ಲೋಕಾರೂಢಿ

ಭಾವಾವೇಶದ ಆರ್ಭಟವೂ ಸುಳ್ಳು ಸುದ್ದಿಯ ಕಾಟವೂ

Published

on

  • ನಾ. ದಿವಾಕರ

ಇಂದು ಮಧ್ಯಾಹ್ನ (ಬುಧವಾರ 01 ನೇ ತಾರೀಖು)  ಕೆಲಸದ ನಿಮಿತ್ತ ಸ್ನೇಹಿತರ ಮನೆಗೆ ಹೋಗಿದ್ದೆ. (ಏಕೆ ಹೋಗಿದ್ದಿರಿ ಎನ್ನಬೇಡಿ, ಮಾಸ್ಕ್ ಧರಿಸಿ ಹೋಗಿದ್ದೆ ಅವರೂ ಮಾಸ್ಕ್ ಧರಿಸಿದ್ದರು-ಸುರಕ್ಷಿತ ವಲಯ ಎಂದಿಟ್ಟುಕೊಳ್ಳಿ) ಅಲ್ಲಿ ಮಾತಿನ ನಡುವೆಯೇ ಅವರು ನೋಡುತ್ತಿದ್ದ ಪಬ್ಲಿಕ್ ಟಿವಿ ಸುದ್ದಿವಾಹಿನಿಯನ್ನು ನೋಡುವ ಅನಿವಾರ್ಯ ಸಂದರ್ಭ. ಮಧ್ಯಾಹ್ನವಲ್ಲವೇ, ಊಟ ನಿದ್ರೆಯ ಹೊತ್ತು. ರೋಚಕತೆ ಇರಬೇಕು. ಹಾಗಾಗಿ ಒಬ್ಬ ನಿರೂಪಕಿಯಿಂದ ಚೀನಾ ಕುರಿತ ರೋಚಕ, ರೋಮಾಂಚಕ ಸುದ್ದಿ ಬಿತ್ತರವಾಗುತ್ತಿತ್ತು.

ಈಗ ಭಾರತದ ಮಾಧ್ಯಮಗಳಿಗೆ ಮುಸ್ಲಿಮರ ಹೊರತಾಗಿ ಮತ್ತೊಂದು ಶತ್ರು ಹುಟ್ಟಿಕೊಂಡಿದ್ದರೆ ಅದು ಚೀನಾ. ಏಕೆಂದರೆ ಅದು ಕಮ್ಯುನಿಸ್ಟ್ ರಾಷ್ಟ್ರ ಎನ್ನುವ ಭ್ರಮೆ. ಚೀನಾ ಎಷ್ಟರ ಮಟ್ಟಿಗೆ ಕಮ್ಯುನಿಸ್ಟ್ ರಾಷ್ಟ್ರ ಎನ್ನುವುದು ಕಮ್ಯುನಿಸ್ಟರಿಗೇ ಗೊತ್ತು ಬಿಡಿ. ಆದರೂ ಅಲ್ಲಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಇದೆ. ಕಮ್ಯುನಿಸಂ ಕುರಿತು ಗಂಧ ಗಾಳಿ ಅರಿಯದ ಟಿವಿ ನಿರೂಪಕರಿಗೆ ಚೀನಾ ಸರ್ಕಾರವನ್ನು ಹೀಯಾಳಿಸಿ, ಜರೆಯಲು ಕಮ್ಯುನಿಸಂ ಕುರಿತು ಪರಿಜ್ಞಾನ ಇರಬೇಕೆಂದಿಲ್ಲ. ಸಂಪಾದಕರು ಬರೆದುಕೊಟ್ಟದನ್ನು ಮತ್ತೆ ಮತ್ತೆ ಹೇಳುತ್ತಿದ್ದರೆ ಸಾಕು. ಕನ್ನಡ ಮಾಧ್ಯಮಗಳನ್ನು ನೋಡುವವರಿಗೆ ಇದು ಹೊಸತೇನಲ್ಲ.

ಆ ನಿರೂಪಕಿಯ ಮತ್ತು ವಾಹಿನಿಯ ಮುಖ್ಯ ಉದ್ದೇಶ ಚೀನಾ ದೇಶವನ್ನು ಖಳನಾಯಕನಂತೆ ಬಿಂಬಿಸುವುದು. ಚೀನಾ ಸುಳ್ಳು ಹೇಳುತ್ತಿದೆ ಎಂದು ನಿರೂಪಿಸುವುದು ಮತ್ತು ಕೊರೋನಾ ಹರಡುವುದಕ್ಕೆ ಚೀನಾ ಏಕೈಕ ಕಾರಣ ಎಂದು ಘೋಷಿಸುವ ಮೂಲಕ “ಭರತ ಪ್ರೇಮ”ವನ್ನು ಸಾಬೀತುಪಡಿಸುವುದು. ಆಕೆಯ ಸುದ್ದಿಯಂತೂ ರೋಚಕವಾಗಿತ್ತು. ವೂಹಾನ್ ಪ್ರಾಂತ್ಯದಲ್ಲೇ ಕೊರೋನಾ ವೈರಾಣುವಿಗೆ 40 ಸಾವಿರ ಜನ ಬಲಿಯಾಗಿದ್ದಾರೆ, ಚೀನಾದಲ್ಲಿ ಈವರೆಗೆ ಮೂರು ಲಕ್ಷ ಜನ ಕೊರೋನಾದಿಂದ ಸತ್ತಿದ್ದಾರೆ. ಪ್ರತಿದಿನ 1200 ಶವಗಳನ್ನು ಸುಡಲಾಗುತ್ತಿದೆ, ಆಸ್ಪತ್ರೆಗಳಲ್ಲಿ ಹೆಣದ ರಾಶಿಗಳೇ ಬಿದ್ದಿವೆ. ಚೀನಾ ಈ ಮಾಹಿತಿಯನ್ನು ಜಗತ್ತಿಗೆ ನೀಡದೆ ಮುಚ್ಚಿಡುವ ಮೂಲಕ ವಂಚನೆ ಮಾಡುತ್ತಿದೆ, ಇತ್ಯಾದಿ ಇತ್ಯಾದಿ.

ಏರು ದನಿಯ ನಿರೂಪಣೆಯಲ್ಲಿ ಇದ್ದ ಕೃತ್ರಿಮವನ್ನು ಗಮನಿಸುವುದು ಕಷ್ಟವೇನಿರಲಿಲ್ಲ. ಮತ್ತು ಈ ಉಗ್ರ ಭಾಷಣದ ನಡುವೆ ತೋರಿಸುತ್ತಿದ್ದ ಚಿತ್ರಗಳು ಬಹುಶಃ ಟೈವಾನ್, ಹಾಂಕಾಂಗ್‍ನಲ್ಲಿ ತಯಾರಿಸಲಾಗುವ ಚಲನಚಿತ್ರಗಳ ತುಣುಕುಗಳಂತಿತ್ತು. ಚೀನಾದ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಚಿತ್ರೀಕರಿಸುವುದು ಎಂತಹ ಸಾಹಸ ಎನ್ನುವುದು ಎಲ್ಲರಿಗೂ ತಿಳಿದಿದ್ದೇ. ಈ ಸುದ್ದಿ ಸಮರ್ಥನೆಗೆ ಒಬ್ಬ ಚೀನಾದ ರಾಜಕಾರಣಿಯ ಮಾತುಗಳು. ಅವರ ಹೆಸರು ಮಾತ್ರ ಎಲ್ಲಿಯೂ ಕಾಣಲಿಲ್ಲ. ಆದರೂ ಪಬ್ಲಿಕ್ ಟಿವಿಯಲ್ಲಿ ಚಲನಚಿತ್ರದ ತುಣುಕುಗಳನ್ನೇ ನೈಜ ಚಿತ್ರಗಳಂತೆ ತೋರಿಸುತ್ತಿದ್ದುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು.

ಒಂದು ಗಂಟೆಯ ಕಾರ್ಯಕ್ರಮದಲ್ಲಿ ಹೇಳಿದ್ದು ಹತ್ತು ಸಾಲುಗಳು, ಹತ್ತು ಬಾರಿ ಹೇಳಿದ್ದನ್ನೇ ಹೇಳುವ ಮೂಲಕ ಚೀನಾ ವಂಚಕ ದೇಶ ಎಂಬ ನಿಟ್ಟುರಿಸಿನೊಂದಿಗೆ ನಿರೂಪಕಿ ನಿರ್ಗಮಿಸಿದ್ದರು.
ಮನೆಗೆ ಬಂದು ವೆಬ್ ತಾಣದಲ್ಲಿ ಶೋಧಿಸಿದೆ. ಎಲ್ಲಿಯೂ ಈ ರೀತಿಯ ಸುದ್ದಿ ಕಾಣಲಿಲ್ಲ. ಗಾಳಿಸುದ್ದಿಯೂ ಸಹ ವೆಬ್ ತಾಣದಲ್ಲಿ ರಾರಾಜಿಸುವ ಇಂದಿನ ದಿನಗಳಲ್ಲಿ ಈ ಸುದ್ದಿಯೂ ಎಲ್ಲೋ ಒಂದು ಕಡೆ ಕಾಣಬೇಕಿತ್ತಲ್ಲವೇ. ಎಲ್ಲಿಯೂ ದೊರೆಯಲಿಲ್ಲ ಆಗ ನನಗನಿಸಿದ್ದು, ನಮ್ಮ ಕನ್ನಡ ಮಾಧ್ಯಮಗಳ ವ್ಯಸನ ಯಾವ ಹಂತ ತಲುಪಿದೆ, ಸುದ್ದಿ ವ್ಯಸನದ ಜೊತೆಗೆ ರೋಚಕತೆಯ ವ್ಯಸನವೂ ಸೇರಿಕೊಂಡು ಕನ್ನಡ ವಾಹಿನಿಗಳು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡು ಬೆತ್ತಲಾಗಿವೆ ಎನಿಸಿಬಿಟ್ಟಿತು.

ಚೀನಾ=ಮುಸ್ಲಿಂ ಸೂತ್ರ ಎಷ್ಟು ಪರಿಣಾಮಕಾರಿಯಾಗಿ ಮಾಧ್ಯಮಗಳನ್ನು ಆವರಿಸಿದೆ ಎಂದು ಅರಿವಾಯಿತು. ಒಂದು ವೇಳೆ ಪಬ್ಲಿಕ್ ಟಿವಿಯ ಈ ಸುದ್ದಿ ಸತ್ಯವೇ ಆಗಿದ್ದರೆ ಸಾಕ್ಷಿ ಪುರಾವೆಗಳೊಂದಿಗೆ ಸಾಬೀತುಪಡಿಸಿ, ಅಂತಾರಾಷ್ಟ್ರೀಯ ನ್ಯಾಯ ಮಂಡಲಿಯ ಮುಂದೆ ಸಾಬೀತುಪಡಿಸಿ, ಚೀನಾ ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಲಿ. ಅಡ್ಡಿಯಿಲ್ಲ. ಚೀನಾ ಯಾರಿಗೂ ಡಾರ್ಲಿಂಗ್ ಅಲ್ಲ. ತಪ್ಪು ಮಾಡಿ ಶಿಕ್ಷೆ ಅನುಭವಿಸಿದರೆ ಯಾವ ದೇಶದ ಕಮ್ಯುನಿಸ್ಟರೂ ವಿರಹ ವೇದನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.

1970ರ ದಶಕದ ಚೀನಾದ ಮಳೆ ಭಾರತದ ಛತ್ರಿ ಎನ್ನುವ ಲೇವಡಿಯ ಮಾತು ಇಂದು ಹಳಸಿ ಕೊಳೆತುಹೋದ ಸರಕು. ಚೀನಾದಲ್ಲಿ ಆಡಳಿತ ನಡೆಸುವ ಕಮ್ಯುನಿಸ್ಟ್ ಪಕ್ಷ ಯಾವ ದೇಶದ ಕಮ್ಯುನಿಸ್ಟ್ ಪಕ್ಷಕ್ಕೂ ಸೂತ್ರಧಾರಿಯೂ ಅಲ್ಲ, ಮಾರ್ಗದರ್ಶಿಯೂ ಅಲ್ಲ. ಮಾರ್ಕ್ಸ್ ವಾದಿಗಳಿಗೆ ಇದು ಪ್ರಸ್ತುತವೂ ಅಲ್ಲ. ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ, ದಾಖಲೆ ಪುರಾವೆಗಳಿಲ್ಲದೆ ಒಂದು ಗಂಟೆಯ ಕಾಲ ಜನಸಾಮಾನ್ಯರ ದಿಕ್ಕುತಪ್ಪಿಸಿ, ಲಾಭ ಪಡೆಯುವ ಪಬ್ಲಿಕ್ ಟಿವಿ ತಾನು ನೀಡುವ ಸುದ್ದಿ ಸುಳ್ಳಾಗಿದ್ದರೆ ಜನರ ಮುಂದೆ ಮಂಡಿಯೂರಬೇಕಲ್ಲವೇ ? ಸವಾಲು ಸ್ವೀಕರಿಸಲೇಬೇಕೆಂದಿಲ್ಲ. ವಿವೇಚನೆ ಮತ್ತು ವಿವೇಕ ಬಳಸಿ ಸುದ್ದಿ ಬಿತ್ತರಿಸಿದರೆ ಜಗತ್ತಿಗೂ ಒಳಿತು, ಜನತೆಗೂ ಒಳಿತು.

ಮಧ್ಯಾಹ್ನದ ನಿದ್ರೆಯನ್ನು ಮುಗಿಸಿ ಸೆಕೆ ತಡೆಯಲಾರದೆ ಅಕ್ಕನೊಂದಿಗೆ ಮೊಬೈಲ್‍ನಲ್ಲಿ ಮಾತನಾಡುತ್ತಾ ಕಾಂಪೌಂಡಿನಲ್ಲಿ ನಿಂತಿದ್ದೆ. ಮಡದಿ ಮನೆಯೊಳಗೆ ಟಿವಿ ನೋಡುತ್ತಿದ್ದಳು. ಹಠಾತ್ತನೆ ಸೂರು ಕಿತ್ತು ಹೋಗುವಂತೆ ಅರಚಾಡುವ ಸದ್ದು ಟಿವಿಯಲ್ಲಿ ಕೇಳಿಸಿತು. ಸುದ್ದಿವಾಹಕನ ದನಿ ಎಷ್ಟು ಭೀಕರವಾಗಿತ್ತೆಂದರೆ, ಬಹುಶಃ ಯಾವುದೇ ಪ್ಯಾನಲ್ ಚರ್ಚೆಯಲ್ಲಿ ಜಗಳವಾಗುತ್ತಿದೆ ಎಂದು ಭಾವಿಸಿದೆ. ಇಂದಿನ ದಿನಗಳಲ್ಲಿ ಇದು ಸಾಮಾನ್ಯ ಸಂಗತಿ ಅಲ್ಲವೇ. ಆದರೂ ಏಕೆ ಇಷ್ಟೊಂದು ಜೋರುದನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಒಳಬಂದು ನೋಡಿದೆ. ಬಿ ಟಿವಿಯಲ್ಲಿ ಸ್ಫೋಟಕ ಬ್ರೇಕಿಂಗ್ ಸುದ್ದಿ ಪ್ರಸಾರವಾಗುತ್ತಿತ್ತು. ಅರಚಾಡುತ್ತಿದ್ದ, ಸೂರು ಕಿತ್ತು ಹೋಗುವ ಹಾಗೆ ಕಿರುಚುತ್ತಿದ್ದ ನಿರೂಪಕ “ ವೈರಸ್ ಟೆರರಿಸಂ ” ಕುರಿತು ಮಾತನಾಡುತ್ತಿದ್ದುದನ್ನು ಕಂಡೆ. ಅವರ ಏರು ದನಿ ಹೇಗಿತ್ತೆಂದರೆ ಇನ್ನು ಕೆಲ ಕ್ಷಣಗಳಲ್ಲೇ ಜಟಾಪಟಿ ಯುದ್ಧವೇ ಆರಂಭವಾಗುತ್ತದೆ ಎನ್ನುವಂತಿತ್ತು.

ಯಾರನ್ನು ಪ್ರಶ್ನಿಸುತ್ತಿದ್ದರೋ ಗೊತ್ತಾಗಲಿಲ್ಲ, ನಿಜಾಮುದ್ದಿನ್ ತಬ್ಲೀಗಿ ಜಮಾತ್ ಧಾರ್ಮಿಕ ಸಮ್ಮೇಳನ ಅವರ ಕೆಂಗಣ್ಣಿಗೆ, ಜೋರು ಬಾಯಿಗೆ ಸಿಲುಕಿಬಿಟ್ಟಿತ್ತು.
ನಿಜ ನಿಜಾಮುದ್ದಿನ್ ಧಾರ್ಮಿಕ ಸಮ್ಮೇಳನವನ್ನು ಆಯೋಜಿಸಿದ್ದು ತಪ್ಪು ಆದರೆ ಅನುಮತಿ ನೀಡಿದ್ದೂ ತಪ್ಪಲ್ಲವೇ ? ಈ ಸಮ್ಮೇಳನದಲ್ಲಿ ಭಾಗವಹಿಸಿದ್ದವರಿಂದ ಕೊರೋನಾ ಸೋಂಕು ಹರಡಿರುವುದೂ ಸತ್ಯ. ಕೊರೋನಾ ಸೋಂಕಿತರು ಇದನ್ನು ಬಯಸಿರಲಿಲ್ಲ. ಧಾರ್ಮಿಕ ನಾಯಕರ ಮೌಢ್ಯಕ್ಕೆ ಬಲಿಯಾಗಿಯೂ ನೂರಾರು ಜನ ಸೋಂಕಿತರಾಗಿದ್ದಾರೆ.

ಈ ಸೋಂಕಿತರನ್ನು ಮಾನವೀಯ ದೃಷ್ಟಿಯಿಂದ ನೋಡುವ ವ್ಯವಧಾನ ಮತ್ತು ಸಂವೇದನೆ ಮಾಧ್ಯಮಗಳಿಗೆ ಇರಬೇಕಲ್ಲವೇ ? ಬಿ ಟಿವಿ, ಸುವರ್ಣ ವಾಹಿನಿಯವರಿಗೆ ಸೋಂಕಿತರು ಶಂಕಿತರಂತೆಯೂ, ಕೊರೋನಾದಿಂದ ಭೀತಿಗೊಳಗಾದವರು ಭಯೋತ್ಪಾದಕರಂತೆಯೂ ಕಾಣುತ್ತಿರುವುದು ದುರಂತ. ವೈರಸ್ ಟೆರರಿಸಂ ಕುರಿತು ಗಂಟೆಗಟ್ಟಲೆ ಬಿತ್ತರಿಸುವ ಮಾಧ್ಯಮಗಳ ಬಳಿ, ನಿಜಾಮುದ್ದಿನ್ ಸಮ್ಮೇಳನದ ಹಿಂದೆ ಯಾವುದಾದರೂ ಪಿತೂರಿ ಇರುವ ಸಾಕ್ಷಿ ಪುರಾವೆಗಳಿವೆಯೇ ? ಇದ್ದರೂ ಇಲ್ಲಿ ವಿಚಾರಣೆ ನಡೆಸಿ ತೀರ್ಪು ನೀಡಬೇಕಿರುವುದು ನ್ಯಾಯಾಂಗವೋ ಮಾಧ್ಯಮದ ನಿರೂಪಕರೋ? ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ನೂರಾರು, ಸಾವಿರಾರು ಅಮಾಯಕರನ್ನು ಭಯೋತ್ಪಾದಕರಂತೆ ಬಿಂಬಿಸುವ ನೀಚತನ ಏಕೆ ? ಇದು ಮಾಧ್ಯಮ ನೀತಿ ಸಂಹಿತೆಗೆ ಬಗೆಯುವ ದ್ರೋಹ ಅಲ್ಲವೇ ?
ಇರಲಿ, ಮಾಧ್ಯಮದ ಕೆಲಸವೇ ಸಾರ್ವಜನಿಕ ವಿಷಯಗಳನ್ನು ಬಗೆದು ನೋಡುವುದು.

ಆದರೆ ಬಗೆಯುವಾಗಲೂ ಸಂಯಮ ಇರಬೇಕಲ್ಲವೇ ? ಸುದ್ದಿಯನ್ನು ಬಗೆದು ನೋಡುವುದೆಂದರೆ ವೈದ್ಯರು ನಡೆಸುವ ಹೃದಯ ಶಸ್ತ್ರ ಚಿಕಿತ್ಸೆಯಂತಿರಬೇಕೇ ಹೊರತು ಉಗ್ರನರಸಿಂಹ ಹಿರಣ್ಯ ಕಷಿಪುವಿನ ಎದೆ ಬಗೆದಂತೆ ಇರಕೂಡದು. ಇರಲಿ ಬಿಡಿ, ಕನ್ನಡ ಸುದ್ದಿವಾಹಿನಿಗಳಿಗೆ ಇದು ಅರ್ಥವಾಗಲಿಕ್ಕಿಲ್ಲ. ಆದರೆ ವೈರಸ್ ಟೆರರಿಸಂ ಎಂದು ಸುದ್ದಿ ಬಿತ್ತರಿಸುವ ಮುನ್ನ ಮಾಧ್ಯಮದ ನಿರೂಪಕರು ತಮ್ಮ ಸ್ವಂತಿಕೆ ಮತ್ತು ಘನತೆ ಉಳಿಸಿಕೊಳ್ಳುವ ರೀತಿಯಲ್ಲಿ ಕೊಂಚ ಮಟ್ಟಿಗಾದರೂ ಸಂಯಮದಿಂದಿರಬೇಕಲ್ಲವೇ. ಮೈಮೇಲೆ ದೆವ್ವ ಬಂದವರಂತೆ ಅರಚಾಡುವುದು, ಅಂಡು ಸುಟ್ಟ ಬೆಕ್ಕಿನಂತೆ ಕುಳಿತಲ್ಲೇ ಕೂರಲಾಗದೆ ಸುದ್ದಿ ಹೇಳುವುದು ನೋಡುಗರನ್ನು ಗಲಿಬಿಲಿಗೊಳಿಸುತ್ತದೆ.

ನೋಡುಗರ ದಾರಿ ತಪ್ಪಿಸುತ್ತದೆ. ಮಾಧ್ಯಮಗಳ ಮೂಲ ಉದ್ದೇಶ ಏನು ? ದೇಶದಲ್ಲಿ ಏನು ನಡೆಯುತ್ತಿದೆ, ಹೇಗೆ ನಡೆಯುತ್ತಿದೆ ಮತ್ತು ಏಕೆ ನಡೆಯುತ್ತಿದೆ ಎಂದು ವರದಿ ಮಾಡುವುದು. ಕೊರೋನಾದಂತಹ ವಿಷಯಗಳು ಬಂದಾಗ ಕೊಂಚ ಮಟ್ಟಿಗೆ ಪರಿಶೋಧ ಅಗತ್ಯ. ಅದರೆ ಈ ಪರಿಶೋಧದೊಡನೆ ಅಧ್ಯಯನಶೀಲತೆ ಮತ್ತು ವ್ಯವಧಾನವುಳ್ಳ ಸಂಶೋಧನೆಯೂ ಅಗತ್ಯ ಅಲ್ಲವೇ ? ಇದು ಇಲ್ಲವಾದರೆ ಟಿವಿ ಸ್ಟುಡಿಯೋಗಳು ದೆವ್ವದ ಕೋಣೆಗಳಾಗುತ್ತವೆ. ಮಾಧ್ಯಮದ ಸ್ಟುಡಿಯೋಗಳೇ ನ್ಯಾಯಾಲಯದ ಕಟಕಟೆಯಾದರೆ ಸುದ್ದಿ ನಿರೂಪಕರೇ ನ್ಯಾಯಾಧೀಶರಾಗಿಬಿಡುತ್ತಾರೆ.

ಈ ಅಪಾಯವನ್ನು ಸರ್ಕಾರಗಳು ಏಕೆ ಗಮನಿಸುತ್ತಿಲ್ಲ ? ಲಗಾಮಿಲ್ಲದ ಕುದುರೆಯಂತೆ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವಾಗ, ಸರ್ಕಾರಗಳು ತಮ್ಮ ಪಕ್ಷ ಹಿತಾಸಕ್ತಿಯನ್ನು ಬದಿಗಿಟ್ಟು, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವತ್ತ ಗಮನಹರಿಸಬೇಕಲ್ಲವೇ ? ಕೊರೋನಾ ವೈರಾಣುವಿನ ದಾಳಿಗೆ ತತ್ತರಿಸುತ್ತಿರುವ ಜನಸಾಮಾನ್ಯರಲ್ಲಿ ಮಾನವೀಯ ಸಂವೇದನೆ ಮತ್ತು ಸಂಯಮ ಹೆಚ್ಚಾದಷ್ಟೂ ಸಮಾಜದ ಸ್ವಾಸ್ಥ್ಯ ಸುಸ್ಥಿರವಾಗಿರಲು ಸಾಧ್ಯ. ಇದನ್ನು ಹೆಚ್ಚಿಸುವ ಹೊಣೆಗಾರಿಕೆ ನಾಗರಿಕ ಸಮಾಜದ ಮೇಲಿರುವಂತೆಯೇ, ಮಾಧ್ಯಮ ಲೋಕದ ಮೇಲೂ ಇರುತ್ತದೆ.

ಮಾರಣಾಂತಿಕ ವೈರಾಣುವಿನ ನಡುವೆ ಆತಂಕದಿಂದ ಬದುಕುತ್ತಿರುವ ಜನಸಾಮಾನ್ಯರ ಮನದಾಳದಲ್ಲಿ ದ್ವೇಷದ ಬೀಜ ಬಿತ್ತುವ ಕೆಲಸ ಮಾಧ್ಯಮಗಳದ್ದಲ್ಲ. ಮಾಧ್ಯಮಗಳಿಗೆ ಯಾವುದೇ ನಿರ್ದಿಷ್ಟ ಸೈದ್ಧಾಂತಿಕ ಭೂಮಿಕೆ ಅಗತ್ಯವಿರುವುದಿಲ್ಲ. ಆದರೆ ವಾಸ್ತವವನ್ನು ಬಿಂಬಿಸುವ ವಸ್ತುನಿಷ್ಠ ನೆಲೆಗಟ್ಟು ಅತ್ಯಗತ್ಯವಾಗಿರುತ್ತದೆ. ಪತ್ರಿಕೋದ್ಯಮದ ಮೌಲ್ಯಗಳು ಅವಶ್ಯವಾಗಿರುತ್ತವೆ. ಕನ್ನಡದ ಸುದ್ದಿವಾಹಿನಿಗಳು ತಮ್ಮ ನೈತಿಕ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಅರಿತು ಕಾರ್ಯನಿರ್ವಹಿಸಿದರೆ ನೋಡುಗರಿಗೂ ಒಳಿತು, ಸಮಾಜಕ್ಕೂ ಒಳಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version