ಬಹಿರಂಗ

ಬಾಬಾಸಾಹೇಬ್ ಅಂಬೇಡ್ಕರರ ಸಾವು ಸಹಜವೋ ಅಥವಾ ಅಸಹಜವೋ?: ಹೀಗೊಂದು ವಿಷಾದದ ಪ್ರಶ್ನೆ

Published

on

  • ರಘೋತ್ತಮ ಹೊ.ಬ

ಬಾಬಾಸಾಹೇಬ್ ಅಂಬೇಡ್ಕರರು 1956 ಡಿಸೆಂಬರ್ 6 ರಂದು ಮಹಾಪರಿನಿರ್ವಾಣ ಹೊಂದಿದ್ದು ಎಲ್ಲರಿಗೂ ತಿಳಿದಿದೆ.ಬಾಬಾಸಾಹೇಬರ ಆ ಸಾವು ಸಹಜವೋ? ಅಥವಾ ಅಸಹಜವೋ? ಖಂಡಿತ, ಕೇಳಲು ಕೂಡ ಹಿಂಜರಿಯಬೇಕಾದ ದುರಂತದ ಪ್ರಶ್ನೆ ಇದು. ಬಾಬಾಸಾಹೇಬರ ಜೀವನ ಚರಿತ್ರೆ ಬರೆದಿರುವ ಅವರ ಆಪ್ತ ಕಾರ್ಯದರ್ಶಿ ನಾನಕ್ ಚಂದ್ ರತ್ತು ಮತ್ತು ಮತ್ತೋರ್ವರಾದ ಶ್ರೀ ಶಂಕರಾನಂದ ಶಾಸ್ತ್ರಿ ಇಬ್ಬರೂ ಕೂಡ ಬಾಬಾಸಾಹೇಬರ ಕುರಿತು ತಾವು ಬರೆದಿರುವ ಜೀವನ ಚರಿತ್ರೆ ಕೃತಿಗಳಲ್ಲಿ ಈ ಬಗ್ಗೆ ತೀವ್ರ ಸ್ವರೂಪದ ಅನುಮಾನ ವ್ಯಕ್ತಪಡಿಸಿದ್ದಾರೆ.

ರತ್ತುರವರ “Last few years of Dr.Ambedkar” ಕೃತಿ ಮತ್ತು ಶಂಕರಾನಂದ ಶಾಸ್ತ್ರಿ ಯವರ “My experiences and Memories of Dr.Babasaheb Ambedkar” ಹೀಗೆ ಎರಡೂ ಕೃತಿಗಳಲ್ಲೂ ಬಾಬಾಸಾಹೇಬರ ಸಾವಿನ ಬಗ್ಗೆ ಇಂತಹ ಅನುಮಾನದ ಬರಹಗಳ ಸ್ಪಷ್ಟ ಚಿತ್ರಣವಿದೆ.

ಸಾಯುವ ಒಂದು ವಾರ ಮೊದಲು ಬಾಬಾಸಾಹೇಬರು ನೇಪಾಳದ ಕಠ್ಮಂಡುವಿನಲ್ಲಿ ನಡೆದ ವಿಶ್ವ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿ ಡಿಸೆಂಬರ್ 2 ಕ್ಕೆ ವಾಪಸ್ ದೆಹಲಿಗೆ ಬಂದಿದ್ದರು. ನೇಪಾಳದ ಸಮ್ಮೇಳನದಲ್ಲಿ ಪರಮಪೂಜ್ಯ ದಲೈ ಲಾಮಾರವರು ಬಾಬಾಸಾಹೇಬರನ್ನು ಅಕ್ಷರಶಃ “ಬೋಧಿಸತ್ವ” ಎಂದು ಸಂಬೋಧಿಸಿದ್ದರು! ಈ ಹಿನ್ನೆಲೆಯಲ್ಲಿ ನೇಪಾಳದ ಲುಂಬಿಣಿ ಸೇರಿದಂತೆ ಬೋಧಗಯ, ಸಾರನಾಥ ಮತ್ತು ಕುಶೀನಗರಗಳಿಗೆ ಯಾತ್ರೆ ಹೋಗುವ ಮುನ್ನ ಆರೋಗ್ಯವಾಗಿಯೇ ಇದ್ದ ಬಾಬಾಸಾಹೇಬರು ನೇಪಾಳದಿಂದ ಹಿಂದುರಿಗಿದ ನಂತರ ತೀವ್ರವಾಗಿ ಬಳಲಿದ್ದರು. ಸಹಜವಾಗಿ ಪ್ರಯಾಣದ ಬಳಲಿಕೆ ಎಂದು ಶಂಕರಾನಂದ ಶಾಸ್ತ್ರಿ ಅಂದುಕೊಂಡರಂತೆ. ಆದರೆ? ಏನು ಅನಾಹುತ ಆಗುತ್ತದೆ ಎಂದು ಯಾರು ತಾನೇ ಊಹಿಸಲು ಸಾಧ್ಯ?

ಈ ನಿಟ್ಟಿನಲ್ಲಿ ಡಿಸೆಂಬರ್ 6ರ ಬೆಳಿಗ್ಗೆ ನಾನಕ್ ಚಂದ್ ರತ್ತು ಶಂಕರಾನಂದ ಶಾಸ್ತ್ರಿಯವರಿಗೆ ಕರೆ ಮಾಡಿ ಬಾಬಾಸಾಹೇಬರು ತೀವ್ರವಾಗಿ ಅನಾರೋಗ್ಯಗೊಂಡಿದ್ದಾರೆ ಬೇಗ ಬನ್ನಿ ಎಂದಾಗ ಶಾಸ್ತ್ರಿಯವರು ಖಾಸಗಿ ಟ್ಯಾಕ್ಸಿಯೊಂದರಲ್ಲಿ ಅಲಿಪುರ್ ರಸ್ತೆಯ(ದೆಹಲಿ) ಬಾಬಾಸಾಹೇಬರ ನಿವಾಸಕ್ಕೆ 10-30 ರ ಹೊತ್ತಿಗೆ ಹೋದಾಗ ಬಾಬಾಸಾಹೇಬರ ಪವಿತ್ರ ದೇಹ ಅವರ ಬೆಡ್ ರೂಂನಲ್ಲಿ ಅವರು ಎಂದಿನಂತೆ ಧರಿಸಿದ್ದ ರಾತ್ರಿ ಉಡುಪಿನಲ್ಲಿ ಶವವಾಗಿ ಬಿದ್ದಿತ್ತು.

ಈ ದೃಶ್ಯ ಕಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ ಶಂಕರಾನಂದ ಶಾಸ್ತ್ರಿಯವರು ತತಕ್ಷಣ ಚೇತರಿಸಿಕೊಂಡು ಸವಿತಾ ಅಂಬೇಡ್ಕರರನ್ನು ಇದು ಹೇಗೆ ಸಾಧ್ಯ ಎಂದು ಕೇಳಿದರು. ಏಕೆಂದರೆ ಹಿಂದಿನ ದಿನ ಶಾಸ್ತ್ರಿಯವರು ಬಾಬಾಸಾಹೇಬರನ್ನು ಬೀಳ್ಕೊಟ್ಟಾಗ ರಾತ್ರಿ 11 ಗಂಟೆ. ಆ ಸಂದರ್ಭದಲ್ಲಿ ಬಾಬಾಸಾಹೇಬರು ಚೆನ್ನಾಗಿಯೇ ಇದ್ದರು. ಸಾಯುವಂತಹ ಅಸ್ವಸ್ಥತೆಯ ಸ್ಥಿತಿಗೇನು ಅವರು ತಲುಪಿರಲಿಲ್ಲ. ಆದರೆ ಸವಿತಾ ಅಂಬೇಡ್ಕರರನ್ನು ಕೇಳಿದರೆ ಅವರು ಬೆಳಿಗ್ಗೆ 5 ಗಂಟೆಗೇನೆ ಬಾಬಾಸಾಹೇಬರು ನಿಧನರಾದರು ಎನ್ನುತ್ತಿದ್ದಾರೆ! ಈ ಸಂದರ್ಭದಲ್ಲಿ ಶಂಕರಾನಂದ ಶಾಸ್ತ್ರಿ ಯವರು ಸವಿತಾರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಆದರೆ ಏನು ಮಾಡಲು ಸಾಧ್ಯ? ಈ ನಿಟ್ಟಿನಲ್ಲಿ ಆ ಸ್ಥಳದಲ್ಲಿ ಅಕ್ಷರಶಃ ಗೊಂದಲದ ವಾತಾವರಣ ಏರ್ಪಟ್ಟಿತ್ತು. ಬಾಬಾಸಾಹೇಬರ ಸಾವು ಏಕಾಯಿತು? ಹೇಗಾಯಿತು? ಹೀಗೆ. ಆದರೆ ದುಃಖಕರ ಅಂಶವೆಂದರೆ ಬಾಬಾಸಾಹೇಬರ ಆ ಅಮರ ಚೇತನ ಮತ್ತೆ ಬರಲು ಸಾಧ್ಯವೇ? ಈ ನಿಟ್ಟಿನಲ್ಲಿ ಹೇಳುವುದಾದರೆ, ಬಾಬಾಸಾಹೇಬರ ಸಾವಿನ ಆ ಗೊಂದಲ, ಅನುಮಾನ ಹಾಗೇ ಉಳಿದುಬಿಡುತ್ತದೆ. (ಆಧಾರ: “ಮೈ ಎಕ್ಸ್ಪೀರಿಯನ್ಸಸ್ ಅಂಡ್ ಮೆಮೊರೀಸ್ ಆಫ್ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಲೇಖಕರು: ಶಂಕರಾನಂದ ಶಾಸ್ತ್ರಿ, ಪುಟ.113). ಒಟ್ಟಾರೆ ಹೇಳುವುದಾದರೆ, ಶೋಷಕ ಶಕ್ತಿಗಳ ಒಂದು ವ್ಯವಸ್ಥಿತ ಸಂಚಿಗೆ ಬಾಬಾಸಾಹೇಬರ ಪವಿತ್ರ ಚೇತನ ಬಲಿಯಾಯಿತಾ ಎಂಬ ವಿಷಾದದ ಭಾವ ಶಂಕರಾನಂದ ಶಾಸ್ತ್ರಿಯವರ ಈ ಬರಹ ಓದಿದ ಯಾರನ್ನಾದರೂ ಖಂಡಿತ ಕಾಡದಿರದು‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version