ದಿನದ ಸುದ್ದಿ
ಪುಸ್ತಕಗಳು ಜ್ಞಾನ ವಿಕಾಸದ ದೀಪಗಳು : ನಾಸಿರುದ್ದೀನ್
ಸುದ್ದಿದಿನ,ಚಿತ್ರದುರ್ಗ: ಪುಸ್ತಕಗಳು ಜ್ಞಾನ ವಿಕಾಸದ ದೀಪಗಳಾಗಿದ್ದು ನಮ್ಮಲ್ಲಿರುವ ಅಜ್ಞಾನವನ್ನು ದೂರವಾಗಿಸಿ ಸುಜ್ಞಾನದ ಬೆಳಕನ್ನು ಬೆಳಗಿಸುತ್ತವೆ ಎಂದು ಡಯಟ್ ಪ್ರಾಚಾರ್ಯ ನಾಸಿರುದ್ದೀನ್ ಹೇಳಿದರು.
ನಗರದ ಡಯಟ್‌ನಲ್ಲಿ ಕಿರಿಯ ಪ್ರಾಥಮಿಕ(1 ರಿಂದ 5ನೇ ತರಗತಿ) ಶಾಲೆಗಳಲ್ಲಿ ಗ್ರಂಥಾಲಯ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಸಾಹಿತ್ಯ ವಿತರಿಸಿ ಮಾತನಾಡಿದ ಅವರು ಮಾನವನಿಗೆ ಮೂಲಭೂತ ಅವಶ್ಯಕತೆಗಳಾದ ಗಾಳಿ, ನೀರು, ಆಹಾರ, ವಸತಿ ಮುಖ್ಯವಾಗಿರುವಂತೆ ಸನ್ಮಾರ್ಗದಲ್ಲಿ ಕೊಂಡೊಯ್ಯುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ವ್ಯಕ್ತಿಯು ನಿರಂತರ ಓದಿನಿಂದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಸದೃಢನಾಗಿ ಸಮಾಜಮುಖಿ ಜೀವನ ನಡೆಸಬಹುದು. ಶಾಲೆಗಳಲ್ಲಿ ಶಿಕ್ಷಕರು ಪುಸ್ತಕ ಓದುವ ಹವ್ಯಾಸ ಬೆಳೆಸುವುದರ ಮೂಲಕ ಸಾಧಕರ ಜೀವನಾದರ್ಶ ತಿಳಿಸುವ ಪುಸ್ತಕಗಳನ್ನು ಓದಲು ಅವಕಾಶ ಕಲ್ಪಿಸಬೇಕು ಎಂದರು.
ಸಿ.ಟಿ.ಇ(ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ) ಪ್ರವಾಚಕರಾದ ಶ್ರೀನಿವಾಸ ರೆಡ್ಡಿ, ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಸಂಪನ್ಮೂಲ ವ್ಯಕ್ತಿಗಳಾದ ಸಿದ್ದೇಶ್, ಆರ್.ಲಿಂಗರಾಜು, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಕೆ.ಜಿ.ಪ್ರಶಾಂತ್, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಮತ್ತು ಶಿಬಿರಾರ್ಥಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243