ಬಹಿರಂಗ

ವೇಶ್ಯೆಯಾಗಿದ್ದವಳು ಬುದ್ಧನ ಶಿಷ್ಯೆ ಆಗಿದ್ದು ಹೇಗೆ..!?

Published

on

  • ಅಂಬಳೆಮಹಾದೇವಸ್ವಾಮಿ,ಸಹಾಯಕ ಪ್ರಾಧ್ಯಾಪಕರು, ಮೈಸೂರು

ಭಾರತ ದೇಶ ಹಲವು ಧರ್ಮ.ಜಾತಿ.ಭಾಷೆ,ಸಂಸ್ಕೃತಿಯ ಆ ದೊಂಬಲವಾಗಿದೆ. ಎಲ್ಲ ಕ್ಷೇತ್ರದಲ್ಲೂ ತನ್ನದೇ ಆದ ಅಸ್ಮಿತೆಯನ್ನು ಹೊಂದಿದೆ.ಈ ಪುಣ್ಯ ಭೂಮಿಯಲ್ಲಿ ಕಾಲ ಕಾಲಕ್ಕೆ ಮಹಾತ್ಮರು ಉದಯಿಸಿ ಸಮಾಜವನ್ನು ಉದ್ಧರಿಸುವ ಪ್ರಯತ್ನ ಮಾಡಿದ್ದಾರೆ…ಹಾಗಾಗಿಯೇ ಎಲ್ಲರ ಎದೆಯಲ್ಲಿ ಇಂದಿಗೂ ನೆಲೆಯೂರಿದ್ದಾರೆ. ಅಂತಹ ಮಹಾಪುರುಷರು ಬದ್ದರಾದವರಿಗೆ ಉದ್ದರದ ಹೆದ್ದಾರಿಯನ್ನು ತೋರಿದ್ದಾರೆ. ಅಂಥ ಉದಾಹರಣೆಗಳು ನಮ್ಮ ಮುಂದಿವೆ.

ಇವತ್ತಿನ ಬಿಹಾರರಾಜ್ಯದಲ್ಲಿ ಕ್ರಿಸ್ತಪೂರ್ವ 500ರಲ್ಲಿ ವೈಶಾಲಿ ಎಂಬ ನಗರವಿತ್ತು. ಆ ನಗರದಲ್ಲಿ ರಾಜಮನೆತನದವರನ್ನು, ನಗರದ ಶ್ರೀಮಂತರನ್ನು ಸಂತುಷ್ಟಪಡಿಸುವುದಕ್ಕಾಗಿ ರಾಜನರ್ತಕಿಯನ್ನು ನಗರವಧುವಾಗಿ (ನಗರದ ವೇಶ್ಯೆ) ನೇಮಿಸುವ ಅಮಾನವೀಯ ಸಂಪ್ರದಾಯವಿತ್ತು. ಈ ನಗರವಧುವಿಗೆ ಅಲ್ಲಿನ ಮಂದಿ ಜನಕಲ್ಯಾಣಿ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ಇಂಥಹ ವಿಚಿತ್ರವಾದ ಮೌಡ್ಯಸಂಪ್ರದಾಯ ಆಚರಣೆ ಇದ್ದ ನಗರದಲ್ಲಿ ಆಮ್ರಪಾಲಿಯ ಜನನವಾಯಿತು.

ಆಮ್ರಪಾಲಿಯ ಹೆತ್ತ ತಂದೆತಾಯಿಗಳ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ನಾನು ಹೇಳಲಿರುವ ವಿಚಾರಕ್ಕೆ ಅದೇನು ಮುಖ್ಯವೇನಲ್ಲ.ಅದ ಊರಿನಲ್ಲಿ ನೃತ್ಯ ಶಿಕ್ಷಕರಾಗಿದ್ದ ಕುಮಾರಭಟ್ಟ ಎಂಬವರು ನಡೆದು ಬರುತ್ತಿದ್ದಾಗ, ವೈಶಾಲಿ ನಗರದ ಆಮ್ರವನದಲ್ಲಿ (ಮಾವಿನತೋಟ) ಒಂದು ಹೆಣ್ಣು ಮಗು ಸಿಕ್ಕಿತು. ಆಮ್ರವನದಲ್ಲಿ ಸಿಕ್ಕಿದ್ದರಿಂದ ಅವಳಿಗೆ ಆಮ್ರಪಾಲಿ ಎಂದು ಹೆಸರಿಟ್ಟರು.

ಕುಮಾರಭಟ್ಟರ ಮಡದಿಯಾದ ಮಲ್ಲಿಕಾ ಆಮ್ರಪಾಲಿಯನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲುಹಿದರು. ಮಲ್ಲಿಕಾರ ಮೊದಲ ಹೆಸರು ಆವಂತಿಕಾ. ಆವಂತಿಕಾ ಕೂಡ ಓರ್ವ ರಾಜ ನರ್ತಕಿಯಾಗಿದ್ದಲು ನರ್ತಕಿಯ ಕೆಲಸ ಬಿಟ್ಟು ಕುಮಾರಭಟ್ಟರನ್ನ ಮದುವೆಯಾದಾಗ ಆವಂತಿಕಾ ಮಲ್ಲಿಕಾ ಆಗಿ ಬದಲಾದರು.

ಆಮ್ರಪಾಲಿಯು ಕುಮಾರಭಟ್ಟರ ಮನೆಯಲ್ಲಿ ಸಕಲ ಸೌಲಭ್ಯಗಳೊಂದಿಗೆ ಸಂತೋಷವಾಗಿ ಬೆಳೆಯುತ್ತಿದ್ದಳು. ಕುಮಾರಭಟ್ಟರು ಪಲ್ಲವಿ ಎಂಬ ಶಿಷ್ಯೆಗೆ ನೃತ್ಯವನ್ನು ಕಲಿಸುವಾಗ ಆಮ್ರಪಾಲಿ ನೃತ್ಯದ ಕಡೆಗೆ ಆಕರ್ಷಿತಳಾಗಿ ತಾನು ನೃತ್ಯವನ್ನು ಕಲಿಯಬಯಸಿದಳು. ಆದರೆ ಕುಮಾರಭಟ್ಟರಿಗೆ ತಮ್ಮ ಮಗಳಿಗೆ ನೃತ್ಯವನ್ನು ಕಲಿಸಿ ಅವಳನ್ನು ನಗರವಧುವಾಗಿಸಲು ಇಷ್ಟವಿರಲಿಲ್ಲ.

ಆದರೆ ಆಮ್ರಪಾಲಿ ತನ್ನ ಛಲವನ್ನು ಬಿಡಲಿಲ್ಲ. ತಾಯಿ ಮಲ್ಲಿಕಾರನ್ನು ಪೀಡಿಸಿ ಕದ್ದುಮುಚ್ಚಿ ಸಕಲ ಪ್ರಕಾರದ ನೃತ್ಯಗಳನ್ನು ಸಂಪೂರ್ಣವಾಗಿ ಕಲಿತಳು. ಆದರೆ ತಮ್ಮ ಮಗಳು ಆಮ್ರಪಾಲಿ ಮುಂದೆಲ್ಲಿ ನಗರವಧುವಾಗುವಳೋ ಎಂಬ ಭಯದಿಂದ ಆಮ್ರಪಾಲಿಯ ಕೈಯಿಂದ ‘ಯಾವುದೇ ರಾಜನ ಆಸ್ಥಾನದಲ್ಲಿ ಕುಣಿಯುದಿಲ್ಲ’ ಎಂದು ಶಪಥ ಮಾಡಿಸಿಕೊಂಡರು.

ಹೀಗಿರುವಾಗ ವೈಶಾಲಿ ನಗರಕ್ಕೆ ಹೊಸ ನಗರವಧುವಿನ ಅವಶ್ಯಕತೆಯಿತ್ತು. ಅದಕ್ಕಾಗಿ ಒಂದು ನೃತ್ಯದ ಸ್ಪರ್ಧೆಯನ್ನು ಏರ್ಪಡಿಸಿದರು. ಅದರಲ್ಲಿ ವಿಜಯಿಯಾದವರನ್ನು ರಾಜ ನರ್ತಕಿಯಾಗಿ ನೇಮಿಸಿ, ಅವಳನ್ನೇ ನಗರವಧು ಮಾಡುವುದಾಗಿ ಘೋಷಣೆ ಹೊರಡಿಸಿಲಾಯಿತು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಹಲವಾರು ಭಾಗಗಳಿಂದ ದೇಶದ ಮೂಲೆ ಮೂಲೆಗಳಿಂದ ನರ್ತಕಿಯರು ವೈಶಾಲಿಗೆ ಬಂದಿಳಿದರು.

ವೈಶಾಲಿ ನಗರದಿಂದ ಕುಮಾರಭಟ್ಟರ ಶಿಷ್ಯೆಯಾದ ಪಲ್ಲವಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ವೈಶಾಲಿ ನಗರದ ಘನತೆಯನ್ನು ಎತ್ತಿಹಿಡಿಯುವವಳಿದ್ದಳು. ಆದರೆ ಪಲ್ಲವಿ ಹೆಚ್ಚಿನ ಹಣ ಹಾಗೂ ಅಧಿಕಾರದ ಆಸೆಗಾಗಿ ವೈಶಾಲಿಯ ಶತ್ರು ರಾಜ್ಯವಾಗಿದ್ದ ಮಗಧ ರಾಜ್ಯಕ್ಕೆ ಫಲಾಯನಗೈದಳು.ಅಲ್ಲೇ ನೆಲೆಯೂರಲು ನಿರ್ಧರಿಸಿ ಬಿಟ್ಟಳು.

ಕೆಲ ದಿನಗಳ ನಂತರ ನಗರವಧು ಆಯ್ಕೆಯ ನೃತ್ಯ ಸ್ಪರ್ಧೆ ಬಂದೇ ಬಿಟ್ಟಿತು. ಆದರೆ ವೈಶಾಲಿಯ ಸ್ಪರ್ಧಿ ಪಲ್ಲವಿ ಓಡಿಹೋಗಿದ್ದಳು. ವೈಶಾಲಿ ನಗರದ ಮಾನ ಮರ್ಯಾದೆ ಈಗ ಆಮ್ರಪಾಲಿಯ ಕೈಯ್ಯಿಗೆ ಬಂತು. ಆಮ್ರಪಾಲಿಗೆ ನಗರವಧುವಾಗುವ ಆಸೆ ಇರಲಿಲ್ಲ. ಆದರೆ ವೈಶಾಲಿಯ ಘನತೆಯನ್ನು ಕಾಪಾಡುವದಕ್ಕಾಗಿ ಆಮ್ರಪಾಲಿ ನೃತ್ಯಸ್ಪರ್ಧೆಯಲ್ಲಿ ಭಾಗವಹಿಸಿದಳು. ಈ ಸುದ್ದಿ ತಿಳಿದು ಆಮ್ರಪಾಲಿಯ ತಾಯಿ ಮಲ್ಲಿಕಾ ಎದೆಯಾಘಾತದಿಂದ ಮಡಿದರು.

ಎಲ್ಲ ರಾಜ್ಯದ ನರ್ತಕಿಯರು ನೃತ್ಯವನ್ನು ಪ್ರದರ್ಶಿಸಿದ ನಂತರ ಆಮ್ರಪಾಲಿ ನೃತ್ಯ ಮಾಡಲು ವೇದಿಕೆಗೆ ಬಂದಳು. ವೇದಿಕೆಯ ಮೇಲೆ ಆಮ್ರಪಾಲಿಯನ್ನು ನೋಡಿ ಕುಮಾರಭಟ್ಟರಿಗೆ ಆಘಾತವಾಯಿತು. ತಮ್ಮ ಮಗಳು ಕೊನೆಗೂ ನಗರವಧುವಾಗುವಳು ಎಂಬ ಕೊರಗು ಅವರನ್ನು ಕೊರೆಯತೊಡಗಿತು. ಆಮ್ರಪಾಲಿ ನಗರವಧುವಾಗುವುದನ್ನು ನೋಡಲಾಗದೆ ಕುಮಾರಭಟ್ಟರು ವೈಶಾಲಿಯನ್ನು ಬಿಟ್ಟು ದೇಶಾಂತರ ಹೊರಟರು.

ವೇದಿಕೆಯ ಮೇಲೆ ಆಮ್ರಪಾಲಿಯನ್ನು ನೋಡಿ ವೈಶಾಲಿಯ ಜನ ಸ್ತಬ್ಧರಾದರು. ಅವಳ ಸೌಂದರ್ಯವನ್ನು ನೋಡಿ ಮೂಕವಿಸ್ಮೀತರಾದರು. ಆಮ್ರಪಾಲಿಯಷ್ಟು ಸುಂದರವಾಗಿರುವ ಕನ್ಯೆಯನ್ನು ಈ ಮೊದಲು ವೈಶಾಲಿಯಲ್ಲಿ ಯಾರು ನೋಡಿರಲಿಲ್ಲ. ಆಮ್ರಪಾಲಿಯನ್ನು ಜನ ಕಣ್ಣುಕಣ್ಣು ಬಿಟ್ಟು ನೋಡತೊಡಗಿದರು.

ಅವಳ ಮೇಲಿಂದ ದೃಷ್ಟಿ ಬದಲಿಸಲು ಯಾವ ಪುರುಷನಿಗೂ ಮನಸ್ಸಾಗಲಿಲ್ಲ ಜನರ ಕಣ್ಣಿನಿಂದ ಹೊರಟ ಅವರ ನೋಟದ ಬಾಣ ಅವಳಲ್ಲೆ ನೆಟ್ಟಿತ್ತು.ಎಲ್ಲರೂ ಅವಳ ಸೌಂದರ್ಯಕ್ಕೆ ಮಾರು ಹೋಗಿದ್ದರು.ಅವಳ ಅಂಗಾಂಗಗಳು ಕಣ್ಣುಗಳಿಂದ ಅಳತೆ ಮಾಡುತ್ತಿದ್ದರು. ಅವರೆಲ್ಲರ ಕಾಮದ ಕಣ್ಣುಗಳೊಡನೆ ಹೋರಾಡುತ್ತಾ ಆಮ್ರಪಾಲಿ ನೃತ್ಯ ಮಾಡಿದಳು. ಕೊನೆಗೆ ಅವಳೇ ಈ ನೃತ್ಯ ಸ್ಪರ್ಧೆಯಲ್ಲಿ ವಿಜಯಿಯಾದಳು.

ನೃತ್ಯಸ್ಪರ್ಧೆಯಲ್ಲಿ ಗೆದ್ದ ಆಮ್ರಪಾಲಿಯನ್ನು ರಾಜನರ್ತಕಿಯಾಗಿ ನೇಮಿಸಿ, ನಗರವಧುವೆಂದು ಘೋಷಿಸಲಾಯಿತು. ರಾಜನರ್ತಕಿಯಾಗಲು ಆಮ್ರಪಾಲಿ ಸಿದ್ಧಳಿದ್ದಳು. ಆದರೆ ನಗರವಧುವಾಗಿ ಸಾವಿರಾರು ಜನರ ಜೊತೆ ಮಲಗಲು ಅವಳಿಗೆ ಇಷ್ಟವಿರಲಿಲ್ಲ. ಅವಳಿಗೆ ಎಲ್ಲ ಹುಡುಗಿಯರಂತೆ ಕುಲವಧುವಾಗಿ ಗೌರವದ ಜೀವನ ನಡೆಸುವ ಆಸೆಯಿತ್ತು. ಎಲ್ಲರಂತೆ ಅವಳು ಒಂದು ಸುಂದರ ಹಾಗೂ ಸ್ವತಂತ್ರ ಜೀವನವನ್ನು ಅನುಭವಿಸಲು ಮುಂದಾಗಿ ನಗರವಧುವಾಗಲು ನಿರಾಕರಿಸಿದಳು. ಆಮ್ರಪಾಲಿಯ ಈ ನಿರ್ಧಾರದಿಂದ ವೈಶಾಲಿಯ ರಾಜಕುಮಾರ ಕೆರಳಿ ಕೆಂಡಾಮಂಡಲವಾದನು.

ಆಮ್ರಪಾಲಿ ನಗರವಧುವಾಗಲು ನಿರಾಕರಿಸಿದ್ದರಿಂದ ವೈಶಾಲಿಯ ರಾಜಕುಮಾರರಿಗೆ, ಧನಿಕರಿಗೆ ನಿರಾಸೆಯಾಗಿತ್ತು. ಅವಳ ಸೌಂದರ್ಯವನ್ನು ಕತ್ತಲ ಕೋಣೆಯಲ್ಲಿ ಮನಬಂದಂತೆ ಅನುಭವಿಸಿ ಸುಖಪಡಬೇಕು ಎಂಬ ಕನಸಿಗೆ ಕೊಡಲಿ ಏಟು ಬಿದ್ದಿತು. ಎಲ್ಲರೂ ಆಮ್ರಪಾಲಿಯನ್ನು ಮದುವೆಯಾಗಲು ಮುಂದಾದರು. ಅವಳಿಗಾಗಿ ಯುದ್ಧವನ್ನು ಸಹ ಮಾಡಲು ಎಲ್ಲರೂ ತಯಾರಿದ್ದರು. ಎಲ್ಲರೂ ಆಮ್ರಪಾಲಿಯ ಎದುರು ವಿವಾಹದ ಪ್ರಸ್ತಾಪವಿಟ್ಟರು. ಆದರೆ ಆಮ್ರಪಾಲಿ ಇವೆಲ್ಲವನ್ನೂ ತಿರಸ್ಕರಿಸಿ ತನ್ನ ಬಾಲ್ಯದ ಗೆಳೆಯ ಪುಷ್ಪಕುಮಾರನನ್ನು ಮದುವೆಯಾಗಲು ತಿರ್ಮಾನಿಸಿದಳು.

ಆಮ್ರಪಾಲಿಯನ್ನು ನಗರವಧುವಾಗಿ ನೇಮಿಸಬೇಕು ಎಂಬ ಕೂಗು ಜೋರಾಗಿ ಸದ್ದು ಮಾಡತೊಡಗಿತು. ಆಮ್ರಪಾಲಿಯನ್ನು ಮದುವೆಯಾಗದಿದ್ದರೂ, ಅವಳನ್ನು ಆಕ್ರಮಿಸಿ ಅನುಭವಿಸಲು ಸಾಮಂತರು ಮುಂದಾದರು. ಇದರಿಂದ ರಾಜ್ಯದಲ್ಲಿ ದಂಗೆಗಳು ಶುರುವಾದವು. ವೈಶಾಲಿಯಲ್ಲಿ ರಕ್ತದ ಹೊಳೆ ಉಗಮವಾಯಿತು.

ವೈಶಾಲಿಯ ರಾಜ ಆಮ್ರಪಾಲಿಯ ಮದುವೆಯ ದಿನವೇ ಅವಳ ಭಾವಿಪತಿಯನ್ನು ಕೊಂದು ಆಮ್ರಪಾಲಿಯನ್ನು ಆಸ್ಥಾನಕ್ಕೆ ಬಲವಂತವಾಗಿ ಕರೆದುಕೊಂಡು ಬಂದನು. ಕೂಡಲೇ ಒಂದು ನಗರಸಭೆಯನ್ನು ಕರೆದನು. ನಗರಸಭೆಯ ಒಮ್ಮತದ ಅನುಸಾರ ವೈಶಾಲಿ ನಗರದ ಶಾಂತಿಗಾಗಿ ಹಾಗೂ ಗಣತಂತ್ರದ ರಕ್ಷಣೆಗಾಗಿ ಸರ್ವಸಮ್ಮತದಿಂದ ಆಮ್ರಪಾಲಿಯನ್ನು ನಗರವಧುವೆಂದು ಘೋಷಿಸಿದರು.

ಸುಂದರವಾಗಿರುವ ಕನ್ಯೆ ಒಬ್ಬರಿಗೆ ಮಾತ್ರ ಸಿಮೀತವಾಗಿರಬಾರದು. ಎಲ್ಲರನ್ನೂ ಸಂತುಷ್ಟಪಡಿಸಲೇಬೇಕು ಎಂಬ ಹಟಕ್ಕೆ ಆಮ್ರಪಾಲಿ ನಗರವಧುವಾದಳು. ಅವಳ ಸುಂದರ ಕನಸುಗಳು ನೂಚ್ಚು ನೂರಾದವು. ಅವಳ ಸೌಂದರ್ಯವೇ ಅವಳಿಗೆ ಶಾಪವಾಯಿತು. ಅವಳಿಗೆ ಒಂದು ಭವ್ಯವಾದ ಅರಮನೆಯನ್ನು ಉಡುಗೊರೆಯಾಗಿ ನೀಡಲಾಯಿತು. ಅವಳ ಸೇವೆಗೆ ದಾಸಿಯರನ್ನು, ಕಾವಲಿಗೆ ಸೈನಿಕರನ್ನು ನಿಯೋಜಿಸಲಾಯಿತು.

ಆಮ್ರಪಾಲಿಯ ಸಾಂಗತ್ಯಕ್ಕಾಗಿ ಹಲವಾರು ತರುಣರು ಹಾತೊರೆದರು. ಬರೀ ವೈಶಾಲಿ ನಗರವಷ್ಟೇ ಅಲ್ಲದೇ ದೇಶವಿದೇಶಗಳಿಂದ ರಾಜಮಹಾರಾಜರು, ಶ್ರೀಮಂತರು, ಸಾಮಂತರು ಅವಳ ಅರಮನೆಯ ಮುಂದೆ ನಾಯಿಯಂತೆ ಕಾಯುತ್ತಿದ್ದರು. ಅವಳನ್ನು ಅನುಭವಿಸಲು ಅಂಗಲಾಚಿ ಹಣದ ಮಳೆಯನ್ನೇ ಸುರಿಸುತ್ತಿದ್ದರು. ಅವಳ ಬಟ್ಟಲು ಕಣ್ಣುಗಳು, ಬಳ್ಳಿಯಂತೆ ಬಳಕುವ ನಡುವಿಗೆ ಆಕರ್ಷಿತನಾಗದ ಪುರುಷನೇ ಇರಲಿಲ್ಲ. ಅವಳಿಗೆ ಮಧುಪಾನದ ಅವಶ್ಯಕತೆಯಿರಲಿಲ್ಲ. ಅವಳೇ ಒಂದು ನಶೆಯಾಗಿದ್ದಳು. ನೋಡುನೋಡುತ್ತಿದ್ದಂತೆ ಆಮ್ರಪಾಲಿ ಶ್ರೀಮಂತಳಾದಳು.

ಒಂದಿನ ಆಮ್ರಪಾಲಿ ವೈಶಾಲಿಯ ರಾಜಕುಮಾರನೊಂದಿಗೆ ವನವಿಹಾರಕ್ಕೆ ಹೋಗಿದ್ದಾಗ ಅವಳ ಮೇಲೆ ಒಂದು ಹುಲಿ ದಾಳಿ ಮಾಡಿತು. ಅವಳನ್ನು ರಕ್ಷಿಸಬೇಕಿದ್ದ ರಾಜಕುಮಾರ ಹುಲಿಗೆ ಹೆದರಿ ಓಡಿಹೋದನು. ಅದೇ ಸಮಯಕ್ಕೆ ಮಗಧದ ರಾಜಕುಮಾರ ಬಿಂಬಸಾರ ಅವಳನ್ನು ರಕ್ಷಿಸಿ ಅವಳಿಗೆ ಹತ್ತಿರವಾದನು. ಬಿಂಬಸಾರ ವೈಶಾಲಿ ನಗರಕ್ಕೆ ಶತ್ರುವಾಗಿದ್ದನು.

ವೈಶಾಲಿಯ ಮೇಲೆ ಸೇಡು ತೀರಿಸಿಕೊಳ್ಳಲು ಉಜ್ಜೈನಿಯ ವೀಣಾವಾದಕ ಆಮೋಧ ಎಂಬ ಮಾರುವೇಷದಲ್ಲಿ ವೈಶಾಲಿಯಲ್ಲಿದ್ದನು. ಆಮ್ರಪಾಲಿ ಬಿಂಬಸಾರನಿಗೆ ಮರುಳಾದಳು. ಬಿಂಬಸಾರ ವೈಶಾಲಿಯ ಶತ್ರುವಷ್ಟೇ ಅಲ್ಲ, ಅವಳು ನಗರವಧುವಾಗಲು ಮಗಧದ ಕುತಂತ್ರವೇ ಕಾರಣ ಎಂಬ ಸತ್ಯ ಗೊತ್ತಾದರೂ ಅವಳು ಬಿಂಬಸಾರನ ಶಾಂತಿ ನಾಟಕವನ್ನು ನಂಬಿದಳು. ಬಿಂಬಸಾರ ಮತ್ತು ಆಮ್ರಪಾಲಿಯ ಮಧ್ಯೆ ಪ್ರೇಮಾಂಕುರವಾಯಿತು. ಅವರು ಗುಪ್ತವಾಗಿ ಮದುವೆಯಾದರು. ಆಮ್ರಪಾಲಿ ಬಿಂಬಸಾರನೊಡನೆ ವೈಶಾಲಿ ನಗರಕ್ಕೆ ಮರಳಿದಳು.

ಆಮ್ರಪಾಲಿ ಮರಳಿ ಜೀವಂತವಾಗಿ ಬಂದಿರುವುದನ್ನು ಕಂಡು ವೈಶಾಲಿ ನಗರ ಸಂತಸದ ಕಡಲಲ್ಲಿ ತೇಲಾಡಿತು. ಬಿಂಬಸಾರ ವೀಣಾವಾದಕನಾಗಿ ಆಮ್ರಪಾಲಿಯ ಮನೆಯಲ್ಲೇ ಇದ್ದನು. ಆಮ್ರಪಾಲಿಯ ಮನೆಯಲ್ಲಿರುವ ಉಜ್ಜೈನಿಯ ವೀಣಾವಾದಕ ಆಮೋಧ, ತಮ್ಮ ಶತ್ರು ಮಗಧ ರಾಜ್ಯದ ರಾಜಕುಮಾರ ಬಿಂಬಸಾರ ಎಂದು ಗೊತ್ತಾದಾಗ ವೈಶಾಲಿಯ ಜನ ದಂಗೆಯೆದ್ದರು.

ಆಮ್ರಪಾಲಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದರು. “ಆಮ್ರಪಾಲಿ ತಮ್ಮ ಶತ್ರು ಬಿಂಬಸಾರದೊಂದಿಗೆ ಸೇರಿ ವೈಶಾಲಿಯ ಸರ್ವನಾಶಕ್ಕೆ ಸಂಚು ರೂಪಿಸಿದ್ದಾಳೆ” ಎಂಬ ಆಪಾದನೆ ಮೇರೆಗೆ ಅವಳನ್ನು ಬಂಧಿಸಿ ಸೆರೆಮನೆಯಲ್ಲಿಟ್ಟರು. ನಿಸ್ಸಹಾಯಕನಾಗಿದ್ದ ಬಿಂಬಸಾರ ಗುಪ್ತಮಾರ್ಗದ ಮೂಲಕ ತನ್ನ ಮಗಧ ರಾಜ್ಯಕ್ಕೆ ಮರಳಿದನು. ವೈಶಾಲಿಯ ಮೇಲೆ ದಾಳಿ ಮಾಡಲು ಬಲಿಷ್ಟವಾದ ಸೈನ್ಯವನ್ನು ಸಿದ್ದಮಾಡಿದನು.

ವೈಶಾಲಿಯ ಘನತೆಗಾಗಿ, ಗಣತಂತ್ರದ ರಕ್ಷಣೆಗಾಗಿ ತನ್ನ ಕನಸುಗಳನ್ನು ಬಲಿಕೊಟ್ಟು ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಆಮ್ರಪಾಲಿಗೆ ರಾಜದ್ರೋಹದ ಆರೋಪ ಹೊರಿಸಿ ಸೆರೆಮನೆಗೆ ತಳ್ಳಿದ್ದು ಬಿಂಬಸಾರನಿಗೆ ಸಹಿಸಿಕೊಳ್ಳಲಾಗಲಿಲ್ಲ. ಅದಕ್ಕಾಗಿ ಆತ ವೈಶಾಲಿಯ ಮೇಲೆ ದಾಳಿ ಮಾಡಿದನು. ಗಯಾಸ್ಟ್ರೋಎಂಟರೈಟಿಸ್ ಟೀವಿ ಬಂಧಿಸಿಟ್ಟಿದ್ದ ಸೆರೆಮನೆಯೊಂದನ್ನು ಬಿಟ್ಟು, ಉಳಿದೆಲ್ಲ ನಗರವನ್ನು ಸಂಪೂರ್ಣವಾಗಿ ಸುಟ್ಟು ನಾಶಮಾಡಿ, ಆಮ್ರಪಾಲಿಯನ್ನು ಬಂಧಮುಕ್ತಗೊಳಿಸಿದನು.

ಬಂಧಮುಕ್ತಳಾದ ಆಮ್ರಪಾಲಿಗೆ ಖುಷಿಪಡಬೇಕೊ ಅಥವಾ ಯಾವ ನಗರದ ರಕ್ಷಣೆಗಾಗಿ ತನ್ನ ಶೀಲವನ್ನು ಸಾವಿರಾರು ಜನರಿಗೆ ಹಂಚಿ ನಗರವಧುವಾಗಿದ್ದಳೊ, ಆ ನಗರ ಸುಟ್ಟು ನಾಶವಾಗಿರುವುದರಿಂದ ಸಂಕಟ ಪಡಬೇಕೊ ಎಂಬುದು ತಿಳಿಯದಾಯಿತು. ಬಿಂಬಸಾರ ಹೀಗೆ ಮಾಡುವುದಕ್ಕೆ ವೈಶಾಲಿಯ ಸೇಡಿನ ಜೊತೆಗೆ ಅವಳ ಮೇಲಿನ ಪ್ರೀತಿಯೂ ಕಾರಣ ಎಂಬುದು ಅವಳಿಗೆ ತಿಳಿಯದೇ ಇರಲಿಲ್ಲ.

ಅವಳ ದೇಹ ಮಲಿನವಾಗಿದ್ದರೂ, ಮನಸ್ಸು ಪವಿತ್ರವಾಗಿತ್ತು. ವೈಶಾಲಿಯ ರಕ್ಷಣೆಗಾಗಿ ಅವಳು ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಳು. ಆದರೆ ಅದೇ ನಗರ ತನ್ನ ಪ್ರಿಯಕರನಿಂದ ನಾಶವಾಗಿರುವುದನ್ನು ಅವಳಿಂದ ಅರಗಿಸಿಕೊಳ್ಳಲಾಗಲಿಲ್ಲ. ಅದಕ್ಕಾಗಿ ಬಿಂಬಸಾರ ಅವಳನ್ನು ಮಗಧಕ್ಕೆ ಬರುವಂತೆ ಅಂಗಲಾಚಿ ಬೇಡಿಕೊಂಡರೂ ಅವಳು ಹೋಗಲಿಲ್ಲ.

“ಬಿಂಬಸಾರನೊಂದಿಗೆ ಸೇರಿ ವೈಶಾಲಿಯ ನಾಶಕ್ಕಾಗಿ ಆಮ್ರಪಾಲಿ ಸಂಚು ರೂಪಿಸಿದ್ದಾಳೆ” ಎಂಬ ಆರೋಪ ನಿಜವಾಗಬಾರದೆಂಬ ಕಾರಣಕ್ಕಾಗಿ ಬಿಂಬಸಾರನ ಪ್ರೀತಿಯನ್ನು ಆಮ್ರಪಾಲಿ ತ್ಯಾಗ ಮಾಡಿದಳು. ಅವನ ಜೊತೆ ಮಗಧಕ್ಕೆ ಹೋಗದೆ, ಅವರಿಬ್ಬರ ಪ್ರೇಮದ ಸಂಕೇತವಾಗಿ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು ಹೆತ್ತುಕೊಟ್ಟು, ಅವನಿಂದ ಶಾಶ್ವತವಾಗಿ ದೂರಾದಳು. ನಂತರ ಬುದ್ಧನ ವಿಚಾರವನ್ನು ಅರಿತು, ಬುದ್ಧನ ತತ್ವ ಉಪದೇಶಗಳಿಂದ ಪ್ರಭಾವಿತಳಾಗಿ, ಬುದ್ಧನ ಶಿಷ್ಯೆಯಾದಳು.

(-ಅಂಬಳೆಮಹಾದೇವಸ್ವಾಮಿ
ಸಹಾಯಕ ಪ್ರಾಧ್ಯಾಪಕ
ಕನ್ನಡ ವಿಭಾಗ
ಸೇಪಿಯಂಟ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು.ವಿಜಯನಗರ ಮೈಸೂರು.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version