ದಿನದ ಸುದ್ದಿ

Boycott China ಎನ್ನುವುದು ಬಹಳ ಸುಲಭ ಹಾಗೂ ಕೇಳಲೇನೋ ಚೆಂದ, ಆದರೆ ವಾಸ್ತವ..?

Published

on

  • ಗ್ಲಾಡ್ ಸನ್ ಅಲ್ಮೆಡಾ

Boycott China ಎನ್ನುವುದು ಬಹಳ ಸುಲಭ ಹಾಗೂ ಕೇಳಲೂ ಚೆಂದ. ಆದರೆ ವಾಸ್ತವ? ಸದ್ಯದ ಪರಿಸ್ಥಿತಿಯಲ್ಲಂತೂ ಅಲ್ಮೋಸ್ಟ್ ಇಂಪಾಸಿಬಲ್. ಯಾಕೆ ಗೊತ್ತೇ? ಚೀನಾದಿಂದ ಭಾರತ ಪಡೆಯುತ್ತಿರುವ ಆಮದಿನ ಒಟ್ಟು ಮೌಲ್ಯ ಸುಮಾರು 60 ಬಿಲಿಯನ್ ಡಾಲರ್. ಇದು ಚೀನಾದ ಒಟ್ಟು ರಫ್ತಿನ ಕೇವಲ 3% ಅಷ್ಟೇ.

ಹಾಗಾಗಿ ಭಾರತ ಸಂಪೂರ್ಣವಾಗಿ ಚೀನಾದ ಆಮದನ್ನು ನಿಲ್ಲಿಸಿದರೂ, ಚೀನಾಕ್ಕೆ ಹೊಡೆತ ಬೀಳಲ್ಲ. ಇನ್ನು ಈ ಆಮದಿನಲ್ಲಿ ಹಲವಾರು ಔಷಧಿಗಳ ಮೂಲಧಾತುಗಳನ್ನೂ ಕೂಡಾ ಭಾರತೀಯ ಜೌಷಧಿ ಕಂಪನಿಗಳು ತರಿಸುತ್ತಿವೆ. ಇವೆಲ್ಲಾವನ್ನು ಬೇರೆಡೆಯಿಂದ ತರಿಸಿಕೊಳ್ಳಲು ಭಾರತ ಶಕ್ತವಾಗಿದೆಯಾ ಎನ್ನುವ ಪ್ರಶ್ನೆಗೆ ಸರಕಾರದ ಬಳಿಯೇ ಉತ್ತರವಿಲ್ಲ.

ಆದರೆ ಚೀನಾದಿಂದ ಆಗುತ್ತಿರುವ ಆಮದು, ನಮ್ಮ ಒಟ್ಟು ಆಮದಿನ ಸುಮಾರು 14%. ಹಾಗಾಗಿ ಚೀನಾದಿಂದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಭಾರತದ ಆಮದಿನ ಮೇಲೆ ಭಾರೀ ಪರಿಣಾಮವುಂಟಾಗುತ್ತದೆ. ಒಂದೇ ಬೇರೆ ಯಾವುದೇ ದೇಶದಿಂದ ಭಾರತ ಆಮದು ಮಾಡಿ ಈ ಪರಿಣಾಮವನ್ನು ಸರಿದೂಗಿಸಬೇಕು ಇಲ್ಲವೇ ನಮ್ಮಲ್ಲೇ ಉತ್ಪಾದನೆ ಕೈಗೊಳ್ಳಬೇಕು. ಬೇರೆ ದೇಶದಿಂದ ಚೀನಾ ಮಾರುವ ಬೆಲೆಯಲ್ಲಿ ವಸ್ತುಗಳಂತೂ ಸಿಗೋಲ್ಲ. ಹಾಗಾಗಿ ಅದು ಕಷ್ಟಸಾಧ್ಯ. ಇನ್ನು ಭಾರತದಲ್ಲಿ ಉತ್ಪಾದನೆ.

ಮೇಕ್ ಇನ್ ಇಂಡಿಯಾ ಎಂದು ಸ್ಲೋಗನ್ ಮಾಡಿಕೊಂಡರೂ ಭಾರತದ ಉತ್ಪಾದನಾ ಕ್ಷೇತ್ರ ಕಳೆದ ಮೂರ್ನಾಲ್ಕು ವರುಷಗಳಲ್ಲಿ ಸತತವಾಗಿ ನಷ್ಟದಲ್ಲಿದೆ. ಹಾಗಾಗಿ ಮಾಧ್ಯಮಗಳು, ಭಕ್ತರು ಎಷ್ಟು ಬಾಯ್ಕಾಟ್, ಬಾಯ್ಕಾಟ್ ಎಂದರೂ, ನಮ್ಮ ಸರಕಾರ ಸದ್ಯಕ್ಕೆ ಚೀನಾದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ನಮ್ಮ ಆರ್ಥಿಕತೆಯ ಮೇಲೆ ಆಗಬಹುದಾದ ಪರಿಣಾಮಗಳನ್ನೆದುರಿಸಲು ತಯಾರಾಗಿದೆಯೇ? ಶಕ್ತವಾಗಿದೆಯೇ? ನನ್ನ ಪ್ರಕಾರ ಎರಡೂ ಇಲ್ಲ. ವಿ ಆರ್ ನಾಟ್ ರೆಡಿ. ಐಟಿ ಸೆಲ್, ಫೇಸ್‍‍ಬುಕ್‍, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಉತ್ಪಾದನೆ ಗಗನ ಮುಟ್ಟಿದೆಯಾದರೂ, ಆ ಔಟ್‍ಪುಟ್ಟನ್ನೂ ನಮ್ಮ ಸರ್ಕಾರನೇ ಖರೀದಿಸೋಲ್ಲ.

ಇನ್ನು ಸದ್ಯಕ್ಕೆ ಚೀನಾ ನಮ್ಮ ದೇಶದಲ್ಲಿ ಮಾಡಿರುವ ಹೂಡಿಕೆಯನ್ನು ಹೇಗೆ ನಿಲ್ಲಿಸುವುದು? ಭಕ್ತರು ಬಾಯ್ಕಾಟ್, ಬಾಯ್ಕಾಟ್ ಎಂದು ಊಳಿಡುತ್ತಿರುವಾಗಲೇ ಡೆಲ್ಲಿ-ಮೀರಟ್ ನಡುವಿನ ರೇಲ್ವೇ ಯೋಜನೆಯ ಕಾಮಗಾರಿಯೊಂದನ್ನು ಚೀನಾದ ಕಂಪನಿಯೊಂದಕ್ಕೆ ಗುತ್ತಿಗೆಗೆ ಕೊಡಲು ತಯಾರಿ ನಡೆಸುತ್ತಿದೆಯೆಂದು ವರದಿಯಾಗಿದೆ.

ಇನ್ನು ಈಗಾಗಲೇ ಆಗಿರುವ ಹೂಡಿಕೆ ದೊಡ್ಡ ಮೊತ್ತದ್ದು. ಬಾಯ್ಕಾಟ್ ಅನ್ನುವ ಮೊದಲು ವಾಸ್ತವವನ್ನು ಅರಿಯಿರಪ್ಪಾ. ಆರು ವರುಷಗಳಲ್ಲಿ ಚೀನಾಕ್ಕೆ ನಮ್ಮ ದೇಶದಲ್ಲಿ ಬೇಕಾಬಿಟ್ಟಿಯಾಗಿ ಹೂಡಿಕೆ ಮಾಡಲು ಬಿಟ್ಟು, ಅವರ ಆಮದನ್ನು ಹೆಚ್ಚಿಸಿ, ಈವಾಗ ಒಮ್ಮೆಗೆ ಬಾಯ್ಕಾಟ್ ಅಂದರೆ?

ಅದಕ್ಕೆ ಬಾಯ್ಕಾಟ್, ಬಾಯ್ಕಾಟ್ ಎನ್ನುವ ಕಾಂಟ್ರಾಕ್ಟನ್ನು ಸರಕಾರ ಮಾಧ್ಯಮಗಳು ಹಾಗೂ ಭಕ್ತ ಮಂಡಳಿಗೆ ಬಿಟ್ಟುಕೊಟ್ಟು, ತಾನು ಮಾತ್ರ ಮೌನಕ್ಕೆ ಜಾರಿದೆ. ಯಾಕೆಂದರೆ ಅವರಿಗೆ ವಾಸ್ತವ ತಿಳಿದಿದೆ. ಆದರೂ ಚುನಾವಣೆಗಳಿವೆಯಲ್ವಾ? ಹಾಂ! ಅದರಲ್ಲಿ ಈ ಬಾಯ್ಕಾಟ್, ಕಡೀ ನಿಂದಾಗಳು ತುಂಬಾ ಹೆಲ್ಪ್ ಮಾಡ್ತಾವೆ ಅಂತ ಬ್ರಹ್ಮಾಂಡ ಜ್ಯೋತಿಷಿಗಳು ಹೇಳಿದ ನೆನಪು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version