ರಾಜಕೀಯ
ಸಿದ್ದು ವಿರುದ್ಧ ಹಾಲುಮತ ಸಮಾಜವನ್ನು ಎತ್ತುಕಟ್ಟುವ ಹುನ್ನಾರ
ಸುದ್ದಿದಿನ ವಿಶೇಷ: ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿರೋಧಿಗಳಂತೆ ಕೆಲಸ ಮಾಡಿದ್ದ ಕೆಲ ಮಾಧ್ಯಮಗಳು ಈಗ ಕುರುಬ ಸಮುದಾಯದವನ್ನು ಅವರ ವಿರುದ್ಧ ಎತ್ತುಕಟ್ಟುವ ಪ್ರಯತ್ನ ಮಾಡುತ್ತಿವೆ.
ಸಚಿವ ಸಂಪುಟ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸಮುದಾಯಕ್ಕೆ ಮಾನ್ಯತೆ ನೀಡಿಲ್ಲ. ಇದರಿಂದ ಇಡಿ ಸಮುದಾಯ ಅವರ ವಿರುದ್ಧ ತಿರುಗಿ ಬಿದ್ದಿದೆ ಎಂದು ಪ್ರಚಾರ ಮಾಡುವ ಮೂಲಕ ಅವರ ಶಕ್ತಿ ಕುಂದಿಸುವ ಸಾಹಸ ಮಾಡುತ್ತಿವೆ.
ಸಂಪಾದಕನ ಹಗೆತನ: ಟಿವಿ ಮಾಧ್ಯಮವೊಂದರ ಸಂಪಾದಕ ಪ್ರತಿನಿತ್ಯ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಬಹುತೇಕ ಸಿದ್ದರಾಮಯ್ಯ ವಿರುದ್ಧ ಸುಳ್ಳು ವಿಶ್ಲೇಷಣೆ ಮಾಡುತ್ತಿದ್ದು, ಆ ಮೂಲಕ ಸಿದ್ದು ಶಕ್ತಿ ಕುಂದಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆ ಸಂಪಾದಕ ಸಿದ್ದು ವಿರುದ್ಧ ಅಷ್ಟು ರಾಜಾರೋಷವಾಗಿ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಸಿಎಂ ಕುಮಾರಸ್ವಾಮಿ ವಿರುದ್ಧ ಮಾತನಾಡುವುದಿಲ್ಲ.
ಸಮಾಜಮುಖಿ ಚಿಂತನೆ ಅಳವಡಿಸಿಕೊಂಡಿದ್ದ ಸಿದ್ದರಾಮಯ್ಯ ಕುರುಬ ಸಮುದಾಯದ ಧೀಮಂತ ನಾಯಕ ಎಂದು ಗುರುಸಿಕೊಂಡಿದ್ದಾರೆ. ಜನಸಂಖ್ಯೆಯಲ್ಲಿ ಪ್ರಬಲ ಶಕ್ತಿ ಹೊಂದಿದ್ದರೂ ಸಮುದಾಯ ಈ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ನಗಣ್ಯಕ್ಕೆ ಒಳಗಾಗಿತ್ತು. ಸಿದ್ದರಾಮಯ್ಯ ಅವರು ರಾಜಕೀಯ ಕ್ಷೇತ್ರದಲ್ಲಿ ಬೆಳೆದಾಗ ಅವರನ್ನು ನಮ್ಮ ನಾಯಕ ಎಂದು ಸಮುದಾಯ ಸರ್ವತಃ ಒಪ್ಪಿಕೊಂಡಿತ್ತು. ಈಗಲೂ ಸಿದ್ದರಾಮಯ್ಯ ಅವರ ಬಗೆಗೆ ಹಾಲುಮತ ಸಮುದಾಯ ಅಪಾರ ಗೌರವ ಹೊಂದಿದ್ದು, ಅವರಿಂದ ಬೇರೇನೂ ನಿರೀಕ್ಷೆ ಮಾಡದೇ ನಮ್ಮ ನಾಯಕ ಎಂದು ಒಪ್ಪಿಕೊಂಡಿದೆ.
ಅದರಂತೆ ಕೇವಲ ಒಂದು ವರ್ಗಕ್ಕೆ ಕೆಲಸ ಮಾಡದೇ ಸಾಮಾಜಿಕ ನ್ಯಾಯ ಮೇಲೆ ಆಡಳಿತ ನಡೆಸಿದ ಸಿದ್ದು ಮೇಲೆ ಕೆಲವು ಅತೃಪ್ತ ಮಾಧ್ಯಮಗಳು ಹಗೆ ಸಾಧಿಸಿದವು. ಈಗಲೂ ಅದು ಮುಂದುವರಿದಿದ್ದು, ಸಚಿವ ಸಂಪುಟದ ವಿಚಾರದಲ್ಲಿ ಹಾಲುಮತ ಸಮುದಾಯವನ್ನು ಎತ್ತುಕಟ್ಟುವ ಪ್ರಯತ್ನ ಮಾಡುತ್ತಿವೆ. ಸಮುದಾಯದ ಕೆಲವರಿಗೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸ್ಥಾನ ತಪ್ಪಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರಚಾರ ಮಾಡುತ್ತಿವೆ.
ಇದಕ್ಕೆ ಪೂರಕವಾಗಿ ಕುರುಬ ಸಮುದಾಯ ಶಾಸಕ ಎಚ್.ಎಂ.ರೇವಣ್ಣ ಕೂಡ ಸಿದ್ದು ವಿರುದ್ಧ ಮಾತನಾಡಿದ್ದಾರೆ. ಹಾಗೆ ನೋಡಿದರೆ ಸಮುದಾಯ ಹೆಸರು ಹೇಳಿಕೊಂಡು ಶಾಸಕ ಸ್ಥಾನ ಪಡೆದ ಹಲವರು ಸಮುದಾಯಕ್ಕೆ ಯಾವುದೇ ಉಪಕಾರ ಮಾಡಿಲ್ಲ ಎಂಬ ಆಪಾದನೆ ಶಾಸಕರ ಮೇಲಿದೆ. ಕುರುಬ ಸಮುದಾಯದ ಧೀಮಂತ ನಾಯಕನಾಗಿ ಬೆಳೆದ ಸಿದ್ದರಾಮಯ್ಯ ತನ್ನದೇ ಸಮುದಾಯಕ್ಕೆ ಲಾಭ ಮಾಡದಿದ್ದರೂ ಸಾಮಾಜಿಕ ನ್ಯಾಯದಡಿ ಕೆಲಸ ಮಾಡಿದ್ದಾರೆ ಎಂಬ ತೃಪ್ತಿ ಸಮುದಾಯದಲ್ಲಿದೆ ಎನ್ನುತ್ತಾರೆ ಸಮಾಜದ ಮುಖಂಡರು.
ಸಿದ್ದರಾಮಯ್ಯ ಅವರ ವಿರುದ್ಧ ಕೆಲ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿದ್ದು, ಸಮುದಾಯದ ಜನ ಗಮನಿಸುತ್ತಿದ್ದೇವೆ. ಸತ್ಯ ಸಂಗತಿ ಪ್ರಚಾರ ಮಾಡಿದರೆ ನಮ್ಮ ವಿರೋಧಿವಿಲ್ಲ. ಆದರೆ ಅನಗತ್ಯ ಅರ್ಥ ಬರುವ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ನಮ್ಮ ಸಮುದಾಯಕ್ಕೆ ಯಾವುದೇ ಲಾಭ ಆಗದಿದ್ದರೂ ಪರವಾಗಿಲ್ಲ. ಇವತ್ತಿಗೂ ಸಿದ್ದರಾಮಯ್ಯ ನಮ್ಮ ನಾಯಕ.
| ವಿಜಯ್ ಕುಮಾರ್, ಶಿವರಾಜ್ ಇತರರು