ಬಹಿರಂಗ
ಶೋಷಣಾ ವಿರೋಧಿ ಅಂಬೇಡ್ಕರ್
ಎಲ್ಲಾ ವಿಧದ ಶೋಷಣೆಯನ್ನು ಕೊನೆಗೊಳಿಸಬೇಕೆಂಬ ಅದಮ್ಯ ಬಯಕೆಯೇ ಅಂಬೇಡ್ಕರರ ಆಚಾರ-ವಿಚಾರಗಳಲ್ಲಿ ಹಾಸುಹೊಕ್ಕಾಗಿತ್ತು. ಶೋಷಣಾ ವ್ಯವಸ್ಥೆಯ ವಿರುದ್ಧ ಸೆಟೆದು ನಿಲ್ಲಬೇಕೆಂಬ ದೃಷ್ಟಿಧೋರಣೆಗಳೇ ಅವರ ವ್ಯಕ್ತಿತ್ವದ ಪ್ರಧಾನ ಲಕ್ಷಣಗಳಾಗಿದ್ದವು. ಶೋಷಣೆ ಕಂಡಾಗಲೆಲ್ಲ ಅವರು ಅದರ ವಿರುದ್ಧ ದನಿ ಎತ್ತುತ್ತಿದ್ದರು.
ಎರಡು ಸಹಸ್ರಮಾನಗಳಿಗೂ ಹೆಚ್ಚಿನ ಕಾಲದುದ್ದಕ್ಕೂ ಭಾರತೀಯ ಜನಸಂಖ್ಯೆಯ ಐದನೆಯ ಒಂದು ಭಾಗದಷ್ಟು ಜನರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಕೀಳೈಸಿದ್ದ, ಅಮಾನವೀಯ ದಬ್ಬಾಳಿಕೆಗೆ ಗುರಿಮಾಡಿದ್ದ ಜಾತಿವ್ಯವಸ್ಥೆಯ ವಿರುದ್ಧ ತಮ್ಮ ಬದುಕಿನುದ್ದಕ್ಕೂ ಸೆಣಸಿದರು. ಇಂತಹ ಕ್ರೂರ ಅಮಾನುಷ ಪದ್ಧತಿಯನ್ನು ದೈವ ಪ್ರಣೀತವೆಂದಯ ಸಾರುತ್ತಿದ್ದ ಹಿಂದೂ ಧರ್ಮದ ಗೊಡ್ಡು ಕಂದಾಚಾರದ ನಿರ್ನಾಮವೇ ಅವರ ಬದುಕಿನ ಪ್ರಮುಖ ಗುರಿಯಾಗಿತ್ತು.
ಜಾತಿವಿನಾಶವೇ ಅವರ ಬದುಕಿನ ಪರಮ ಗಮ್ಯವಾಗಿತ್ತು. ಆದ್ದರಿಂದಲೇ ಅದಕ್ಕೆ ಅನಾದಿಯಿಂದ ಬಲಿಯಾಗಿದ್ದ ಅಸ್ಪೃಶ್ಯರ ನೆಲೆಯಿಂದಲೇ ಜಾತಿವ್ಯವಸ್ಥೆಯ ಮೇಲೆ ದಾಳಿಯಿಟ್ಟ ಅವರು ಕಾದಾಡಿದ ಕದನಗಳು ಹಲವಾರು. ಆರಂಭದಲ್ಲಿ ಹಿಂದೂ ಧರ್ಮಸಂಹಿತೆಯ ಸಂರಕ್ಷಕವಾಗಿದ್ದ ಬ್ರಾಹ್ಮಣಶಾಹಿಯ ಕೋಟೆ ಬಿರುಕು ಬಿಡದೆಂಬುದು ಅವರಿಗೆ ಅರಿವಾಯಿತು.
ಆದ್ದರಿಂದಲೇ ಅವರು ಒಂದರಗಳಿಗೆಯೂ ಈ ಗುರಿಯಿಂದ ತಮ್ಮ ದೃಷ್ಟಿಯನ್ನು ಕದಲಿಸಲಿಲ್ಲ. ರಾಜಕೀಯ ಹೋರಾಟದ ಮೂಲಕವೇ ಬ್ರಾಹ್ಮಣಶಾಹಿಯ ನಿರ್ನಾಮ ; ಬ್ರಾಹ್ಮಣಶಾಹಿಯ ನಿರ್ನಾಮದಿಂದಲೇ ಹಿಂದೂ ಧರ್ಮದ ಅವಸಾನ ; ಹಿಂದೂ ಧರ್ಮದ ಅವಸಾನವಾದಾಗ ಮಾತ್ರ ಜಾತಿವಿನಾಶ ಸಾಧ್ಯ ಎಂಬುದು ಅವರ ದೃಢನಂಬುಗೆಯಾಗಿತ್ತು. ಜಾತಿ ವ್ಯವಸ್ಥೆಯ ವಿರುದ್ಧ ಅವರು ಹೂಡಿದ್ದ ಈ ಬೃಹತ್ ಹೋರಾಟ ಸಹಜವಾಗಿಯೇ ಅವರ ಇತರ ಹೋರಾಟಗಳನ್ನು ಮರೆಮಾಚಿತು. ನಿಜವೆಂದರೆ, ಜಾತಿ ಹೋರಾಟದಾಚೆಗೂ ಅವರು ಅನೇಕ ಹೋರಾಟಗಳನ್ನು ಮಾಡಿದ್ದಾರೆ. ವಾಸ್ತವವಾಗಿ ಅವರ ಹೋರಾಟದ ಬದುಕು ಶೋಷಣೆಯ ಎಲ್ಲ ರೂಪಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
ಅಸ್ಪೃಶ್ಯತೆಯ ವಿರುದ್ಧ ಹೂಡಿದ್ದ ಹೋರಾಟದ ಕೀರ್ತಿಯನ್ನು ಅವರಿಗೆ ಕೊಡಲು ಕೆಲವರು ಹಿಂಜರಿಯುತ್ತಿದ್ದರು. ಆರಂಭದಲ್ಲಿ ಅವರನ್ನು ಸಮಗ್ರ ದಲಿತರ ವಿಮೋಚಕರೆಂದು ಒಪ್ಪಿಕೊಳ್ಳದ ಕೆಲವರು ಹಿಂಜರಿಯುತ್ತಿದ್ದರು. ಆರಂಭದಲ್ಲಿ ಅವರನ್ನು ಸಮಗ್ರ ದಲಿತರ ವಿಮೋಚಕರೆಂದು ಒಪ್ಪಿಕೊಳ್ಳದ ಕೆಲವರು, ಅವರನ್ನು ಕೇವಲ ಮಹಾರ್ ಜಾತಿಯ ನೇತಾರರೆಂದು ಬಿಂಬಿಸಲು ಯತ್ನಿಸಿದರು.
ಮುಂದುವರಿಯುವುದು
–ಆನಂದ ತೇಲ್ ತುಂಬ್ಡೆ
ಅನುವಾದ : ರಾಹು
ಸುದ್ದಿದಿನ.ಕಾಂ|ವಾಟ್ಸಾಪ್|9986715401