ದಿನದ ಸುದ್ದಿ
‘ಮತ ಚಲಾಯಿಸಿ ಸೆಲ್ಫಿ ಕಳುಹಿಸಿ’ : ಬಹುಮಾನ ಗೆಲ್ಲಿ..!
ಸುದ್ದಿದಿನ,ಧಾರವಾಡ: 18 ವರ್ಷ ಪೂರ್ಣಗೂಂಡ ಯವಕ, ಯುವತಿಯರು ಫಾರಂ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಅರ್ಹರು ಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಿದ ನಂತರ, ನಿಮ್ಮ ಕೈ ಬೆರಳಿನ ಶಾಹಿ ಕಾಣುವ ಹಾಗೆ ಸೆಲ್ಫಿ ತೆಗೆದುಕೊಂಡು ಸ್ವೀಪ್ ಸಮಿತಿಗೆ ಕಳುಹಿಸಬೇಕು. ಜಿಲ್ಲಾಡಳಿತದಿಂದ ಅತ್ಯುತ್ತಮ ಸೆಲ್ಫಿಗೆ ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಡಾ. ಬಿ.ಸಿ. ಸತೀಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ವೀಪ್ ಸಮಿತಿ ಅಡಿಯಲ್ಲಿ ಆಯೋಜಿಸಿರುವ ಮತದಾರರ ಜಾಗೃತಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಅಂಜುಮನ್ ಮಹಾವಿದ್ಯಾಲಯದ ಆವರಣದಲ್ಲಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ, ಮಾತನಾಡಿದರು.
ಮತದಾನ ಪ್ರತಿಯೊಬ್ಬರ ಪವಿತ್ರ ಕರ್ತವ್ಯ ಮತ್ತು ಹಕ್ಕು ಆಗಿದೆ. ಪ್ರಜ್ಞಾವಂತ ಯುವಜನರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಭಾಗೀದಾರರಾಗಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಮೂಲಕ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರೇರೇಪಿಸಬೇಕು ಎಂದರು.
ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಪದವಿ ವಿದ್ಯಾಲಯದ ಚುನಾವಣಾ ಸಾಕ್ಷರತಾ ಕ್ಲಬ್‌ನ ರಾಯಭಾರಿ ಸಚಿನ್ ಸಾಲಿಮಠ, ಸದಸ್ಶರಾದ ರಮೇಶ ವಾಲೀಕಾರ, ಬಸವರಾಜ ನಂದಪ್ಪನವರ, ಉಮರ್ ಜಕಾತಿ, ರುದ್ರಪ್ಪ ಮರೇವಾಡ ಅವರು ಸೈಕಲ್ ಜಾಥಾ ಮೂಲಕ ಅಮ್ಮಿನ ಭಾವಿ, ಹಾರೋಬೆಳವಡಿ, ಮನಸೂರ, ಮನಗುಂಡಿ, ಕ್ಯಾರಕೊಪ್ಪ, ನುಗ್ಗಿಕೇರಿ, ಕಣವಿ ಹೊನ್ನಾಪೂರ, ಹುಬ್ಬಳ್ಳಿ ಭೈರಿದೇವರ ಕೊಪ್ಪ, ಸತ್ತೂರಗಳಲ್ಲಿ ಸಂಚರಿಸಿ ಮಾರ್ಚ್ 16 ರಂದು ಸಾಯಂಕಾಲ 4 ಕ್ಕೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣ ತಲುಪುವರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ, ಕೆ.ಎಮ್. ಶೇಖ್, ಜೆ.ಎನ್. ನಂದನ್, ಪ್ರೊ.ಎಂ.ಎಂ. ಜವಳಿ, ಪ್ರೊ. ಆರ್.ಬಿ. ಸೋನೆಖಾನ್, ಎಂ.ಎಸ್. ಕಿಲ್ಲೇದಾರ ಹಾಗೂ ಕಿಟೆಲ್, ಅಂಜುಮನ್ ಹಾಗೂ ಸರ್ಕಾರಿ ಮಹಿಳಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401