ಬಹಿರಂಗ
ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ : ನಮ್ಮ ಸೈನಿಕರು ಕೊಂದು ಹಾಕಿದ ಐವರು ಉಗ್ರರಲ್ಲಿ ‘ದೇವಿಂದರ್ ಸಿಂಗ್’ ಕಳಿಸಿದ ಆ ವ್ಯಕ್ತಿಯೂ ಇದ್ದ..!
- ಹರ್ಷಕುಮಾರ ಕುಗ್ವೆ
2001 ರಲ್ಲಿ ಸಂಸತ್ ಭವನದ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯ ನಿಜವಾದ ಮಾಸ್ಟರ್ ಮೈಂಡ್ ಒಬ್ಬ ಶನಿವಾರ ಜಮ್ಮು ಪೊಲೀಸರಿಗೆ ಇನ್ನೂ ಮೂವರು ಹಿಜ್ಬುಲ್ ಭಯೋತ್ಪಾದಕರ ಜೊತೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನ ಹೆಸರು ದೇವಿಂದರ್ ಸಿಂಗ್. ಈತ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಹಾಲಿ DYSPಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ.
ಪಾರ್ಲಿಮೆಂಟ್ ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲಿಗೆ ಏರಿಸಲಾಗಿರುವ ಅಫ್ಜಲ್ ಗುರು 2004 ರಲ್ಲಿ ತಿಹಾರ್ ಜೈಲಿನಿಂದ ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಈ ದೇವಿಂದರ್ ಸಿಂಗ್ ಕುರಿತು ವಿವರವಾಗಿ ತಿಳಿಸಿದ್ದ. ಅಫ್ಜಲ್ ಗುರು ಪ್ರಕಾರ 2001ರಲ್ಲಿ ಸಂಸತ್ತಿನ ಮೇಲೆ ನಡೆಸಿದ ದಾಳಿಗೆ ಮೊದಲು ಅಫ್ಜಲ್ ಗುರುವನ್ನು ಬಂಧಿಸಿ ಕ್ರೂರವಾಗಿ ಚಿತ್ರಹಿಂಸೆ ನೀಡಿಲಾಗಿತ್ತು.
ಹಾಗೆ ಚಿತ್ರಹಿಂಸೆ ನೀಡಿದ ಪೊಲೀಸ್ ಆಫೀಸರುಗಳಲ್ಲಿ ದೇವಿಂದರ್ ಸಿಂಗ್ ಕೂಡಾ ಇದ್ದ. ಮಾತ್ರವಲ್ಲ ಅಫ್ಜಲ್ ಗುರುವನ್ನು ಬಿಡುವುದಾದರೆ 10 ಲಕ್ಷ ರೂಪಾಯಿ ಕೊಡಬೇಕು ಎಂದು ತಾಕೀತು ಮಾಡಿದ್ದರು. ತನ್ನ ಹೆಂಡತಿಯ ಬಂಗಾರವನ್ನು ಮಾರಿ ಅಫ್ಜಲ್ ಗುರು 8 ಲಕ್ಷ ರೂಪಾಯಿ ಹೊಂದಿಸಿ ಕೊಟ್ಟಿದ್ದ. ಕೆಲವೇ ದಿನಗಳ ಹಿಂದೆ ಕೊಂಡಿದ್ದ 24 ಸಾವಿರ ರೂಪಾಯಿಯ ಬೈಕನ್ನುವಶಪಡಿಸಿಕೊಂಡಿದ್ದರು.
ಕೊನೆಗೆ ಮತ್ತೊಬ್ಬ ಪೊಲೀಸ್ ಅಫೀಸರನ ಬಾವನಾದ ಅಲ್ತಾಫ್ ಹುಸೇನನ ಮಕ್ಕಳಿಗೆ ಟ್ಯೂಶನ್ ಹೇಳಿಕೊಡುವಂತೆ ಅಫ್ಜಲ್ ಗುರುವಿಗೆ ಹೇಳಲಾಗಿತ್ತು. ಕೊನೆಗೆ 2001 ರಲ್ಲಿ ಅದೇ ಅಲ್ತಾಫನೇ ಅಫ್ಜಲ್ ಗುರುವನ್ನು ದೇವಿಂದರ್ ಸಿಂಗ್ ಬಳಿಗೆ ಕೊಂಡೊಯ್ದಿದ್ದ. ಅಗ ದೇವಿಂದರ್ ಸಿಂಗ್ ಅಫ್ಜಲ್ ಗುರುವಿಗೆ ತನಗೆ ಒಂದು ಸಣ್ಣ ಸಹಾಯ ಮಾಡಲು ಕೇಳಿಕೊಂಡ.
ಒಬ್ಬ ವ್ಯಕ್ತಿಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅವನಿಗೆ ಕೆಲ ದಿನಗಳ ಕಾಲ ಊಟ, ವಸತಿ ವ್ಯವಸ್ಥೆ ಮಾಡಲು ಹೇಳಿದ್ದ. ಅಫ್ಜಲ್ ಗುರು ಅದೇ ರೀತಿ ಮಾಡಿದ್ದ. ಆದರೆ ಆತ ಯಾರು, ದೇವಿಂದರ್ ಸಿಂಗ್ ಅವನನ್ನು ಯಾಕೆ ತನ್ನ ಬಳಿ ಬಿಟ್ಟಿದ್ದಾನೆ ಎಂದು ಅಫ್ಜಲ್ ಗುರುಗೆ ಗೊತ್ತಿರಲಿಲ್ಲ. ಅವನಾಡುವ ಭಾಷೆ ನೋಡಿದಾಗ ಅವನು ಕಾಶ್ಮೀರಿಯೂ ಆಗಿರಲಿಲ್ಲ. 2001 ರ ಡಿಸೆಂಬರ್ 13 ರಂದು ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕ ದಾಳಿ ನಡೆದು ನಮ್ಮ ಸೈನಿಕರು ಕೊಂದು ಹಾಕಿದ ಐವರು ಉಗ್ರರಲ್ಲಿ ದೇವಿಂದರ್ ಸಿಂಗ್ ಕಳಿಸಿದ ಆ ವ್ಯಕ್ತಿಯೂ ಇದ್ದ..!
ಅಫ್ಜಲ್ ಗುರು ಹೇಳಿದ್ದ ವಿಷಯಗಳ ಕುರಿತಾಗಿ 2006 ರಲ್ಲಿ ದೇವಿಂದರ್ ಸಿಂಗ್ ನನ್ನು ಪರ್ವೆಝ್ ಬುಕಾರಿ ಎಂಬ ಪತ್ರಕರ್ತ ಪ್ರಶ್ನಿಸಿದಾಗ ದೇವಿಂದರ್ ಸಿಂಗ್ ತಾನು ಅಫ್ಜಲ್ ಗುರುನನ್ನು ಹಿಂಸಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದ.
ಈಗ ಅದೇ ದೇವಿಂದರ್ ಸಿಂಗ್ ಹಿಜ್ಬುಲ್ ಮುಜಾಹಿದೀನ್ ನ ಮೂವರು ಉಗ್ರರನ್ನು ತನ್ನದೇ ಪೊಲೀಸ್ ಇಲಾಖೆಯ ಕಣ್ತಪ್ಪಿಸಿ ವೇಗವಾಗಿ ಕಾರಿನಲ್ಲಿ ಸಾಗಿಸುತ್ತಿರುವಾಗ ಡೆಪ್ಯುಟಿ ಇನ್ಸ್ ಪೆಕ್ಟರ್ ಆಫ್ ಪೊಲೀಸ್ ಜನರಲ್ ಅತುಲ್ ಗೋಯೆಲ್ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಉಗ್ರರು ಹೋಗುತ್ತಿರುವ ಖಚಿತ ಮಾಹಿತಿಯ ಮೇರೆಗೆ ಬಂಧಿಸಿದ್ದಾರೆ. ಉಗ್ರರನ್ನು ಸಾಗಿಸುತ್ತಿದ್ದ DySP ದೇವಿಂದರ್ ಸಿಂಗ್ ನನ್ನು ನೋಡಿದ್ದೇ ಅತುಲ್ ಗೋಯೆಲ್ ಅವನ ಕಪಾಳಕ್ಕೆ ಎರಡು ಬಿಟ್ಟಿದ್ದಾರೆ…
ಈಗ RAW, CIBಸೇರಿದಂತೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮೊನ್ನೆ ಭಾನುವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಪೊಲೀಸ್ ಅಧಿಕಾರಿಗಳು ದೇವಿಂದರ್ ಸಿಂಗ್ ನನ್ನು ಉಗ್ರರಲ್ಲಿ ಒಬ್ಬ ಎಂದು ಪರಿಗಣಿಸಿಯೇ ತನಿಖೆ ನಡೆಸಲಾಗುವುದು ಎಂದಿದ್ದಾರೆ.
1990ರ ದಶಕದಿಂದ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯಲ್ಲಿ ಇರುವ ದೇವಿಂದರ್ ಸಿಂಗ್ ಗೂ ಸಂಸತ್ ಮೇಲಿನ ದಾಳಿಗೂ ಏನು ಸಂಬಂಧ?
ಚುನಾವಣಾ ಸಮಯದಲ್ಲಿ ನಡೆದ ಪುಲ್ವಾಮಾ ದಾಳಿಗೂ ದೇವಿಂದರ್ ಸಿಂಗ್‌ಗೂ ಏನಾದರೂ ಸಂಬಂಧ ಇತ್ತೇ?
ಕಳೆದ ವರ್ಷ ಅಕ್ಟೋಬರ್ ನಲ್ಲಿ ಅನಾರೋಗ್ಯದಿಂದ ತೀರಿಕೊಂಡ ದೆಹಲಿಯ ಪ್ರಾಧ್ಯಾಪಕ ಎಸ್ ಎ ಆರ್ ಗಿಲಾನಿಯವರನ್ನು ಸಂಸತ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಎಂದು ಆರೋಪಿಸಿ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿ ವರ್ಷಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. ಆದರೆ ಕೊನೆಗೆ ನ್ಯಾಯಾಲಯದ ವಿಚಾರಣೆ ನಂತರದಲ್ಲಿ ಗಿಲಾನಿಯವರು ನಿರಪರಾಧಿ ಎಂದು ಸಾಬೀತಾಗಿ ಬಿಡುಗಡೆಯಾಗಿದ್ದರು.
ಅವರು ಅಫ್ಜಲ್ ಗುರುವಿನ ಮುಗ್ಧತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು. ಸಂಸತ್ ದಾಳಿ ಪ್ರಕರಣದಲ್ಲಿ ಅಫ್ಜಲ್ ಗುರುನನ್ನು ಸಿಕ್ಕಿಸಲಾಗಿದೆ ಎಂದು ಗಿಲಾನಿ ಹೇಳಿದ್ದರು. ಈಗ ದೇವಿಂದರ್ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಗಿಲಾನಿಯವರ ಮಾತು ಮಹತ್ವ ಪಡೆಯುತ್ತಿದೆ.
2013 ರಲ್ಲಿ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡುವಾಗ ಸುಪ್ರೀಂ ಕೋರ್ಟು “Public Conscience” ತೃಪ್ತಿಪಡಿಸುವ ದೃಷ್ಟಿಯಿಂದ ಅಫ್ಜಲ್ ಗುರು ಗೆ ಮರಣ ದಂಡನೆ ನೀಡಬೇಕು ಎಂದು ತೀರ್ಪು ನೀಡಿತ್ತೇ ವಿನಃ ತನಿಖಾ ಸಂಸ್ಥೆಗಳು ಸೂಕ್ತ ಸಾಕ್ಷಾಧಾರ ನೀಡಲು ವಿಫಲವಾಗಿದ್ದವು. ಈಗ ದೇವಿಂದರ್ ಸಿಂಗ್ ಬಂಧನದ ಹಿನ್ನೆಲೆಯಲ್ಲಿ ಅಫ್ಜಲ್ ಗುರು ಎಸಗಿದ್ದ ಅಪರಾಧವನ್ನು ಸಾಬೀತು ಮಾಡುವ ಸೂಕ್ತ ಸಾಕ್ಷ್ಯ ದೊರೆಯಬಹುದು. ಸಿಗಲಿ ಎಂದು ಆಶಿಸೋಣ.
ದೇವಿಂದರ್ ಸಿಂಗ್ ನಂತಹ ಹಿರಿಯ ಪೊಲೀಸ್ ಅಧಿಕಾರಿಯೇ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಕೈಗೂಡಿಸಿಕೊಂಡು ದೇಶದ್ರೋಹದ ಕೆಲಸ ಮಾಡುತ್ತಿರುವಾಗ ನಮ್ಮ ದೇಶ ಎಷ್ಟು ಸುರಕ್ಷಿತವಾಗಿರಲು ಸಾಧ್ಯ?
ಗಡಿಯಲ್ಲಿ ನಿಂತು ಪ್ರಾಣ ಕೊಡುತ್ತಿರುವ ನಮ್ಮ ಸಹೋದರರಿಗೆ ದ್ರೋಹ ಎಸಗುತ್ತಿರುವ ಇಂತಹ ಅಧಿಕಾರಿಗಳ ಹಿಂದೆ ಇನ್ನೂ ಯಾರಿದ್ದಾರೆ ಎಂಬುದು ಇಂಚಿಂಚೂ ತನಿಖೆಯಾಗಲಿ… ಸತ್ಯ ಹೊರಬರಲಿ.
ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ
https://thewire.in/security/ajit-doval-davinder-singh-terrorism/amp/
ಸುದ್ದಿದಿನ.ಕಾಂ|ವಾಟ್ಸಾಪ್|9980346243