ಬಹಿರಂಗ

ನಮಗೆ ಬೇಕಿದೆ ಅಂಬೇಡ್ಕರರ ಘನತೆಯ ಬದುಕು

Published

on

  • ರಘೋತ್ತಮ ಹೊ.ಬ

ನತೆಯ ಬದುಕು: ಹಾಗೆಂದರೇನು ಎಂದರೇನು ಎಂದು ತಿಳಿಯುವ ಮುನ್ನ ಬಾಬಾಸಾಹೇಬ್ ಅಂಬೇಡ್ಕರ್ ರವರ ವೃತ್ತಿ ಬದುಕು ಹೇಗಿತ್ತು ಎಂಬುದನ್ನು ತಿಳಿಯುವ ಅಗತ್ಯವಿದೆ. ಇದರ ಬಗ್ಗೆ ಸ್ವತಃ ಅಂಬೇಡ್ಕರ್‌ರವರರೇ ಹೇಳಿಕೊಂಡಿರುವ ಬರಹಗಳ ಆಧಾರದ ಮೇಲೆ ಹೇಳುವುದಾದರೆ ವಿದೇಶಿ ವ್ಯಾಸಂಗ ಮುಗಿಸಿ 1919ರಲ್ಲಿ ಭಾರತಕ್ಕೆ ಆಗಮಿಸಿದ ಅವರು ಪ್ರಪ್ರಥಮವಾಗಿ ಮುಂಬೈನ ಸರ್ಕಾರಿ ಕಾಮರ್ಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ನೇಮಕಗೊಂಡರು. ಆ ಮೂಲಕ ಕಾಲೇಜಿನ ಬೋಧಕರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದರು.

ಅಲ್ಲಿನ ಕೆಲ ವರ್ಷಗಳ ಸೇವೆಯ ನಂತರ ಸರ್ಕಾರಿ ಹುದ್ದೆಯಲ್ಲಿದ್ದರೆ ಸಾರ್ವಜನಿಕ ಸೇವೆ ಕಷ್ಟ ಎಂಬುದನ್ನು ಅರಿತ ಅವರು ಸೇವೆಗೆ ರಾಜೀನಾಮೆ ಇತ್ತು ಮತ್ತೆ ಇಂಗ್ಲೆಂಡ್‌ಗೆ ತೆರಳಿ ಕಾನೂನಿನಲ್ಲಿ ‘ಬಾರ್ ಅಟ್ ಲಾ’ (ಬ್ಯಾರಿಸ್ಟರ್) ಪದವಿ ಪಡೆದು ಮುಂಬೈನ ಹೈಕೋರ್ಟ್ ನಲ್ಲಿ ತಮ್ಮ ವಕೀಲ ವೃತ್ತಿ ಆರಂಭಿಸಿದರು ಮತ್ತು ಆ ವೃತ್ತಿಯನ್ನು ತಮ್ಮ ಜೀವನದುದ್ದಕ್ಕೂ ಮುಂದುವರೆಸಿದರು. ಈ ನಡುವೆ ಮುಂಬೈನ ಸರ್ಕಾರಿ ಕಾನೂನು ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡು ಮತ್ತೆ ತಮ್ಮ ನೆಚ್ಚಿನ ಬೋಧನಾ ವೃತ್ತಿಗೆ ಮರಳಿದ ಅವರು ಆ ಹುದ್ದೆಯಲ್ಲಿ 5 ವರ್ಷಗಳ ಸೇವೆಯನ್ನು ಕೂಡ ಪೂರ್ಣಗೊಳಿಸಿದರು ಜೊತೆಜೊತೆಗೆ ವಕೀಲ ವೃತ್ತಿಯನ್ನೂ ಮುಂದುವರೆಸಿದರು.

1935ರ ಭಾರತ ಸರ್ಕಾರ ಕಾಯ್ದೆಯನ್ವಯ ಮುಂಬೈನಲ್ಲಿ ಮುಂಬೈ ರಾಜ್ಯ ವಿಧಾನಸಭೆ ಸ್ಥಾಪಿತವಾಗಿ 1937ರಲ್ಲಿ ಅದಕ್ಕೆ ಚುನಾವಣೆ ನಡೆಯಲು ಮತ್ತೊಮ್ಮೆ ತಮ್ಮ ಸರ್ಕಾರಿ ಸೇವೆಗೆ ರಾಜೀನಾಮೆ ಇತ್ತ ಅಂಬೇಡ್ಕರ್‌ರವರು ಮುಂಬೈ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಿ ಸದಸ್ಯರಾಗಿ(ಇಂದಿನ ಎಂ.ಎಲ್.ಎ ಸ್ಥಾನಕ್ಕೆ ಸಮ) ಆಯ್ಕೆಗೊಂಡರು. ಇಂತಹ ಆಯ್ಕೆಯ ಕಾರಣಕ್ಕೆ ಅಂಬೇಡ್ಕರ್‌ರವರು 1942ರಲ್ಲಿ ಬ್ರಿಟಿಷರ ನೇತೃತ್ವದ ಕೇಂದ್ರ ಸರ್ಕಾರದ ಸಚಿವರಾಗಿ ನೇಮಕಗೊಂಡು ಕಾರ್ಮಿಕ, ಉದ್ಯೋಗ, ಕೌಶಲ, ಲೋಕೋಪಯೋಗಿ, ನೀರಾವರಿ ಮತ್ತು ವಿದ್ಯುತ್ ಇಲಾಖೆಗಳ ಸಚಿವರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ಈ ನಡುವೆ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಅಂದಿನ ನೆಹರೂರವರ ಕೇಂದ್ರ ಸರ್ಕಾರದಲ್ಲಿ ಕಾನೂನು ಸಚಿವರಾಗಿ ನೇಮಕಗೊಂಡ ಅವರು ತತ್ಪರಿಣಾಮ ಸಂವಿಧಾನ ರಚಿಸಿದರು. ಆದರೆ 1951ರಲ್ಲಿ ಅವರು ಮಂತ್ರಿ ಪದವಿಗೆ ರಾಜೀನಾಮೆ ಇತ್ತರಾದರೂ ಮರು ವರ್ಷವೇ ಅಂದರೆ 1952ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತರು. ಅಂದಹಾಗೆ ಸೋತರೂ ಎದೆಗುಂದದ ಅವರು 1952 ರಲ್ಲೇ ಮುಂಬೈನಿಂದ ರಾಜ್ಯಸಭಾ ಸದಸ್ಯರಾಗಿ(ಎಂಪಿ ಆಗಿ) ಆಯ್ಕೆಗೊಂಡು ಸಂಸತ್ ಪ್ರವೇಶಿಸಿದರು. ತಮ್ಮ ಪರಿನಿಬ್ಬಾಣದವರೆಗೂ ಅವರು ರಾಜ್ಯ ಸಭೆಯ ಸದಸ್ಯರಾಗಿಯೇ ಮುಂದುವರೆದರು.

ಇಷ್ಟೆಲ್ಲಾ ರಾಜಕೀಯ ವೃತ್ತಿ ಸಾಧನೆಯ ನಡುವೆಯೂ ಅಂಬೇಡ್ಕರ್‌ರವರು ತಮ್ಮ ವೃತ್ತಿ ವಕೀಲ ವೃತ್ತಿಯನ್ನು ಬಿಟ್ಟಿರಲಿಲ್ಲ. ಸುಪ್ರಸಿದ್ಧ ವಕೀಲರಾಗಿ ಗುರುತಿಸಿಕೊಂಡಿದ್ದ ಅವರು ಅದಕ್ಕಾಗಿ ತಮ್ಮ ಕಕ್ಷಿದಾರರಿಗೆ ವಿಧಿಸುತ್ತಿದ್ದ ಶುಲ್ಕವೇ ಅವರು ತಮ್ಮ ವಕೀಲ ವೃತ್ತಿಯಲ್ಲಿ ಅವರು ಅದೆಷ್ಟು ಖ್ಯಾತಿಯನ್ನು ಪಡೆದಿದ್ದರು ಎಂಬುದನ್ನು ಸೂಚಿಸುತ್ತದೆ. ಈ ನಡುವೆ ಶೈಕ್ಷಣಿಕ ವಲಯದಲ್ಲಿಯೂ ಗುರುತಿಸಿಕೊಂಡ ಅವರು ತಾವೇ ಸ್ಥಾಪಿಸಿದ್ದ “ಪೀಪಲ್ಸ್ ಎಜುಕೇಷನ್ ಸೊಸೈಟಿ”ಯ ಮೂಲಕ ಸುಮಾರು 27ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ನಡೆಸಿದರು.

ಅಂಬೇಡ್ಕರ್ ರವರು ಖ್ಯಾತ ಇಂಗ್ಲಿಷ್ ಲೇಖಕರು ಎಂಬುದೂ ಇಲ್ಲಿ ಗಮನಿಸಬೇಕಾದ ವಿಷಯ. ಯಾವ ಮಟ್ಟಿಗಿನ ಖ್ಯಾತಿ ಎಂದರೆ ಲಂಡನ್ನಿನ ಅಂದಿನ ಸುಪ್ರಸಿದ್ಧ ಪಿ.ಎಸ್.ಕಿಂಗ್ ಪಬ್ಲಿಷಿಂಗ್ ಹೌಸ್ ಅವರ ಬಹುತೇಕ ಕೃತಿಗಳನ್ನು ಪ್ರಕಟಿಸಿದೆ! ಹಾಗೆಯೇ ಕೊನೆ ಕೊನೆಯಲ್ಲಿ ಲಂಡನ್ನಿಗೆ ಹೋಗುವುದು ಕಷ್ಟವೆನಿಸಿದಾಗ ಸ್ವತಃ ಅಂಬೇಡ್ಕರ್‌ರವರೇ ಭರತ್ ಭೂಷಣ್ ಪ್ರಿಂಟಿಂಗ್ ಪ್ರೆಸ್ ಎಂಬ ಮುದ್ರಣ ಸಂಸ್ಥೆ ಆರಂಭಿಸಿ ಮುದ್ರಣ ಕ್ಷೇತ್ರಕ್ಕೂ ಕೂಡ ಕಾಲಿಡುತ್ತಾರೆ. ಆಶ್ಚರ್ಯವೆಂದರೆ ತಮ್ಮ ಇಂತೆಲ್ಲಾ ವೃತ್ತಿ ವೈವಿಧ್ಯತೆಯ ನಡುವೆಯೂ ಮಾಧ್ಯಮ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವ ಅವರು ‘ಜನತಾ’, ‘ಬಹಿಷ್ಕೃತ ಭಾರತ’, ‘ಪ್ರಬುದ್ಧ ಭಾರತ’ ಹೀಗೆ ಮೂರು ಪತ್ರಿಕೆಗಳನ್ನು ಸ್ಥಾಪಿಸಿ ಅವುಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಹಾಗಿದ್ದರೆ ಯಾಕೆ ಬಾಬಾಸಾಹೇಬ್ ಅಂಬೇಡ್ಕರ್‌ರವರ ಇಂತಹ ಭವ್ಯ ವೃತ್ತಿ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕಾಗಿದೆ? ಎಂಬುದು. ಏಕೆಂದರೆ ಅನೇಕರು ಸೋಮಾರಿತನದ ಬದುಕು ಬಯಸುತ್ತಾರೆ. ತಾನು ಓದಿಲ್ಲವೆ ತನಗೆ ಸರ್ಕಾರ ಕರೆದು ನೌಕರಿ ಕೊಡಲಿ ಎಂದು ಕಾದು ಕೊಳಿತುಕೊಳ್ಳುತ್ತಾರೆ ವಿಶೇಷವಾಗಿ ಶೋಷಿತ ಸಮುದಾಯಗಳ ಕೆಲವು ನಿರುದ್ಯೋಗಿ ವಿದ್ಯಾವಂತ ಸಮುದಾಯ! ಪ್ರಶ್ನೆ ಎಂದರೆ ಅಂಬೇಡ್ಕರರು ಹಾಗೆ ಕಾದು ಕುಳಿತರೆ? ಖಂಡಿತ ಇಲ್ಲ. ಹಾಗೆಯೇ ಕೆಲವರು “ಅಂಬೇಡ್ಕರರು ಕೋಟು ಧರಿಸುತ್ತಿದ್ದರು ಏಕೆಂದರೆ ಅವರು ತಮ್ಮ ಹರಿದ ಅಂಗಿಗಳನ್ನು ಮುಚ್ಚಲು ಹಾಗೆ ಕೋಟು ಧರಿಸುತ್ತಿದ್ದರು” ಎಂದು ಕತೆ ಕಟ್ಟುತ್ತಾರೆ, ಹೇಳುತ್ತಾರೆ. ಆದರೆ ವಾಸ್ತವವೆಂದರೆ ಅಂಬೇಡ್ಕರರು ತಮ್ಮ ಇಂತಹ ವೈಭವಪೂರ್ಣ ವೃತ್ತಿ ಬದುಕಿನ ಕಾರಣಕ್ಕಾಗಿ ಮತ್ತು ಅದರಿಂದ ಅವರು ಗಳಿಸಿದ ಸಂಪಾದನೆಯ ಕಾರಣಕ್ಕಾಗಿ ಮುಂಬೈನಲ್ಲಿ ಎರಡು ಮನೆ ದೆಹಲಿಯಲ್ಲಿ ಒಂದು ಮನೆ ಕಟ್ಟಿಸಿದ್ದರು! ವಯಕ್ತಿಕವಾಗಿ ಅತ್ಯಂತ ಶಿಸ್ತಿನ ಒಂದು ಸ್ಟ್ಯಾಂಡರ್ಡ್ ಬದುಕನ್ನು ತಮ್ಮ ವಿದ್ಯೆ, ಪದವಿ ಮತ್ತು ಸ್ಥಾನಕ್ಕೆ ತಕ್ಕಹಾಗೆ ಬದುಕಿದರು! ದುರಂತವೆಂದರೆ ಇಂತಹ ಅಂಬೇಡ್ಕರ್‌ರವರು ಬದುಕಿದ ಸ್ಟ್ಯಾಂಡರ್ಡ್ ಬದುಕನ್ನು ಬಹುತೇಕರು ಅರಿಯಲೇ ಹೋಗುವುದಿಲ್ಲ. ತಾವು ಸದಾ ಕೀಳು, ತಮ್ಮ ಕೈಯಲ್ಲಿ ಏನೂ ಆಗುವುದಿಲ್ಲ ಎಂಬ ಕೆಟ್ಟ ಮನಸ್ಥಿತಿಯಲ್ಲೇ ಬದುಕುತ್ತಾರೆ.

ಈ ನಿಟ್ಟಿನಲ್ಲಿ ಎಲ್ಲರೂ ವಿಶೇಷವಾಗಿ ಶೋಷಿತ ಸಮುದಾಯಗಳ ಮಂದಿ ಒಂದು ಘನತೆಯ ಸ್ಟ್ಯಾಂಡರ್ಡ್ ಬದುಕನ್ನು ಕಟ್ಟಿಕೊಳ್ಳಲು ಬಾಬಾಸಾಹೇಬರನ್ನು ಅನುಕರಿಸಿಬೇಕಿದೆ ಅನುಸರಿಸಬೇಕಿದೆ. ಆಗಷ್ಟೆ ಅವರಲ್ಲಿ ಕೀಳರಿಮೆ ತೊಲಗಿ ಅವರು ತಲೆ ಎತ್ತಿ ಬದುಕಲು ಸಾಧ್ಯ. ಆದ್ದರಿಂದ ಶೋಷಿತ ಸಮುದಾಯಗಳ ಯುವಕರು ಯುವತಿಯರು ಜನಸಾಮಾನ್ಯರು ಅಂಬೇಡ್ಕರರ ಈ ವೈಭವಪೂರ್ಣ ಘನತೆಯ ಬದುಕನ್ನು ಅರಿಯಲಿ ತಾವೂ ಕೂಡ ಅಂತಹ ಘನತೆಯ ಬದುಕನ್ನು ಬಾಳಲಿ ಎಂಬುದೇ ಸದ್ಯದ ಕಳಕಳಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version