ಲೈಫ್ ಸ್ಟೈಲ್

“ಆಧುನಿಕ ಜೀವನ ಶೈಲಿಗೆ ಆರೋಗ್ಯಕರ ಧಾನ್ಯ ರಾಗಿ” ; ರಾಗಿ ಉಂಡವ ನಿರೋಗಿ..!

Published

on

  • ಆಶಾ ಸಿದ್ದಲಿಂಗಯ್ಯ

ರಾಗಿ ಉಂಡವ ನಿರೋಗಿ”

 ರಾಗಿ ಆಫ್ರಿಕ ಮತ್ತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಆಹಾರ ಧಾನ್ಯ. ಇತಿಯೋಪಿಯ ಮೂಲದ ಈ ವಾರ್ಷಿಕ ಬೆಳೆಯು ಸುಮಾರು 4000 ವರ್ಷಗಳ ಹಿಂದೆ ಭಾರತಕ್ಕೆ ತರಲಾಯಿತು.

ಭಾರತದಲ್ಲಿ ರಾಗಿಬೆಳೆಯುವ ರಾಜ್ಯಗಳು

ರಾಗಿ ಬೆಳೆ, ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದೆ.
ಕರ್ನಾಟಕ ಬಿಟ್ಟರೆ, ತಮಿಳುನಾಡು, ಮತ್ತು ಮಹಾರಾಷ್ಟ್ರ ರಾಜ್ಯಗಳು ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿವೆ.

ಇದನ್ನು’ಫಿಂಗರ್ ಮಿಲೆಟ್ ” ಎಂದೂ ಕರೆಯುತ್ತಾರೆ. ಪುಷ್ಕಳ ಪೋಶಕಾಂಷವಿರುವ ಈ ಧಾನ್ಯ , ವಿಶ್ವದ ತೃಣಧಾನ್ಯ ಬೆಳೆಗಳಲ್ಲಿ, ಸಜ್ಜೆ, ನವಣೆ, ಬರಗು ಬೆಳೆಗಳನಂತರದ ಸ್ಥಾನ, ರಾಗಿಯದು. ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ವರ್ಷಂಪ್ರತಿ ಸುಮಾರು 22 ಲಕ್ಷ ಹೆಕ್ಟೇರುಪ್ರದೇಶದಲ್ಲಿ ರಾಗಿ ಬೆಳೆದು 26 ರಿಂದ 28 ಲಕ್ಷ ಟನ್ ರಾಗಿಯನ್ನು ದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯ ಮುಕ್ಕಾಲುಪಾಲು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮತ್ತು ಮಹಾರಾಷ್ಟ್ರ ರಾಜ್ಯಗಳು ಉತ್ಪಾದಿಸುತ್ತಿವೆ.ಇನ್ನುಳಿದ ಕಾಲು ಭಾಗ, ಬಿಹಾರ, ಉತ್ತರ ಪ್ರದೇಶ, ಒರಿಸ್ಸ, ಮಧ್ಯ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶಗಳು ಪೂರೈಸುತ್ತವೆ.

ರಾಗಿಯ ಉಪಯೋಗಗಳು

ರಾಗಿಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು , ದೋಸೆ, ಗಂಜಿ, ಹಾಲ್ಬಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಮಕ್ಕಳ ಪೌಷ್ಟಿಕ ಆಹಾರವೆಂದರೆ- ಒಡ್ಡರಾಗಿಹಿಟ್ಟು. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ. ರಾಗಿ ಮಾಲ್ಟನ್ನು ಸರಿಯಾಗಿ ಡಬ್ಬಿಗಳಲ್ಲಿ ಶೇಖರಿಸಿ ಮಾರುವ ಕಂಪೆನಿಗಳು ಚೆನ್ನಾಗಿ ಹಣ ಮಾಡುತ್ತಿವೆ.

ಮಧುಮೇಹ(ಡಾಯಾಬಿಟಿಸ್) ರೋಗಿಗಳಿಗೆ ಇದು ವೈದ್ಯರಿಂದ ಶಿಫಾರಿಸ್ಸು ಪಡೆದ ಪೇಯ. ರಾಗಿ ಅರಳನ್ನು ಹುರಿದು, ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿಬೆರೆಸಿ, ಹುಣಸೆಹುಳಿ, ಯಾಲಕ್ಕಿ ಪುಡಿ ಸೇರಿಸಿ,ಸೇವಿಸಿದರೆ, ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಬಹುದು.ರಾಗಿ ಮುದ್ದೆ ಬಸ್ಸಾರು ದಕ್ಷಿಣ ಕರ್ನಾಟಕದಲ್ಲಿ ಜನಪ್ರಿಯ.

ಪೋಷಕಾಂಶಗಳ ವಿವರ

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.

100ಗ್ರಾಮ್ ರಾಗಿಯಲ್ಲಿನ ಪೋಷಕಾಂಶಗಳ
ವಿವರ ಈ‌ ಕೆಳಕಂಡಂತಿದೆ

ಪೋಷಕಾಂಶ ಪ್ರತಿಶತ
ಪ್ರೋಟಿನ್ 7.3 ಗ್ರಾಂ
ಕೊಬ್ಬು 1.3 ಗ್ರಾಂ
ಪಿಷ್ಟ 72ಗ್ರಾಂ
ಖನಿಜಾಂಶ 2.7ಗ್ರಾಂ
ಸುಣ್ಣದಂಶ 3.44ಗ್ರಾಂ
ನಾರಿನಂಶ 3.6 ಗ್ರಾಂ

ರಾಗಿಮುದ್ದೆ ಮಾಡಿದನಂತರ ತಳದಲ್ಲಿ ಮುದ್ದೆಯ ಅಂಟಿನ ಎಳೆ ಯನ್ನು ಸೀಕು ಎಂದು ಹೇಳುತ್ತಾರೆ. ಒಣಗಿದ ಸೀಕು ಕುರುಂ ಕುರುಂ ಹಪ್ಪಳದಂತೆ ಸ್ವಾದಿಷ್ಟ. ಬಾಲ್ಯದಲ್ಲಿ ಅಮ್ಮ ಬಿಡಿಸಿ ಒಲೆ ಗುಂಡಿನ ಮೇಲಿಟ್ಟ ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಿಗೆಯಲ್ಲಿದೆ. ಸೀಕನ್ನುಕಂಡರೆ ಮಕ್ಕಳಿಗೆ ಕಣ್ಣು ಅರಳುವುದು. ಬಡಮಕ್ಕಳ ಪಾಲಿಗೆ ಸೀಕು- ಚಾಕಲೇಟ್

ಮುದ್ದೆ ಮಾಡಲಿಕ್ಕೆ ಪಳಗಿದ ಕೈಗಳೇ ಆಗಬೇಕು

ರಾಗಿಮುದ್ದೆ ತಯಾರಿಸುವಲ್ಲಿ ಕಲಾತ್ಮಕತೆಯೂ ಇದೆ. ಕುದಿವ ನೀರಿಗೆ ರಾಗಿಹಿಟ್ಟು ಬೆರೆಸಿ ಹದವಾಗಿ ಕುದಿಸಿ, ಪಾಕಕ್ಕೆ ಬಂದ ಮಿಶ್ರಣವನ್ನು ಉಂಡೆಕಟ್ಟುವ ಪ್ರಕ್ರಿಯೆ ಮೇಲ್ನೋಟಕ್ಕೆ ಸುಲಭವಾಗಿಕಂಡರೂ ಅನುಭವ ಬಯಸುವ ಕಾರ್ಯವಾಗಿದೆ. ಮುದ್ದೆ ಗಂಟಾಗದಂತೆ ತಯಾರಿಸುವುದಕ್ಕೆ ಪಳಗಿದ ಕೈಗಳೇ ಆಗಬೇಕು .

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version