ನೆಲದನಿ
‘ಎದೆಯಲ್ಲಿ ಅಕ್ಷರವಿಲ್ಲದ’ ಜನಪದರು ಅಕ್ಕರೆಯ ಪ್ರೀತಿ ಬಿತ್ತಿದರು….!
- ಬಾಲಾಜಿ ಕುಂಬಾರ, ಚಟ್ನಾಳ, ಮೊ,ಸಂಖ್ಯೆ :9739756216
ಕನ್ನಡ ಸಾಹಿತ್ಯ ಬೆಳವಣಿಗೆಗೆ ಜನಪದರ ಸಾಹಿತ್ಯ ಕೊಡುಗೆ ಅಪಾರ. ಜನಪದರು ರಚಿಸಿದ ಅಮೂಲ್ಯವಾದ ಸಾಹಿತ್ಯದ ಪ್ರಕಾರಗಳು ಕನ್ನಡ ಸಾಹಿತ್ಯ ಲೋಕ ಶ್ರೀಮಂತಗೊಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ರಚಿತವಾದ ಜನಪದ ಸಾಹಿತ್ಯದ ಸೊಬಗು ವೈಶಿಷ್ಟತೆಗಳಿಂದ ಕೂಡಿದ ಸಾಹಿತ್ಯವಾಗಿದೆ. ಅಕ್ಷರದ ಜ್ಞಾನವಿಲ್ಲದಿದ್ದರೂ ಬದುಕಿನುದ್ದಕ್ಕೂ ತಾವು ಅನುಭವಿಸಿದ ನೋವು, ನಲಿವುಗಳ ದರ್ಪಣ ಅಕ್ಷರಗಳ ತೆರೆದಿಟ್ಟಿದ್ದಾರೆ .
ಬಹುತೇಕ ಜನಪದ ಕವಿಗಳು ಶಾಲೆಯ ಮೆಟ್ಟಿಲು ಹತ್ತಿಲ್ಲ. ಅಕ್ಷರ ಕಲಿತವರಲ್ಲ, ಪುಸ್ತಕ ಓದಿದವರಲ್ಲ. ಆದರೂ ಪದವಿದವರಿಗೂ ಮೀರಿಸುವ ಸಾಹಿತ್ಯ ಜ್ಞಾನ ಕಾಣುತ್ತೇವೆ. ಎದೆಯಲ್ಲಿ ಅಕ್ಷರ ಇಲ್ಲದಿದ್ದರೂ ಅಕ್ಕರೆಯ ಪ್ರೀತಿ ಜನಪದರಲ್ಲಿ ಕಾಣಬಹುದು. ಅನಕ್ಷರಸ್ಥರಾದರೂ ತಾವೇನು ಕಮ್ಮಿಯಿಲ್ಲ ಎಂಬುದಕ್ಕೆ ಜಾನಪದರು ರಚಿಸಿದ ಸಾಹಿತ್ಯವೇ ಸಾಕ್ಷಿಯಾಗಿದೆ.
ಜನಪದರು ಕೇವಲ ಸಾಹಿತ್ಯ ಅಷ್ಟೇ ರಚನೆ ಮಾಡಲಿಲ್ಲ. ತಾವು ರಚಿಸಿದ ಸಾಹಿತ್ಯಕ್ಕೆ ಸಂಗೀತ ರೂಪ ನೀಡಿ ವಿವಿಧ ಧಾಟಿಯಲ್ಲಿ ಹಾಡುವ ಮೂಲಕ ಆನಂದಿಸುತ್ತಾರೆ. ಕನ್ನಡ ಸಾಹಿತ್ಯ ಪರಂಪರೆಗೆ ಅತೀ ಹೆಚ್ಚು ವೈಶಿಷ್ಟತೆಯ ಮೆರಗು ತಂದು ಕೊಟ್ಟ ಶ್ರೇಯಸ್ಸು ಜಾನಪದ ಕವಿ, ಸಾಹಿತಿಗಳಿಗೆ ಸಲ್ಲುತ್ತದೆ.
ಗ್ರಾಮೀಣ ಭಾಗದಲ್ಲಿ ತಮ್ಮ ಸುತ್ತಮುತ್ತಲು ದೈನಂದಿನ ಜೀವನದಲ್ಲಿ ಘಟಿಸುವ ಪ್ರಚಲಿತ ವಿದ್ಯಮಾನಗಳ ಕುರಿತು, ಹಬ್ಬ, ಆಚರಣೆ, ಸಭೆ, ಸಮಾರಂಭ, ವ್ಯವಸಾಯ, ಸುಗ್ಗಿ, ಸಂಪ್ರದಾಯ, ಸಂಸ್ಕೃತಿಕ ಚಟುವಟಿಕೆ ಸೇರಿದಂತೆ ತಮ್ಮ ಬದುಕಿನ ಎಲ್ಲಾ ಮಗ್ಗಲಿನ ಓರೆಕೋರೆಗಳ ಒಳನುಗ್ಗಿ,
ಕಂಡಿರುವ ಸತ್ಯಗಳನ್ನು ಸಮಾಜಕ್ಕೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಜಾನಪದ ಸಾಹಿತಿಗಳು ಮಾಡಿದ್ದಾರೆ. ತಾವು ರೂಢಿಸಿಕೊಂಡಿರುವ ‘ಜವಾರಿ’ ಭಾಷಾಶೈಲಿ ಕೇಳುವವರ ಮನಸ್ಸು ಉತ್ಕಟಗೊಳ್ಳುತ್ತದೆ. ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸರಳವಾಗಿ ಗೀಚಿರುವ ಸಾಹಿತ್ಯ ಕ್ರಷಿ ಅನನ್ಯತೆ ಪಡೆದುಕೊಂಡಿದೆ.
ಆಯಾ ಕಾಲಘಟ್ಟದಲ್ಲಿ ರಚಿತವಾದ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯ ಪ್ರಕಾರಗಳು ಕನ್ನಡ ಸಾರಸ್ವತ ಲೋಕದ ತ್ರಿರತ್ನ ಸಾಹಿತ್ಯ ಪ್ರಕಾರಗಳು ಎನ್ನಬಹುದು. ಈ ಮೂರು ಪ್ರಕಾರದ ಸಾಹಿತ್ಯ ರಚನೆಯಲ್ಲಿ ತುಂಬಾ ವೈವಿದ್ಯತೆ ಕಾಣಬಹುದು.
ಕನ್ನಡ ನಾಡಿನ ಸಾಹಿತ್ಯದ ಉಸಿರಾಗಿರುವ ಈ ಮೂರು ಸಾಹಿತ್ಯ ಪ್ರಕಾರಗಳು ಜಾಗತೀಕ ಮಟ್ಚದಲ್ಲಿ ಮನ್ನಣೆಗೆ ಪಾತ್ರವಾಗಿವೆ. ಈ ಎಲ್ಲದಕ್ಕೂ ಕಾರಣರಾದ ನಾಡಿನ ಸೂಫಿಗಳು, ಸಂತರು , ವಚನಕಾರರು , ದಾಸರು , ಕೀರ್ತನೆಕಾರರು ಹಾಗೂ ಜನಪದರ ಕವಿಗಳ ಅಗಾಧ ಜ್ಞಾನಕ್ಕೆ ನಾವು ತಲೆಬಾಗಲೇಬೇಕು.
“ಜಾನಪದ ಸಾಹಿತ್ಯ” ಎಷ್ಟೇ ಸಂಗ್ರಹಣೆ ಮಾಡಿದರೂ ಇನ್ನೂ ಸಂಗ್ರಹಿಸುವ ಕಾರ್ಯ ನಡೆಯಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅದೆಷ್ಟೋ ಜಾನಪದ ಕವಿಗಳಿಗೆ ಗುರುತಿಸಲು ಆಗುತ್ತಿಲ್ಲ.
ಶಾಲು, ತುರಾಯಿ, ಗೌರವ, ಸನ್ಮಾನಗಳು ಲೆಕ್ಕಿಸದೆ ತಮ್ಮ ಅಂತರಂಗದ ಸಂತ್ರಪ್ತಿಗಾಗಿ ಕಾವ್ಯ ಕಟ್ಟುವ ಕವಿಗಳು ಸ್ವಾಸ್ಥ್ಯಸಮಾಜದ ಕಿವಿಗಳಾಗಿ ತಮ್ಮಪಾಡಿಗೆ ತಾವು ಕಾರ್ಯನಿರ್ವಹಿಸುತ್ತಿದ್ದಾರೆ. ತಾವು ರಚಿಸಿರುವ ಜನಪದ ಸಾಹಿತ್ಯಕ್ಕೆ ಬೆಲೆ ಇಲ್ಲದೆ ಮರೆಯಾಗುತ್ತಿದೆ ಎಂಬ ಕೊರಗು ನಮ್ಮ ಜಾನಪದ ಕವಿಗಳಿಗೆ ಅತಿಯಾಗಿ ಕಾಡುತ್ತಿದೆ.
ಜನಪದಕಾರರು ಬರೆದಿರುವ ಬಹುತೇಕ ಸಾಹಿತ್ಯವು ಅಕ್ಷರ ರೂಪ ಪಡೆಯದೆ ನಶಿಸಿಹೋಗುತ್ತಿದೆ. ಅಕ್ಷರ ಜ್ಞಾನವಿಲ್ಲದಿದ್ದರೂ ಅಚ್ಚುಕಟ್ಚಾಗಿ ಪದಜೋಡಿಸುವ ಮೂಲಕ ರಸಭರಿತವಾದ ಕಾವ್ಯಕಟ್ಟುವ ಸಾಹಸಮಯ ಕಾರ್ಯ ಜನಪದ ಕವಿಗಳಿಗೆ ಕರಗತವಾಗಿದೆ.
ಈ ನಾಡಿನ ಸಾಂಸ್ಕ್ರತಿಕ ಹಿನ್ನೆಲೆ, ಪರಂಪರೆ, ವೈಭವ, ಉತ್ಸಹಗಳು ಸೇರಿದಂತೆ ಗ್ರಾಮೀಣ ಭಾಗದ ವಿಶಿಷ್ಟ ಸೊಗಡು ಜನಪದ ಸಾಹಿತ್ಯದಲ್ಲಿ ಕಾಣಬಹುದು.ತಮ್ಮ ಹರಿತವಾದ ಲೇಖನಿಯಿಂದ ಅವಸ್ಥೆ ಸಮಾಜ ತಿದ್ದಲು ಪ್ರಯತ್ನಿಸಿದ್ದಾರೆ.
ತಮ್ಮ ‘ಸಾಹಿತ್ಯಕ್ಕೆ ಅಕ್ಷರ ರೂಪ ಸಿಗಲಿಲ್ಲ’ ಎಂಬ ಕೊರಗು ಕಾಡುತ್ತಿದ್ದರೂ ತಾವು ರಚಿಸಿದ ಕಾವ್ಯಕ್ಕೆ ವಿವಿಧ ಧಾಟಿಯಲ್ಲಿ ಹಾಡಿಕೊಂಡು ಆನಂದಿಸುವ ಕಲೆ ಜನಪದರಲ್ಲಿ ಮಾತ್ರ ಕಾಣುತ್ತೇವೆ. ಹಾಗಾಗಿಯೇ
ನಮ್ಮ ಜನಪದ ಕವಿಗಳು ಗೀತ ರಚನೆಗೂ ಸೈ, ಸಂಗೀತ ಹಾಡಲು ಸೈ ಎನಿಸಿಕೊಂಡಿದ್ದಾರೆ.
ಸಾಹಿತ್ಯ ಪ್ರಕಾರದ ವಿವಿಧ ಆಯಾಮಗಳಲ್ಲಿ ಜಾನಪದ ಸೊಬಗು ಕಾಣಬಹುದು. ಜಾತಿ, ಧರ್ಮ, ವರ್ಗ, ಲಿಂಗ, ಮತಮೌಢ್ಯ, ಪ್ರೀತಿ, ವಿರಹ, ರಾಜಕೀಯ, ವ್ಯಂಗ್ಯ, ವಿಡಂಬನೆ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಸಾಹಿತ್ಯದ ಮುಖಾಂತರ ಸಮಾಜವನ್ನು ಚಿತ್ರಿಸಿದ್ದಾರೆ.
“ಕಲ್ಯಾಣದಲ್ಲಿ ಬಸವಣ್ಣ ಇರುವಾಗ
ಕಲ್ಲಿಗೆ ಯಾಕೆ ಪೂಜೆ ಮಾಡಲಿ” ಕಲ್ಲು, ಮಣ್ಣು, ಮರ ದೇವರೆಂದು ಪೂಜಿಸುವ ಮತಮೂಢರಿಗೆ ಜನಪದರು ತಮ್ಮದೇ ಶೈಲಿಯಲ್ಲಿ ಚಾಟಿ ಬೀಸುತ್ತಾರೆ. ದೇವರನ್ನು ಪೂಜಿಸುವ ಪುರೋಹಿತಶಾಹಿ ಸಂಸ್ಕ್ರತಿ ದಿಕ್ಕರಿಸಿದ ಬಸವಣ್ಣ ‘ದಯವೇ ಧರ್ಮದ ಮೂಲ’ ಎಂದು ಹೇಳುವ ಮೂಲಕ ಗುಡಿ ಸಂಸ್ಕೃತಿ ತಿರಸ್ಕರಿಸಿ, ಕಾಯಕ ಸಂಸ್ಕೃತಿ ಪುರಸ್ಕರಿಸಿದರು.
12ನೇ ಶತಮಾನದ ಬಸವಾದಿ ಶರಣರ ಆಶಯಗಳು ಜನಪದರಿಗೆ ಅಕ್ಷರಃಶ ಮನದಟ್ಟಾಗಿವೆ. ಶರಣರ ವಚನಗಳು ಜನಪದರಿಗೆ ಮೂಲ ಪ್ರೇರಣೆಯಾಗಿವೆ ಎಂದು ಹೇಳಬಹುದು. ಹಾಗಾಗಿಯೇ ಶರಣರ ನಿಲುವು, ಆಶಯಗಳು ಜನಪದ ಸಾಹಿತ್ಯದಲ್ಲಿ ಕಾಣುತ್ತೇವೆ. ಕಲ್ಲಿಗೆ ಪೂಜಿಸುವ ಸಂಸ್ಕೃತಿ ದಿಕ್ಕರಿಸಿ ವೈಜ್ಞಾನಿಕ ದ್ರಷ್ಟಿಕೋನದಿಂದ ವಿಚಾರಿಸಿರುವುದು ನೋಡುತ್ತೇವೆ. ಮತಮೌಢ್ಯ ತೊರೆದು ‘ದೇಹವೇ ದೇವಾಲಯ’
ಎನ್ನುವ ವೈಚಾರಿಕ, ವೈಜ್ಞಾನಿಕತೆಯ ಬಸವ ಸಿದ್ದಾಂತ ನಮ್ಮ ಕಲ್ಯಾಣ ನಾಡಿನೋಳು ಇರುವಾಗ ಕಲ್ಲಿಗ್ಯಾಕೆ ಪೂಜೆ ಮಾಡಬೇಕು ಎಂದು ಜನಪದರಿಗೆ ಪ್ರಶ್ನಿಸುತ್ತಾರೆ.
“ಎಳ್ಳ ಅಮವಾಸ್ಯೆ ಎಂಬುದು ದೊಡ್ಡ ಹಬ್ಬ
ಇದು ದೊಡ್ಡ ಹಬ್ಬ
ಸುಳ್ಳೆ ಹೋಳಗಿ ಮಾಡಲ್ಯಾಂಗ್
ಬುಟ್ಟಿ ತುಂಬಾಲ್ಯಾಂಗ್
ಮುಂದೆ ನಡೀರಿ ನೀವು ಗಂಡಸುರು
ಹಿಂದೆ ಬರ್ತೇವು ನಾವು ಹೆಂಗಸುರು
ಒಯ್ದು ಇಳಸರೀ ಬುಟ್ಟಿ ನಮ್ಮ ಹೊಲ್ದಾಗ್
ಸಣ್ಣ ಮೊಳಿನಾಗ
ಸೆರ್ಗಾ ಚೆಲ್ಲರೀ ನಮ್ಮ ಹೊಲ್ದಾಗ್
ಪೂಜೆ ಮಾಡ್ರೀ ಪಂಚ್ ಪಾಂಡವರಿಗಿ”
ಹೀಗೆ ನಮ್ಮ ಉತ್ತರ ಕರ್ನಾಟಕ ಭಾಗದ ಕ್ರಷಿಕರು ಆಚರಿಸುವ ‘ಎಳ್ಳ ಅಮವಾಸ್ಯೆ ಹಬ್ಬ‘ ಬಹು ವೈಶಿಷ್ಟ್ಯತೆಯಾಗಿದೆ. ಎಲ್ಲಾ ರೈತರು ಕುಟುಂಬಸಹಿತವಾಗಿ ಹೊಲದಲ್ಲಿಯೇ ಊಟ ಮಾಡುವ ಸಂಪ್ರದಾಯವಿದೆ. ಅಂದು ಹೊಲದಲ್ಲಿ ದೇವರಿಗೆ ಪೂಜಿಸುವ ಸಂದರ್ಭದಲ್ಲಿ ಈ ಮೇಲಿನ ಹಾಡು ಹಾಡುತ್ತಾರೆ.
“ತಾಯಮ್ಮ ನೀ ಇರಬೇಕೇ
ಈ ಜನ್ಮಕ್ಕೆ ಹಡೆದಪ್ಪ ನೀ ಇರಬೇಕು
ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತುಕೊಂಡು
ತಿರುಗುತ್ತ ತಿರುಗುವಳು ತಾಯಮ್ಮ ತಿರುಗುತ ತಿರುಗುವಳು”
ಬದುಕಿನ ಪ್ರತಿಯೊಂದು ಕ್ಷಣಕ್ಕೂ ಹೆತ್ತವರನ್ನು ನೆನೆಯುತ್ತೇವೆ. ಜಗತ್ತಿನಲ್ಲಿ ನಿಸ್ವಾರ್ಥ ಪ್ರೀತಿ, ವಾತ್ಸಲ್ಯ ದೊರೆಯುವುದು ತಾಯಿ ಹ್ರದಯಲ್ಲಿ ಮಾತ್ರ. ನವಮಾಸ ಹೊತ್ತು ಮಗುವಿಗೆ ಜನ್ಮನೀಡಿ ಸಮಾಜದ ಕುರಿತು ಅರಿವು ಮೂಡಿಸಿ ಜ್ಞಾನದ ಚೈತನ್ಯ ತುಂಬುವ ತಾಯಿ ಪ್ರೀತಿ ನಿಷ್ಕಲ್ಮಶ ಅಷ್ಟೇ ಅನನ್ಯ ಕೂಡ ಹೌದು. ತಾಯಿಯ ನೋವು- ನಲಿವು , ತಂದೆಯ ಪ್ರೀತಿ – ವಾತ್ಸಲ್ಯ ಬದುಕಿಗೆ ಆಧಾರ ಎಂಬುದು ಜನಪದರು ಸೂಕ್ಷ್ಮವಾಗಿ ಗ್ರಹಿಸಿದ್ದಾರೆ.
“ಅತ್ತಿಮಾವ ಹೊಲವ ಕೊಟ್ಟಾರ
ಮಾಡಿ ಉಳ್ಳಾಕೆ
ಎರಡು ಎತ್ತುಗೊಳು ಖಳವಿ
ಕೊಟ್ಟಾರ್ ಮಾಡಿ ಉಳ್ಳಾಕೆ
ಓಂಕಾರದ ಬೀಜ ಕೊಟ್ಟಾರ್
ಹೊಲವ ಬಿತ್ತೊದಕೆ
ಓಂ – ಶ್ಯಾಮಾ ಕೂರ್ಗಿ ಖಳವ್ಯಾರ್
ಹೊಲವ ಬಿತ್ತೊದಕೆ
ನಾಲ್ಕು ಕಾಲಿನ ಮಂಚ ಕಳಶ್ಯಾರ ಹೊಲವ ಕಾಯುವುದಕೆ
ಆರು ಛಿಡಿಯಾ ಬಿಗಿದು ಕಟ್ಯಾರ್
ಮೇಲೆ ಹತ್ತುವುದಕೆ
ಬಾರಾ ಮಣದ ಕವಣಿ ಖಳವ್ಯಾರ್
ಹಕ್ಕಿ ಹೊಡೆಯುವುದಕೆ
ಅಂಕಿ ಮಾಡಿ ಗುನಿಯ ಉಳಿಸಿ
ಗೂಡು ಮುರಿಯೋಕೆ
ಹಿಂದಾ ಖೊಲ್ಲಿ ಮುಂದಾ ಪಡಸಾಲೆ
ಮಾಲು ತುಂಬೋಕೆ
ಸೋಳಾ ಎತ್ತುಗೊಳು ಖಳ್ಸಿ ಕೊಟ್ಟಾರ್
ಮಾಲು ಎಳೆಯುದಕೆ”
ಗ್ರಾಮೀಣ ಪ್ರದೇಶದ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆ ತಿನ್ನಲು ಬರುವ ಹಕ್ಕಿ – ಪಿಕ್ಕಿಗಳನ್ನು ಹೊಡೆಯುವಾಗ ಈ ಹಾಡು ಹೇಳುತ್ತಾರೆ.
ವ್ಯವಸಾಯ ಮಾಡುವ ಬಹುತೇಕ ರೈತರು ಹೊಲದಲ್ಲಿಯೇ ಮಲಗುತ್ತಾರೆ. ಹೊಲದಲ್ಲಿ ಬೆಳೆದು ಕೈಗೆ ಬಂದ ಬೆಳೆಯನ್ನು ಪ್ರಾಣಿ, ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ಹಗಲು ರಾತ್ರಿ ಎನ್ನದೇ ಹೊಲದಲ್ಲಿ ಠಿಕಾಣಿ ಹೂಡುತ್ತಾರೆ. ಈ ಹಾಡಿನಲ್ಲಿ ವ್ಯವಸಾಯ ರೂಪಕವಾಗಿ ಕಂಡರೂ ಇದು ಮಾನವನ ದೇಹಕ್ಕೆ ಅನುಕರಣೆ ಮಾಡಿ ರಚಿತವಾಗಿರುವ ಕಾವ್ಯ ಎಂದು ಗುರುತಿಸಬಹುದು.
ಅತ್ತೆ ಮಾವ ಅಂದ್ರೇ ದೇವರು, ಎರಡು ಎತ್ತು ಅಂದ್ರೇ ನಮ್ಮೆರಡು ಕಾಲು, ಓಂಕಾರ ಬೀಜ ಎಂದರೆ ಸತ್ಯಾಂಶ, ಸೋಳಾ ಎತ್ತು ಅಂದ್ರೋ ೧೬ ಹಲ್ಲು ..ಹೀಗೆ ತುಂಬಾ ವಿಭಿನ್ನವಾಗಿ ಯೋಚಿಸುವ ಜನಪದರು ಬಹುಮುಖಿ ಸಾಹಿತ್ಯ ಪ್ರೀಯರು ಎಂದು ಕರೆಯಬಹುದು.
“ಊರಾ ಮುಂದಿನ್ ಹೊಲಾ ಮಾಡೋ ನನ್ನ ಗೆಳೆಯ
ಹೊಯ್ತಾ ಬರ್ತಾ ನೋಡತ್ತಿದ್ದನೋ ನನ್ನ ಗೆಳೆಯ”
“ಊರಾ ಮುಂದಿನಾ ಬಾವಿ ಯಾರಾ ತೋಡಿದರೇನು
ಕಾಲುಜಾರಿದರೇ ಕೈಲಾಸ”
ಇಂತಹ ಜಾನಪದ ಸಂಸ್ಕ್ರತಿ ಬಿಂಬಿಸುವ ಕಾವ್ಯ ಜನಪದ ಕವಿಗಳು ಅದ್ಭುತವಾಗಿ ಕಟ್ಟಿದ್ದಾರೆ . ಜಾನಪದರ ಸಾಹಿತ್ಯಕ್ಕೆ ಮನಸೋತವರೇ ಇಲ್ಲ . ಕೇವಲ ಸಾಹಿತ್ಯ ಅಷ್ಟೇ ರಚಿಸದೇ ಹಾಡಿನ ಮೂಲಕ ಸಭಿಕರಿಗೆ ರಂಜಿಸುವ ಕಾರ್ಯ ಜನಪದರು ಮಾಡಿದ್ದಾರೆ .
ಕನ್ನಡ ನಾಡಿನ ಗ್ರಾಮೀಣ ಭಾಗದಲ್ಲಿ ವಾಸಿಸುವ ಅಸಂಖ್ಯೆ ಜಾನಪದ ಕವಿಗಳ ವಿಶಿಷ್ಟ ಸಾಹಿತ್ಯ ಸಂಗ್ರಹಣೆ ಮಾಡುವ ಕಾರ್ಯ ಇನ್ನೂ ನಡೆಯಬೇಕಿದೆ . ತಮ್ಮ ಪ್ರಾದೇಶಿಕ ಸೊಗಡು ಬಿಂಬಿಸುವ ವಿವಿಧ ಪ್ರದೇಶಗಳ ಭಾಷಾಶೈಲಿ ಅಗಾಧವಾದದ್ದು. ಜನಪದರ ಅಪ್ರಕಟಿತ ಸಾಹಿತ್ಯ ಸಂಪತ್ತು ಕುರಿತು ಹೆಚ್ಚಿನ ಸಂಶೋಧನೆ ನಡೆಸಿ ಪ್ರಕಟಿಸುವ ಅನಿವಾರ್ಯತೆ ಇದೆ.
ಇಂದಿನ ಹೊಸ ತಲೆಮಾರಿನ ಯುವ ಸಾಹಿತಿಗಳು ಸಂಶೋಧಕರ ಮಾರ್ಗದರ್ಶನದೊಂದಿಗೆ ಜಾನಪದ ಸಾಹಿತ್ಯ ಪರಂಪರೆ ಕುರಿತು ಅಧ್ಯಯನ, ಸಂಶೋಧನೆ, ಸಂಗ್ರಹಣೆ ಮಾಡಲು ಮುಂದಾಗಬೇಕು.
ಅಪಾರ ಜ್ಞಾನವಿದ್ದರೂ ಮನ್ನಣೆ ಸಿಗದ ಕಾರಣ ನಶಿಸುತ್ತಿರುವ ಜನಪದತೆ ಹಾಗೂ ಬೆಳಕಿಗೆ ಬಾರದೆ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುವ ಜಾನಪದರಿಗೆ ಪ್ರೋತ್ಸಾಹಿಸಲು ಸರ್ಕಾರ, ಸಂಘ, ಸಂಸ್ಥೆಗಳು ಕೈಜೋಡಿಸಬೇಕು. ಜಾನಪದ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಗ್ರಾಮೀಣ ಪ್ರದೇಶದ ಜಾನಪದ ಕವಿ,ಸಾಹಿತಿಗಳ ಸಂದರ್ಶಿಸಿ ಸಾಹಿತ್ಯ ಮುನ್ನೆಲೆಗೆ ತರಲು ಪ್ರಯತ್ನಿಸಬೇಕು.
ಜಾನಪದ ವಿಶ್ವವಿದ್ಯಾಲಯ, ಜಾನಪದ ಪರಿಷತ್ತು ಸೇರಿದಂತೆ ಇನ್ನಿತ್ತರೆ ಸಂಸ್ಥೆಗಳು ಜಾನಪದ ಸಾಹಿತ್ಯ ಉಳಿವಿಗಾಗಿ ಮುಂದಾಗಬೇಕು. ಕನ್ನಡ ನಾಡಿನ ಶ್ರೀಮಂತಿಕೆಯ ಸಾಹಿತ್ಯ ಸಂಪತ್ತು ನಮ್ಮ ಜಾನಪದ ಕ್ಷೇತ್ರಕ್ಕೆ ಇದೆ.
ಇಂತಹ ಅನನ್ಯ ಸಾಹಿತ್ಯ ಮರೆಯಾಗದಂತೆ ಸಂಗ್ರಹಿಸುವ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕಿದೆ. ಸರ್ಕಾರವು ಜಾನಪದ ಸಾಹಿತ್ಯ ಪರಂಪರೆಯ ರಕ್ಷಣೆಗಾಗಿ ಹೆಚ್ಚಿನ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243