ಲೈಫ್ ಸ್ಟೈಲ್

ಕರುಗಳಲ್ಲಿ ಜೋಲುಗಡಿಗೆ ಹೊಟ್ಟೆ : ಏನು ಕಾರಣ..?

Published

on

  • ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ

ಮಿಶ್ರ ತಳಿಯ ಗಂಡು ಕರುಗಳಿರಲಿ ಅಥವಾ ಹೆಣ್ಣು ಕರುಗಳಿರಲಿ ಹುಟ್ಟಿದಾಗ ಒಂದು ತಿಂಗಳವರೆಗೂ ಮೈಕೈ ತುಂಬಿಕೊಂಡು ದಷ್ಟ ಪುಷ್ಠ ವಾಗಿರುವ ಕರುಗಳು ನಂತರ ಕ್ರಮೇಣವಾಗಿ ಜೋಲು ಹೊಟ್ಟೆ (Pot belly) ಹೊತ್ತುಕೊಂಡು ಓಡಾಡುವ ಪರಿಸ್ಥಿತಿಯನ್ನು ತಲುಪುತ್ತವೆ. ಹಲವಾರು ಕೃಷಿಕರು ಇಂತಹ ಕರುಗಳಿಗೆ ಜಂತುನಾಶಕವನ್ನು ಮೇಲಿಂದ ಮೇಲೆ ನೀಡುವುದರಿಂದ ಗುಣಮುಖವಾಗುತ್ತವೆ ಎಂದು ಭಾವಿಸುತ್ತಾರೆ. ಇದು ಸರಿಯೇ? ಇದಕ್ಕೆ ಏನು ಕಾರಣ ಅಂತ ತಿಳಿಯೋಣ.

ಇಂದಿನ ಮಗುವೇ ನಾಳಿನ ನಾಗರೀಕ ಎನ್ನುವುದು ಗಾದೆ. ಇದನ್ನು ಜಾನುವಾರುಗಳಿಗೆ ಅನ್ವಯಿಸಿದರೆ ‘ಇಂದಿನ ಕರುವೇ ನಾಳಿನ ಹಸು’ ಎನ್ನಬಹುದು. ಸಾಮಾನ್ಯವಾಗಿ ಕರುಗಳಿಗೆ ಆಕಳಿನ ಹಾಲೇ ಸರ್ವಶ್ರೇಷ್ಠವಾದ ಅಹಾರ. ಹುಟ್ಟಿದ ದಿನದಿಂದಲೂ ಕನೀಷ್ಟ 3-4 ತಿಂಗಳುಗಳವರೆಗೆ ಕರುಗಳಿಗೆ ಅದರ ಶರೀರದ ತೂಕದ ಶೇ 10 ರಷ್ಟು ಹಾಲನ್ನು ನೀಡಬೇಕು. ಒಂದು ಮಿಶ್ರ ತಳಿಯ ಕರು ಹುಟ್ಟುವಾಗ ಸುಮಾರು 40 ಕೆಜಿ ತೂಕವನ್ನು ಹೊಂದಿದ್ದು ಅದಕ್ಕೆ 4 ಲೀಟರ್‌ನಷ್ಟು ಹಾಲನ್ನು ನೀಡಬೇಕು. ಪ್ರತಿ ದಿನ ಕರು ಸುಮಾರು 100-500 ಗ್ರಾಂನಷ್ಟು ತೂಕದಲ್ಲಿ ವರ್ಧನೆಯನ್ನು ಹೊಂದುತ್ತದೆ.

ಇದಕ್ಕೆ ತಕ್ಕಂತೆ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸುವುದು ಸಹ ಬಹಳ ಮುಖ್ಯ. ಆದರೆ ಹಲವಾರು ಬಾರಿ ಹೆಚ್ಚಿನ ಹೈನುಗಾರರು ಕರುವಿಗೆ ನೀಡುವುದನ್ನು ಕಡಿಮೆ ಮಾಡಿ ಬಿಡುತ್ತಾರೆ. ಇಷ್ಟು ಹಾಲನ್ನು ನೀಡಿದರೆ ಕರುವಿಗೆ ಅಜೀರ್ಣವಾಗಿ ಬೇಧಿಯುಂಟಾಗುತ್ತದೆ ಎಂದು ಹೆದರುತ್ತಾರೆ. ಆದರೆ ಈ ರೀತಿಯ ಬೇದಿಯಾಗುವುದು ಕರುವಿಗೆ ವಿವಿಧ ಕಾರಣಗಳಿಂದ ಅಜೀರ್ಣವಾದಾಗ ಮತ್ತು ಸೂಕ್ಷ್ಮಾಣು ಜೀವಿಗಳಿಂದ ಮಲೀನವಾದ ಹಾಲನ್ನು ಕೊಟ್ಟಾಗ ಅದಕ್ಕೆ ಬಿಳಿ ಬೇದಿಯಾಗಬಹುದು.

ಅಲ್ಲದೇ ಹಾಲು ಉತ್ಪಾದಕರ ಸಂಘಕ್ಕೆ ಹಾಲನ್ನು ಮಾರಿ ಹೆಚ್ಚಿನ ಲಾಭ ಪಡೆಯುವ ಆಸೆಯೂ ಸಹ ಒಂದು ಕಾರಣ. ಆದರೆ ಇದು ತಾತ್ಕಾಲಿಕ ಲಾಭ ಮಾತ್ರ. ದೂರಗಾಮಿ ದೃಷ್ಠಿಯಲ್ಲಿ ನೋಡಿದಾಗ ಕರುವಿಗೆ ಅದರ ತಾಯಿಯ ಹಾಲನ್ನು ನಿಗದಿತ ಪ್ರಮಾಣದಲ್ಲಿ ನಿಗದಿತ ದಿನಗಳವರೆಗೆ ನೀಡಿದರೆ ಮಾತ್ರ ಉತ್ತಮ ಪಡ್ಡೆಯನ್ನು ಪಡೆಯಲು ಸಾಧ್ಯ.

ಕರುಗಳಿಗೆ ಜೋಲು ಹೊಟ್ಟೆ ಬರಲು ಮುಖ್ಯವಾದ ಕಾರಣ ಅದಕ್ಕೆ ಬೆಳವಣಿಗೆಯ ಹಂತದಲ್ಲಿ ಹಾಲನ್ನು ಮತ್ತು ಪೌಷ್ಠಿಕ ಅಹಾರವನ್ಮ್ನ ಸೂಕ್ತ ಪ್ರಮಾಣದಲ್ಲಿ ನೀಡದಿರುವುದು ಮುಖ್ಯ ಕಾರಣ.. ಮತ್ತೊಂದು ಕಾರಣವೆಂದರೆ ಎಳೆ ಕರುಗಳಿಗೆ ಜಾನುವಾರುಗಳಿಗೆ ನೀಡುವ ಕಡಿಮೆ ಪೌಷ್ಟಿಕಾಂಶಗಳನ್ನು ಹೊಂದಿದ ಪಶು ಅಹಾರವನ್ನು ನೀಡುವುದು. ಬಹಳಷ್ಟು ಕರುಗಳು ತುಂಬಾ ಆಸ್ಥೆಯಿಂದ ಅದರ ತಾಯಿಗೆ ನೀಡಿದ ಅಹಾರವನ್ನು ತಿನ್ನುತ್ತವೆ.

ಇದನ್ನು ಗಮನಿಸಿದ ರೈತರು ಅದಕ್ಕೆ ಹಾಲನ್ನು ಕಡಿಮೆ ಮಾಡಿ ಪಶು ಅಹಾರವನ್ನು ನೀಡಲು ಪ್ರಾರಂಭಿಸುತ್ತಾರೆ. ಇದೇ ಸಮಯದಲ್ಲಿ ಕರು ಹುಲ್ಲನ್ನು ತಿನ್ನಲು ಪ್ರಾರಂಭಿಸುತ್ತದೆ. ಈ ಅಹಾರವನ್ನು ಪಚನ ಮಾಡಲು ಅನುವಾಗುವಂತೆ ಕರುವಿನ ಹೊಟ್ಟೆ, ಕರುಳು ಮತ್ತು ಜೀರ್ಣಾಂಗದ ವಿವಿಧ ಭಾಗಗಳು ಜಾಸ್ತಿ ಬೆಳವಣಿಗೆ ಹೊಂದುತ್ತವೆ. ಆದರೆ ಹಾಲಿನಿಂದ ಲಭ್ಯವಾಗುವ ಕ್ಯಾಲ್ಸಿಯಂ ಮತ್ತು ರಂಜಕ ಸೂಕ್ತ ಪ್ರಮಾಣದಲ್ಲಿ ಲಭ್ಯವಾಗದೇ ಅಸ್ಥಿವ್ಯೂಹದ ಸರಿಯಾದ ಬೆಳವಣಿಗೆಯಾಗುವುದಿಲ್ಲ.

ಎಲುಬುಗಳು ಅದರಲ್ಲೂ ಹಿಂಬಾಗದ ಎಲುಬುಗಳು ಉತ್ತಮ ಬೆಳವಣಿಗೆ ಹೊಂದದೇ ಇರುವುದರಿಂದ ಕರುವನ್ನು ಹಿಂಬಾಗದಿಂದ ಗಮನಿಸಿದಾಗ ಜೋಲು ಹೊಟ್ಟೆ ಎದ್ದು ಕಾಣುತ್ತದೆ. ಇದನ್ನು ಹಳ್ಳಿಯ ಭಾಷೆಯಲ್ಲಿ ‘ಹೊಟ್ಟೆ ಡುಮ್ಮಣ್ಣ ; ಕೈಕಾಲು ಸಣ್ಣಣ್ಣ’ ಎಂದು ಕರೆಯುತ್ತಾರೆ. ಕರುಗಳಿಗೆ ಈ ಕೆಳಗಿನ ಕೋಷ್ಠಕದಲ್ಲಿ ವಿವರಿಸಿದಂತೆ ಹಾಲು ಮತ್ತು ಅಹಾರವನ್ನು ನೀಡಬೇಕು.

ಕೋಷ್ಠಕ 1 : ಕರುಗಳಿಗೆ ನೀಡಬಹುದಾದ ಹಾಲು, ಹಿಂಡಿ ಮತ್ತು ಹುಲ್ಲಿನ ಪ್ರಮಾಣ.ವಯಸ್ಸು ನೀಡಬೇಕಾದ ಹಾಲಿನ ಪ್ರಮಾಣ ನೀಡಬೇಕಾದ ಹಿಂಡಿಯ ಪ್ರಮಾಣ ಹುಲ್ಲಿನ ಪ್ರಮಾಣ.

  • 1-14 ದಿನ ಗಿಣ್ಣದ ಹಾಲು ದೇಹ ತೂಕದ ಶೇ 10 ರಷ್ಟು ದಿನಕ್ಕೆ ಮೂರು ಸಲ
  • 15-21 ದಿನ ಹಾಲು ದೇಹ ತೂಕದ ಶೇ 10 ರಷ್ಟು ದಿನಕ್ಕೆ ಎರಡು ಸಲ ಒಂದುಮುಷ್ಠಿ-ಒಂದು ಮುಷ್ಠಿ
  • 22-60 ದಿನ ಹಾಲು ದೇಹ ತೂಕದ ಶೇ 5 ರಷ್ಟು ದಿನಕ್ಕೆ ಎರಡು ಸಲ 100-250 ಗ್ರಾ0 ಹೊಟ್ಟೆ
    ತುಂಬುವಷ್ಠು
  • 2- 3 ತಿಂಗಳು ಕ್ರಮೇಣ ಕಡಿಮೆ ಮಾಡಿ ನಿಲ್ಲಿಸುವುದು 500 ಗ್ರಾ0 ಹೊಟ್ಟೆ ತುಂಬುವಷ್ಠು
  • 3-6 ತಿ0ಗಳು —– 750-950 ಗ್ರಾ0 ಹೊಟ್ಟೆ ತುಂಬುವಷ್ಠು
  • 6-12 ತಿ0ಗಳು —– 1-2.5 ಕಿಲೋ ಹೊಟ್ಟೆ ತುಂಬುವಷ್ಠು

ಮೇಲ್ಕಾಣಿಸಿದಂತೆ ಅಹಾರ ಮತ್ತು ಹಾಲನ್ನು ನೀಡಿದಲ್ಲಿ ಕರುಗಳು ಉತ್ತಮ ಬೆಳವಣಿಗೆಯನ್ನು ಹೊಂದಿ 1 ವರ್ಷ ಅವಧಿಯಲ್ಲಿ ಸುಮಾರು ಅವಧಿಯಲ್ಲಿ 180 ಕಿಲೊ ತೂಕವನ್ನು ಹೊಂದಿ ಒಂದುವರೆ ವರ್ಷದಲ್ಲಿ 250 ಕಿಲೋ ತೂಕವನ್ನು ತಲುಪಿದರೆ ನಿಗದಿತ ಅವಧಿಯಲ್ಲಿ ಬೆದೆಗೆ ಬಂದು ವರ್ಷಕ್ಕೊಂದು ಕರುವನ್ನು ನೀಡುತ್ತವೆ.

ಇದನ್ನೂ ಓದಿ : ರಿಹನ್ನಾ-ಗ್ರೇಟಾ-ಮೀನಾ ಗ್ರೇಟಾ ಮೋದಿ ಗ್ರೇಟಾ..?

ಇಲ್ಲದಿದ್ದಲ್ಲಿ ಕರುಗಳು ಒರಟಾದ ಮತ್ತು ಒಣಕಲು ಚರ್ಮವನ್ನು ಹೊಂದಿದ್ದು ಉದ್ದನೇ ಕೂದಲನ್ನು ಹೊಂದಿರುತ್ತವೆ. ಕಣ್ಣುಗಳು ನಿಸ್ತೇಜವಾಗಿದ್ದು, ರಕ್ತಹೀನತೆಯನ್ನು ಹೊಂದಿರುತ್ತವೆ. ತಿಂದ ಅಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇಂತಹ ಕರುಗಳು ನಿಗದಿತ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿ ಸೂಕ್ತ ಸಮಯದಲ್ಲಿ ಬೆದೆಗೆ ಬರುವುದಿಲ್ಲ. ಬೆದೆಗೆ ಬಂದರೂ ಸಹ ಗರ್ಭ ಕೋಶ ಸೂಕ್ತ ರೀತಿಯಲ್ಲಿ ಬೆಳವಣಿಗೆಯಾಗದೇ ಇರುವುದರಿಂದ ಫಲ ಕಟ್ಟುವುದಿಲ್ಲ.

ಇಂತಹ ಕರುಗಳಿಗೆ ಜಂತು ನಾಶಕ ಹಾಕುವುದರಿಂದ ಏನೂ ಪ್ರಯೋಜನವಾಗುವುದಿಲ್ಲ. ಬದಲಾಗಿ ಉತ್ತಮ ಪೌಷ್ಠಿಕಾಂಶವನ್ನು ಹೊಂದಿದ ಕರುಗಳಿಗೆಂದೇ ಲಭ್ಯವಿರುವ ಕನೀಷ್ಠ ಶೇ 22 ಪ್ರಮಾಣದಲ್ಲಿ ಸುಲಭವಾಗಿ ಜೀರ್ಣ ಹೊಂದುವ ಪ್ರೊಟೀನ್‌ಯುಕ್ತ ಅಹಾರವನ್ನು ದೇಹ ತೂಕಕ್ಕೆ ತಕ್ಕಂತೆ ತಜ್ಞ ಪಶು ವೈದ್ಯರ ಸಲಹೆಯಂತೆ ಬಳಸಬೇಕು.

ಉತ್ತಮ ಖನಿಜ ಮಿಶ್ರಣವನ್ನು ಸೂಕ್ತ ಪ್ರಮಾಣದಲ್ಲಿ ನೀಡಬೇಕು. ಇವೆಲ್ಲವುಗಳ ‘ಇಂದಿನ ಕರುವೇ ನಾಳಿನ ಹಸು’ ಎಂಬ ನಾಣ್ಣುಡಿಯನ್ನು ಜ್ಞಾಪಿಸಿಕೊಂಡು ಕರುವನ್ನು ಉತ್ತಮವಾಗಿ ಸಾಕಿ ಈ ಎಲ್ಲ ತೊಂದರೆಗಳನ್ನು ತಪ್ಪಿಸಿಕೊಳ್ಳುವುದು ಉತ್ತಮ.

ಇದರ ಕುರಿತು ಡಾ.ಎನ್.ಬಿ.ಶ್ರೀಧರ ಅವರ ಯು ಟ್ಯೂಬ್ ವಿಡಿಯೋ ವೀಕ್ಷಿಸಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version