ಲೋಕಾರೂಢಿ
‘ಈಗಲೂ ಇಲ್ಲ ಸರ್ವರಿಗೂ ಆರೋಗ್ಯ.,ವೈದ್ಯರಿಲ್ಲದ ಲೋಕ ನರಕ..!’
- ಸೋಮನಗೌಡ.ಎಸ್.ಎಂ, ಕಟ್ಟಿಗೆಹಳ್ಳಿ,9945986049
ಒಮ್ಮೆ ಕಣ್ಮುಚ್ಚಿ ಊಹಿಸಿಕೊಳ್ಳೋಣ…ಈಗ ಇಡೀ ವಿಶ್ವಕ್ಕೆ ಅಂಟಿರುವ ಕೊರೋನಾ ಮಹಾಮಾರಿಗೆ ವೈದ್ಯರು ಚಿಕಿತ್ಸೆ ಕೊಡದಿದ್ದರೆ ಏನಾಗಬಹುದು? ಅಬ್ಬಾ..! ಇಂತಹ ಒಂದು ಸಣ್ಣ ಯೋಚನೆ ಮನದ ಮೂಲೆಯಿಂದ ನುಸುಳಿ ಮೆದುಳಿಗೆ ತಟ್ಟಿದರೆ ಸಾಕು ಮೈ ಜುಮ್ಮೆನ್ನುತ್ತೆ ಅಲ್ಲವೇ. ವೈದ್ಯಕೀಯ ಸೇವೆ ಇಲ್ಲದ ಲೋಕ ಈ ಧರೆಯಲ್ಲಿ ಎಲ್ಲೆಲ್ಲಿಯೂ ನರಕ.
ಚೀನಾದ ಕೊರೋನಾ ವೈರಸ್ (cov) ಸಾಮಾನ್ಯವಾಗಿ ನೆಗಡಿ ಹಾಗೂ ಶ್ವಾಸಕೋಶದ ಸೋಂಕಿಗೆ ಕಾರಣವಾಗುವ ವೈರಸ್. ಆದರೆ ಈಗ ಚೀನಾದದಲ್ಲಿ ಕಾಣಿಸಿಕೊಂಡಿರುವ ವೈರಸ್ ಜಗತ್ತಿನ 196 ದೇಶಗಳಿಗೂ ಹಬ್ಬಿ ಮನುಕುಲವನ್ನೇ ನಡುಗಿಸುತ್ತಿದೆ. ಸಣ್ಣವರಿಂದ ಹಿರಿಯರವರೆಗೆ ಯಾರು ಕೇಳಿದರೂ ಕೊರೋನಾ ಅಂದರೆ ಸಾಕು ಥಟ್ಟನೆ ತಿರುಗುತ್ತಾರೆ. ಆ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಕಿವಿಗೊಟ್ಟು ಲಾಲಿಸುತ್ತಾರೆ. ದೂರವಾಣಿ ಕರೆಮಾಡಿ ಈ ಮಹಾಮಾರಿಗೆ ಡಾಕ್ಟರ್‍ಗಳು ಔಷಧಿ ಕಂಡು ಹಿಡಿದಿದ್ದಾರಾ? ಎಂದು ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಜನರನ್ನು ತಲ್ಲಣ ಮೂಡಿಸಿದೆ ಈ ಕೊರೋನಾ. ಎಲ್ಲೆಲ್ಲೂ ಲಾಕ್‍ಡೌನ್. ಎಲ್ಲಾ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲೂ ಇದರದ್ದೇ ಸುದ್ದಿ. ಶಂಕಿತ-ಸೋಂಕಿತ ಮತ್ತು ಸಾವು. ಸಾವು ಎಷ್ಟು? ಎಲ್ಲಿ? ಯಾವಾಗ? ಯಾಕೆ ಎನ್ನುವ ವಿಸೃತ ವರದಿಗಳ ಬರಪೂರ ಸುದ್ದಿಗಳ ಹೂರಣ.
ಗಾರೆ ಕೆಲಸ, ಮಣ್ಣಿನ ಕೆಲಸ ಮಾಡಿದವರು ಅರೆ ಬರೆ ಕೈತೊಳೆದುಕೊಂಡು ಗುಕ್ಕು ನುಂಗುತ್ತಿದ್ದ ಜನ ಈಗ ಸೋಪು, ಸ್ಯಾನಿಟೈಸರ್ ಹಾಕಿ ತಮ್ಮ ಕೈಗಳನ್ನು ತಿಕ್ಕಿ ತಿಕ್ಕಿ ತೊಳೆಯುತ್ತಾರೆ. ಸಾಫ್ಟ್‍ವೇರ್ ಮಂದಿಯಿಂದ ಹಾರ್ಡ್‍ವೇರ್ ಮಂದಿ ತಮ್ಮ ಕರಗಳನ್ನು ಉಜ್ಜಿ ಉಜ್ಜಿ ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಇದಕ್ಕೆಲ್ಲಾ ಕಾರಣ ಕೊರೋನಾ ಸೃಷ್ಟಿಸಿದ ತಲ್ಲಣ.
ವೈದ್ಯನ ಸಾವಿನ ಕರೆ ಗಂಟೆಗೆ ಎಚ್ಚರವಹಿಸಬೇಕಿತ್ತು. ಕೊರೋನಾ ಸೋಂಕು ಹರಡುವಿಕೆ ಕುರಿತು ಮೊದಲು ಚೀನಾದಲ್ಲಿ ಎಚ್ಚರಿಕೆ ಗಂಟೆ ಬಾರಿಸಿದ್ದ ಎಂಟು ಮಂದಿ ಪೈಕಿ ಬಬ್ಬರಾದ ಡಾಕ್ಟರ್ ಲೀ ವೆನ್‍ಲಿಂಗ್ ಮೃತಪಟ್ಟಾಗ ಸಾಂಕ್ರಾಮಿಕ ರೋಗವೊಂದು ಹರಡುತ್ತಿದೆ ಎಂದು ಸಹ ವೈದ್ಯರಿಗೆ ಮತ್ತು ವುಹಾನ್ ಬಹುತೇಕ ಆಸ್ಪತ್ರೆಗಳ ವೈದ್ಯರಿಗೆ ಲೀ ಕಳೆದ ವರ್ಷ ಡಿಸೆಂಬರ್ ನಲ್ಲಿ ಎಚ್ಚರಿಕೆ ನೀಡಿದ್ದರು.
ಹುಬೀ ಪ್ರಾಂತ್ಯದಲ್ಲಿ ಈ ಸೋಂಕು ಹರಡಲಿದೆ. ಆದಷ್ಟು ಬೇಗ ಮುನ್ನಚ್ಚರಿಕೆ ವಹಿಸಿ ಎಂದು ಲೀ ವೆನ್‍ಲಿಂಗ್ ಚೀನಾದ ಜನಪ್ರಿಯ ವೀಚ್ಯಾಟ್ ಆಪ್‍ನಲ್ಲಿ ತಮ್ಮ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಗ್ರೂಪ್‍ನಲ್ಲಿ ಸಂದೇಶ ಹಾಕಿದ್ದರು. 2003ರಲ್ಲಿ ವಿಶ್ವದ್ಯಂತ 800 ಜನರನ್ನು ಬಲಿಪಡೆದ ಸಾರ್ಸ್ ಮಾದರಿಯ ಈ ಭಯಾನಕ ಸೋಂಕು ‘ಕೊರೋನಾ’ ಎಂದು ಎಚ್ಚರಿಕೆ ಸಂದೇಶ ಜನರಿಗೆ ರವಾನಿಸಿದರು. ಆದರೆ ಅಲ್ಲಿನ ಪೊಲೀಸರು ಲೀ ಎಂಬ ವೈದ್ಯ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿಕೊಂಡು ಎಚ್ಚರಿಕೆ ನೀಡಿದ್ದರು. ಆದರೆ ಇಂದು ಇಡೀ ಚೀನಾ ಆ ವೈದ್ಯನನ್ನು ನೆನೆಯುತ್ತಿದೆ. ವಿಶ್ವದ ಅನೇಕ ದೇಶಗಳ ಜನರಿಗೆ ಕೊರೋನಾ ಕರೆ ಗಂಟೆಯ ಎಚ್ಚರಿಕೆ ನೀಡಿದ್ದ ಲೀ ಅವರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆದರೆ ಡಾ. ಲೀ ವೆನ್‍ಲಿಂಗ್ ನಮ್ಮೊಂದಿಗಿಲ್ಲ. ಎಚ್ಚರಿಕೆ ಕೊಟ್ಟು ಸಾವಿನ ಮನೆ ಸೇರಿದ್ದಾರೆ. ಆದರೆ ಈಗ ಕೊರೋನಾ ಸೋಂಕು ವಿಶ್ವವನ್ನೇ ಬಾಧಿಸುತ್ತಿದೆ.
ಕೈ ಮೀರಿದ ಮೇಲೆ ಚಿಂತಿಸಿ ಫಲವೇನು?
ಕೋವಿಡ್-19 ರೋಗಕ್ಕೆ ವಿಶ್ವ ವಿಖ್ಯಾತ ದೇಶಗಳಾದ ಚೀನಾ, ಅಮೆರಿಕ, ಇಟಲಿ, ಫ್ರಾನ್ಸ್, ದಕ್ಷಿಣ ಕೊರಿಯಾ, ಜರ್ಮನಿ, ಸ್ವಿಟ್ಜರ್ಲೆಂಡ್, ನೆದರ್‍ಲೆಂಡ್ಸ್ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳುಳ್ಳು, ಅತ್ಯಂತ ಜಾಣರಿರುವ ಜನರೇ ಮಹಾಮಾರಿಯಿಂದ ತಪ್ಪಸಿಕೊಳ್ಳಲು ಸಾಧ್ಯವಾಗಿಲ್ಲ. ಲೆಕ್ಕವಿಲ್ಲದಷ್ಟು ಹೆಣಗಳು ಹುರುಳುತ್ತಿವೆ. ಕೊರೋನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಾವಿರಾರು ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಂತಂಕ ವ್ಯಕ್ತಪಡಿಸಿದ್ದಾರೆ. ಸಾಮಾನ್ಯರಿಂದ ಅಸಮಾನ್ಯರಿಗೂ ಕೊರೋನಾದ ಸೃಷ್ಟಿಸಿದ ಭೀತಿಗೆ ನಲುಗಿ ಹೋಗಿದ್ದಾರೆ. ಇಟಲಿಯಲ್ಲಿ ವೈದ್ಯರು, ಜನಸಾಮಾನ್ಯರು ಎನ್ನುವ ವ್ಯತ್ಯಾಸಗಳಿಲ್ಲದೇ ಆಸ್ಪತ್ರೆ ಸೇರುತ್ತಿದ್ದಾರೆ.
ಸಮುದಾಯಕ್ಕೆ ಹಬ್ಬಿದ ಕೊರೋನಾ ವೈರಸ್ ಮೀಟರ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಪಾನ್‍ನ ಪ್ರಸಿದ್ಧ ಹಾಸ್ಯನಟ ಕೇನ್ ಶಿಮುರಾ ಮೃತಪಟ್ಟಿದ್ದಾರೆ. ಬ್ರಿಟನ್ ರಾಜ ಕುಮಾರ ಚಾಲ್ರ್ಸ್ ಕೋವಿಡ್‍ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹಾಗೂ ಅಲ್ಲಿನ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‍ಕಾಕ್ ಅವರು ಕೋವಿಡ್ ಸೋಂಕು ತಗುಲಿದೆ. ವಿಶ್ವದಲ್ಲಿ 6 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಟ್ಟಿದೆ. ಜಗತ್ತು ನರಕವಾಗುತ್ತಿದೆ. ಇಷ್ಟೆಲ್ಲಾ ವೈದ್ಯರು ಹರಸಾಸಪಟ್ಟರು ನಿಯಂತ್ರಣಕ್ಕೆ ಬಾರದ ಕೊರೋನಾ ರೋಗ ವೈದ್ಯರು ಕೈಚಲ್ಲಿ ಕುಳಿತು ಬಿಟ್ಟಿದ್ದರೆ ಏನಾಗಬಹುದು ಯೋಚಿಸಿ!
ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಭಾರತದಲ್ಲಿ ಸವಾಲು!
ಜಾಗತಿಕ ಆರೋಗ್ಯ ಸೇವೆ ಲಭ್ಯತೆ ಮತ್ತು ಗುಣಮಟ್ಟ ಸೂಚ್ಯಾಂಕದಲ್ಲಿ ಭಾರತವು 145ನೇ ಸ್ಥಾನದಲ್ಲಿದೆ. 1990ರ ಪರಿಸ್ಥಿತಿಗೆ ಹೋಲಿಸಿದರೆ 2020ರಲ್ಲಿ ಭಾರತದಲ್ಲಿ ಆರೋಗ್ಯ ಸೇವಾ ಲಭ್ಯತೆ ಮತ್ತು ಗುಣಮಟ್ಟ ಎರಡೂ ಅರ್ಧದಷ್ಟು ಸುಧಾರಿಸಿದೆ. ಆದರೆ ನೆರೆಯ ಕೆಲವು ದೇಶಗಳಲ್ಲಿ ಪರಿಸ್ಥಿತಿ ಭಾರತಕ್ಕಿಂತ ಉತ್ತಮವಾಗಿದೆ ಎಂದು ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ’ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ. 195 ದೇಶಗಳಲ್ಲಿ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಿದಾಗ ನಮ್ಮ ದೇಶದಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟ 145ನೇ ಸ್ಥಾನದಲ್ಲಿದೆ ಎಂದು ವರದಿ ನೀಡಿತ್ತು.
ಅಸಂಖ್ಯಾತ ಜನರನ್ನು ಹೊಂದಿರುವ ವಿಶ್ವದ ಎರಡನೇ ದೊಡ್ಡ ಜನಸಂಖ್ಯಾ ರಾಷ್ಟ್ರವಾದ ಭಾರತದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳದ್ದೇ ಭಾರಿ ಸಮಸ್ಯೆ. ಮಧುಮೇಹ, ಕ್ಷಯ, ಹೃದಯರೋಗ, ಪಾಶ್ವವಾಯು, ಕ್ಯಾನ್ಸರ್, ಕಿಡ್ನಿ ಸಂಬಂಧಿಸಿದ ಕಾಯಿಲೆಗಳು ಜನರನ್ನು ಭಾಧಿಸುತ್ತಿವೆ. ಇಂತಹ ರೋಗಿಗಳಿಗೆ ಚಿಕಿತ್ಸೆಗೆ ಆಸ್ಪತ್ರೆಗಳು ಸಾಲುತ್ತಿಲ್ಲ. ಈಗ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಸೋಂಕಿನ ಸಂಖ್ಯೆ ಭಾರತವನ್ನು ಮಂದಗತಿಯಲ್ಲಿ ವ್ಯಾಪಿಸುತ್ತಿದೆ. ಮುಂದೆ ಇದರ ವಿಸ್ತಾರ ಬ್ರಹ್ಮರಾಕ್ಷನ ರೂಪ ತಾಳಲಿದೆ. ಸ್ವಲ್ಪ ಯಾಮಾರಿದರೂ ಕಾದಿದೆ ದೊಡ್ಡ ಅಪಾಯ ಎಂದು ಜಾನ್ಸ್ ಹಾಪಿನ್ಸ್ ವಿವಿ, ನವದೆಹಲಿಯ ದಿ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ ಅಂಡ್ ಪಾಲಿಸಿ (ಸಿಡಿಡಿಇಪಿ) ಸಹಯೋಗದಲ್ಲಿ ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಿದೆ. ದೇಶದಲ್ಲಿ ಇನ್ನೂ ಮೂರ್ನಾಲ್ಕು ತಿಂಗಳು ಕೊರೋನಾ ಸೋಂಕು ಹೆಚ್ಚಾಗಲಿದೆ ಎಂದು ಆಂತಕಕಾರಿ ವರದಿ ಬಿತ್ತಿರಿಸಿದೆ.ಭಾರತದಲ್ಲಿರುವ ಆಸ್ಪತ್ರೆಗಳಲ್ಲಿ ಇರುವ ವೈದ್ಯಕೀಯ ಸೌಲಭ್ಯಗಳಿಗೆ ಕೊರೋನಾ ರೋಗಿಗಳು ತುಂಬಿಕೊಂಡರೆ ಆಸ್ಪತ್ರೆಗಳು ಸಾಲುತ್ತವೆಯೇ? ಎಂದು ಯೋಚಿಸಿದರೆ ಭವಿಷ್ಯದ ದಿನಗಳು ಭಯಾನಕವಾಗಲಿವೆ ಎಂದರೆ ತಪ್ಪಾಗಲಿಕ್ಕಿಲ್ಲ.
ಭಾರತದಲ್ಲಿರುವ ರೋಗಿಗಳಿಗೆ ಸರಾಸರಿ ವೈದ್ಯರೆಷ್ಟು? ಕೊರೋನಾದಂತ ಭಯಾನಕ ರೋಗ ನಿರ್ಮೂಲನೆ ಮಾಡಲು ಆರ್ಥಿಕವಾಗಿ ಎಷ್ಟೇ ಬಲಿಷ್ಠವಾಗಿದ್ದರೂ ವೈದ್ಯರ ನೆರವು ಅತ್ಯಗತ್ಯ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಮತ್ತು ಯುನಾನಿ ವೈದ್ಯ ಪದ್ಧತಿಗಳನ್ನು ಒಟ್ಟಾಗಿ ಪರಿಗಣಿಸಿದರೆ ನಮ್ಮ ದೇಶದಲ್ಲಿ 893 ರೋಗಿಗಳಿಗೆ ಇರುವುದು ಒಬ್ಬ ವೈದ್ಯ ಮಾತ್ರ! ದೇಶದಲ್ಲಿರುವ ವೈದ್ಯ-ರೋಗಿ ಅನುಪಾತದ ವಿವರಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಳೆದ ವರ್ಷ ಲೋಕಸಭೆಗೆ ನೀಡಿದ ವರದಿಯಲ್ಲಿ ಬಹಿರಂಗವಾಗಿದೆ. 9.60 ಲಕ್ಷ ದೇಶದಲ್ಲಿರುವ ಅಲೋಪಥಿ ವೈದ್ಯರ ಸಂಖ್ಯೆ ಅದರಲ್ಲಿ 7.68 ಲಕ್ಷ ಸೇವೆಗೆ ಲಭ್ಯವಿರುವ ಅಲೋಪಥಿ ವೈದ್ಯರು. (ಅಂದರೆ ಶೇ.80 ರಷ್ಟು). 6.78 ಲಕ್ಷ ಆಯುಷ್ಮಾನ್ ವೈದ್ಯರ ಸಂಖ್ಯೆ. 7.10 ಲಕ್ಷ ದೇಶದಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕರ (ಎಎಸ್‍ಎಂ) ಸಂಖ್ಯೆ. ಶೇ.80ರಷ್ಟು ಶುಶ್ರೂಷಕರು ಮತ್ತು ಶೇ.60 ರಷ್ಟು ಪ್ರಸೂತಿ ಸಹಾಯಕಿಯರು ಸೇವೆಗೆ ಲಭ್ಯರಿದ್ದಾರೆ ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.
ಬಿಹಾರದಲ್ಲಿ ಒಬ್ಬ ವೈದ್ಯನಿಗೆ-28,391 ರೋಗಿಗಳು ಸೇವೆಗೆ ಲಭ್ಯರಿದ್ದಾರೆ. ಉತ್ತರ ಪ್ರದೇಶದಲ್ಲಿ ಸರಾಸರಿ 19,962 ರೋಗಿಗಳಿಗೆ ಒಬ್ಬ ವೈದ್ಯನಿದ್ದಾನೆ. ಜಾರ್ಖಾಂಡ್ ರಾಜ್ಯದಲ್ಲಿ 18,519 ಒಬ್ಬ ವೈದ್ಯನಷ್ಟೇ ಲಭ್ಯ. ಮಧ್ಯಪ್ರದೇಶದಲ್ಲಿ 17,192 ರೋಗಿಗಳಿಗೆ ಒಬ್ಬ ವೈದ್ಯ ಸೇವೆಗೆ ಸಿಗುತ್ತಾನೆ. ಮಹಾರಾಷ್ಟ್ರದಲ್ಲಿ 16,996 ರೋಗಿಗಳಿಗೆ ಒಬ್ಬ ವೈದ್ಯನ ಸೇವೆ, ಛತ್ತೀಸ್‍ಗಡದಲ್ಲಿ 15,916 ಜನ ರೋಗಿಗಳಿಗೆ ಒಬ್ಬ ವೈದ್ಯನು ಲಭ್ಯವಿರುತ್ತಾರೆ. ಕರ್ನಾಟಕದಲ್ಲಿ 13,456 ರೋಗಿಗೆ ಒಬ್ಬ ವೈದ್ಯನು ಲಭ್ಯವಿರುತ್ತಾರೆ. ಕಡೆಯದಾಗಿ ಗೋವಾದಲ್ಲಿ 3,883 ರೋಗಿಗಳಿಗೆ ಒಬ್ಬ ವೈದ್ಯನ ಸೇವೆ ಲಭ್ಯವಿದೆ.
ಅಂದರೆ ಯೋಚಿಸಿ ಕೊರೋನಾ ರೋಗಕ್ಕೆ ಮದ್ದೇ ಇಲ್ಲದ ಈ ಹೊತ್ತಿನಲ್ಲಿ ಲಾಕ್‍ಡೌನ್ ಅನ್ನು ಸಂಪೂರ್ಣವಾಗಿ ಅನುಸರಿಸದೇ ಮತ್ತು ಉಷ್ಣಾಂಶ ಮತ್ತು ತೇವಾಂಶದಲ್ಲಿ ಯಾವುದೇ ಬದಲಾವಣೆಯಾಗಿ 13 ಕೋಟಿ ಜನಕ್ಕೆ ಸೋಂಕು ತಗುಲಲಿದೆ ಎಂದು ಸಿಡಿಡಿಇಪಿ ವರದಿ ಅಂದಾಜಿಸಲಾಗಿದೆ. ಅಬ್ಬಾ ಈ ಲೆಕ್ಕಾಚಾರಗಳೆಲ್ಲವೂ ನಿಜವಾದರೆ ಎಲ್ಲೆಲ್ಲೂ ರೋಗಿಗಳ ಆರ್ಥನಾದ ಕೇಳಿಸುತ್ತದೆ.ಆಸ್ಪತ್ರೆಗಳೆಲ್ಲವೂ ತುಂಬಿ ತುಳುಕುತ್ತವೆ. ವೆಂಟಿಲೇಟರ್ ಸಮಸ್ಯೆ, ವೈದ್ಯರ ಕೊರತೆ, ಬೆಡ್‍ಗಳ ಕೊರತೆ, ಔಷಧಗಳ ಕೊರತೆ ಉಂಟಾದಾಗ ಈ ದೇಶದಲ್ಲಿನ ರೋಗಿಗಳ ಪರಿಸ್ಥಿತಿಯನ್ನು ಊಹಿಸಿಕೊಂಡರೆ ಎಂತಹ ಭಯಾನಕ ಸನ್ನಿವೇಶ ಅನ್ನಿಸುವುದಿಲ್ಲವೇ?
ಕರ್ನಾಟಕದಲ್ಲಿ ಸರ್ಕಾರಿ ವೈದ್ಯರಿಗೆ ಬರ!
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನೋಂದಾಯಿತ ವೈದ್ಯರಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆ ಕಾಡುತ್ತಿದೆ. ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಹೇಳುತ್ತದೆ. ಸರಾಸರಿ 13,456 ರೋಗಿಗಳಿಗೆ ಒಬ್ಬ ವೈದ್ಯರಿದ್ದಾರೆ. ಇದು ರಾಷ್ಟ್ರೀಯ ವೈದ್ಯ-ರೋಗಿಗಳ (11,082:1) ಸರಾಸರಿಗಿಂತ ಹೆಚ್ಚು ಎಂದು ವರದಿಯಯಲ್ಲಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರಿಗೆ ನಿರಾಸಕ್ತಿ. ನಗರಪ್ರದೇಶಗಳಲ್ಲಿ ಖಾಸಗಿ ಆಸ್ಪತ್ರೆಗಳತ್ತ ಹೆಚ್ಚಿನ ವೈದ್ಯರ ಒಲವು. ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 2,236 ವೈದರಷ್ಟೇ ಸೇವೆ.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಂದಾಜು 500 ತಜ್ಞ ವೈದ್ಯರಷ್ಟೇ ಲಭ್ಯ. ಈ ಎಲ್ಲಾ ಅಂಕಿ ಅಂಶಗಳನ್ನು ಗಮನಿಸಿದರೆ ಚೀನಾ ಮತ್ತು ಪಾಕಿಸ್ತಾನದಲ್ಲಿ ವೈದ್ಯ-ರೋಗಿಯ ಸರಾಸರಿ ಮಟ್ಟ ಉತ್ತಮವಾಗಿದೆ. ಸರ್ಕಾರಗಳು ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ’ ಬದಲು ಸಮಸ್ಯೆಗೆ ಪರಿಹಾರ ಹುಡುಗಲು ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತಂದರಷ್ಟೇ ಈ ದೇಶವನ್ನು ಕೋವಿಡ್‍ನಿಂದ ರಕ್ಷಣೆ ಮಾಡಲು ಸಾಧ್ಯ.
ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ತಂದ ಲಾಕ್‍ಡೌನ್ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಸಮುದಾಯಕ್ಕೆ ಹಬ್ಬಿ ವೈದ್ಯನ ಮನಃಸ್ಥಿತಿ ಏನಾದೀತು.‘ವೈದ್ಯೋ ನಾರಾಯಣೋ ಹರಿ’ ಎಂದು ಶ್ರೀಮನ್ ಭಗವಾನ್ ನಾರಾಯಣನನ್ನು ಪ್ರಾರ್ಥಿಸುತ್ತಿರಬೇಕಷ್ಟೆ. ಯಾರೂ ನಮ್ಮನ್ನು ರಕ್ಷಿಸಲಾರರು. ಸಾರ್ವಜನಿಕರೇ ಎಚ್ಚರ ಸಮುದಾಯಕ್ಕೆ ಕೊರೋನಾ ಸೋಂಕು ತಗುಲದಂತೆ ಎಚ್ಚರವಹಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243