ದಿನದ ಸುದ್ದಿ
ಕೊಪ್ಪಳ | ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದ್ದ ಜಿಲ್ಲೆಯ ನಾಗರಿಕರಲ್ಲಿ ಕೊರೋನಾ ಲಕ್ಷಣಗಳು ಇಲ್ಲ: ಜಿಲ್ಲಾಧಿಕಾರಿ
ಸುದ್ದಿದಿನ,ಕೊಪ್ಪಳ : ಮಾರ್ಚ್ ತಿಂಗಳಲ್ಲಿ ದೆಹಲಿಯ ಹಜರತ್ ನಿಜಾಮುದ್ದಿನ್‌ನಲ್ಲಿ ಆಯೋಜಿಸಲಾಘಿದ್ದ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದ್ದ ಜಿಲ್ಲೆಯ ನಾಗರಿಕರಲ್ಲಿ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿದ್ದ ಬಹುತೇಕ ಜನರಿಗೆ ಕೋವಿಡ್-19 ಸೋಂಕು ತಗುಲಿರುವ ಸಾಧ್ಯತೆಗಳು ಕಂಡುಬಂದಿದ್ದರಿಂದ, ಸರ್ಕಾರವು ಮಾರ್ಚ್ ತಿಂಗಳಿನಲ್ಲಿ ಹಜರತ್ ನಿಜಾಮುದ್ದೀನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವಾಸವಿರುವ ಸಾರ್ವಜನಿಕರ ಹೆಸರಿನಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗಳ ಲೋಕೇಷನ್‌ಗಳ ಬಗ್ಗೆ ಮಾಹಿತಿಯನ್ನು ನೀಡಿತ್ತು.
ಈ ಪೈಕಿ ಜಿಲ್ಲೆಗೆ ಸಂಬಂಧಿಸಿದ ಒಟ್ಟು 14 ಜನರ ನೋಂದಾಯಿತ ಮೊಬೈಲ್ ಸಂಖ್ಯೆಗಳ ವಿಳಾಸವನ್ನು ಪತ್ತೆಹಚ್ಚಲಾಗಿದ್ದು, ಅವರಲ್ಲಿ ಯಾರೂ ತಬ್ಲಿಗಿ ಜಮಾತ್‌ನಲ್ಲಿ ಭಾಗವಹಿಸಿರುವುದಿಲ್ಲ. 14 ಮೊಬೈಲ್ ಸಂಖ್ಯೆಗಳ ಪೈಕಿ 3 ಜನರು ಕೊಪ್ಪಳ ಜಿಲ್ಲೆಯ ವಿಳಾಸದಿಂದ ಸಿಮ್‌ಕಾರ್ಡ್ ಪಡೆದುಕೊಂಡಿದ್ದು, ಅವರುಗಳು ಅನ್ಯ ರಾಜ್ಯಗಳಲ್ಲಿ ವಾಸವಾಗಿರುತ್ತಾರೆ. 3 ಪ್ರಕರಣಗಳಲ್ಲಿ ಕೊಪ್ಪಳ ಜಿಲ್ಲೆಯ ಸ್ಥಳೀಯರು ತಮ್ಮ ಗುರುತಿನ ಚೀಟಿಯನ್ನು ಕೊಟ್ಟು ಅನ್ಯ ರಾಜ್ಯದ ಜನರಿಗೆ ಸಿಮ್‌ಕಾರ್ಡ್ಗಳನ್ನು ಕೊಡಿಸಿರುತ್ತಾರೆ.
ಆದರೆ ಅವರುಗಳು ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿರುವುದಿಲ್ಲ. ಬಾಕಿ ಉಳಿದ 8 ಪ್ರಕರಣಗಳಲ್ಲಿ ಸಂಬಂಧಿಸಿದವರ ಮನೆಗಳಿಗೆ ಭೇಟಿ ನೀಡಿ ಹಜರತ್ ನಿಜಾಮುದ್ದೀನ್ ಪ್ರದೇಶಕ್ಕೆ ಭೇಟಿ ನೀಡಿದವರ ಹಾಗೂ ಅವರ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆಯನ್ನು ಮಾಡಲಾಗಿದೆ. ತಪಾಸಣೆ ನಡೆಸಿದ ಎಲ್ಲಾ ಸದಸ್ಯರಿಗೆ ಯಾವುದೇ ರೋಗ ಲಕ್ಷಣಗಳು ಕಾಣಿಸದ ಕಾರಣ ಗೃಹ ನಿರ್ಬಂಧನ ಮಾಡಿ, ಮನೆಗೆ ಹೋಮ್ ಕ್ವಾರಂಟೈನ್ ಸ್ಟಿಕ್ಕರ್‌ನ್ನು ಅಂಟಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243