ನೆಲದನಿ
ಬಹುಮುಖಿ ಕಲಾಪ್ರತಿಭೆ : ‘ಈಶ್ವರ್ ಹತ್ತಿ’ ಅವರ ಬದುಕಿನ ಸುತ್ತ
ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕವು ತನ್ನ ಶ್ರೀಮಂತಿಕೆಯಲ್ಲಿ ಉತ್ತುಂಗ ಶಿಖರಕ್ಕೆರಿದೆ. ಇದು ಅತಿಶಯೋಕ್ತಿಯೆನಿಸಿದರೂ ವಾಸ್ತವಕ್ಕೆ ದೂರವಾದ ಮಾತಲ್ಲ. ಇಂದು ಕನ್ನಡ ನಾಡು ವಿವಿಧ ಸಾಂಸ್ಕøತಿಕ ವಲಯಗಳ ಮೂಲಕವಾಗಿ ಕಂಗೊಳಿಸುತ್ತಿದೆ. ಇದಕ್ಕೆ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಕನ್ನಡ ನಾಡಿನ ಈ ಸಾಂಸ್ಕøತಿಕ ಶ್ರೀಮಂತಿಕೆಗೆ ಹಲವಾರು ಮಹಾನಿಯರು ಹೆಗಲುಕೊಟ್ಟು ದಣಿದಿದ್ದಾರೆ, ದುಡಿದಿದ್ದಾರೆ. ಇದರಿಂದಾಗಿ ಕನ್ನಡ ನಾಡು ಹಾಗೂ ಕನ್ನಡ ಸಾರಸ್ವತ ಲೋಕವು ಶ್ರೀಮಂತಿಕೆಯ ಆಗರವಾಗಿ ಕಂಗೊಳಿಸುತ್ತಿದೆ. ಇಂತಹ ಶ್ರೀಮಂತ ಸಾಂಸ್ಕøತಿಕ ಹಿರಿಮೆಗೆ ಹೆಗಲುಕೊಟ್ಟು ದುಡಿದವರಲ್ಲಿ ಬಹುಮುಖಿ ಕಲಾಪ್ರತಿಭೆಯಾದ ಈಶ್ವರ್ ಹತ್ತಿಯವರು ಒಬ್ಬರಾಗಿದ್ದಾರೆ. ಎಲೆ ಮರೆಯ ಕಾಯಿಯಂತಿರುವ ಶ್ರೀಯುತರ ಸಾಹಿತ್ಯ ಹಾಗೂ ಕಲಾ ಸೇವೆಯನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಬಹುಮುಖ್ಯ ಆಶಯವಾಗಿದೆ.
ಶ್ರೀಯುತ ಈಶ್ವರ್ ಹತ್ತಿಯವರು ಯಲಬುರ್ಗಾ ತಾಲ್ಲೂಕು ಗುನ್ನಾಳ ಗ್ರಾಮದಲ್ಲಿ ಶ್ರೀ ಹನುಮಪ್ಪ ಹಾಗೂ ಶ್ರೀಮತಿ ಕಳಕಮ್ಮ ದಂಪತಿಗಳ ಮಗನಾಗಿ ದಿನಾಂಕ: 1ನೇ ಮೇ 1955 ರಲ್ಲಿ ಜನ್ಮತಾಳಿದರು. ಗ್ರಾಮೀಣ ಬದುಕಿನ ಕೂಡು ಕುಟುಂಬದಲ್ಲಿ ಬೆಳೆದುಬಂದ ಇವರು, ತಮ್ಮ ಸೋದರ ಮಾವನವರಾದ ಕಲ್ಲಪ ಮಾಸ್ತರರ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದರು. ಮುಂದೆ ಬದುಕಿನ ಹಾದಿಯ ರೂಪುರೇಷೆಗಳನ್ನು ತಮ್ಮ ಮಾವನವರಿಂದ ಪಡೆದುಕೊಂಡರು. ಎಂ.ಎ, ಎಲ್.ಎಲ್.ಬಿ ಪದವಿಯನ್ನು ಪಡೆದ ಈಶ್ವರ್ ಹತ್ತಿಯವರು ಇಂಜಿನಿಯರ್ ಇಲಾಖೆಯಲ್ಲಿ ‘ಸ್ಟೋರ್ ಸೂಪರಿಡೆಂಟ್’ ಆಗಿ ತಮ್ಮ ವೃತ್ತಿ ಜೀವನವನ್ನು ನಿರ್ವಹಿಸಿದರು. ಇವರು ಈ ವೃತ್ತಿಯ ಜೊತೆಯಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡರು. ಇವರಲ್ಲಿ ಅಂತರ್ಗತವಾಗಿರುವ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಭೆಗೆ ಹಲವಾರು ಮಹಾನೀಯರು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಶ್ರೀಯುತ ಈಶ್ವರ್ ಹತ್ತಿಯವರು ನಾಟಕ ಕಲಾವಿದರಾಗಿ ಮಾತ್ರವಲ್ಲದೆ ನಾಟಕ ರಚನಕಾರರಾಗಿಯೂ ಗುರುತಿಸಿಕೊಂಡವರು. ಇವರಲ್ಲಿ ನೆಲೆಯೂರಿದ ನಾಟಕ ಕಲೆಗೆ ಬಾಲ್ಯದಲ್ಲಿ ಪ್ರಮುಖ ಪ್ರೇರಕ ಶಕ್ತಿಯಾದವರು ಶ್ರೀಯುತರ ಹೆಣ್ಣಜ್ಜ (ತಾಯಿಯ ತಂದೆ) ಕಳಕಪ್ಪನವರು. ಇವರು ಸ್ವತಃ ನಾಟಕ ಕಲಾವಿದರಾಗಿ ಸಾಧನೆ ಮಾಡಿದವರಾಗಿದ್ದರು. ಇವರನ್ನು ಹತ್ತಿರದಿಂದ ಬಲ್ಲವರಾಗಿದ್ದ ಈಶ್ವರ್ ಹತ್ತಿಯವರು ತಮ್ಮ ಅಜ್ಜನ ನಟನ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಅವರಿಂದ ಸಾಕಷ್ಟು ತರಬೇತಿಯನ್ನು ಪಡೆದುಕೊಂಡಿದ್ದರು. ಹೀಗಾಗಿ ಮುಂದೆ ಇವರೊಬ್ಬ ಪ್ರಮುಖ ರಂಗಕಲಾವಿದರಾಗಲು ವೇದಿಕೆಯೊಂದನ್ನು ಸಿದ್ಧಗೊಳಿಸಿತ್ತು. ಬಾಲ್ಯದಲ್ಲಿ ಇವರ ಅಂತರಾಳದಲ್ಲಿ ಮೊಳಕೆಯೊಡೆದು ನಿಂತಿದ್ದ ಕಲಾ ಬೀಜಕ್ಕೆ ಪ್ರೋತ್ಸಾಹ ಹಾಗೂ ಅವಕಾಶಗಳು ಒದಗಿಬಂದಿದ್ದು ಗುಲಬರ್ಗಾದ ಶರಣ ಬಸವೇಶ್ವರ ಕಾಲೇಜಿನಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ. ಇಲ್ಲಿ ತಮ್ಮ ಸ್ನೇಹಿತರಾದ ಎಸ್.ಎಮ್.ಹಿರೇಮಠ್, ಎಂ.ಎಸ್.ಬಿಜಾಸ್ಪುರ್, ಮಲ್ಲಿನಾಥ್ ಗುಡ್ಡೆದ್, ವೀರಯ್ಯ ಹಿಪ್ಪರಿಗೆ, ಶಾಲಿನಿ, ಶೋಭಜೋಷಿ ಹಾಗೂ ಕೃಷ್ಣವೇಣಿ ಎಂಬ ಸ್ನೇಹಿತರು ಸಮಾನ ಮನಸ್ಕರಾಗಿದ್ದು, ಇವರೆಲ್ಲಾ ಸೇರಿಕೊಂಡು ರಂಗಭೂಮಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇಲ್ಲಿ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡಿದರು. ಇದರ ಜೊತೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡರು. ಇದರಿಂದಾಗಿ ಈಶ್ವರ್ ಹತ್ತಿಯವರಲ್ಲಿ ಅಂತರ್ಗತವಾಗಿದ್ದ ರಂಗಾಭಿನಯ ಕಲೆಗೆ ಸೂಕ್ತವಾದ ವೇದಿಕೆಯೊಂದು ಲಭಿಸಿದಂತಾಯಿತು. ಈ ಹಿಂದೆ ಹೆಸರಾಂತ ಸಾಹಿತಿಗಳು ಹಾಗೂ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜು ಹಾಗೂ ಇತರರ ತಂಡವು ಶರಣ ಬಸವೇಶ್ವರ ಮಹಾವಿದ್ಯಾಲಯ ಹಾಗೂ ಗುಲಬರ್ಗಾ ಪ್ರಾಂತ್ಯದಲ್ಲಿ ನಾಟಕವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಸಿದ್ಧಗೊಳಿಸಿದ್ದರು. ಇದು ಕೂಡ ಶ್ರೀಯುತ ಈಶ್ವರ್ ಹತ್ತಿಯವರನ್ನು ಹೆಚ್ಚು ಆಕರ್ಷಣೆಗೊಳಿಸಿತು. ಇದರಿಂದ ಶ್ರೀಯುತರ ಅಂತರಾಳದಲ್ಲಿ ಅಂತರ್ಗತವಾಗಿದ್ದ ಕಲಾ ಬೀಜವು ಮೊಳಕೆಯೊಡೆಯಲು ಪ್ರಚೋದಕ ಶಕ್ತಿಯಾಯಿತು. ಇವುಗಳಾಚೆ ಗುಲ್ಬರ್ಗಾದ ಶ್ರೀ ಶರಣ ಬಸವೇಶ್ವರ ಮಹಾವಿದ್ಯಾಲಯದ ಶೈಕ್ಷಣಿಕ ವಾತಾವರಣವು ಇವರನ್ನು ಒಬ್ಬ ಕಲಾವಿದರಾಗಿ ನಿರ್ಮಿಸಿತು.
ಶ್ರೀಯುತ ಈಶ್ವರ್ ಹತ್ತಿಯವರು ರಂಗಭೂಮಿಯಲ್ಲಿ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡು, ಇದನ್ನು ಒಂದು ಪ್ರವೃತ್ತಿಯಾಗಿ ಮುಂದುವರೆಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಹಲವಾರು ರಂಗ ಪ್ರದರ್ಶನ ನೀಡಿ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದರು. ರಂಗಭೂಮಿಯಲ್ಲಿ ತಾವು ಗಳಿಸಿದ ವಿದ್ವತ್ತನ್ನು ಪ್ರದರ್ಶಿಸುವ ನೆಲೆಯಲ್ಲಿ ಎಂಬತ್ತರ ದಶಕದಲ್ಲಿ ‘ಅಪೂರ್ಣ’ ಎಂಬ ನಾಟಕವನ್ನು ರಚಿಸಿ, ದಿನಾಂಕ: 2 ಅಕ್ಟೋಬರ್ 1982 ರಂದು ಗಾಂಧೀ ಜಯಂತಿಯ ದಿನದಂದು ಬೀದರಿನಲ್ಲಿ ಪ್ರದರ್ಶನ ನೀಡಲಾಗಿತ್ತು. ಬೀದರ್‍ನಲ್ಲಿ ‘ಹವ್ಯಾಸಿ ಕಲಾವಿದರ ಬಳಗ’ದಿಂದ ಪ್ರಥಮ ಪ್ರದರ್ಶನ ಕಂಡು ಯಶಸ್ವಿಯನ್ನು ಪಡೆದುಕೊಂಡ ಈ ನಾಟಕವು ಗುಲಬರ್ಗಾ, ಭೀಮರಾಯನಗುಡಿ, ಶಹಪೂರ, ರಾಯಚೂರು ಮುಂತಾದ ಕಡೆಗಳಲ್ಲಿ ನಾಡಿನ ಪ್ರತಿಭಾವಂತ ಕಲಾವಿದರಿಂದ ಪ್ರದರ್ಶನಗೊಂಡಿತು. ಈ ‘ಅಪೂರ್ಣ’ ನಾಟಕವು ತನ್ನದೇ ಆದ ವಿಶಿಷ್ಟತೆಯನ್ನು ಒಳಗೊಂಡಿದ್ದು, ವೈಚಾರಿಕ ಚಿಂತನೆಗಳನ್ನು ಅನುಭಾವಿಕ ನೆಲೆಯಲ್ಲಿ ಅನಾವರಣಗೊಳಿಸುತ್ತದೆ. ಗಂಭೀರವಾದ ಮತ್ತು ಚಿಂತನೆಗೆ ಒಳಪಡಿಸಬೇಕಾದ ವಿಷಯವನ್ನು ಮನರಂಜನಾತ್ಮಕ ನೆಲೆಯಲ್ಲಿ ಕಟ್ಟಿಕೊಟ್ಟಿರುವುದೆ ಇದರ ವಿಶೇಷವಾಗಿ ಕಂಡುಬರುತ್ತದೆ. ಇಲ್ಲಿ ಅಪೂರ್ಣತ್ವವನ್ನು ಪಡೆದುಕೊಂಡ ಮಾನವನು ತಾನು ಪರಿಪೂರ್ಣನಾಗಬೇಕು ಎಂದು ತುಡಿಯುತ್ತಲೆ ತನ್ನ ಬದುಕನ್ನು ಕಳೆದುಕೊಳ್ಳುವ ಅಂಶಗಳನ್ನು ಸೈದ್ಧಾಂತಿಕ ನೆಲೆಗಳಲ್ಲಿ ಕಟ್ಟಿಕೊಡಲಾಗಿದೆ. ಹೀಗಾಗಿ ಶ್ರೀಯುತರಲ್ಲಿ ಅಂತರ್ಗತವಾಗಿರುವ ವಿದ್ವತ್ತನ್ನು ಅಳೆಯುವುದಕ್ಕೆ ‘ಅಪೂರ್ಣ’ ಎಂಬ ಈ ನಾಟಕವೊಂದು ಮಾನದಂಡವಾಗಿ ನಿಲ್ಲುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.
ಶ್ರೀಯುತ ಈಶ್ವರ್ ಹತ್ತಿಯವರಿಗೆ ಕೇವಲ ರಂಗಭೂಮಿ ಮಾತ್ರವಲ್ಲದೆ ಸಾಹಿತ್ಯದ ವಿವಿಧ ವಲಯಗಳು ಸಿದ್ಧಿಯಾಗಿವೆ. ಈ ಸಾಹಿತ್ಯ ಪ್ರಕಾರದಲ್ಲಿ ಇವರನ್ನು ಹೆಚ್ಚು ಆಕರ್ಷಿಸಿರುವ ವಲಯವೆಂದರೆ 12ನೇ ಶತಮಾನದ ಶರಣ ಚಳವಳಿ. ಸಮಸಮಾಜದ ಕನಸು ಕಂಡ ವಚನ ಸಾಹಿತ್ಯವು ಇವರನ್ನು ಹೆಚ್ಚು ಆಕರ್ಷಿಸಿತ್ತು. ಇದಕ್ಕೆ ಕಾರಣ ಶ್ರೀ ಶರಣ ಬಸವೇಶ್ವರ ಕಾಲೇಜಿನಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಇವರ ಮೇಲೆ ವಿಶಿಷ್ಟ ಪ್ರಭಾವ ಬೀರಿರುವ ಶರಣ ಬಸವೇಶ್ವರರ ಜೀವಪರ ನಿಲುವುಗಳು. ಇದರಿಂದ ಪ್ರಭಾವಿತರಾದ ಶ್ರೀಯುತರು ‘ದಾಸೋಹಿ ಶ್ರೀ ಶರಣಬಸವೇಶ ಕಾವ್ಯಂ’ ಎನ್ನುವ ಕೃತಿಯನ್ನು ರಚಿಸಿದ್ದಾರೆ. ಈ ಧೀರ್ಘವಾದ ಕಾವ್ಯವು ಖಂಡಕಾವ್ಯದ ಮಾದರಿಯಲ್ಲಿದ್ದು, ಇದು ಶಿವಶರಣ ಶ್ರೀ ಶರಣಬಸವರ ಜೀವನ ಮತ್ತು ಸಾಧನೆಯನ್ನು ಅನಾವರಣಗೊಳಿಸುತ್ತದೆ. ಹಾಗೆಯೇ ತಮ್ಮ ಗ್ರಾಮ ದೈವವಾದ ಗುನ್ನಾಳೇಶ್ವರನನ್ನು ಆರಾಧ್ಯ ದೈವವಾಗಿಸಿಕೊಂಡು, ಗುನ್ನಾಳೇಶ್ವರನನ್ನೇ ಅಂಕಿತನಾಮವಾಗಿರಿಸಿಕೊಂಡು ‘ಗುನ್ನಾಳೇಶ್ವರನ ವಚನಗಳು’ ಎಂಬ ವಿಶಿಷ್ಟವಾದ ಸಾಹಿತ್ಯ ಕೃತಿಯೊಂದನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ್ಪಿಸಿದ್ದಾರೆ. ಇದು ಕೂಡ 12ನೇ ಶತಮಾನದ ಶಿವಶರಣರ ವಚನಗಳ ಮಾದರಿಯಲ್ಲಿ ಮೂಡಿಬಂದಿದೆ. ಇದರ ಆಶಯವು ಕೂಡ ಶರಣ ಮಾರ್ಗವಾಗಿದೆ.
ಹೀಗೆ ಶ್ರೀಯುತ ಈಶ್ವರ್ ಹತ್ತಿಯವರು ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾರೆ. ನಾಟಕಾಭಿನಯ ಮಾತ್ರವಲ್ಲದೆ ಸಿನಿಮಾ ಲೋಕದಲ್ಲಿಯೂ ಕೂಡ ಶ್ರೀಯುತರು ತಮ್ಮ ಅಭಿನಯವನ್ನು ಪ್ರದರ್ಶಿಸಿದ್ದಾರೆ. ‘ಮಹಾದಾಸೋಹಿ ಶರಣ ಬಸವ’ ಸಿನಿಮಾದಲ್ಲಿ ‘ದಮ್ಮುರೋಗದ ಜಂಗಮ’ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಮ್ಮ ಕಲಾ ಪಾಂಡಿತ್ಯವನ್ನು ಮೆರೆದಿದ್ದಾರೆ. ತಮ್ಮ ವೃತ್ತಿ ಜೀವನದಿಂದ ನಿವೃತ್ತಿಯನ್ನು ಪಡೆದುಕೊಂಡು ವಿಶ್ರಾಂತಿಯನ್ನು ಪಡೆಯಬೇಕಾದ ದಿನಗಳಲ್ಲಿಯೂ ಸಕ್ರಿಯವಾಗಿ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಮೂಲಕವಾಗಿ ತಮ್ಮ ಕಲಾಭಿಮಾನವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಂದು ತಮ್ಮ ಶ್ರೀಮತಿಯವರಾದ ಅನ್ನಪೂರ್ಣಮ್ಮ, ತಮ್ಮ ನಾಲ್ಕು ಜನ ಮಕ್ಕಳಾದ ಜ್ಯೋತಿ, ಜಯಶ್ರೀ, ಜಯಲಕ್ಷ್ಮೀ, ಶರಣಬಸವ ಹಾಗೂ ಮೊಮ್ಮಕ್ಕಳೊಂದಿಗೆ ಅನ್ಯೋನ್ಯವಾದ ಜೀವನ ನಡೆಸುತ್ತಿದ್ದಾರೆ. ಇವರ ಈ ಸುಂದರ ಪಯಣ ಹೀಗೆ ಯಶಸ್ವಿನೆಡೆಗೆ ಸಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
(ಡಾ. ಓಬಳೇಶ್, ಉಪನ್ಯಾಸಕರು, ದಾವಣಗೆರೆ, ಮೊ: 9538345639)