ರಾಜಕೀಯ
ಸಚಿವ ಸುರೇಶ್ ಕುಮಾರ್ ರಾಜಕೀಯ ಭವಿಷ್ಯದ ನಿರ್ಧಾರಕ್ಕಿದು ಸಕಾಲ..! : ಸಚಿವರ ಮುಂದಿರೋ ಎರಡು ದಾರಿಗಳು..!
ಜಿ.ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಣ ಇಲಾಖೆಯ ಬಗ್ಗೆ ಆರೋಪ ಮಾಡುವುದು ಬಿಡಿ, ಕನಿಷ್ಠ ಇಲಾಖೆಯ ಬಗ್ಗೆ ಪಾಸಿಂಗ್ ಕಮೆಂಟ್ ಮಾಡಲೂ ರಾಜಕಾರಣಿಗಳು ಹೆದರುತ್ತಿದ್ದರು. ಅದಕ್ಕೆ ಕಾರಣ ಗೋವಿಂದೇಗೌಡರು ಇಲಾಖೆಯಲ್ಲಿ ತಂದಿದ್ದ ಶಿಸ್ತು. ಅವತ್ತಿನಿಂದ ಇವತ್ತಿವರೆಗೆ ಶಿಕ್ಷಣ ಇಲಾಖೆಯೆಂದರೆ ಆ ಗತ್ತು, ಗೌರವ ಉಳಿಸಿಕೊಂಡು ಬಂದಿದೆ. ಎಸ್ ಸುರೇಶ್ ಕುಮಾರ್ ರವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಳಿಕ ಇಲಾಖೆ ಬಗ್ಗೆ ಬೀದಿ ಬೀದಿಯಲ್ಲಿ ಮಾತನಾಡುವಂತಾಗಿದೆ. ಪ್ರತಿಭಟನೆಗಳು ಭುಗಿಲೇಳುತ್ತಿದೆ.
ಎಸ್ ಸುರೇಶ್ ಕುಮಾರ್ ಶಿಕ್ಷಣ ಸಚಿವರಾದ ಮೇಲೆ ವಿದ್ಯಾರ್ಥಿ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಖಾಸಾಗಿ ಶಿಕ್ಷಣ ಮಾಫಿಯಾಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಸುರೇಶ್ ಕುಮಾರ್ ರಿಂದಾಗಿ ಇಷ್ಟೆಲ್ಲಾ ಸಮಸ್ಯೆಗಳು ಉದ್ಭವಿಸುತ್ತಿದೆ ಅನ್ನೋದಂತೂ ಸ್ಪಷ್ಟ.
ದಕ್ಷ, ಪ್ರಾಮಾಣಿಕ ಎಂಬ ವರ್ಚಸ್ಸನ್ಜು ಹೊಂದಿದ್ದ ಎಸ್ ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಾಗ ರಾಜ್ಯದ ಪ್ರಜ್ಞಾವಂತರು ಹಲವು ನಿರೀಕ್ಷೆಗಳನ್ನು ಹೊಂದಿದ್ದರು. ಅದೆಲ್ಲವನ್ನೂ ಸುರೇಶ್ ಕುಮಾರ್ ಹುಸಿ ಮಾಡಿದ್ರು. ಸುರೇಶ್ ಕುಮಾರ್ ರವರ ಸೈಟ್ ಹಗರಣ, ಮಾರುಕಟ್ಟೆ ದರ ವಂಚನೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ ಪ್ರಕರಣಗಳನ್ನೆಲ್ಲಾ ಜನ ಮರೆತು ಶಿಕ್ಷಣ ಸಚಿವರನ್ನಾಗಿ ಸ್ವೀಕರಿಸಿದರು. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸುರೇಶ್ ಕುಮಾರ್ ಗೆ ಇರಬೇಕಿತ್ತು.
ಶಾಲೆಯನ್ನು ಆರಂಭಿಸಿ ಎಂದು ಮನವಿ ಕೊಟ್ಟದ್ದು ಖಾಸಗಿ ಶಾಲೆಗಳು ಮಾತ್ರ. ಸಾಮಾಜಿಕ ಜಾಲತಾಣಿಗರು, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಶಾಲೆ ಆರಂಭಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಜನಾಭಿಪ್ರಾಯವನ್ನು ಈ ರೀತಿ ಒಬ್ಬ ಜನಪ್ರತಿನಿಧಿ ಕಸದ ಬುಟ್ಟಿಗೆ ಹಾಕಿದ್ದು ಇದೇ ಮೊದಲು ! ಎಲ್ಲರನ್ನೂ ದಿಕ್ಕರಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಡೊನೇಷನ್ ವಸೂಲಿಗೆ ಅವಕಾಶ ಕೊಡಲು ಶಾಲೆ ಆರಂಭಿಸಲು ತಯಾರಿಯನ್ನು ಶಿಕ್ಷಣ ಸಚಿವರು ಮಾಡುತ್ತಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸದೇ ಎಲ್ಲರನ್ನೂ ಪಾಸ್ ಮಾಡಲು ಇರೋ ಅಡ್ಡಿ ಆತಂಕಗಳೇನು ? ಎಂಬುದನ್ನು ಪ್ರಾಜ್ಞರಾದ ಸುರೇಶ್ ಕುಮಾರ್ ಜನರಿಗೆ ತಿಳಿಸಬೇಕು. ಲಕ್ಷ ಲಕ್ಷ ವಿದ್ಯಾರ್ಥಿಗಳ ಪ್ರಾಣ ಒತ್ತೆ ಇಟ್ಟು ಪರೀಕ್ಷೆ ನಡೆಸುವ ಅಗತ್ಯ ಏನು ? ವಿದ್ಯಾರ್ಥಿಗೆ ಬಂದ ಅಂಕ, ರ್ಯಾಂಕ್ ಆಧರಿಸಿ ಖಾಸಗಿ ಶಾಲೆಗಳು ಬಿಸಿನೆಸ್ ಮಾಡಬಹುದು ಎಂಬುದನ್ನು ಬಿಟ್ಟು ಬೇರೆ ಪ್ರಯೋಜನವೇನಾದ್ರೂ ಇದೆಯೇ ?
ರ್ಯಾಂಕ್ ಬಂದರೆ ಪ್ರತಿಷ್ಠಿತ ಖಾಸಗಿ ಶಾಲೆಗಳು ಉಚಿತ ಎಜುಕೇಶನ್ ಕೊಟ್ಟು ಆ ವಿದ್ಯಾರ್ಥಿಯ ಫೋಟೋ ಹಾಕಿ ತನ್ನ ಶಾಲೆಯಲ್ಲಿ ಜಾಹೀರಾತಿಗೆ ಬಳಸುತ್ತಾರೆ. ಕಡಿಮೆ ಅಂಕ ಬಂದವರು ರ‌್ಯಾಂಕ್ ಸ್ಟುಡೆಂಟ್ಸ್ ಕಲೀತಿರೋ ಶಾಲೆಯಲ್ಲಿ ಕಲಿಯಬೇಕಾದರೆ ಭಾರೀ ಮೊತ್ತದ ಡೊನೇಷನ್ ನೀಡಬೇಕು. ಇದಲ್ಲದೇ ಬೇರೆ ಯಾವ ಪ್ರಯೋಜನವೂ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಇಲ್ಲ. ಎಸ್ಎಸ್ಎಲ್ಸಿ ರ‌್ಯಾಂಕ್ ನೋಡಿ ಎಲ್ಲೂ ಕೆಲಸವಂತೂ ಸಿಗೋ ಅವಕಾಶವಿಲ್ಲ. ಕಾಲೇಜುಗಳಲ್ಲಿ ಸೀಟು ಪಡೆಯಲಷ್ಟೇ ಅಂಕಗಳು ಮತ್ತು ರ‌್ಯಾಂಕ್ ಗಳು ಪ್ರಯೋಜನಕಾರಿ. ಇದೊಂದು ಪಕ್ಕಾ ಖಾಸಗಿ ಶಾಲಾ ಮಾಫಿಯಾ !
ಜೂನ್ 07 ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಶಿಕ್ಷಕರು ಮತ್ತು ಮಕ್ಕಳನ್ನು ಜೀವನ್ಮರಣ ಸ್ಥಿತಿಗೆ ತಳ್ಳುವ ಪರೀಕ್ಷೆಯನ್ನು ನಡೆಸಕೂಡದು ಎಂಬುದು ಅದ್ಯಾಪಕರ ಆಗ್ರಹ. ನೂರಾರು ಶಿಕ್ಷಕರು, ಲಕ್ಷಾಂತರ ವಿದ್ಯಾರ್ಥಿಗಳು, ಲಕ್ಷಾಂತರ ಪೋಷಕರ ಅಭಿಪ್ರಾಯವನ್ನು ಧಿಕ್ಕರಿಸಿ ಕೈಗೊಳ್ಳುವ ನಿರ್ಧಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎನ್ನೋ ಅಂಗೈ ಹುಣ್ಣಿಗೆ ಕನ್ನಡಿ ಬೇಡ.
ಸಚಿವ ಸುರೇಶ್ ಕುಮಾರ್ ಜನವಿರೋಧಿ ನಿರ್ಧಾರ ವಿರೋಧಿಸಿ ಜೂನ್ 07 ರಂದು ನಡೆಯುವ ಪ್ರತಿಭಟನೆಗೆ ಪೂರಕವಾಗಿ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಸೋಶಿಯಲ್ ಮೀಡಿಯಾ ಕ್ಯಾಂಪೇನ್ ಮಾಡಲು ನಿರ್ಧರಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಒಂದೋ ಸುರೇಶ್‌ಕುಮಾರ್ ಜನಾಭಿಪ್ರಾಯಕ್ಕೆ ಮಣಿದು ಪರೀಕ್ಷೆ ರದ್ದು, ಶಾಲೆ ಆರಂಭಗೆ ತಡೆ ನೀಡುವ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದೇ ಇದ್ದರೆ ರಾಜೀನಾಮೆ ಕೊಡಬೇಕು. ಇವೆರಡೇ ದಾರಿ ಸುರೇಶ್ ಕುಮಾರ್ ಇರುವುದು !
ಸುದ್ದಿದಿನ.ಕಾಂ|ವಾಟ್ಸಾಪ್|9980346243