ದಿನದ ಸುದ್ದಿ
ನನಸಾಗುವುದೇ ಬಾಪೂಜಿ ಕಂಡ ಗ್ರಾಮೀಣಾಭಿವೃದ್ಧಿಯ ಕನಸು..?
- ಕುಮಾರಸ್ವಾಮಿ.ವಿ.ಕೆ
ಭಾರತ ಹಳ್ಳಿಗಳಿಂದ ಕೂಡಿದ ದೇಶ. ಹಳ್ಳಿಗಳು ನಮ್ಮ ದೇಶದ ಹೃದಯವಿದ್ದಂತೆ. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಸುಮಾರು 70% ಮಂದಿ ಇಂದು ಗ್ರಾಮೀಣ ಭಾಗಗಳಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಹಳ್ಳಿ ಮಂದಿಯ ಸಂಸ್ಕøತಿ, ಆಚಾರ – ವಿಚಾರಗಳು ವಿಶಿಷ್ಟ, ಆಹಾರ, ವಿಹಾರ, ಉಡುಗೆ-ತಿಡುಗೆ ಹೀಗೆ ಎಲ್ಲವೂ ವಿಭಿನ್ನ. ಪ್ರಸ್ತುತ ಜಗತ್ತನ್ನ ಮೊದಲುಗೊಂಡು ನಮ್ಮ ಹಿಂದೂಸ್ಥಾನವನ್ನೂ ಕಿತ್ತು ತಿನ್ನುತ್ತಿರುವ ವಿಷಕ್ರಿಮಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಇಂದು ನಿಜಕ್ಕೂ ಹಳ್ಳಿಗರ ಸಂಘಟನಾತ್ಮಕ ವರ್ತನೆ ಶ್ಲಾಘನೀಯ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಇಂದು ಅತೀ ಹೆಚ್ಚು ಇಕ್ಕಟ್ಟಿಗೆ ಸಿಲುಕುತ್ತಿರುವುದು ನಗರ ವಾಸಿಗಳೇ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂಬಂಧವಾಗಿ ನಗರ ವಾಸಿಗಳಲ್ಲಿಲ್ಲದ ಬುದ್ಧಿಮತ್ತೆ, ಪ್ರಜ್ಞೆ, ಕಾಲಕ್ಕೆ ತಕ್ಕಂತ ಜ್ಞಾನ ನಮ್ಮ ಹಳ್ಳಿಗರಲ್ಲಿದ್ದು, ಇದು ನಿಜಕ್ಕೂ ಮೆಚ್ಚುವಂತದ್ದು. ಒಂದೆಡೆ ಕೊರೋನಾಕ್ಕಿಂತ ಕೆಲವು ವಿದ್ಯಾವಂತ ಮೂರ್ಖರೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದರೆ, ಮತ್ತೊಂದೆಡೆ ನಮ್ಮ ಹಳ್ಳಿಗರು ನಿರುಮ್ಮಳವಾಗಿ ಮತ್ತು ಯಶಸ್ವಿಯಾಗಿ ಜೀವನದ ರಥ ಎಳೆಯುತ್ತಿದ್ದಾರೆ.
ಜೊತೆ ಜೊತೆಗೇ ಇಡೀ ದೇಶವನ್ನೇ ಪೋಷಿಸಲು ಸಜ್ಜಾಗುತ್ತಿದ್ದಾರೆ. ಇಂದು ಇತರ ಅಗತ್ಯಗಳಿಗಿಂತ ಹೆಚ್ಚಾಗಿ ಜೀವ ಉಳಿಸಿಕೊಳ್ಳಲು ಅಗತ್ಯವಾದ ಮೂರು ಹೊತ್ತಿನ ಊಟ ನಮ್ಮೆಲ್ಲರಿಗೂ ಸಮರ್ಪಕವಾಗಿ ಸಿಗುತ್ತಿದೆಯೆಂದರೆ ಅದಕ್ಕೆ ಕಾರಣಕರ್ತರಾದ ನಮ್ಮೆಲ್ಲರ ಅನ್ನದಾತನನ್ನು ಮರೆಯುವಂತಿಲ್ಲ.
ಹೆಚ್ಚುತ್ತಿದೆ ಗ್ರಾಮೀಣ ವಲಸೆ
ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಾಗುತ್ತಿದ್ದ ಬಹುತೇಕ ನಗರ ವಾಸಿಗಳ ಇಂದಿನ ಆದ್ಯತೆ ಪ್ರಾಣ ಭಿಕ್ಷೆಯಷ್ಟೇ ಆಗಿದೆ. ಲೋಕದ ಅರಿವೇ ಇಲ್ಲದಂತೆ ಸ್ವಾರ್ಥಕ್ಕಾಗಿಯೇ ಬದುಕುತ್ತಿದ್ದ ಗರಿಷ್ಠ ಮಂದಿ ಇಂದು ಕಂಗಾಲಾಗಿ ಹೋಗಿ, ಪ್ರಾಣ ಉಳಿಸಿಕೊಳ್ಳಲು ಹಳ್ಳಿಗಳತ್ತ ಮುಖ ಮಾಡಿದ್ದಾರೆ.
ಸಾಫ್ಟ್‍ವೇರ್, ಹಾರ್ಡ್‍ವೇರ್‍ಗಳ ಜಂಜಾಟಗಳ ನಡುವೆ ಬೀಗುತ್ತಿದ್ದ ಮಂದಿ ಇಂದು ರೂರಲ್ ವೇರ್ ಆಗಿ ಬದಲಾಗುತ್ತಿದ್ದಾರೆ. ಕಂಪ್ಯೂಟರ್, ಲ್ಯಾಪ್‍ಟಾಪ್, ಟ್ಯಾಬ್‍ಗಳ ಮೇಲೆ ಬೆರಳಾಡಿಸುತ್ತಿದ್ದವರೆಲ್ಲಾ ಈಗ ಗುದ್ದಲಿ, ಹಾರೆ, ಬಾಂಡಲಿಗಳನ್ನು ಹಿಡಯುವ ಕಾಲ ಬಂದಿದೆ.
ನಾವೆಷ್ಟೇ ಮುಂದುವರಿದರೂ ಅನ್ನವನ್ನು ಕಂಪ್ಯೂಟರ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ತಿನ್ನಲು ಸಾಧ್ಯವಿಲ್ಲವೆಂಬ ಕಟುಸತ್ಯದ ಅರಿವಿನ ದರ್ಶನ ಇಂದು ಆಗುತ್ತಿದೆ. ಆದರೆ ಇವರಲ್ಲಿನ ಸಕಾರಾತ್ಮಕ ಬದಲಾವಣೆ ಹೀಗೆಯೇ ಇದ್ದರೆ ಒಳಿತು, ಇಲ್ಲದಿದ್ದರೆ ಹಳ್ಳಿ-ದಿಲ್ಲಿಯ ವ್ಯತ್ಯಾಸವಿಲ್ಲದೆ ಎಲ್ಲವನ್ನೂ ಅತಂತ್ರ ಮಾಡಿಯಾರು ಎಂಬ ಅನುಮಾನ ನಮ್ಮನ್ನು ಕಾಡಲು ಶುರುವಿಟ್ಟಿಕೊಳ್ಳುತ್ತದೆ.
ಕ್ಷೀಣಿಸುತ್ತಿದೆ ತಾತ್ಸಾರ ಮನೋಭಾವ
ಒಂದೆಡೆ ಬೆಳ್ಳಂಬೆಳಗ್ಗೆಯೇ ಎಲ್ಲೆಂದರಲ್ಲಿ ಗೋಬಿ ಮಂಚೂರಿ, ಪಾನಿಪೂರಿ ತಿನ್ನುವ ಮಂದಿ, ಮಾಲ್, ಪಬ್, ಸಿನಿಮಾ ಮಂದಿರಗಳು, ಬಾರ್‍ಗಳ ಮುಂದೆ ಕ್ಯೂ ನಿಲ್ಲುತ್ತಿದ್ದವರ ಗುಂಪು, ಎದುರಿಗೆ ಬಂದವರನ್ನೂ ನೋಡದೆ ಗುದ್ದುಕೊಂಡೇ ಕರ್ತವ್ಯಕ್ಕೆ ಹೊರಟ ಜನರ ಹಿಂಡು, ಎಲ್ಲಕ್ಕೂ ತಾ ಮುಂದು, ನಾ ಮುಂದು ಎಂದು ದುಂಬಾಲು ಬೀಳುತ್ತಿದ್ದ ಸಮುದಾಯ ಇವುಗಳಷ್ಟೇ ನಗರ ವಾಸಿಗಳ ಪ್ರತಿನಿತ್ಯ ಜೀವನದ ಕಥೆಯಾಗಿತ್ತು.
ಇನ್ನೊಂದೆಡೆ ಮನೆಯ ಮುಂದೆ ಸಗಣಿ ನೀರಿನಿಂದ ಸಾರಿಸಿ, ರಂಗವಲ್ಲಿ ಹಾಕಿ, ರೊಟ್ಟಿ, ಮುದ್ದೆ ಹೀಗೆ ಗಟ್ಟಿ ಆಹಾರ ಸೇವಿಸಿ, ನೆರೆ ಮನೆಯವರ ಉಭಯಕುಶಲೋಪರಿಯನ್ನು ವಿಚಾರಿಸಿ, ತಂತಮ್ಮ ಕೆಲಸಗಳಲ್ಲಿ ತೊಡಗುತ್ತಿದ್ದವರು ನಮ್ಮ ಹಳ್ಳಿ ಮಂದಿ. ಈ ಮೊದಲು ಸಿಟಿ ವಾಸಿಗಳಿಗೆ ಹಳ್ಳಿಗಳೆಂದರೆ, ಹಳ್ಳಿಗರ ಜೀವನ ಶೈಲಿ ಎಂದರೆ ಅದೇನೋ ಅಹಂಕಾರ ಮತ್ತು ತಾತ್ಸಾರ ಮನೋಭಾವವೇ ಹೆಚ್ಚು.
ಆದರೀಗ ಬದಲಾದ ಜಾಯಮಾನದಲ್ಲಿ ಎಲ್ಲವೂ ವೈಪರಿತ್ಯವಾಗಿದೆ. ತಮ್ಮ ಮಕ್ಕಳನ್ನು ರಜಾ ದಿನಗಳಲ್ಲಿ ಅಜ್ಜ-ಅಜ್ಜಿಯಂದಿರ ಮನೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದ ಕೆಲವು ಮಂದಿ ಇಂದು ಊರು ಬಿಟ್ಟು ಹೋಗಿ ಎಂದು ಹೇಳುವ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ. ಆದರೆ ನಮ್ಮ ಉದಾರಿ ರೈತ ಬಾಂಧವರು ಯಾವುದೇ ಫಲಾಪೇಕ್ಷೆ ಇಲ್ಲದೆ ಎಲ್ಲರನ್ನೂ ಸಂಭಾಳಿಸುತ್ತದ್ದಾರೆ. ಇದಕ್ಕೇ ಹೇಳುವುದು ‘ಕಾಲಾಯ ತಸ್ಮೈ ನಮಃ’ ಎಂದು.
ಬಲಿಷ್ಠವಾಗಬೇಕಿದೆ ಹಳ್ಳಿಗಳು
ಸ್ವಾತಂತ್ರ್ಯ ನಂತರದ ದಶಕಗಳಲ್ಲೂ ಹಳ್ಳಿಗಳಲ್ಲಿ ಕಾಡುತ್ತಿರುವ ಅತೀ ದೊಡ್ಡ ಸಮಸ್ಯೆ ಎಂದರೆ ಮೂಲಭೂತ ಸೌಕರ್ಯಗಳ ಕೊರತೆ. ನಾವೆಲ್ಲಾ ಚಂದ್ರಯಾನದಂತಹ ಹೆಮ್ಮೆಯ ಗಗನಯಾನವನ್ನು ಕೈಗೊಳ್ಳುವಷ್ಟು ಸಮರ್ಥರಿದ್ದರೂ ಇಂತಹ ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಬದಿಗಿಡುತ್ತಲೇ ಸಾಗುತ್ತಿರುವುದು ನೋವಿನ ಸಂಗತಿ. ಆದರೆ ಅದೇ ಹಳ್ಳಿಗಳು ಮುಂದೊಂದು ದಿನ ಸಕಲ ಸೌಕರ್ಯಗಳುಳ್ಳ ಸ್ಥಳಗಳಾಗಿ ಮಾರ್ಪಡುವ ಕಾಲ ಸನ್ನಿಹಿತವಾಗುತ್ತಿದೆ.
ಆದರೆ ಇದಕ್ಕೆ ಕೇವಲ ಸರ್ಕಾರದ ಸವಲತ್ತುಗಳನ್ನೇ ಕಾಯದೇ ಅಬೇಧವಾಗಿ ಎಲ್ಲರೂ ಕೈ ಜೋಡಿಸಬೇಕಿದೆ. ಒಂದರ್ಥದಲ್ಲಿ ಇಷ್ಟು ವರ್ಷಗಳ ಕಾಲ ನಮಗೆ ಅನ್ನ ಹಾಕಿ ಶುಶ್ರೂಷೆ ಮಾಡುತ್ತಿದ್ದ ಹಳ್ಳಿಗರಿಗಿಂದು ನಗರ ವಾಸಿಗಳು ಹೊರೆಯಾಗುತ್ತಿದ್ದಾರೆ. ಆದರೆ ಹಳ್ಳಿಗರ ಔದಾರ್ಯದ ಮುಂದೆ ಇದೆಲ್ಲಾ ಮಂಕಾಗುತ್ತಿದೆ.
ಪ್ರಾಯಶಃ ಇಂದು ‘ಜೈ ಕಿಸಾನ್’ ಎಂಬ ಘೋಷವಾಕ್ಯ ಪ್ರತಿಧ್ವನಿಸುತ್ತಿದೆ. ಅದೇನೆ ಇದ್ದರೂ ಹಳ್ಳಿಗಳಿಂದು ಎಲ್ಲ ಕೊರತೆಗಳಿಂದ ಮುಕ್ತವಾಗಬೇಕಿದೆ. ಆರೋಗ್ಯ, ತಂತ್ರಜ್ಞಾನ, ಜಲ ಸಂರಕ್ಷಣೆ, ಶಿಕ್ಷಣ, ರಸ್ತೆಗಳ ನಿರ್ಮಾಣ, ಹೀಗೆ ಹತ್ತು ಹಲವು ಯೋಜನೆಗಳು ಇಂದು ಜಾರಿಯಲ್ಲಿದ್ದರೂ ಯಾವುಗಳು ಪೂರ್ಣ ಪ್ರಮಾಣದಲ್ಲಿ ಫಲಕಾರಿಯಾಗಿಲ್ಲ ಎಂಬುದನ್ನು ಈಗಲಾದರೂ ಮನಗಾಣಬೇಕಿದೆ.
ಬದಲಾದೀತೇ ಕ್ರೂರ ಮನಸ್ಥಿತಿ?
ನಗರಗಳೆಂದರೆ ಹಾಗೆ, ಪ್ರತಿ ಕ್ಷಣವೂ ಟೆನ್ಷನ್, ಭಯ ನಿರ್ಮಿತ ವಾತಾವರಣ, ಕೊಲೆ, ಸುಲಿಗೆ, ದರೋಡೆ, ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ಗಲಭೆ, ಗಲಾಟೆ, ಮಾಲಿನ್ಯ, ಅನಾರೋಗ್ಯ. ಒಂದರ್ಥದಲ್ಲಿ ‘ಎಲ್ಲ ಇದ್ದು ಏನೂ ಇರದ ಹಾಗೆ’ ಬದುಕು ಸಾಗಿಸುವ ಅನಿವಾರ್ಯತೆ ಅಲ್ಲಿತ್ತು. ಆದರೆ ನಮ್ಮ ಹಳ್ಳಿಗರ ಪರಿಸ್ಥಿತಿ ಹೇಗಿತ್ತೆಂದರೆ ‘ಏನೂ ಇರದಿದ್ದರೂ ಎಲ್ಲ ಇದೆ’ ಎಂದು ಬದುಕುವ ರೀತಿಯಲ್ಲಿತ್ತು.
ಹೀಗೆ ಸದಾ ಆತಂಕದಲ್ಲೇ ಕಾಲ ಕಳೆಯುತ್ತಿದ್ದ ಜನ ಇಂದು ಹಳ್ಳಿಗಳನ್ನು ಸೇರಿ ಒಂದಷ್ಟು ಸಮಾಧಾನಿಸುತ್ತಿದ್ದಾರೆ. ಇದು ಅವರ ಮೂಲಭೂತ ವರ್ತನೆಯಲ್ಲಿ ಬಹುತೇಕ ಬದಲಾವಣೆ ತರುವ ಕಾಲವೂ ಆಗಿದೆ. ಶಾಂತಪ್ರಿಯ ಭಾರತದಲ್ಲಿ ಇವೆಲ್ಲವೂ ಸದ್ದಿಲ್ಲದೆ ನಡೆಯುತ್ತಿತ್ತು ಎಂಬುದನ್ನು ನಾವು ನಂಬಲೇಬೇಕಿದೆ. ಆದರೆ ಈಗ ಸರಳ ಜೀವನದ ಪಾಠ ಕಲಿಸುತ್ತಿರುವ ನಿರಕ್ಷಕರಕುಕ್ಷಿಗಳಿಗೆ ನಾವೊಂದು ಸಲಾಮ್ ಸಲ್ಲಿಸೋಣ.
ಹೆಚ್ಚಳವಾಗಲಿದೆ ನಿರೀಕ್ಷಿತ ಜೀವಿತಾವಧಿ
ನಗರವಾಸಿಗಳಲ್ಲಿ ಸದಾಕಾಲ ಅತೀವ ಅನಾರೋಗ್ಯ ಪೀಡಿತರ ಸಂಖ್ಯೆಯೇ ಹೆಚ್ಚು. ಅಲ್ಲಿನ ಮಾಲಿನ್ಯ, ಜನಜಂಗುಳಿ, ಕ್ರೌರ್ಯ, ಅವರ ಆಹಾರ ಪದ್ಧತಿಗಳು ವಿಚಿತ್ರ ಹಾಗೂ ಅನಾರೋಗ್ಯಕರವಾಗಿವೆ. ಹೀಗಾಗಿ ಬಹುತೇಕ ನಗರ ವಾಸಿಗಳ ನಿರೀಕ್ಷಿತ ಜೀವಿತಾವಧಿ (ಆಯಸ್ಸು) ಕಡಿಮೆಯೇ ಇತ್ತೆಂಬುದು ಆಶ್ಚರ್ಯವೇನಲ್ಲ.
ಬದಲಾದ ಇಂದಿನ ಸನ್ನಿವೇಶದಲ್ಲಿ ನಮ್ಮ ದೇಶವಾಸಿಗಳ ಆಯಸ್ಸು ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕೆಲ್ಲಾ ಕಾರಣಕರ್ತರಾಗುತ್ತಿರುವ ನಮ್ಮ ಹಳ್ಳಿಗರನ್ನ ನಾವು ಮತ್ತೊಮ್ಮೆ ಗೌರವಿಸದೆ ಇರಬಾರದು. ಜೀವನವನ್ನಷ್ಟೇ ಅಲ್ಲ ಜೀವವನ್ನೂ ವೃದ್ಧಿಸುತ್ತಿರುವುದು ಇಂದು ನಮ್ಮ ಹಳ್ಳಿಗರೆ. ಆದರೆ ಇದಕ್ಕೆ ಪೂರಕವಾದ ಸನ್ನಿವೇಶಗಳು ಗ್ರಾಮೀಣ ಭಾಗದಲ್ಲಿ ಮತ್ತಷ್ಟು ದೊರಕುವ ಅನಿವಾರ್ಯತೆ ಮತ್ತು ಅಗತ್ಯತೆ ಇಂದಿದೆ.
ಕೃಷಿಗೆ ದೊರಬೇಕಿದೆ ಮತ್ತಷ್ಟು ಆದ್ಯತೆ
ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ವಲಯಗಳ ಪೈಕಿ ಈ ಮೊದಲು ನಮ್ಮ ರಾಷ್ಟ್ರೀಯ ಆದಾಯದ ಸಿಂಹಪಾಲು ಕೃಷಿಯದ್ದೇ ಆಗಿತ್ತು. ಆದರೆ ಜಾಗತೀಕರಣ, ಖಾಸಗೀಕರಣ ಮತ್ತು ಉದಾರಿಕರಣಗಳ ಫಲವಾಗಿ ಇತ್ತೀಚೆಗೆ ಕೃಷಿ ವಲಯ ನಿರ್ಲಕ್ಷಕ್ಕೆ ಒಳಪಟ್ಟಿರುವುದು ಬೇಸರ ಹಾಗೂ ಆತಂಕಕಾರಿ ಸಂಗತಿಯಾಗಿದೆ.
ಇಂದಿನ ಪರಿಸ್ಥಿತಿಯಲ್ಲಿ ಅನ್ನ ತಿಂದು ಜೀವ ಉಳಿಸಿಕೊಳ್ಳಲು ಸಾಧ್ಯವೇ ಹೊರತು, ಬೇರೇನೂ ಅಲ್ಲ ಎಂಬಂತಾಗಿದೆ. ಮತ್ತೊಮ್ಮೆ ನಮ್ಮ ಅನ್ನದಾತನಿಗೆ ಬೆಲೆ ಬರುತ್ತಿದೆ. ಆದರೆ ಅನ್ನದಾತನತ್ತ ನಮ್ಮ ಸರ್ಕಾರಳ ಚಿತ್ತ ಬೀಳಬೇಕಿದೆ. ಇತರ ವಲಯಗಳಂತೆಯೇ ಕೃಷಿಯನ್ನೂ ಅಭಿವೃದ್ಧಿಪಡಿಸಬೇಕಿದೆ. ಇಲ್ಲವಾದಲ್ಲಿ ಕೊರೋನಾ ವಿಷ ಕ್ರಿಮಿಯ ಲಗ್ಗೆ ಹೀಗೆಯೇ ಹೆಚ್ಚಾಗುತ್ತಿದ್ದರೆ, ಮುಂದೊಂದು ದಿನ ತಿನ್ನಲು ಅನ್ನವೂ ಇಲ್ಲದಂತಾಗಿ, ಗೆಡ್ಡೆ, ಗೆಣಸುಗಳನ್ನು ತಿಂದು ಆದಿ ಮಾನವರಂತೆ ಬದುಕುವ ಕಾಲ ಬಂದರೂ ಆಶ್ಚರ್ಯವೇನಿಲ್ಲ!
ನನಸಾಗುವುದೇ ಬಾಪೂಜಿ ಕನಸು?
“ಹಳ್ಳಿಗಳ ಉದ್ದಾರದಿಂದಲೇ ದೇಶದ ಉದ್ದಾರ” ಎಂಬ ಮಾತನ್ನು ನಮ್ಮ ರಾಷ್ಟ್ರಪಿತ ಗಾಂಧೀಜಿಯವರು ಸುಮಾರು ವರ್ಷಗಳ ಹಿಂದೆಯೇ ನುಡಿದಿದ್ದಾರೆ. ಮದ್ಯಪಾನಮುಕ್ತ ಗ್ರಾಮಗಳು, ಗುಡಿ ಕೈಗಾರಿಕೆಗಳಿಗೆ ಆದ್ಯತೆ, ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ, ಸ್ವದೇಶಿ ವಸ್ತುಗಳ ಬಳಕೆ, ಅಧಿಕಾರ ವಿಕೇಂದ್ರಿಕರಣದ ಮೂಲಸ್ಥಾನ ಹೀಗೆ ಗ್ರಾಮೀಣಾಭಿವೃದ್ಧಿಯ ಬಗ್ಗೆ ಬಾಪೂಜಿ ಅಂದೇ ದೊಡ್ಡ ದೊಡ್ಡ ಕನಸುಗಳನ್ನು ಕಂಡಿದ್ದರು.
ಇಂದಿನ ಪರಿಸ್ಥಿತಿ ನೋಡಿದರೆ ಆ ಕಾಲ ಬಹುಬೇಗ ಬರುವುದೇ? ಎಂದು ಕಾದು ನೋಡಬೇಕಿದೆ. ಹಾಗೆ ನೋಡಿದರೆ ಇಂದು ನಿಜಕ್ಕೂ ನಗರಳಲ್ಲಿನ ದ್ವಿತೀಯ ಹಾಗೂ ತೃತೀಯ ವಲಯಗಳ ಬಹುತೇಕ ಚಟುವಟಕೆಗಳಲ್ಲಿ ಕೃಷಿಯ ಸಹಕಾರವೇ ಹೆಚ್ಚು. ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮೀಣ ಭಾಗಗಳನ್ನು ಮುನ್ನೆಲೆಗೆ ತರುವಂತಹ ಕ್ರಮಗಳು ಇಂದು ಅಪೇಕ್ಷಣಿಯ.
ಕೈಗಾರಿಕೆಗಳ ಮೂಲ ನೆಲೆಯಾದೀತೇ?
ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸುವಲ್ಲಿ ಕೃಷಿ ಕ್ಷೇತ್ರದ ಸಾಮಥ್ರ್ಯ ಹೆಚ್ಚಿದ್ದರೂ, ವರ್ಷವಿಡೀ ಕೃಷಿಯಲ್ಲಿ ಉದ್ಯೋಗ ಲಭ್ಯತೆ ಇರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಿರುದ್ಯೋಗಿಗಳಾಗುತ್ತಿದ್ದ ನಮ್ಮ ಗ್ರಾಮೀಣ ಭಾಗದ ಜನರು ನಗರಗಳತ್ತ ವಲಸೆ ಹೋಗುತ್ತಿದ್ದರು. ಆದರೆ ಇಂದು ಅದೇ ವಲಸೆ ಪುನರಾವರ್ತಿತವಾಗುತ್ತಿದೆ.
ಇಂತಹ ಕೃಷಿ ಕಾರ್ಮಿಕತನ್ನು ಒಂದೆಡೆ ಸಂಘಟಿಸಿ ಇಂದು ಅವರಿಗೆ ಸರಿ ಹೊಂದುವ ಉದ್ಯೋಗ ಸೃಷ್ಟಿಗೆ ಸರ್ಕಾರಗಳು ಮುಂದಾಗಬೇಕಿದೆ. ತಾವಿರುವ ಸ್ಥಳಗಳಲ್ಲಿಯೇ ಸಾಧ್ಯವಿರುವ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿದರೆ ನಿರುದ್ಯೋಗ ಸಮಸ್ಯೆಯ ನಿವಾರಣೆ ಜೊತೆಗೆ ದೇಶದ ಆರ್ಥಿಕತೆಯೂ ಸಹ ಬಲಿಷ್ಠವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕೃಷಿ ಪದ್ಧತಿಗೆ ಮತ್ತೊಮ್ಮೆ ಜೀವ ತುಂಬಲು ಸಾಧ್ಯವಿದೆ.
(ಕುಮಾರಸ್ವಾಮಿ.ವಿ.ಕೆ
(ಕುಮಾರ್ ಭಾರದ್ವಾಜ್)
ಹವ್ಯಾಸಿ ಬರಹಗಾರರು, ವಿರುಪಾಪುರ,
ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ,
ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.
ಮೊಬೈಲ್ : 9113906120, 9740840678)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
AI ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ ಪ್ರಕಟ
ಸುದ್ದಿದಿನಡೆಸ್ಕ್:ಕೃತಕ ಬುದ್ಧಿಮತ್ತೆ ವಲಯದಲ್ಲಿ ಜಗತ್ತಿನ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಟೈಮ್ ಪತ್ರಿಕೆ ಪ್ರಕಟಿಸಿದ್ದು, ಅದರಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸ್ಥಾನ ಪಡೆದಿದ್ದಾರೆ.
ಅಶ್ವಿನಿ ವೈಷ್ಣವ್ ಅವರನ್ನು ಶಾರ್ಪರ್ ವರ್ಗದಲ್ಲಿ ಹೆಸರಿಸಲಾಗಿದ್ದು, ಅವರ ನಾಯಕತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಕ್ಷೇತ್ರದ ಮೊದಲ 5 ದೇಶಗಳಲ್ಲಿ ಭಾರತ ಸ್ಥಾನ ಪಡೆಯುವ ಆಶಯದಲ್ಲಿದೆ ಎಂದು ಟೈಮ್ ಮ್ಯಾಗ್‌ಜೀನ್ ಬರೆದಿದೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿಸುವ ಪ್ರಯತ್ನದಲ್ಲಿ ಸಚಿವರು ನಿರ್ವಹಿಸಿದ ಮಹತ್ವದ ಪಾತ್ರದ ಹಿನ್ನೆಲೆಯಲ್ಲಿ ಪಟ್ಟಿಯಲ್ಲಿ ಅವರ ಹೆಸರು ನಮೂದಿತವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.
ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ ನೀಡಿದ ಇನ್ಫೋಸೀಸ್‌ನ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಸಿಇಓಗಳಾದ ಗೂಗಲ್‌ನ ಸುಂದರ್ ಪಿಚಾಯಿ, ಮೈಕ್ರೋಸಾಫ್ಟ್‌ನ ಸತ್ಯ ನಾದೆಲ್ಲಾ, ಓಪನ್‌ಎಐ ನ ಸ್ಯಾಮ್ ಅಲ್ಟ್‌ಮನ್, ಮೆಟಾದ ಮಾರ್ಕ್ ಝುಕೇರ್‌ಬರ್ಗ್ ಟೈಮ್ ಪ್ರಕಟಿಸಿದ ಪಟ್ಟಿಯಲ್ಲಿ ಸೇರಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಜಧಾನಿಯಲ್ಲಿ ಅಪಾಯಕಾರಿ ಮರಗಳನ್ನು ಕತ್ತರಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಸುದ್ದಿದಿನಡೆಸ್ಕ್:ರಾಜಧಾನಿ ಬೆಂಗಳೂರಿನಲ್ಲಿ 15 ದಿನದೊಳಗೆ ಗುಂಡಿ ಮುಚ್ಚುವಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.
ವಿದೇಶ ಪ್ರವಾಸಕ್ಕೂ ಮುನ್ನ ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಇಂದು ಸಭೆ ನಡೆಸಿದ ಅವರು ಸರಿಯಾಗಿ ಕಾರ್ಯನಿವಹಿಸದ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ತಿಳಿಸಿದ ಅವರು, ಅಪಾಯಕಾರಿ ಮರಗಳಿದ್ದರೆ, ಕತ್ತರಿಸುವಂತೆ ಸೂಚಿಸಿದ್ದಾರೆ.
ಯಾವುದೇ ದೂರು ಬಂದರೆ ಅಧಿಕಾರಿಗಳೇ ನೇರ ಹೊಣೆ ಎಂದಿದ್ದಾರೆ. ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮೌನೀಶ್ ಮೌದ್ಗೀಲ್, ಬಿಎಂಆರ್ಡಿಎ ಆಯುಕ್ತ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ
ಸುದ್ದಿದಿನಡೆಸ್ಕ್:ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಯ ಹಿನ್ನಡೆಗೆ ಕಾಂಗ್ರೆಸ್ ಕಾರಣ ಎಂದು ದೂರಿದ್ದಾರೆ. ಜುಲೈನಲ್ಲಿ ನಡೆದ ಸಭೆ ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ ಅವರು, ರಾಜ್ಯದ ಜನರ ಹಿತ ಕಾಪಾಡಲು ಬದ್ಧ ಎಂದು ಹೇಳಿದ್ದಾರೆ. ಮಹದಾಯಿ ಕೇವಲ ಗೋವಾ ಸಂಬಂಧಿ ಯೋಜನೆ ಅಲ್ಲ. ಅಲ್ಲಿ ಹುಲಿ ಸಂರಕ್ಷಿತ ಪ್ರದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು
-
ದಿನದ ಸುದ್ದಿ4 days ago
ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ
-
ದಿನದ ಸುದ್ದಿ5 days ago
ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ
-
ದಿನದ ಸುದ್ದಿ3 days ago
ಆತ್ಮಕತೆ | ಸರಳ ಹಾಗೂ ಒಲವಿನ ಮದುವೆಗಳ ಸಾಲುಸಾಲು
-
ದಿನದ ಸುದ್ದಿ4 days ago
ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ
-
ದಿನದ ಸುದ್ದಿ4 days ago
ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ3 days ago
ರಿವರ್ ಕ್ರಾಸಿಂಗ್ ತರಬೇತಿ ; ಬೋಟ್ ಮುಳುಗಿ ಇಬ್ಬರು ಕಮಾಂಡೋಗಳು ಸಾವು