ನೆಲದನಿ

ನೆಲದನಿ : ಜಾನಪದ ಹಾಡುಗಾರ್ತಿ ವಡ್ಡಗೆರೆ ಕದರಮ್ಮ

Published

on

ನಾಡೋಜ ಎಚ್.ಎಲ್.ನಾಗೇಗೌಡ ಜನ್ಮ ಶತಮಾನೋತ್ಸವದ ಪ್ರಯುಕ್ತ ರಾಮನಗರದ ಜಾನಪದ ಲೋಕವು, 2015ನೆ ಸಾಲಿನ ಜಾನಪದಲೋಕ ಪ್ರಶಸ್ತಿಗೆ ತುಮಕೂರು ಜಿಲ್ಲೆ ವಡ್ಡಗೆರೆ ಗ್ರಾಮದ ಜಾನಪದ ಹಾಡುಗಾರ್ತಿ ವಡ್ಡಗೆರೆ ಕದರಮ್ಮ ಅವರನ್ನು ಆಯ್ಕೆ ಮಾಡಿದೆ. ದಿನಾಂಕ 08.02.2015ರ ರವಿವಾರ ರಾಮನಗರ ಪಟ್ಟಣದ ಜಾನಪದಲೋಕದಲ್ಲಿ ನಡೆದ ಲೋಕೋತ್ಸವ-2015 ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಜಾನಪದ ಪರಂಪರೆಯಲ್ಲಿಯೇ ಕಿರೀಟ ಪ್ರಾಯವೆನ್ನಿಸಿದ ಬಂಡುಕೋರ ಆಸಾದಿ ಕಾವ್ಯವನ್ನು ಮತ್ತು ತತ್ವಪದಗಳನ್ನು ಹಾಡುತ್ತಿದ್ದ ಜಾನಪದ ಕವಿ-ಗಾಯಕರ (ತಿಮ್ಮಯ್ಯ-ಚಿಕ್ಕಮ್ಮ) ಕುಟುಂಬದಲ್ಲಿ ಹುಟ್ಟಿದ ವಡ್ಡಗೆರೆ ಕದರಮ್ಮ ಮೂಲತಃ ತುಮಕೂರು ಜಿಲ್ಲೆಯವರು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು, ಹೊಳವನಹಳ್ಳಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ಬಡ ದಲಿತ ಕುಟುಂಬದಲ್ಲಿ ಜಾನಪದ ಕವಿ-ಗಾಯಕರ ಮಗಳಾಗಿ ಹುಟ್ಟಿದ ಕದರಮ್ಮ ಹತ್ತು ವರ್ಷದ ಹುಡುಗಿಯಾಗಿರುವಾಗಲೇ, ಮೈನೆರೆಯುವ ಮುಂಚೆಯೇ ಬಾಲ್ಯವಿವಾಹವಾಗಿ, ಇದೇ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಮೇಲ್ಜಾತಿ ಭೂಮಾಲಕರ ಮನೆಯಲ್ಲಿಜೀತಗಾರನಾಗಿದ್ದ ಹನುಮಂತಯ್ಯ ಎಂಬ ಯುವಕನ ಕೈಹಿಡಿದು ವಡ್ಡಗೆರೆ ಗ್ರಾಮಕ್ಕೆ ಬಂದಾಗ ಕದರಮ್ಮನಲ್ಲಿದ್ದ ಜಾನಪದ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ್ದು ಆಕೆಯ ಅತ್ತೆ ಸಣ್ಣಹನುಮಕ್ಕಜ್ಜಿ. ಸ್ವತಃ ಜಾನಪದ ಕವಯಿತ್ರಿ-ಗಾಯಕಿ-ಕಲಾವಿದೆಯಾಗಿದ್ದ ಸಣ್ಣಹನುಮಕಜ್ಜ್ಕಿ, ಕದರಮ್ಮನಿಗೆ ವ್ಯವಸಾಯದ ಕೆಲಸಗಳೊಂದಿಗೆ ನೂರಾರು ಜಾನಪದ ಹಾಡು, ಕಥೆ, ಪುರಾಣ, ಒಗಟು, ಲಾವಣಿ, ಸಾಂಪ್ರದಾಯಿಕ ಆಚರಣೆಗಳು ಮುಂತಾದವುಗಳನ್ನು ಕಲಿಸಿಕೊಟ್ಟರು. ಸಣ್ಣಹನುಮಕ್ಕಜ್ಜಿಯ ವಾರಿಗೆಯ ದಲಿತ ಜಾನಪದ ಗಾಯಕಿಯರಾಗಿದ್ದ ದಿ.ನರಸಕ್ಕಜ್ಜಿ, ದಿ.ಬುಡ್ಡಗದರಮ್ಮಜ್ಜಿ, ದಿ.ನಾಗಮ್ಮಜ್ಜಿ, ದಿ.ಕೆಂಪನಾಗಮ್ಮಜ್ಜಿ ಮುಂತಾದವರು ವಡ್ಡಗೆರೆ ನಾಗಮ್ಮನ ಕಾವ್ಯವನ್ನು ಹಾಡುವುದರಲ್ಲಿ ತುಂಬಾ ಹೆಸರುವಾಸಿಯಾಗಿದ್ದರು. ಅವರೆಲ್ಲರ ನೆರವಿನಿಂದ ವಡ್ಡಗೆರೆ ಕದರಮ್ಮ, ವಡ್ಡಗೆರೆ ನಾಗಮ್ಮನ ಕಾವ್ಯವನ್ನು ಸಲಿಲವಾಗಿ ಹಾಡುವುದನ್ನು ರೂಢಿಸಿಕೊಂಡರು. ವಡ್ಡಗೆರೆಯ ಗ್ರಾಮದೇವತೆ ವಡ್ಡಗೆರೆ ನಾಗಮ್ಮ.

ವಚನಕಾರ ಬಸವಣ್ಣನನ್ನು ಕುರಿತು ಅಮ್ಮ ವಡ್ಡಗೆರೆ ಕದರಮ್ಮ ಮತ್ತು ಅಕ್ಕನಾದ ವಡ್ಡಗೆರೆ ಮುದ್ದುನಾಗಮ್ಮ ಹಾಡಿರುವ ಜಾನಪದ ಗೀತೆ

ನಾಗಮ್ಮನ ಜೀವನದ ವೃತ್ತಾಂತವನ್ನು ಸಾರುವ ಈ ಕಾವ್ಯವು ಸುಮಾರು ಒಂಭೈನೂರು ವರ್ಷಗಳ ಪುರಾತನ ಚರಿತ್ರೆಯನ್ನು ಗರ್ಭೀಕರಿಸಿಕೊಂಡಿದೆ.ನಾಗಮ್ಮ ಎಂಬ ಏಳು ವರ್ಷದ ಎಳೆಪ್ರಾಯದ ಹೆಣ್ಣುಮಗಳೊಬ್ಬಳು ಮೈನೆರೆಯುವ ಮೊದಲೇ ವಡ್ಡಗೆರೆಯ ಸಿರಿವಂತರ ಮಗ ನಾಗಣ್ಣನನ್ನುಬಾಲ್ಯವಿವಾಹ ಮಾಡಿಕೊಂಡು ವಡ್ಡಗೆರೆಗೆ ಬಂದ. ಕೆಲ ದಿನಗಳಲ್ಲಿಯೇ ನಾಗಣ್ಣ ಯುದ್ಧಕ್ಕೆ ಹೋಗಿ ರಣರಂಗದಲ್ಲಿ ವೀರಮರಣವನ್ನಪ್ಪುತ್ತಾನೆ. ಬಾಲ ವಿಧವೆಯಾದ ನಾಗಮ್ಮ ತನ್ನ ಸತ್ತ ಗಂಡನೊಂದಿಗೆ ಚಿತೆಯೇರಿ ಪ್ರಾಣಾರ್ಪಣೆ ಮಾಡಿಕೊಂಡು ಮಹಾಸತಿ ವೀರನಾಗಮ್ಮ ಎಂದು ಕರೆಸಿಕೊಳ್ಳುತ್ತಾಳೆ. ಮಹಾಸತಿ ನಾಗಮ್ಮನ ಬದುಕಿನ ದುರಂತಮಯ ಮತ್ತು ಕರುಣಾಜನಕ ಕಥಾನಕವು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಜನಪದ ದಲಿತ ಕವಯಿತ್ರಿಯರ ನಾಲಗೆ ಮೇಲೆ ಜಾನಪದ ಕಾವ್ಯವಾಗಿ ಓನಾಮ ಮಂತ್ರದಂತೆ ನೆಲೆಸುತ್ತದೆ. ಮಹಾಸತಿ ವೀರನಾಗಮ್ಮ ವಡ್ಡಗೆರೆಯ ಗ್ರಾಮದೇವತೆಯಾಗಿ ನೆಲೆಸುವ ಮೂಲಕ ಅನೇಕ ಪವಾಡಗಳನ್ನು ಮೆರೆಯುತ್ತಾಳೆ. ಸುಮಾರು ಒಂದು ಸಾವಿರ ವರ್ಷಗಳಷ್ಟು ಪುರಾತನವಾಗಿರುವ ವಡ್ಡಗೆರೆ ನಾಗಮ್ಮನ ಕಾವ್ಯವು ಆದಿಮ ಅಚ್ಚಗನ್ನಡ ಭಾಷಾಸೌಷ್ಠವತೆಯಲ್ಲಿ ಕರ್ನಾಟಕದ ತುಮಕೂರು ಜಿಲ್ಲೆ, ಚಿತ್ರದುರ್ಗ ಜಿಲ್ಲೆ, ನೆಲಮಂಗಲ ಸೀಮೆ, ದೊಡ್ಡಬಳ್ಳಾಪುರ ಸೀಮೆ, ಆಂದ್ರಪ್ರದೇಶದ ಅನಂತಪುರ ಜಿಲ್ಲೆ, ತಮಿಳುನಾಡಿನ ಕೊಯಮತ್ತೂರು ಸೀಮೆ ಮುಂತಾದ ಪ್ರದೇಶಗಳಲ್ಲಿ ಇಂದಿಗೂ ನರದ ರಕ್ತದಂತೆ ಜನಪದ ಕವಿಗಳ ನಾಲಗೆ ಮೇಲೆ ಹರಿದಾಡುತ್ತಿದೆ. ಕುಂಚಿಟಿಗ ಜನಾಂಗದ ಕುಲಚರಿತ್ರೆಯನ್ನು ಸಾರುವ ವಡ್ಡಗೆರೆ ನಾಗಮ್ಮನ ಕಾವ್ಯವನ್ನು ವಡ್ಡಗೆರೆಯ ಜನಪದ ದಲಿತ ಕವಯಿತ್ರಿಯರು ಹರಕೆ ಹೊತ್ತ ಭಕ್ತರ ಮನೆಗಳಿಗೆ ಹೋಗಿ ಹಾಡಿಬರುವ ಕಾಯಕವನ್ನು ನೂರಾರು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ.

ಈ ಕವಿ-ಗಾಯಕರ ಪೈಕಿ ವಡ್ಡಗೆರೆ ಕದರಮ್ಮನವರಿಗೆ ಪ್ರಧಾನ ಸ್ಥಾನವಿದೆ.ಜಾನಪದ ಕುರಿತ ಇವರ ಅರಿವು ಮತ್ತು ಅಮೂಲ್ಯ ಮಾಹಿತಿಗಳನ್ನು ನಾಡಿನ ಅನೇಕ ಸಂಶೋಧಕರು ತಮ್ಮ ಗ್ರಂಥಗಳಲ್ಲಿ ಬಳಸಿಕೊಂಡಿದ್ದಾರೆ. ಅನೇಕ ಸಂಶೋಧಕರು ಪಿಎಚ್ಡಿ ಪದವಿಗಳನ್ನೂ ಪಡೆದುಕೊಂಡಿದ್ದಾರೆ. ಅಂತಹ ಕೆಲವು ಗ್ರಂಥಗಳಲ್ಲಿ ವಡ್ಡಗೆರೆ ಗ್ರಾಮದ ನಿವೃತ್ತ ಐ.ಎ.ಎಸ್. ಅಧಿಕಾರಿ ವಿ.ಡಿ.ವೀರಕ್ಯಾತಯ್ಯ ಬರೆದಿರುವ ಕುಂಚಿಟಿಗರ ಜನಾಂಗ, ಇತಿಹಾಸ ಹಾಗೂ ಸಂಪ್ರದಾಯಗಳು(1994), ಎಂ.ವೀರಕ್ಯಾತಯ್ಯ ಬರೆದಿರುವ ವಿಜಯೀ ವೀರಕೇತುರಾಯ (ನಾಟಕ 1999), ಎಂ.ಹೆಚ್. ನಾಗರಾಜು ಅವರ ಸಂಶೋಧನಾ ಕೃತಿ ಕುಂಚಿಟಿಗರ ಸಾಂಸ್ಕೃತಿಕ ಇತಿಹಾಸ(2003), ಡಾ.ರಾಜಣ್ಣ ಹುಣಿಸೇಪಾಳ್ಯ ಅವರಮಹಾಸತಿ ಶಿವಶರಣೆ ವೀರನಾಗಮ್ಮದೇವಿ(1996), ಡಾ.ಓ.ನಾಗರಾಜು ಅವರ ಪಿಎಚ್.ಡಿ ಸಂಶೋಧನಾ ಪ್ರಬಂಧ ತುಮಕೂರು ಜಿಲ್ಲೆಯ ಗ್ರಾಮದೇವತೆಗಳು: ಒಂದು ಅಧ್ಯಯನ(2007) ಹಾಗೂ ವಡ್ಡಗೆರೆ ನಾಗರಾಜಯ್ಯ ಸಂಪಾದಿಸಿರುವ ವಡ್ಡಗೆರೆ ನಾಗಮ್ಮ: ಮಹಾಸತಿ ಕಾವ್ಯ(2010) ಮುಂತಾದ ಕೃತಿಗಳು ಪ್ರಮುಖವಾಗಿವೆ. ವಡ್ಡಗೆರೆನಾಗಮ್ಮ: ಮಹಾಸತಿ ಕಾವ್ಯವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು 2015-16ನೆ ಇಸವಿಯಿಂದ ಜಾರಿಗೆ ಬರುವಂತೆ ಅಂತಿಮ ವರ್ಷದಲ್ಲಿ ಎಂ.ಎ ಪದವಿ ವ್ಯಾಸಂಗಮಾಡುತ್ತಿರುವ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನಾಗಿ ಅಂಗೀಕರಿಸಿದೆ. ಇದರ ಜೊತೆಗೆ ವಡ್ಡಗೆರೆ ಕದರಮ್ಮ ಅವರು ರಿಯಲ್ ಚಾಲೆಂಜರ್ಸ್ ಟೀಮ್ಗಾಗಿ ಈಶ್ವರ್ ಗುಬ್ಬಿ ನಿರ್ದೇಶಿಸಿ, ಶ್ರೀ ರಾಘವ್ ನಿರ್ಮಿಸಿರುವ ‘‘ಮುಗ್ಧ’’ ಸಾಕ್ಷಚಿತ್ರದಲ್ಲಿ ಮುಗ್ದ ಯುವಕನೊಬ್ಬನ ತಾಯಿಯ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ. ತುಮಕೂರು ಜಿಲ್ಲೆಯ ದಲಿತ ಕವಿ-ಚಿಂತಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿರುವ ವಡ್ಡಗೆರೆ ನಾಗರಾಜಯ್ಯ ಇದೇ ಕದರಮ್ಮನವರ ಮಗನಾಗಿ ನಾಡಿನಲ್ಲಿ ಹೆಸರಾಗಿದ್ದಾರೆ. ಪ್ರಸ್ತುತ ಜಾನಪದ ಗಾಯಕಿಯರಾದ ವಡ್ಡಗೆರೆ ಕದರಮ್ಮ(75) ಹಾಗೂ ವಡ್ಡಗೆರೆ ಮುದ್ದನಾಗಮ್ಮ(72) ಈ ಕಥಾಕಾವ್ಯವನ್ನು ಮೂಲಧಾಟಿಯಲ್ಲಿ ನಿರೂಪಿಸುವ ಅಸಲಿ ಕವಯಿತ್ರಿ-ಕಲಾವಿದರಾಗಿದ್ದಾರೆ. ವಡ್ಡಗೆರೆ ನಾಗಮ್ಮನ ಪದಗಳು, ಗಂಗೆ-ಗೌರಿ ಕಾವ್ಯ, ಬಿಲ್ಲಾಳರಾಯ-ಗೊಲ್ಲಾಳರಾಯನ ಪದ, ಬೆಟ್ಟದಮದ್ದೆಮ್ಮನ ಪದ, ಗುಣಸಾಗರಿ ಕಾವ್ಯ, ಕರಿಭಂಟನ ಪದ, ತತ್ವಪದ, ಆಂಜನೇಯನ ಪದ, ಚಂದ್ರಮನ ಪದ, ಜಾಂಬವರ ಪದ, ಮಾರಮ್ಮನ ಪದ, ಕರಿಯಮ್ಮನ ಪದ, ಆದಿಜಾಂಬವ ಪುರಾಣ, ಹೊಸಗೆ ಪದ, ಮದುವೆ-ಸೋಬಾನೆ ಪದಗಳು, ಹಸೆ ಪದಗಳು, ಸುಗ್ಗಿ ಪದಗಳು, ಲಾಲಿ ಹಾಡುಗಳು, ಗಂಗಭಾರತ ಕಾವ್ಯ ಮುಂತಾದ ಅನೇಕ ಜಾನಪದ ಹಾಡುಗಬ್ಬಗಳನ್ನು ಹಾಡುವಲ್ಲಿ ಸುತ್ತಮುತ್ತಲ ಊರುಗಳಲ್ಲಿ ಹೆಸರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಕೆಂಪನಾಗಮ್ಮಜ್ಜಿ ಎಂಬ ಮುಖ್ಯ ಕಲಾವಿದೆಯು ನಿಧನರಾದ ಬಳಿಕ, ವಡ್ಡಗೆರೆ ಕದರಮ್ಮನವರು ಮುಮ್ಮೇಳದ ಮುಖ್ಯ ಕವಯಿತ್ರಿ-ಹಾಡುಗಾರ್ತಿಯಾಗಿ ತನ್ನ ತಂಡವನ್ನು ಮುನ್ನಡೆಸುವುದರೊಂದಿಗೆ ಹೊಸ ತಲೆಮಾರಿನವರಿಗೆ ಜಾನಪದ ಹಾಡುಗಳನ್ನು ಕಲಿಸಿಕೊಡುತ್ತಿದ್ದಾರೆ. ಪ್ರಸ್ತುತ ವಡ್ಡಗೆರೆ ಗ್ರಾಮದಲ್ಲಿ ಜಾನಪದ ಕವಯಿತ್ರಿ-ಗಾಯಕಿಯರಾದ ವಡ್ಡಗೆರೆ ಕದರಮ್ಮ, ವಡ್ಡಗೆರೆ ಮುದ್ದನಾಗಮ್ಮ, ಲಕ್ಷ್ಮಮ್ಮ ಮತ್ತು ಸಂಜೀವಮ್ಮ ಇವರು ಜಾನಪದ ವಕ್ತಾರರಾಗಿ ವಡ್ಡಗೆರೆ ಗ್ರಾಮ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಜಾನಪದ ಹಾಡುಗಳನ್ನು ಹಾಡುತ್ತಾ ಮೂಲ ಜಾನಪದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ವಡ್ಡಗೆರೆ ಕದರಮ್ಮನವರ ನೇತೃತ್ವದಲ್ಲಿ ಈ ಕಲಾವಿದರು ತುಮಕೂರು ನಗರದ ಸರಸ್ವತಿಪುರಂನಲ್ಲಿ ದಿನಾಂಕ 30.11.2014ರಂದು, ರಂಗರಂಗ ಕಲಾಕೇಂದ್ರದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಹಾಡಿರಿ ರಾಗಗಳ…. ಎಂಬ ವಿಶಿಷ್ಟ ಜಾನಪದ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ದಿನಾಂಕ 05.01.2015ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶಿರಾ ತಾಲೂಕು ಗಡಿನಾಡ ಸಂಪರ್ಕಾಧ್ಯಯನ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಗ್ರಾಮ ಸಂಸ್ಕೃತಿ ಉತ್ಸವ ಸುಗ್ಗಿ-ಹುಗ್ಗಿ ಉತ್ಸವದಲ್ಲಿ ಜಾನಪದ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದಿನಾಂಕ: 08-02-2015 ರಂದು ನಾಡಿನಲ್ಲಿಯೇ ಪ್ರಖ್ಯಾತವಾಗಿರುವ ಜಾನಪದ ಲೋಕದಲ್ಲಿ ನಡೆಯುತ್ತಿರುವ ‘ಜಾನಪದ ಲೋಕೋತ್ಸವ’ದಲ್ಲಿ ಮಹಾಸತಿ ವಡ್ಡಗೆರೆ ನಾಗಮ್ಮನ ಕಾವ್ಯದ ಆಯ್ದ ಭಾಗವನ್ನು ಮಂಡಿಸಿದರು.

 

-ಲೇಖಕರು : ಡಾ. ಬಗ್ಗನಡು ನಾಗಭೂಷಣ

Trending

Exit mobile version