ಲೈಫ್ ಸ್ಟೈಲ್
ಪಕ್ಷಿ ಪರಿಚಯ | ದರ್ಜಿಹಕ್ಕಿ
- ಭಗವತಿ ಎಂ.ಆರ್
“ಟುವ್ವಿ! ಟುವ್ವಿ! ಟುವ್ವಿ! ಟುವ್ವಿ!
ಎಂದು ಹಕ್ಕಿ ಕೂಗಿತು
ಅದರ ಹಾಡು ಬಂದು
ಎನ್ನ ಎದೆಯ ಗೂಡು ತಾಗಿತು” ಕುವೆಂಪುರವರ ಟುವ್ವಿಹಕ್ಕಿಯ ಬಗೆಗಿನ ಕವನ ಪ್ರಸಿದ್ದವಾಗಿದೆ.
ಸದಾ ಚಟುವಟಿಕೆಯ ಹಕ್ಕಿಗಳಲ್ಲಿ ಈ ಸಿಂಪಿಗ ಕೂಡಾ ಒಂದು. ಇದರ ಇನ್ನೊಂದು ಹೆಸರು ದರ್ಜಿಹಕ್ಕಿ. ಕೆಂಪು ಕಣ್ಣು, ಕೆಂಪಿನ ಸುತ್ತ ಕಪ್ಪು ಉಂಗುರ ಮತ್ತು ಬಾಲ ಮತ್ತು ಬೆನ್ನಿನ ಭಾಗ ನಸು ಹಳದಿ, ಅಥವ ಪಾಚಿಯ ಬಣ್ಣ ಎಂದರೆ ಹೆಚ್ಚು ಸೂಕ್ತವಾದೀತು. ಹತ್ತಿರದಿಂದ ನೋಡಿದಾಗ ಇದು ದರ್ಜಿ ಹಕ್ಕಿ ಅಂತ ಕೂಡಲೇ ಗುರುತಿಸಬಹುದು.
ಇಲ್ಲವಾದರೆ ಅದು ಹಾರುವಾಗ, ಓಡಾಡುವಾಗ ಹೆಚ್ಚುಕಮ್ಮಿ ಸುವ್ವಿಯ (Ashy Prinia) ತರವೇ ಕಾಣುತ್ತದೆ. ದೂರದಿಂದ ನೋಡಿದಾಗ ಚಿಟ್ಟೆಯೊಂದು ಹಾರಾಡಿದಂತೆಯೇ ಕಾಣುತ್ತದೆ. ಇದು ಎಲೆಗಳನ್ನು ಹೊಲಿದು ಜೋಳಿಗೆಯಂತೆ ಮಾಡಿ ಅದರೊಳಗೆ ಗೂಡು ಕಟ್ಟುತ್ತದೆ. ಗೂಡಿನ ಮೆತ್ತನೆಯ ಗಾದಿಯ ಮೇಲೆ ಸಮುದ್ರ ನೀಲಿಯ ಬಣ್ಣದ ಮೇಲೆ ಅಲ್ಲಲ್ಲಿ ಕಪ್ಪು ಕಲೆಗಳಂಥ ಮೊಟ್ಟೆಗಳನಿಡುತ್ತವೆ.
ಬಹು ಸಂಕೋಚದ ಹಕ್ಕಿ ಇದು. ಪೊದೆಗಳ, ಎಲೆಗಳ ನಡುವೆ ಸೇರಿಕೊಂಡರೆ ಕಾಣುವುದು ಕಷ್ಟ. ಹತ್ತಿರದಲ್ಲಿದ್ದಾಗ ಅದರ ದೇಹದ ಕಾಲುಭಾಗ ಮಾತ್ರ ಕಾಣುವುದು. ಎಲೆ ಅಲುಗಾಡಿದಂತಾದಾಗ ನೋಡುವಷ್ಟರಲ್ಲಿ ಹಾರಿ ಹೋಗಿರುತ್ತದೆ. ಮನುಷ್ಯ ಇದನ್ನು ನೋಡಿಯೇ ಹೊಲಿಗೆ ಕಲಿತಿರಬೇಕು.
ದರ್ಜಿಹಕ್ಕಿಯೆಂಬುದು ಇದರ ಅನ್ವರ್ಥನಾಮ. ಸಾಮಾನ್ಯವಾಗಿ ಜನವಸತಿ ಇರುವ ಕಡೆ, ಪೊದೆಗಳಲ್ಲಿ, ಉದ್ಯಾನವನಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. “ಸಂತೆಯೊಳಗೊಂದು ಮನೆಯ ಮಾಡಿ” ಅಕ್ಕಮಹಾದೇವಿಯ ವಚನವನ್ನು ನೆನೆಪಿಸುತ್ತದೆ ಈ ಪುಟ್ಟಹಕ್ಕಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243