ದಿನದ ಸುದ್ದಿ

ಪ.ಜಾತಿ – ಪ.ಪಂಗಡದವರ ಮೇಲಿನ ದೌರ್ಜನ್ಯ ಖಂಡಿಸಿದರೆ, ನನಗೆ ಚಪ್ಪಲಿ ಹಾರ ಹಾಕುತ್ತಾರೆ :‌ ಜಿ.ಪಂ ಮಾಜಿ ಅಧ್ಯಕ್ಷ ಡಾ. ವೈ.ರಾಮಪ್ಪ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದವರ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ನಾನೊಬ್ಬ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ. ನನಗೆ ನಗರದ ಪ್ರಮುಖ ವೃತ್ತದಲ್ಲಿ ಚಪ್ಪಲಿ ಹಾರ ಹಾಕುತ್ತಾರೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ನೋವಿನಿಂದ ನುಡಿದರು.

ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆಯು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು,

ದೂರು ನೀಡಿ ಸಂಬಂಧಿಸಿದವರನ್ನು ಬಂಧಿಸಲು ಕೋರಿದರೆ, ಪೊಲೀಸರು ಆರೋಪಿಗಳು ಕಣ್ಮರೆಯಾಗಿದ್ದಾರೆ ಎಂದು ಸಬೂಬು ಹೇಳುತ್ತಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಮುಖ್ಯ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಹೇಗೆ ಸಾಧ್ಯ? ಇದು ಇಲಾಖೆಯ ವೈಫಲ್ಯವಲ್ಲವೇ? ನನ್ನಂತಹವನಿಗೇ ಹಾಗೆ ಆದರೆ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 500 ರಿಂದ 600 ಕ್ರಷರ್ ಮಾಲೀಕರಿದ್ದಾರೆ. ಇದರಲ್ಲಿ ಎಸ್‍ಸಿ/ಎಸ್‍ಟಿ ಜನಾಂಗದವರು ಎಷ್ಟು ಜನರಿದ್ದಾರೆ? ಸ್ಮಾರ್ಟ್ ಸಿಟಿ ಯೋಜನೆಯಡಿ ಈ ಜನಾಂಗದವರು ಇರುವ ಪ್ರದೇಶಗಳಲ್ಲಿ ಎಷ್ಟು ಕಾಮಗಾರಿಗಳಾಗಿವೆ? ಈ ಜಿಲ್ಲೆಯಲ್ಲಿ ಸಮಾನತೆ ಎಂಬುದು ಏನಾದರೂ ಇದ್ದರೆ ಅದು ಕರೊನಾದಿಂದ ಸತ್ತವರನ್ನು ಮಣ್ಣು ಮಾಡುವಲ್ಲಿ ಮಾತ್ರ ಇದೆ. ಬೇರೆಲ್ಲಿಯೂ ಇಲ್ಲ.

ಕಳೆದ 10 ವರ್ಷಗಳಲ್ಲಿ ಈ ಸಮುದಾಯದವರ ಮೇಲೆ ಎಷ್ಟು ದೌರ್ಜನ್ಯದ ಕೇಸ್‍ಗಳಾಗಿವೆ? ಎಷ್ಟರಲ್ಲಿ ಶಿಕ್ಷೆ ಆಗಿದೆ. ಎಷ್ಟು ‘ಬಿ’ ರಿಪೋರ್ಟ್ ಆಗಿದೆ ಮಾಹಿತಿ ಒದಗಿಸಿ. ಹಾಗೂ ಈ ಹಿಂದಿನ ಸಭೆಯ ಅನುಪಾಲನೆ ವರದಿಯೇ ಇಲ್ಲದೇ ಮುಂದಿನ ಸಭೆ ನಡೆಸುವುದು ಹೇಗೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version