ಬಹಿರಂಗ

‘ಧ್ರುವ್’ ಎಂಬ ಮಾಧ್ಯಮದ ‘ಧ್ರುವ ತಾರೆ’..!

Published

on

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದುದು. ಅದು ಪ್ರಜಾಪ್ರಭುತ್ವದ ಕಾವಲು ನಾಯಿ. ಸಶಕ್ತ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು, ಮುನ್ನೆಡೆಯಲು ಸಹಕಾರಿ. ಇಂದು ಆಳುವ ದೊರೆಗಳ ಹಿಡಿತದಲ್ಲಿರುವ ಬಹುತೇಕ ಮಾಧ್ಯಮಗಳು ಬಿಕರಿಯಾಗುತ್ತಿವೆ.ಇಂತಹ ಕಾಲ ಘಟ್ಟದಲ್ಲಿ ಸ್ವತಂತ್ರ ಪತ್ರಕರ್ತರ ಪಾತ್ರ ಗಣನೀಯವಾದದು, ಮಹತ್ವವಾದುದು.

ಇತ್ತೀಚಿಗೆ ಗೆಳೆಯ ರಾಧಾಕೃಷ್ಣ ಒಂದು YouTube ವಿಡಿಯೋ ಲಿಂಕ್ ಕಳಿಸಿದ್ದರು. ಎಂ.ಟೆಕ್., ಓದುತ್ತಿರುವ ಗೆಳೆಯನ ಆಸಕ್ತಿಗಳು ಹಲವಾರು. ಹಾಗಾಗಿ ಕುತೂಹಲದಿಂದಲೆ ಲಿಂಕ್ ತೆರೆದಾಗ, ಅದು ಪರಂಜಯ ಗುಹ ಥಾಕುರ್ತ ಅವರು, ಧ್ರುವ್ ರಾಟಿ( ರಾತಿ) ಅವರನ್ನು ಸಂದರ್ಶಿಸುತ್ತಿರುವ ಸುಮಾರು 32 ನಿಮಿಷಗಳ ವಿಡಿಯೋ ಅದಾಗಿತ್ತು.

ನಾನು ಈ ಧ್ರುವ್ ಹೆಸರು ಕೇಳಿದ್ದೆ, ವಿಡಿಯೋ ನೋಡಿರಲಿಲ್ಲ. ಆದರೆ ಸಂದರ್ಶನ ಮಾಡುತ್ತಿರುವ ಥಾಕುರ್ತ ಭಾರತದ ಹಿರಿಯ ಪತ್ರಕರ್ತರು, ಈ ಮೊದಲು ಪ್ರತಿಷ್ಠಿತ Economic and political weekly ( EPW) ಯ ಸಂಪಾದಕರಾಗಿದ್ದವರು. ಹಾಗಾಗಿ ವಿಡಿಯೋ ನೋಡಲು ಕುತೂಹಲ ಹೆಚ್ಚಿತು. ಅಂದರೆ ಅಂತಹ ಹಿರಿಯ ಪತ್ರಕರ್ತರು ಕೇವಲ 24 ವರ್ಷದ You tuber ನನ್ನು ಸಂದರ್ಶಿಸುವುದು ನನ್ನ ಕುತೂಹಲಕ್ಕೆ ಕಾರಣವಾಗಿತ್ತು.

ಈ ಧ್ರುವ್ ರಾತಿ, ಒಬ್ಬ You tuber, ಅಂದರೆ YouTube ನಲ್ಲಿ ಸ್ವತಂತ್ರವಾಗಿ ಚಾನಲ್ ನಡೆಸುತ್ತಿರುವ ಒಬ್ಬ ಪತ್ರಕರ್ತ. ಓದಿದ್ದು B.E., ಆದರೆ ಈ ಕ್ಷೇತ್ರಕ್ಕೆ ಬಂದು ತುಂಬಾ ಸದ್ದು ಮಾಡುತ್ತಿರುವ ಒಬ್ಬ ಯುವ ಮಾಧ್ಯಮ ಮಿತ್ರ.

ಯೂರೋಪ್ ನ ಯಾವುದೋ ಮೂಲೆಯಲ್ಲಿ ಕುಳಿತು ಭಾರತದ ಆಗುಹೋಗುಗಳು, ಸರ್ಕಾರದ ಯೋಜನೆಗಳ ಕುರಿತು, ಮೋದಿ ಅವರ ಭಾಷಣಗಳನ್ನು ಕುರಿತು ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಅವುಗಳ ಮೂಲಕ ಮುಖ್ಯ ವಾಹಿನಿಯ ಮಾಧ್ಯಮಗಳು ಎತ್ತದ ಹಲವು ಪ್ರಶ್ನೆಗಳನ್ನು ನೇರವಾಗಿ, ದಿಟ್ಟವಾಗಿ ಎತ್ತಿದ್ದಾರೆ.

ದ್ರುವ್ ರಾತಿ ಅವರ ಯೂಟ್ಯೂಬ್ ಚಾನೆಲ್ ಲಿಂಕ್

https://www.youtube.com/user/dhruvrathee

ಆಳುವ ಸರ್ಕಾರ ದಾರಿ ತಪ್ಪಿದಾಗ ಅದನ್ನು ಸರಿ ದಾರಿಗೆ ತರಲು ಟೀಕಿಸುವದು, ಪ್ರಶ್ನಿಸುವುದು ಮತ್ತು ಅವಶ್ಯವಿದ್ದಾಗ ಬೆನ್ನು ತಟ್ಟುವುದು ಇದು ನಿಜವಾದ ಪತ್ರಕರ್ತನ ಲಕ್ಷಣ. ಈ ಕೆಲಸವನ್ನು ಧ್ರುವ್ ಚೆನ್ನಾಗಿ ಮಾಡುತ್ತಿದ್ದಾರೆ.ಅವರ ವಿಡಿಯೋಗಳನ್ನು ಲಕ್ಷಾಂತರ ಜನರು ನೋಡುತ್ತಿದ್ದಾರೆ. ಧ್ರುವ್ ಅವರನ್ನು ಹಲವು ಹಿರಿಯ ಪತ್ರಕರ್ತರು ಸಂದರ್ಶಿಸಿದ್ದಾರೆ.

ಧ್ರುವ್ ಖಚಿತವಾದ ನಿಲುವನ್ನು ಹೊಂದಿರುವ ಪತ್ರಕರ್ತ. ಆಳುವ ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಎತ್ತಲು ಹಲವು ಮಾಧ್ಯಮಗಳು ವಿಫಲವಾಗಿರುವ ಈ ಸಂದರ್ಭದಲ್ಲಿ ಧ್ರುವ್ ನಿಲುವು ಮತ್ತು ಅಭಿಪ್ರಾಯಗಳು ಸ್ವಾಗತಾರ್ಹ.

ಜೊತೆಗೆ ಈ ಮೇಲೆ ಹೇಳಿದ ವಿಡಿಯೋದಲ್ಲಿ ನಾನು ಗುರುತಿಸಿದ ವಿಶಿಷ್ಟ ಸಂಗತಿಯೆಂದರೆ ಧ್ರುವ್ ನ ಕೆಲವು ನಿಲುವುಗಳಿಗೆ ಥಾಕುರ್ತ ಅವರು ಸ್ಪಷ್ಟ ಮತ್ತು ಖಚಿತ ಭಿನ್ನಾಭಿಪ್ರಾಯ ದಾಖಲಿಸುವ ರೀತಿ ಮತ್ತು ಅದನ್ನು ಧ್ರುವ್ ಸ್ವೀಕರಿಸುವ ರೀತಿ ಎರಡೂ ಮಾದರಿಯಾಗಿವೆ. ಇತ್ತೀಚಿಗೆ ಭಿನ್ನಾಭಿಪ್ರಾಯಕ್ಕೆ ಬೆಲೆಯೆ ಇಲ್ಲದ ಕಾಲದಲ್ಲಿ ಇದು ಅನುಕರಣೀಯ. ಸಾಮಾನ್ಯ ಜನರ ಗ್ರಹಿಕೆಯ ಗಡಿಗಳನ್ನು ಹಾಗೂ ಅರಿವಿನ ಎಲ್ಲೆಗಳನ್ನು ವಿಸ್ತರಿಸಲು ಧ್ರುವ್ ನಂತಹ ಪತ್ರಕರ್ತರು ಅವಶ್ಯಕ.

-ಸಂತೋಷ ಉಂಡಾಡಿ
ಸಹಾಯಕ ಪ್ರಾಧ್ಯಾಪಕರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version