ಲೈಫ್ ಸ್ಟೈಲ್
Fishing Cat ಕಥಾನಕ..!
ಇದರ ಅಂದರೆ ಈ fishing cat ಕಥಾನಕ ನಿಮಗೆ ಹೇಳಲೇಬೇಕು. ಈ ವರ್ಷದ ಜನವರಿಯಲ್ಲಿ ಒರಿಸಾದ ಬಿತರ್ ಕನಿಕಾಗೆ ಹೋಗಿದ್ದೆವು ನಂ ಮಾಮೂಲಿ ರಾಹುಲ್ ಖುಷ್ಬೂ ಜೊತೆ. ನಾವು ಮೂವರು ಮಾತ್ರ ಹೋಗಿದ್ದೆವು. ಮಂಗಲಜೋಡಿ ಮೂರುದಿನ, ಬಿತರ್ ಕನಿಕಾ ಮೂರು ದಿನ ಎಂದು ನಿರ್ಧರಿಸಿ ಫ್ಲೈಟ್ ಟಿಕೆಟ್ ಕೂಡಾ ಬುಕ್ ಆಗಿತ್ತು.
ರಾತ್ರಿ ಡೆಲ್ಲಿಗೆ ಹೋಗಿ ಅಲ್ಲಿಂದ ಅವರಿಬ್ಬರ ಜೊತೆ ಭುವನೇಶ್ವರ್ ಗೆ ಹೋಗಬೇಕಿತ್ತು. ಆದರೆ ಅಮೆರಿಕಾದಲ್ಲಿದ್ದ ನನ್ನ ಸೋದರ ಮಾವ/ಭಾವ ತೀರಿಹೋಗಿ ನಾನು ಹೊರಡಬೇಕಿದ್ದ ದಿನ ಕಾರ್ಯ ಇತ್ತು. ಹಾಗಾಗಿ ನಾನು ಒಂದು ದಿನ ತಡವಾಗಿ ಹೋದೆ. ಮಂಗಳಜೋಡಿ ಮುಗಿಸಿ ಬಿತರ್ ಕನಿಕಾ ತಲುಪಿದೆ. ಹಿಂದಿನವರ್ಷ ಬಿತರ್ ಕನಿಕಾಗೆ ಬಂದು ಎಲ್ಲ ಕಿಂಗ್ ಫಿಷರ್ ಫೋಟೊ ತೆಗೆದಾಗಿತ್ತು. ಆದರೂ ಈ ವರ್ಷ ಮತ್ತೆ ಬಿತರ್ ಕನಿಕಾಗೆ ಮುಖ್ಯವಾಗಿ ಬಂದದ್ದು mangrove pittaಗಾಗಿ, ಆದರೂ ಸರಿಯಾಗಿ ಸಿಗಲಿಲ್ಲ ಬಿಡಿ. ಬಿತರ್ ಕನಿಕಾದಲ್ಲಿ ಬೆಳಿಗೆ ದೋಣಿಯಾತ್ರೆ ಮುಗಿಸಿ ಮಧ್ಯಾಹ್ನದ ಸೆಷನ್ನಿಗೆ ಸಿದ್ದವಾದೆವು. ದೋಣಿ ಹೋಗ್ತಾನೆ ಇದೆ.
ಎಲ್ಲಿಗೆ ಎಂದೆ.
fishing cat ಗಾಗಿ ಹೋಗ್ತಾ ಇದೀವಿ ಎಂದರು.
ನನಗೆ ಯಾವ ಆಸಕ್ತಿಯೂ ಇರಲಿಲ್ಲ. ಅವರಿಬ್ಬರೂ ಹಿಂದಿನ ರಾತ್ರಿ ಹಾಗೂ ಬೆಳಿಗ್ಗಿನ ಜಾವ ಮೂರು ಗಂಟೆ ಹೊತ್ತಿನಲ್ಲಿ leopard catಗಾಗಿ ಹೋಗಿದ್ದರು. ನಾನಂತೂ ರೂಂ ಬಿಟ್ಟು ಅಲುಗಾಡಿರಲಿಲ್ಲ. ದಾರೀಲಿ ಎದುರಾದರೆ ಮಾತ್ರ ಪ್ರಾಣಿಗಳು, ಅದಕ್ಕಾಗಿ ಹೋಗಲ್ಲ.
ಆದರೆ ದೋಣಿ ಪ್ರಯಾಣ… ಬೆಳದಿಂಗಳ ಹಿಂದಿನ ರಾತ್ರಿ. ಕನಸಿನಲ್ಲೂ ಕೈಗೂಡದ ಪ್ರಯಾಣ. ಮಧ್ಯಾಹ್ನ ಎರಡು ಗಂಟೆಗೆ ಬಿಟ್ಟಿದ್ದು. ಏಳು ಗಂಟೆಗೆ ತಲುಪ್ತೀವಿ ಅಂದರು. ಆದರೆ ಸಮುದ್ರದ ಭರತ, ಹಿನ್ನೀರು ಹೆಚ್ಚಾಗಿ ದೋಣಿ ಪ್ರಯಾಣ ನಿಧಾನವಾಯಿತು. ಡೆಕ್ ಮೇಲೆ ಅಡ್ಡಾಗಿದ್ದೆ, ಆದರೆ ಚಳಿ ಹೆಚ್ಚಾಗಿ ಒಳಗೆ ಬಂದೆ.
ಮಲಗಲು ದೋಣಿಯ ಕಿರಿದಾದ ಸೀಟು ಇಕ್ಕಟ್ಟಾಗಿತ್ತು. ಡೀಸೆಲ್ ವಾಸನೆಗೆ ಹೊಟ್ಟೆ ತೊಳಸುತ್ತಿತ್ತು. ರಾತ್ರಿ ಹತ್ತು ಗಂಟೆ ಸುಮಾರಿಗೆ ಜಾಗ ತಲುಪಿದ್ದಾಯ್ರು. ಆ ಕತ್ತಲಲ್ಲಿ ಇವರು ಏನು ಚಿತ್ರ ತೆಗೀತಾರಪ್ಪ ಎಂದು ಗೊಣಗಿಕೊಳ್ತಿದ್ದೆ. ರಾತ್ರಿ ಹನ್ನೆರಡೂವರೆಗೆ ಬ್ಯಾಟರಿ ಬೆಳಕಿನಲ್ಲಿ ಈ ಬೆಕ್ಕು ನದಿಯಂಚಿಗೆ ಬಂತು. ಆಚೆ ಇವರಿಬ್ಬರು ಅವರ ಹತ್ಯಾರಗಳೊಡನೆ ಸಜ್ಜಾಗಿದ್ದರು.
ಒಬ್ಬರದ್ದು 800mm, ಇನ್ನೊಬ್ಬರದ್ದು 200-400mm. ನನ್ನದು 600, 100-400 ಎರಡೂ ರೆಡಿ ಇದ್ದವು. 800ರೇಂಜಿಗೆ ಬರಲೇ ಇಲ್ಲ. ನನ್ನದು ಹೀಗೆ ಬಂದಿತು.
ಆಮೇಲೂ ಸ್ವಲ್ಪ ಹೊತ್ತು ಕಾಯ್ದು ಮರಳಿದ್ದಾಯ್ತು. ಆ ಚಳಿಯಲ್ಲಿ ನಡುಗುತ್ತಾ ದೋಣಿಯಾನ ಮುಗಿಸಿ ಇಳಿದಾಗ ಬೆಳಗಿನ ಜಾವ ಐದು ದಾಟಿತ್ತು., ರೂಮು ಸೇರಿದಾಗ ಐದೂವರೆ. ಮಲಗಿದವರು ಎದ್ದಿದ್ದೂ ಮಧ್ಯಾಹ್ನಕ್ಕೆ. ಬೆಳಗಿನ ಕಿಂಗ್ ಫಿಷರ್ ಯಾನ ರದ್ದಾಯಿತು. ಆವಾಗ ಬೈದುಕೊಂಡಿದ್ದು ಹಾಳಾದ್ ಬೆಕ್ಕಿನಿಂದ ನನ್ ಕಿಂಗ್ ಫಿಷರ್ ಯಾನ ಹಾಳಾಯ್ತು ಎಂದು. ಏಕೆಂದರೆ ನಾನು ಕಿಂಗ್ ಫಿಷರ್ ವ್ಯಾಮೋಹಿ.
–ಲೇಖನ ಮತ್ತು ಚಿತ್ರ : ಲೀಲಾ ಅಪ್ಪಾಜಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243