ದಿನದ ಸುದ್ದಿ
ದಲಿತ ರಾಜಕೀಯ – ದಲಿತ ಚಳವಳಿಯ ಚಿಲ್ಲರೆ ಅಂಗಡಿಗಳ ಜೋರು ವ್ಯಾಪಾರದ ಈ ಕಾಲದಲ್ಲಿ
- ಬಿ.ಎಲ್.ರಾಜು, ಪ್ರಾಧ್ಯಾಪಕರು, ಸಾಗರ
ನಾವು ನಮಗೆ ಕೇಳಿಕೊಳ್ಳಲೇಬೇಕಾದ ಕೆಲವು ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ. ಭೂಮಿ, ಬಂಡವಾಳ ಮತ್ತು ರಾಜಕೀಯಾಧಿಕಾರಗಳನ್ನು ಮೇಲ್ಜಾತಿಗಳ ಶಾಶ್ವತ ಕಬ್ಜಾದಲ್ಲಿರಿಸಿ ಸೃಷ್ಟಿಸಲಾಗಿರುವಂತದ್ದು ಜಾತಿವ್ಯವಸ್ಥೆ. ಇದೊಂದು ಶುದ್ದ ರಾಜಕೀಯ- ಆರ್ಥಿಕ ಸಂಚು. ಆದರೆ ಅದು ಕಾರ್ಯಾಚರಣೆ ಮಾಡುವುದು ಸಮಾಜದಲ್ಲಿ. ಸಾಮಾಜಿಕ ಕ್ರಿಯೆಗಳ ಮೂಲಕ ಆ ರಾಜಕೀಯ ಆರ್ಥಿಕ ವ್ಯವಸ್ಥೆಗಳು ತಮ್ಮ ಶಕ್ತಿ- ಸಂಪನ್ಮೂಲಗಳನ್ನು ಕೆಳಜಾತಿಗಳಿಗೆ ನಿರಾಕರಿಸುತ್ತವೆ. ಅದರ ಭಾಗವಾಗಿ ಮಡಿ, ಮೈಲಿಗೆ, ಮೇಲು ಕೀಳು, ಶುದ್ಧ ಅಶುದ್ದ ಪರಿಕಲ್ಪನೆಗಳನ್ನು ಗ್ರಹಿಸಬೇಕು.
ಆ ರಾಜಕೀಯ ಆರ್ಥಿಕ ಶಕ್ತಿ ಸಂಪನ್ಮೂಲಗಳ ಮೇಲೆ ದಲಿತರು ಹಿಡಿತ ಸಾಧಿಸಲು ಎಲ್ಲಿಯವರೆಗೆ ಸಾಧ್ಯವಿಲ್ಲವೊ ಅಲ್ಲಿಯವರೆಗೆ ಜಾತಿ ತಾರತಮ್ಯಗಳು ಸಾಯುವುದಿಲ್ಲ. ಜಾತಿ ವ್ಯವಸ್ಥೆ ನಿರಂತರವಾಗಿ ಮುಂದುವರೆಯುತ್ತದೆ.
ಭೂಮಿ ಬಂಡವಾಳ ರಾಜಕೀಯಾಧಿಕಾರಗಳ ನಿರಂತರ ನಿರಾಕರಣೆಗೆ ಒಳಗಾದ ಈ ದೇಶದ ಸಾವಿರಾರು ತಬ್ಬಲಿ ಕೆಳಜಾತಿ ಸಮುದಾಯಗಳಿಗೆ ಬಿಡುಗಡೆಯ ದಾರಿಯನ್ನು ತೋರಿದ್ದು ಬಾಬಾಸಾಹೇಬರು. ಅವರು ತಮ್ಮ ಚಿಂತನೆ, ಕ್ರಿಯೆ ಮತ್ತು ಹೋರಾಟಗಳ ಮೂಲಕ ರೂಢಿಸಿಕೊಟ್ಟ ಜ್ಞಾನಮಾರ್ಗವೇ ದಲಿತರ ಬಿಡುಗಡೆಯ ದಾರಿ. ಇದೇ ದಾರಿಯಲ್ಲಿ ಹೋಗಿದ್ದರೆ ತಳಸಮುದಾಯಗಳು 21 ನೇ ಶತಮಾನದ ಸವಾಲುಗಳನ್ನೆದುರಿಸಲು ಸಜ್ಜಾದ ಜ್ಞಾನಸಮುದಾಯಗಳಾಗಿ ಮೇಲೇಳುವ ಎಲ್ಲಾ ಅವಕಾಶಗಳಿದ್ದವು.
ಆದರೆ ಜ್ಞಾನ ಮಾರ್ಗವನ್ನು ಬಲವಾಗಿ ಅಪ್ಪಿಕೊಂಡು ಮುನ್ನಡೆಯಬೇಕಿದ್ದ ದಲಿತ ಸಮುದಾಯಗಳು ಆತ್ಮವಂಚನೆಯ ವಿರಾಟ್ ಕಾಲಘಟ್ಟದಲ್ಲಿವೆ. ಸವಲತ್ತುಗಳನ್ನ ಪಡೆದುಕೊಂಡ ದಲಿತರಲ್ಲಿನ ಮಧ್ಯಮ ಮತ್ತು ಮೇಲ್ವರ್ಗಗಳು, ಜಾತಿವ್ಯವಸ್ಥೆಯಲ್ಲಿರುವ ಮೇಲ್ಜಾತಿಗಳ ಎಲ್ಲಾ ವ್ಯಸನಗಳನ್ನು ತಮ್ಮದನ್ನಾಗಿಸಿಕೊಂಡಿವೆ. ಆ ವ್ಯಸನಗಳನ್ನೇ ತಮ್ಮ ಶ್ರೇಷ್ಟತೆಯ ಗುರುತುಗಳನ್ನಾಗಿ ಮಾಡಿಕೊಂಡಿವೆ. ಈ ಎರಡೂ ವರ್ಗಗಳಿಗೆ ಬಾಬಾಸಾಹೇಬರು ಕಟ್ಟಿಕೊಟ್ಟ ಮೌಲ್ಯಗಳಾಗಲಿ, ತೋರಿದ ಜ್ಞಾನಮಾರ್ಗವಾಗಲಿ, ಆಧ್ಯಾತ್ಮದ ದಾರಿಯಾಗಲಿ ಬೇಕಿಲ್ಲದ ಸ್ಥಿತಿಗೆ ಬಂದು ನಿಂತಿವೆ. ತಮ್ಮ ಶೋಷಕ ವ್ಯವಸ್ಥೆಯು ಕಟ್ಟಿಕೊಟ್ಟ ಮನುಪ್ರಣೀತ ಆಚರಣೆ, ಸಂಪ್ರದಾಯಗಳಲ್ಲೆ ಸುಖಿಸುತ್ತಿವೆ. ಇದೊಂತರ ಸ್ಟಾಕ್ ಹೋಂ ಸಿಂಡ್ರೋಪಮ್. ಶೋಷಕನನ್ನೆ ಮೆಚ್ಚಿ ಅನುಕರಿಸುವುದು.
ಇದೇ ದಲಿತ ಮಧ್ಯಮ, ಮೇಲ್ವರ್ಗಗಳು ತಮ್ಮ ಅಹಮ್ಮಿಗೆ, ಅನುಕೂಲಕ್ಕೆ, ಸವಲತ್ತುಗಳಿಗೆ ಏಟುಬಿದ್ದಾಗ ಮಾತ್ರ ಅಂಬೇಡ್ಕರರ ಸಂವಿಧಾನದ ಆಸರೆ ಪಡೆಯುತ್ತವೆ.
ಸಂಖ್ಯೆಯಲ್ಲಿ ಬಹುಸಂಖ್ಯಾತರಾದ ದಲಿತರ ಕೆಳ/ಬಡವರ್ಗ ತನ್ನ ಅಸ್ಥಿತ್ವಕ್ಕಾಗಿ ಅನ್ನ, ಸೂರು, ಬಟ್ಟೆಗಳಂತ ಪ್ರಾಥಮಿಕ ಅವಶ್ಯಕತೆಗಳಿಗಾಗಿ ಸಂವಿಧಾನ ಜಾರಿಗೆ ಬಂದು 75 ವರ್ಷಗಳ ನಂತರವೂ ಹೆಣಗಾಡುತ್ತಲೇ ಇವೆ. ಈಗಲೂ ಅವು ಅತ್ಯಂತ ಹೀನಾಯ & ಅನಾಥ ಸ್ಥಿತಿಯಲ್ಲಿವೆ.
ಭಾರತದ ಮಟ್ಟಿಗೆ ತುಂಬಾ ಅತ್ಯಂತ ವೈಚಾರಿಕ ಮಾನವೀಯತೆಯ ನೆಲೆಗಟ್ಟನ್ನ ಪ್ರತಿಪಾದಿಸಿ, ಪ್ರಜಾಪ್ರಭುತ್ವದ ಆತ್ಯಂತಿಕ ಆದರ್ಶಗಳನ್ನು ಸಂವಿಧಾನಕ್ಕೆ ಅಳವಡಿಸಿದ ಬಾಬಾಸಾಹೇಬರ ಚಿಂತನಾಧಾರೆ ಭಾರತೀಯರಿಗೆ ಧಾರಾಳವಾಗಿ ಹರಿದುಬಂದದ್ದು ಅವರ ಮಹಾಪರಿನಿಬ್ಬಾಣದ ನಂತರವೆ.. ಅದರಲ್ಲೂ ಎಪ್ಪತ್ತರ ದಶಕದಲ್ಲಿ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಪ್ರೊ. ಬಿ. ಕೃಷ್ಣಪ್ಪನವರು ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದ ನಂತರ.
ಪ್ರೊ. ಬಿ.ಕೆ.ಯವರು ಬಾಬಾಸಾಹೇಬರ ಚಿಂತನೆಯನ್ನು ತನ್ನ ಭಾಷಣ, ಹಾಡು, ಹೋರಾಟ, ಪ್ರತಿಭಟನೆಗಳ ಭಾಗವಾಗಿಸಿಕೊಂಡು ರಾಜ್ಯದ ಪ್ರತಿ ದಲಿತರ ಕೇರಿಗೆ ಕೊಂಡೊಯ್ದರು. ಸಾವಿರಾರು ವರ್ಷ ಅಸ್ಪೃಶ್ಯತೆಯ ಕಳಂಕ ಹೊತ್ತು ಗುಲಾಮಗಿರಿಯಲ್ಲೇ ಉಸಿರಾಡಿಕೊಂಡಿದ್ದ ಜನರ ನರನಾಡಿಗಳಿಗೆ ಬಾಬಾಸಾಹೇಬರ ಚಿಂತನೆಯನ್ನು ತುಂಬಿದರು, ಆ ಮೂಲಕ ರಾಜಕೀಯ ಪ್ರಜ್ಞೆ ಮತ್ತು ಪ್ರತಿಭಟನೆಯ ಕೆಚ್ಚನ್ನು ಜಾಗೃತಗೊಳಿಸಿದರು.
ದಲಿತರ ನೋವಿಗಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಪಾಲಿಗೂ ಭರವಸೆ ತುಂಬಿದವರು ಪ್ರೊ. ಬಿ.ಕೆ.
ಆ ಹೊತ್ತಿಗೆ ಎಚ್ಚೆತ್ತ ದಲಿತ ಅಕ್ಷರಸ್ಥ ತಲೆಮಾರು ಪ್ರೊ. ಬಿ. ಕೃಷ್ಣಪ್ಪನವರ ಹೋರಾಟದ ಸಾಗರಕ್ಕೆ ಹರಿದು ಬಂತು. ಅವರ ಅದಮ್ಯ ಹೋರಾಟದ ಕುಲುಮೆಯಲ್ಲಿ ಕವಿಗಳಾಗಿ, ಹೋರಾಟಗಾರರಾಗಿ, ಸಾಹಿತಿಗಳಾಗಿ, ಯುವ ಮುಂದಾಳುಗಳಾಗಿ ಮೇಲೆದ್ದರು. ಅಷ್ಟರಮಟ್ಟಿಗೆ ಸ್ಥಗಿತಕೊಂಡಿದ್ದ ರಾಜ್ಯದ ರಾಜಕಾರಣವನ್ನು ಬೆಚ್ಚಿಬೀಳಿಸಿದ್ದು, ಫ್ಯೂಡಲ್ ಶಕ್ತಿಗಳನ್ನು ಬಗ್ಗಿಸಿದ್ದ ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿ ಕರ್ನಾಟಕದ ಚೆರಿತ್ರೆಯನ್ನು ಇನ್ನೊಂದು ಮಗ್ಗುಲಿಗೆ ಹೊರಳಿಸಿದರು.
ಬಿ. ಕೆ. ಯವರ ನಂತರ ಬಂದ ದಲಿತ ರಾಜಕಾರಣಿಗಳು ಮತ್ತು ಹೋರಾಟದ ದಾರಿಗೆ ನುಸುಳಿದ ಅವಕಾಶವಾದಿಗಳಿಬ್ಬರೂ ಸೇರಿ ಪ್ರೊ. ಬಿ.ಕೆ.ಕಟ್ಟಿದ ದಲಿತ ಚಳವಳಿಯನ್ನು ಒಳಜಾತಿಗಳ ಆಧಾರದ ಮೇಲೆ ಹತ್ತಾರು ಬಣಗಳಾಗಿ ಒಡೆದರು. ಅವರ ವಯಕ್ತಿಕ ದರ್ದುಗಳ ನಿವಾರಣೆಗೆ ಚಳವಳಿಯನ್ನು ಬಲಿಕೊಟ್ಟರು. ದಲಿತರ ಮೇಲಿ ದೌರ್ಜನ್ಯಗಳು ಮಿತಿಮೀರಿದ ಹೊತ್ತಲ್ಲೆ ಈ ದಲಿತ ರಾಜಕಾರಣ-ಚಳವಳಿಯ (ನ)ಕಲಿಗಳು ತಮ್ಮ ಹೊಟ್ಟೆ ತುಂಬಿಸಿಕೊಂಡರು.
ಪ್ರೊ. ಬಿ. ಕೆ. ಯವರೇ ಕೊನೆ..
ಆನಂತರ ರಾಜ್ಯದ ಯಾವ ಮೂಲೆಯಿಂದಲಾದರೂ ಸರಿ, ಅಖಂಡ ದಲಿತ ಸಮುದಾಯದ ಏಳಿಗೆಗೆ ಬದ್ಧನಾದ ಒಬ್ಬನೇ ಒಬ್ಬ ರಾಜಕೀಯ ನಾಯಕನಾಗಲಿ, ಅಖಂಡ ದಲಿತ ಚಳವಳಿಗೆ ಕಟಿಬದ್ಧನಾದ ಒಬ್ಬ ಚಳವಳಿಗಾರನಾಗಲಿ ಈ ಹೊತ್ತಿಗೂ ಹುಟ್ಟಿಬರಲಿಲ್ಲ. ದಲಿತ ರಾಜಕಾರಣ ಮತ್ತು ದಲಿತ ಚಳವಳಿಗಳು ಈಗ ಕೇವಲ ಒಳಜಾತಿಗಳ ಮೇಲಾಟಗಳು ಮಾತ್ರ. ಅಂಬೇಡ್ಕರರು ಕೇವಲ ಒಂದು ಫೋಟೊ ಆಗುವುದು ಮತ್ತು ಬಿ.ಕೆ.ಯವರನ್ನು ಒಂದು ಹೆಸರನ್ನಾಗಿಸಿ ಮರೆವಿಗೆ ಸರಿಸುವುದು ಅವರ ಹಿಡನ್ ಅಜೆಂಡಾ.
ಇದನ್ನು ಸರಳವಾಗಿ ರೂಪಕಾತ್ಮಕವಾಗಿ ಹೇಳುವುದಾದರೆ ದಲಿತರ ಬೀದಿಗಳಲ್ಲಿ ರಾಜಕೀಯ ಮತ್ತು ಚಳವಳಿಗಳ ಚಿಲ್ಲರೆ ಅಂಗಡಿಗಳು ತಲೆ ಎತ್ತಿವೆ. ಒಂದೊಂದು ಅಂಗಡಿಯಲ್ಲಿ ಒಂದೊಂದು ವ್ಯಾಪಾರ. ಲಾಭವೇ ವ್ಯಾಪಾರದ ಅಂತಿಮ ಗುರಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243