ದಿನದ ಸುದ್ದಿ
ಪಡಿತರ ವಿತರಕರಿಗೆ ಕಮಿಷನ್ ಮೊತ್ತ ಹೆಚ್ಚಳ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ, ಬೆಂಗಳೂರು : ಪಡಿತರ ವಿತರಕರಿಗೆ ಪ್ರತಿ ಕೆ.ಜಿ. ಅಕ್ಕಿಗೆ ಕಮಿಷನ್ ಮೊತ್ತ ಒಂದೂವರೆ ರೂಪಾಯಿ ಹೆಚ್ಚಳಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅನ್ನಭಾಗ್ಯ ದಶಮಾನೋತ್ಸವ ಹಸಿವು ಮುಕ್ತ ಕರ್ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ಕಾಯಕ ದಾಸೋಹದ ಪರಿಕಲ್ಪನೆ ಅನ್ನಭಾಗ್ಯಕ್ಕೆ ಪ್ರೇರಣೆಯಾಗಿತ್ತು. ಆಹಾರ ಉತ್ಪಾದನೆ ಮಾಡುವವರು ಕಾಯಕ ಜೀವಿಗಳು ಹಸಿವಿನಿಂದ ಮಲಗಬಾರದು. 5 ಕೆ.ಜಿ. ಅಕ್ಕಿಗೆ ಬದಲಾಗಿ ಪ್ರತಿ ಕೆ.ಜಿ.ಗೆ 34 ರೂಪಾಯಿಯಂತೆ ಫಲಾನುಭವಿಗಳಿಗೆ ನೇರ ನಗದು ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಉದ್ದೇಶ ರಾಜ್ಯವನ್ನು ಹಸಿವು, ಅನಾರೋಗ್ಯ, ಅನಕ್ಷರತೆ, ನಿರುದ್ಯೋಗ ಮುಕ್ತ ಮಾಡುವುದೇ ಆಗಿದೆ. ಸರ್ಕಾರದ ಯೋಜನೆಗಳಿಂದ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಹಕ ರಕ್ಷಕ ತಪಾಸಣೆ ವಾಹನಗಳಿಗೆ ಚಾಲನೆ ಹಾಗೂ ತೂಕ ಮತ್ತು ಅಳತೆಗಳ ಗ್ರಾಹಕರ ಜಾಗೃತಿ ಕೈಪಿಡಿ ಬಿಡುಗಡೆ ಮಾಡಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243