ದಿನದ ಸುದ್ದಿ

‘ಎತ್ತಿನಹೊಳೆ ಯೋಜನೆ ಕೈಬಿಡಿ’ ಎಂದು ಬರಪೀಡಿತ ಜಿಲ್ಲೆಗಳವರು ಆಗ್ರಹಿಸಲಿ

Published

on

ನಿನ್ನೆ ಎತ್ತಿನಹೊಳೆ ಯೋಜನೆಯ ಬಗ್ಗೆ ನಾನೊಂದು ಪೋಸ್ಟ್ ಹಾಕಿದ್ದೇ. ನನ್ನ ಗೆಳೆಯರೊಬ್ಬರಿಂದ ಈ ರೀತಿಯ ಪ್ರಕ್ರಿಯೆ ಬಂದಿದೆ. “ಬರಪೀಡಿತ ಜಿಲ್ಲೆಯ ಜನರನ್ನು ವ್ಯಂಗ್ಯ ಮಾಡುವ ಅವಶ್ಯಕತೆ ಇರಲಿಲ್ಲವೇನೋ. ಅಲ್ಲಿನ ನೀರಿನ ಸಮಸ್ಯೆ ಅಪಾಯಮಟ್ಟದಲ್ಲಿದೆ.

ಹಾಗಾಗಿ ಈ ಯೋಜನೆಯ ಬಗ್ಗೆ ಅವರು ಆಸೆ ಪಡುವುದರಲ್ಲಿ ಯಾವ ತಪ್ಪೂ ಇಲ್ಲಾ. ಅವರಲ್ಲಿ ಈ ಯೋಜನೆಯ ಹೆಸರಲ್ಲಿ ಕನಸು ಬಿತ್ತಿದ ರಾಜಕಾರಣಿಗಳನ್ನು ಗುರಿಯಾಗಿಸಬೇಕೆ ಹೊರತು ಈಗಾಗಲೇ ನೊಂದು ಬೇಯುತ್ತಿರುವ ಜನರನ್ನಲ್ಲಾ.”ಈ ಪ್ರತಿಕ್ರಿಯೆಯನ್ನು ನಾನು ಸಂಪೂರ್ಣ ಇತ್ಯಾತ್ಮಕವಾಗಿ ತೆಗೆದುಕೊಂಡು ಮುಂದುವರೆಸುತ್ತೇನೆ.

ಬರಪೀಡಿತ ಜಿಲ್ಲೆಗಳೂ ಸೇರಿದಂತೆ ಕರ್ನಾಟಕದ ಜಲಮೂಲಗಳು ಮತ್ತು ಜಲಸೌಲಭ್ಯಗಳ ಬಗ್ಗೆ ನನಗೆ ಸ್ವಲ್ಪ ಅರಿವಿದೆ. ಆದರೆ ನಾನು ತಜ್ಞನಂತೂ ಅಲ್ಲ. ಬರಪೀಡಿತ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಉಂಟಾಗುವುದಕ್ಕೆ ಅಲ್ಲಿ ಎರಡು ಮೂರು ದಶಕಗಳಿಂದ ಭೂಮಿಯ ಮೇಲೆ, ಜಲಮೂಲಗಳ ಮೇಲೆ ನಡೆದ ತಪ್ಪುನಡೆಗಳ ಬಗ್ಗೆಯೂ ತುಸು ಅರಿವಿದೆ. ಇಲ್ಲಿ ಆ ಜಿಲ್ಲೆಗಳ ಜನರನ್ನು, ರೈತರನ್ನು ವ್ಯಂಗ್ಯದಿಂದ ಕಾಣುವ ಪ್ರಶ್ನೆಯೇ ಇಲ್ಲ. ಹಾಗೆ ಭಾವಿಸಿದ್ದರೆ ಅದು ಸಂಪೂರ್ಣ ತಪ್ಪು ಗ್ರಹಿಕೆ.

ನೀರು ಸಿಕ್ಕರೆ ಯಾವುದೇ ರೈತನ ಮನೋಭಾವ ಹೇಗೆ ಬದಲಾಗುತ್ತದೆ ಎನ್ನುವುದನ್ನೂ ನೋಡುತ್ತಲೇ ಬಂದವನಾಗಿ ನಾನು ಹಾಗೆ ಹೇಳಿದ್ದೇನೆ ಅಷ್ಟೇ. ಅಲ್ಲದೇ ನಮ್ಮ ಜಾಗತೀಕೃತ ಬಂಡವಾಳಶಾಹೀ ಲೋಕ ರೈತನಿಗೆ ಎಂಥಾ ಅಮಿಷಗಳನ್ನು ಒಡ್ಡುತ್ತದೆ ಎನ್ನುವುದೂ ಇಲ್ಲಿ ಸೂಚ್ಯವಾಗಿದೆ.

ಹಾಗೆಂದು ಈ ಯೋಜನೆಗೆ ಮುಂದಡಿ ಇಡುವುದಕ್ಕೆ ಮುಂಚೆ ಬರಪೀಡಿತ ಜಿಲ್ಲೆಯವರಿಗೆ ಮುಂದಾಗುವ ಪರಿಣಾಮಗಳ ಬಗ್ಗೆಯಾಗಲೀ, ತಮ್ಮ ಜಿಲ್ಲೆಗಳಿಗೆ ಇದು ನಿಜಕ್ಕೂ ಪರಿಹಾರವಲ್ಲ ಎನ್ನುವುದಾಗಲೀ ಅರಿವಿರಲಿಲ್ಲ ಮತ್ತು ಅರಿವಿಲ್ಲ ಎನ್ನುವುದನ್ನು ನಾನು ಪೂರ್ತಿಯಾಗಿ ಒಪ್ಪಲಾರೆ. ಮಾನವಸಹಜ ಆಸೆಯೊಂದಿಗೆ ಅವರು ಯೋಜನೆಗೆ ಆಗ್ರಹಿಸಿ ಹೋರಾಟವನ್ನೂ ಮಾಡಿದ್ದಾರೆ, ವಿರೋಧಿಸುವ ಸಮಯಗಳಲ್ಲಿ ಮೌನವನ್ನೂ ವಹಿಸಿದ್ದಾರೆ.

ಈಗ ಈ ಯೋಜನೆಯಿಂದ ಯಾರಿಗೂ ಪ್ರಯೋಜನವಿಲ್ಲ ಎನ್ನುವುದು ಬಹುತೇಕ ಎಲ್ಲರಿಗೂ ಮನಗಂಡಿದೆ, ಅಲ್ಲವೇ?
ಈಗಲಾದರೂ ಈ ಯೋಜನೆಯನ್ನು ಕೈಬಿಡಿ, ನಮಗೆ ನಮ್ಮ ಸಂಪನ್ಮೂಲಗಳಿಂದಲೇ ದೀರ್ಘಕಾಲೀನ ಜಲಸುಸ್ಥಿರತೆಯ ಕಾರ್ಯಕ್ರಮಗಳನ್ನು ಆರಂಭಿಸಿ ಎಂದು ಸರ್ಕಾರವನ್ನು ಆಗ್ರಹಿಸಿ ಹೋರಾಟ ಆರಂಭಿಸಲಿ. ಅವರೊಂದಿಗೆ ನಾನೂ ಒಬ್ಬ ಕಾಲಾಳಾಗಿ ಬರುತ್ತೇನೆ. ಪಶ್ಚಿಮಘಟ್ಟ ತೀರ ಸಂಕಷ್ಟದ ಸ್ಥಿತಿಯಲ್ಲಿದೆ. ಅದನ್ನು ಉಳಿಸಿದರೆ ಇಡೀ ನಾಡಿಗೇ ಹಿತ. ಆ ಹೋರಾಟಕ್ಕೆ ಬರಪೀಡಿತ ಜಿಲ್ಲೆಗಳೂ ಸೇರಿದಂತೆ ಕರ್ನಾಟಕದ ಎಲ್ಲ ಭಾಗದ ಜನರು ಮುಂದಾಗಲಿ.

ಕೇಸರಿ‌ ಹರವೂ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version