ಬಹಿರಂಗ

ಅಂಬೇಡ್ಕರರ ಸಂವಿಧಾನಶಿಲ್ಪಿ ಪಟ್ಟವನ್ನು ಪ್ರಶ್ನಿಸುವವರಿಗೆ ನನ್ನದೊಂದು ನೇರ ಚಾಲೆಂಜ್

Published

on

  • ರಘೋತ್ತಮ ಹೊ.ಬ

ಕೆಲ ದಿನಗಳ ಹಿಂದೆ ನಾನು ನಾಲ್ವಡಿಯವರು ಕೆ ಆರ್ ಎಸ್ ಕಟ್ಟಿದ್ದು ಎಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದಾಕ್ಷಣ ಒಂದಿಬ್ಬರು ಕೇಳಿದ್ದು ಹಾಗಿದ್ದರೆ ಅಂಬೇಡ್ಕರ್ ಸಂವಿಧಾನ ಬರೆದರಾ ಎಂದು. ಹಾಗೆಯೇ ಈಚೆಗೆ ಕನ್ನಡದ ಪ್ರಮುಖ ಪತ್ರಿಕೆಯೊಂದು ಕೂಡ ಸಂವಿಧಾನ ಕರಡು ರಚಿಸಿದ್ದು ಬಿ.ಎನ್.ರಾವ್ ಎಂದೂ ಇದನ್ನು ಅಂಬೇಡ್ಕರ್ ಕೂಡ ಸ್ಮರಿಸಿದ್ದಾರೆ ಎಂದೂ ಸಂವಿಧಾನ ರಚನಾ ಕಾರ್ಯ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಿತು.

ನನ್ನ ಚಾಲೆಂಜ್ ಇಷ್ಟೇ, ಸಂವಿಧಾನ ನಾನು ಬರೆದದ್ದು ಎಂದು ಅಂಬೇಡ್ಕರ್ ರವರು ಎಂದಾದರೂ ತಾವೇ ಪ್ರತಿಪಾದಿಸಿ, ನನ್ನನ್ನು ಸಂವಿಧಾನ ಶಿಲ್ಪಿ ಎಂದು ಕರೆಯಿರಿ ಎಂದು ಯಾರನ್ನಾದರೂ ಕೇಳಿದ್ದಾರೆಯೇ? ಇಲ್ಲ. ಆದರೆ ಸಂವಿಧಾನ ರಚನೆಯ ಅಂತಿಮ ಹಂತದಲ್ಲಿ ಅದನ್ನು ಅಂಗೀಕರಿಸುವ ಅಂತಿಮ ಕ್ಷಣಗಳಲ್ಲಿ ಆ ಸಂವಿಧಾನ ಕುರಿತು ರಚನಾ ಸಭೆಯ 290 ಕ್ಕೂ ಹೆಚ್ಚು ಸದಸ್ಯರು ಮಾತನಾಡಿದ್ದಾರೆ ಮತ್ತು
ಪ್ರತಿಯೊಬ್ಬ ಸದಸ್ಯನೂ ಅಂಬೇಡ್ಕರರನ್ನು “ಆಧುನಿಕ ಮನು”, “ಹಿಂದಿನ ಸಂವಿಧಾನ ಮನುಸ್ಮೃತಿಯಾದರೆ ಈ ಸಂವಿಧಾನ ಭೀಮಸ್ಮೃತಿ”, “ತಮ್ಮ ಈ ಸಂವಿಧಾನದಿಂದಾಗಿ ಅಂಬೇಡ್ಕರರು ತಾವು ಇಂಗ್ಲೆಂಡ್ ನ ಮುಖ್ಯ ನ್ಯಾಯಮೂರ್ತಿಯಾಗಲು ಅರ್ಹರು.

ಅವರ ಕಾನೂನಿನ ಜ್ಞಾನಕ್ಕೆ ಅದಕ್ಕಿಂತ ಕಡಿಮೆ ಮಟ್ಟದ ಹುದ್ದೆ ತಕ್ಕುದ್ದೇ ಅಲ್ಲ” ಹೀಗೆ ಹೇಳಿದ್ದಾರೆ, ಅಂಬೇಡ್ಕರರನ್ನು ಹಾಡಿ ಹೊಗಳಿದ್ದಾರೆ. ಆ ಹೊಗಳಿಕೆಗಳೆಲ್ಲವೂ ಭಾರತದ ಸಂವಿಧಾನ ರಚನಾ ಚರ್ಚಾ ನಡಾವಳಿ ಸಂಪುಟ (Constitution Assembly Debates) ಗಳಲ್ಲಿ ಅಕ್ಷರ ಅಕ್ಷರವಾಗಿ ಪದ ಪದವಾಗಿ ದಾಖಲಾಗಿದೆ. ರಾಜ್ಯ ಸರ್ಕಾರ ಕೂಡ ಈಚೆಗಷ್ಟೆ “ಕುವೆಂಪು ಭಾಷಾ ಭಾರತಿ ಸಂಸ್ಥೆ” ಅಡಿಯಲ್ಲಿ ಆ ನಡಾವಳಿ ಸಂಪುಟಗಳನ್ನು ಅನುವಾದಿಸಿ ಕನ್ನಡಕ್ಕೂ ತಂದಿದೆ. ಅಂದಹಾಗೆ ಆ ಸಂಪುಟಗಳಲ್ಲಿ ಕಂಡುಬರುವ ಒಂದು ಕುತೂಹಲಕಾರಿ ಸಾಕ್ಷಿಯಾಗಿ ಪರಿಗಣಿಸಲ್ಪಡಬಹುದಾದ ಅಂಶವೆಂದರೆ ಆ ಕಾಲದಲ್ಲಿ ರಚಿತ ಸಂವಿಧಾನಕ್ಕೆ ಸ್ವತಃ ಅಂಬೇಡ್ಕರರ ಜಾತಿಯನ್ನೂ ತಳುಕು ಹಾಕಿರುವ ಘನವೆತ್ತ ಆಗಿನ ಕಾಲದ ಆ ಸದಸ್ಯರುಗಳು ಈ ಸಂವಿಧಾನವನ್ನು “ಮಹಾರ್ ಕಾನೂನು ಎಂದು ಕರೆಯಬಹುದು” ಎಂದಿರುವುದು.

ಪ್ರಶ್ನೆ ಇಷ್ಟೇ, ಯಾಕೆ ಆ ಸದಸ್ಯರು ಅಂಬೇಡ್ಕರರನ್ನು ಹೀಗೆ ಹಾಡಿ ಹೊಗಳಿದರು? ಅಂಬೇಡ್ಕರರೇನಾದರೂ ಕೇಳಿಕೊಂಡಿದ್ದರಾ “ನನ್ನನ್ನು ಹಾಗೆ ಕರೆಯಿರಿ, ಆಧುನಿಕ ಮನು ಅಂತ ಹೇಳಿ” ಎಂದು? ಖಂಡಿತ ಇಲ್ಲ. ವಾಸ್ತವ ಏನೆಂದರೆ ಸುಮಾರು ಮೂರು ವರ್ಷಗಳ ಸುದೀರ್ಘ ಅವಧಿವರೆಗೆ ಗೌರವಾನ್ವಿತ ಆ ಸದಸ್ಯರುಗಳು ಅಂಬೇಡ್ಕರರ ಆ ಸಂವಿಧಾನ ರಚನಾ ಕಾರ್ಯವನ್ನು, ಕೌಶಲವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿದರು. ಅದಕ್ಕೆ ಅವರು ಹಾಗೆ ಹೇಳಿದರು. ದುರಂತ ಎಂದರೆ ಈಗೀಗ ಬಿ.ಎನ್.ರಾವ್ ಎಂಬ ಹೆಸರನ್ನು ಮುಂದೆ ತರಲಾಗುತ್ತಿದೆ. ಆದರೆ ನನ್ನ ನೇರ ಪ್ರಶ್ನೆ ಇಷ್ಟೇ, ಮೇಲೆ ಹೇಳಿದ ರೀತಿ ಸಂವಿಧಾನ ಸಭೆಯ ಆ ಗೌರವಾನ್ವಿತ ಸದಸ್ಯರು ಅಂಬೇಡ್ಕರರನ್ನು ಹೊಗಳುತ್ತಿದ್ದಾಗ ಸದರಿ ಬಿ.ಎನ್.ರಾವ್ ಭಾರತದಲ್ಲೇ ಇದ್ದರೂ ಯಾಕೆ ಗೌರವಾನ್ವಿತ ಆ ಸದಸ್ಯರುಗಳು ಬಿ.ಎನ್.ರಾವ್ ರನ್ನು ಸಂವಿಧಾನ ರಚನಾ ಆ ಪ್ರಕ್ರಿಯೆಗೆ ತಳುಕು ಹಾಕಲಿಲ್ಲ? ಅಥವಾ ಹೊಗಳಲಿಲ್ಲ? ಅಥವಾ ಆ ಸಂವಿಧಾನಕ್ಕೆ ಬಿ.ಎನ್.ರಾವ್ ರ ಜಾತಿಯ ಹೆಸರನ್ನು ‌ತಳುಕು ಹಾಕದೆ ಮಹಾರ್ ಕಾನೂನು ಎಂದರು ಯಾಕೆ?!

ಆದ್ದರಿಂದ ನನ್ನ ನೇರ ಚಾಲೆಂಜ್ ಇಷ್ಟೇ ಈ ನಿಟ್ಟಿನಲ್ಲಿ ಬಿ.ಎನ್. ರಾವ್ ಅಥವಾ ಮತ್ತ್ಯಾರದಾದರೂ ಹೆಸರು ಮುಂದೆ ತರಬೇಕಾದರೆ ಅಂಬೇಡ್ಕರರನ್ನು “ಆಧುನಿಕ ಮನು”, “ಮನುಸ್ಮೃತಿಯಲ್ಲ ಇದು ಭೀಮಸ್ಮೃತಿ”, “ಮನುವಿನ ಕಾನೂನು ಹೋಗಿ ಮಹಾರ್ ಕಾನೂನು ಬಂದಿದೆ” ಎಂದು ಹಿಂದೆ ಹೇಳಿದ್ದಾರಲ್ಲ ಘನತೆವೆತ್ತ ಆ ಸದಸ್ಯರುಗಳನ್ನು ಗೋರಿಯಿಂದ ಎಬ್ಬಿಸಿ ಅವರ ಬಾಯಲ್ಲಿ ಬಿ.ಎನ್.ರಾವ್ ಹೆಸರು ಹೇಳಿಸಿ. ಆಗ ನಿಮ್ಮ ಈ ಬಿ.ಎನ್.ರಾವ್ ವಾದ ಒಪ್ಪುತ್ತೇವೆ. ಹಾಗೆ ಆಗೋದಿಲ್ವೋ ಸುಮ್ಮನೆ ದೂಸ್ರಾ ಮಾತಾಡದೆ ಒಪ್ಪಿಕೊಳ್ಳಿ “ಸಂವಿಧಾನ ಶಿಲ್ಪಿ ಅಂಬೇಡ್ಕರ್” ಅಂತ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version