ, ನಮ್ಮ ಸಂಕಷ್ಟಗಳಿಗಾಗಿ ಧ್ವನಿ ಎತ್ತುವವರು ವಿರಳವಾಗಿದ್ದಾರೆ.
ಈ ದೇಶದಲ್ಲಿ ಹಣವಿಲ್ಲದ ಮನುಷ್ಯನಿಗೆ ಬದುಕುವ ಹಕ್ಕುಗಳಿಲ್ಲವೇನು? ಒಂದು ಪ್ಯಾಕೆಟ್ ರಕ್ತ ಕಣಗಳಿಗೆ (ಪ್ಲೇಟ್ಲೆಟ್) ಹತ್ತು ಸಾವಿರ ರೂಪಾಯಿಗಳನ್ನು ಪಡೆಯುವ ರಕ್ತ ಬ್ಯಾಂಕ್ ಗಳನ್ನು ಸರ್ಕಾರ ನಿಯಂತ್ರಿಸುತ್ತಿಲ್ಲವೇಕೆ? ಡೆಂಗ್ಯೂ ಕಾಯಿಲೆ ಪೀಡಿತರಿಗೆ ಅಗತ್ಯ ರಕ್ತದ ಕಣಗಳು ಮತ್ತು ಔಷಧೋಪಚಾರಗಳನ್ನು ಒದಗಿಸುವುದು ಒಂದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಲ್ಲವೇ? ನಮ್ಮನ್ನಾಳುವ ಸರ್ಕಾರಗಳಿಗೇ ಮಾರಣಾಂತಿಕ ಕಾಯಿಲೆ ಬಂದಂತೆ ಕಾಣುತ್ತಿದೆ… ಅವುಗಳಿಗೇ ಚಿಕಿತ್ಸೆ ಅತ್ಯಗತ್ಯವಾಗಿದೆ, ಚಿಕಿತ್ಸೆ ನೀಡಬೇಕಾದ ವೈದ್ಯರು ನಾವೇ… ಪ್ರಜೆಗಳು! ಪ್ರಜ್ಞಾವಂತರಾಗಬೇಕು, ಎಚ್ಚೆತ್ತುಕೊಳ್ಳಬೇಕು…
– ಜ್ಯೋತಿ ಎ.
ಸುದ್ದಿದಿನ.ಕಾಂ|ವಾಟ್ಸಾಪ್|9980346243