ಅಂತರಂಗ
ಗೌರಿ ಮೇಡಂ ಜೊತೆ ಒಡನಾಟದ ನೆನಪುಗಳು
- ಹರ್ಷಕುಮಾರ್ ಕುಗ್ವೆ
ಅದು 2008ನೇ ಇಸವಿ. ಶಿವಮೊಗ್ಗದಲ್ಲಿ ವಿದ್ಯಾರ್ಥಿ ಸಂಘಟನೆಯಲ್ಲಿ ಪೂರ್ಣಾವಧಿ ಹೋರಾಟಗಾರನಾಗಿ ಕೆಲಸ ಮಾಡುತ್ತಿದ್ದ ನನಗೆ ಜೀವನದಲ್ಲಿ ದೊಡ್ಡ ಅನಾಹುತವೊಂದು ಎದುರಾಗಿತ್ತು. ನನ್ನ ಅವ್ವನಿಗೆ ದಿಢೀರ್ ಅನಾರೋಗ್ಯ ಕಾಣಿಸಿಕೊಂಡಿತ್ತು. ಅದುವರೆಗೆ ಸುಮಾರು ಹತ್ತು ಹನ್ನೆರಡು ವರ್ಷಗಳಿಂದ ಮನೆ, ಮಠ, ತಮ್ಮ, ತಂಗಿ, ಅಪ್ಪ, ಅಮ್ಮ ಎಲ್ಲರನ್ನೂ ಬಹುತೇಕ ತೊರೆದು ಸಮಾಜದಲ್ಲಿ ಬದಲಾವಣೆ ತರಬೇಕು ಎಂದುಕೊಂಡು ಕೆಲಸ ಮಾಡುತ್ತಿದ್ದ ನನ್ನ ಜಂಘಾಬಲ ಉಡುಗಿಸಿತ್ತು ಈ ಘಟನೆ.
ಅವ್ವನನ್ನು ಆಸ್ಪತ್ರೆಗೆ ಸೇರಿಸಿ ಒಂದು ವಾರ ಅಡ್ಮಿಟ್ ಮಾಡಿಕೊಂಡರೆ ಡಿಸ್ಚಾರ್ಜ್ ಮಾಡಿಸುವಾಗ ಕೈಯಲ್ಲಿ ನಯಾಪೈಸೆ ಕಾಸಿಲ್ಲ. ಮನೆಯಲ್ಲಿ ಸಹ ಇದೇ ಸ್ಥಿತಿ. ಅವ್ವನ ಅನಾರೋಗ್ಯಕ್ಕೂ ಒಂದು ರೀತಿಯಲ್ಲಿ ನಾನೇ ಕಾರಣನಾಗಿದ್ದೆ. ನನ್ನ ಬಗ್ಗೆ ದೊಡ್ಡ ಕನಸುಗಳಿಟ್ಟುಕೊಂಡಿದ್ದ ಅವ್ವ ಒಂದು ರೀತಿ ಭ್ರಮನಿರಸನಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದಳು.
ಕೊನೆಗೆ ಆಸ್ಪತ್ರೆಗೆ ಕಟ್ಟಲು ಬೇಕಾಗಿದ್ದ 12 ಸಾವಿರ ರೂಪಾಯಿಗೆ ಶಿವಮೊಗ್ಗದ ಹಿರಿಯ ಕಿರಿಯ ಗೆಳೆಯರ ಬಳಿ ನಾಲ್ಕೈದು ದಿನ ಸೈಕಲ್ ಹೊಡೆದು ಸಾಲ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದೆ. ಅಮ್ಮ ಪೂರ್ತಿ ಹುಷಾರಾಗಬೇಕಾದರೆ ತಂಗಿ ಮದುವೆಯ ಜವಾಬ್ದಾರಿಯನ್ನು ನಾನೇ ಹೊತ್ತು ನೆರವೇರಿಸುವುದು ಒಂದೇ ದಾರಿ ಎಂದು ತೋರಿತು. ಆಗಲೇ ನನಗೆ “ಸಂಬಳ”ಕ್ಕಾಗಿ ಕೆಲಸವೊಂದನ್ನು ಮಾಡುವ ಅನಿವಾರ್ಯತೆ ಉಂಟಾಗಿದ್ದು.
ಆದರೆ ನನಗೆ ಕೆಲಸ ಯಾರು ಕೊಡುತ್ತಾರೆ? ನೆಟ್ಟಗೆ ಡಿಗ್ರಿ ಮುಗಿಸಿರಲಿಲ್ಲ, ಕಾನೂನು ಓದು ಪೂರ್ಣವಾಗಿರಲಿಲ್ಲ, ಏನು ಮಾಡುವುದು?
ಆಗ, ನನಗೂ ಒಂದು ದಾರಿ ಎಂದು ಕೈ ಹಿಡಿದಿದ್ದು ಬೇರೆ ಯಾರೂ ಅಲ್ಲ, ಗೌರಿ ಲಂಕೇಶ್. ಗೌರಿ ಲಂಕೇಶ್ ಪತ್ರಿಕೆಯಲ್ಲಿ ಅಂಕಣಕಾರರೂ, ಹಿರಿಯ ಸಂಗಾತಿಯೂ ಆದ ಶಿವಸುಂದರ್ ಅವರು ನನ್ನನ್ನು ಲಂಕೇಶ್ ಕಚೇರಿಗೆ ಬರಲು ತಿಳಿಸಿದರು. ಮರುದಿನ ಹೋದೆ. ಮತ್ತೊಬ್ಬ ಹಿರಿಯ ಮಿತ್ರರಾದ ಪಾರ್ವತೀಶ್ ಮತ್ತು ಗೌರಿ ಮೇಡಂ ನನ್ನನ್ನು ಕೂರಿಸಿಕೊಂಡು ನೀನು ನಮ್ಮ “ಗೈಡ್” ಪತ್ರಿಕೆಗೆ 15 ದಿನ ಇಲ್ಲಿದ್ದುಕೊಂಡು ಕೆಲಸ ಮಾಡು, ಉಳಿದ 15 ದಿನ ಶಿವಮೊಗ್ಗದಲ್ಲಿ ನಿನ್ನ ಇತರೆ ಕೆಲಸಗಳ ಜೊತೆಯಲ್ಲಿ ಲಂಕೇಶ್ ಪತ್ರಿಕೆಗೆ ಏನಾದರೂ ಬರಿ” ಎಂದರು.
ಹೀಗೆ ಶುರುವಾದದ್ದು ನನ್ನ ಪತ್ರಿಕೋದ್ಯಮದ ಜೀವನ. ನಂತರ ಒಂದೂವರೆ ವರ್ಷ ಈ ರೀತಿ ಕೆಲಸ ಮಾಡಿದೆ. ಈ ನಡುವೆ ಶಿವಮೊಗ್ಗದಲ್ಲಿದ್ದುಕೊಂಡೇ ಒಂದಷ್ಟು ಅನುವಾದ ಮತ್ತಿತರ ಕೆಲಸಗಳನ್ನು ಮಾಡಬಹುದು ಎಂದುಕೊಂಡು ಒಂದು ಕಂಪ್ಯೂಟರ್ ತರಲು ಯೋಚಿಸಿದೆ. ಆದರೆ ಅದಕ್ಕೂ ಸಾಕಷ್ಟು ಹಣವಿರಲಿಲ್ಲ. ಆಗ ಗೌರಿ ಮೇಡಂ ತಾವೇ ಒಂದು ಸಲಹೆ ನೀಡಿದರು.
ಇದಕ್ಕೆ ಅರ್ಧದಷ್ಟು ಹಣ ನಾನು ಕೊಡುತ್ತೇನೆ, ಮಿಕ್ಕ ಅರ್ಧ ಹಣ ಹೊಂದಿಸಿಕೋ. ನನಗೆ ಕೊಡಬೇಕಾದ ಹಣದಲ್ಲಿ ತಿಂಗಳಿಗೆ ಒಂದು ಸಾವಿರ ರೂಪಾಯಿಯನ್ನು ನಿನ್ನ ಸಂಬಳದಲ್ಲಿ ಕಟ್ ಮಾಡಿಕೊಳ್ಳುತ್ತೇವೆ ಎಂದರು. ಇದು ನನಗೆ ಬಹಳ ಸಹಕಾರಿಯಾದ ದಾರಿಯಾಗಿದ್ದರಿಂ “ಆಯ್ತು ಮೇಡಂ” ಎಂದೆ. ಅದರಂತೆ ಮರುದಿನವೇ ಲಂಕೇಶ್ ಕಚೇರಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಕುಮಾರ್ ಬುರಡಿಕಟ್ಟಿ ಜೊತೆಗೆ ಎಸ್ಪಿ ರೋಡಿಗೆ ಹೋಗಿ ಒಂದು ಕಂಪ್ಯೂಟರ್ ಖರೀದಿಸಿಕೊಂಡು ಶಿವಮೊಗ್ಗಕ್ಕೆ ತಂದೆ. ಇದು ನನ್ನಂತಹ ಒಬ್ಬ ಕಾರ್ಯಕರ್ತನಿಗೆ ಗೌರಿ ಮೇಡಂ ಬದುಕು ಕಟ್ಟಿಕೊಳ್ಳಲು ನೆರವಾದ ರೀತಿ.
ಎರಡು ವರ್ಷಗಳ ನಂತರ ಒಂದು ದಿನ ನನಗೆ ಅನಿರೀಕ್ಷಿತವಾಗಿ ಮತ್ತೊಂದು ಪತ್ರಿಕೆಯಲ್ಲಿ ಕೆಲಸ ಅವಕಾಶವೊಂದು ಹುಡುಕಿಕೊಂಡು ಬಂತು. ಸ್ವಲ್ಪ ಹೆಚ್ಚಿಗೆ ಸಂಬಳಕ್ಕಾಗಿ ಆ ಪೂರ್ಣಾವಧಿ ಕೆಲಸ ಮಾಡುವುದು ನನಗೆ ಅನಿವಾರ್ಯವೂ ಅನಿಸಿ “ಗೌರಿ ಲಂಕೇಶ್” ಮತ್ತು ಗೈಡ್ ತಂಡವನ್ನು ಬಿಟ್ಟು ಹೊರಡಬೇಕಾಯಿತು.
ಇದನ್ನು ಗೌರಿ ಮೇಡಂಗೆ ತಿಳಿಸಿದಾಗ ಅವರು ಕೊಂಚವೂ ಬೇಸರ ಮಾಡಿಕೊಳ್ಳಲಿಲ್ಲ. “ಏಯ್ ಮರಿ ಅಲ್ಲಿ ಆ ಪತ್ರಿಕೆ ಇನ್ಚಾರ್ಜ್ ಆಗಿರೋದು ನನ್ನ ಫ್ರೆಂಡೇ, ಬೇಕಾದರೆ ನಿನ್ನ ಬಗ್ಗೆ ನಾನೂ ರೆಕಮೆಂಡ್ ಮಾಡ್ತೀನಿ” ಅಂದರು. ಮಾತ್ರವಲ್ಲ ನನಗೆ ಲಂಕೇಶ್ ಪತ್ರಿಕೆಯಿಂದ ಒಂದು ಬಹಳ ಪಾಸಿಟಿವ್ ಆದ “ಅನುಭವ ಪತ್ರ”ವನ್ನೂ ಬರೆದು ಕೊಟ್ಟರು. ನನ್ನ ಹೃದಯ ತುಂಬಿ ಬಂತು. ಒಂದು ಕಡೆ ಅವರಿಗೆ ಕೈಕೊಟ್ಟು ಹೋಗುತ್ತಿದ್ದೇನೆ ಎಂಬ ಗಿಲ್ಟ್ ನನ್ನನ್ನು ಕಾಡುತ್ತಿತ್ತು. ಆದರೂ ಅನಿವಾರ್ಯ ಎನಿಸಿತ್ತು.
ಕೆಲವು ದಿನಗಳ ನಂತರ ಗೌರಿ ಮೇಡಂಗೆ ಒಂದು ಪರ್ಸನಲ್ ಪತ್ರ ಬರೆದೆ. ಸಾರಾಂಶದಲ್ಲಿ ಅವರಿಗೆ ಕೃತಜ್ಞತೆ ತಿಳಿಸಿ, ನಾನು ಲಂಕೇಶ್ ಪತ್ರಿಕೆಯ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ ಕಾರಣಕ್ಕಾಗಿ ಲಂಕೇಶ್ ಅವರನ್ನೂ ಓದಿಕೊಳ್ಳುವ ಅವಕಾಶ ಬಂತು. ಮತ್ತು ನಾನು ಇದುವರೆಗೆ ನನ್ನ ಸಾಮಾಜಿಕ ಜೀವನದಲ್ಲಿ ಕಲಿಯದ ಕೆಲವು ಸಂಗತಿಗಳನ್ನೂ ಲಂಕೇಶ್ ಅವರ ಓದಿನಿಂದ ತಿಳಿದಂತಾಗಿದೆ, ಎಲ್ಲದಕ್ಕೂ ನಿಮಗೆ ಋಣಿಯಾಗಿದ್ದೇನೆ ಎಂದು ಬರೆದೆ. ಆದರೆ ಗೌರಿ ಮೇಡಂ ಹತ್ರ ಪರ್ಸನಲ್ ಅನ್ನೋದೇನೂ ಇರಲಿಲ್ಲ.
ಅವರದನ್ನು ಸಹೋದ್ಯೋಗಿಗಳಿಗೂ ತೋರಿಸಿದ್ದರು. ಇದು ಯಾವ ಬಗೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿತ್ತು ಎಂದರೆ ನಾನು “ಕಾರ್ಲ್ ಮಾರ್ಕ್ಸ್ ಗಿಂತಲೂ ಲಂಕೇಶ‍್ ಅವರನ್ನು ಹೆಚ್ಚೆಂದು ನೋಡಿದ್ದೀನೆಂದು! ಯಾವಾಗ ಈ ಪತ್ರ ನನಗೆ ಬೂಮರ್ಯಾಂಗ್ ಆಯ್ತೋ ಅಂದಿನಿಂದ “ಸಾವಾಸ ಸಾಕಪ್ಪಾ” ಅಂತ ದೂರ ಇದ್ದುಬಿಟ್ಟೆ. ಇದಾದ ಕೆಲವು ಒಂದೆರಡು ವರ್ಷಗಳ ಕಾಲ ಮತ್ತೆ ನಾನು ಆ ಕಡೆ ಹೋದದ್ದೇ ಕಡಿಮೆ.
2016ರ ಜನವರಿ ತಿಂಗಳಲ್ಲಿ ಹೈದ್ರಾಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಡೆತ್ ನೋಟ್ ಒಂದು ವೈರಲ್ ಆಯಿತು.. ಅದು ಒಂದು ಬಗೆಯಲ್ಲಿ ಇಡೀ ದೇಶದ ಪ್ರಜ್ಞಾವಂತರಲ್ಲಿ ಒಂದು ಬಗೆಯ ವಿಷಾದ ಮತ್ತು ಸಂಚಲನವನ್ನು ಮೂಡಿಸಿತು. ಇದಾದ ಕೆಲವೇ ದಿನಗಳಲ್ಲಿ ಜೆ ಎನ್ ಯು ನಲ್ಲಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಮೇಲೆ “ದೇಶದ್ರೋಹಿ” ಆರೋಪ ಮಾಡಿ ದಾಳಿ ನಡೆಸಿದ ಘಟನೆ ಬಂತು.
ಈ ಹೊತ್ತಿನಲ್ಲಿ ನಾನು ಬೇರೊಂದು ವೃತ್ತಿಯಲ್ಲಿ ತೊಡಗಿದ್ದರೂ ನನ್ನೊಳಗಿನ ಹೋರಾಟಗಾರ ಚಡಪಡಿಸುತ್ತಿದ್ದ. ಆಗ ಒಂದು ದಿನ ಗೌರಿ ಮೇಡಂ ಫೋನು ಬಂತು. “ರೋಹಿತ್ ವೇಮುಲ ಮತ್ತು ಕನ್ನಯ್ಯ ಬಗ್ಗೆ ಒಂದು ಪುಸ್ತಕ ಮಾಡೋಣ, ನೀನೇ ಅದಕ್ಕೆ ಏನೇನು ಬೇಕೋ ರೆಡಿ ಮಾಡು, ಪ್ರಿಂಟ್ ಹಾಕಿಸುವ ಜವಾಬ್ದಾರಿ ನನ್ನದು” ಎಂದರು. ನಾನೂ ಮರು ಮಾತಿಲ್ಲದೇ “ಓಕೆ ಮೇಡಂ” ಅಂದೆ. ಹೀಗೆ ನನ್ನ ಸಂಪಾದಕತ್ವದಲ್ಲಿ ಗೌರಿ ಮೇಡಂ ಪ್ರಕಟಿಸಿದ ಪುಸ್ತಕ “ದೇಶ ಅಂದರೆ ಮನುಷ್ಯರು”
ನಂತರ ಸೆಪ್ಟೆಂಬರ್-ಅಕ್ಟೋಬರ್ ಹೊತ್ತಿಗೆ ಚಲೋ ಉಡುಪಿ ಆಂದೋಲನ ನಡೀತು, ಇದಾದ ನಂತರ ಚಲೋ ತುಮಕೂರು, ಚಲೋ ಗುಡಿಬಂಡೆ, ಚಲೋ ಮಡಿಕೇರಿ ಹೀಗೆ ಸಾಲು ಸಾಲು ಚಲೋಗಳು ನಡೆದವು.
ಈ ಅವಧಿಯುದ್ದಕ್ಕೂ ನನಗೆ ಗೌರಿ ಮೇಡಂ ಅವರಲ್ಲಿ ಕಂಡಿದ್ದು ನನಗಿಂತಲೂ ಹೆಚ್ಚಿನ ಬದ್ಧತೆ ಹೊಂದಿ ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು. ಅವರು ಜಿಗ್ನೇಶ್, ಕನ್ಹಯ್ಯ, ಉಮರ್ ಖಾಲಿದ್ ಇವರನ್ನೆಲ್ಲಾ ತಮ್ಮ ದತ್ತು ಪುತ್ರರು ಎಂದು ಕರೆದುಕೊಂಡು ಅವರಿಗೆಲ್ಲಾ ಪ್ರೀತಿ ಹಂಚುತ್ತಿದ್ದಾಗ ಬಹಳ ಖುಶಿಯಾಗುತ್ತಿತ್ತು.
ಒಮ್ಮೆ ಜಿಗ್ನೇಶ್ ಬಂದಿದ್ದಾಗ ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ನಾನು ಮತ್ತು ಗೌರಿ ಮೇಡಂ ವಿಮಾನ ನಿಲ್ದಾಣದ ವರೆಗೆ ಹೋಗಿ ಬಿಟ್ಟು ಬಂದಿದ್ದೆವು. ಈ ಸಂದರ್ಭದಲ್ಲಿ ಹೊಟೆಲ್ ಒಂದರಲ್ಲಿ ಊಟ ಮಾಡುವಾಗ ತೆಗೆದುಕೊಂಡಿದ್ದ ಒಂದು ಫೋಟೋ ನೋಡಿದಾಗಲೆಲ್ಲಾ ದುಃಖವಾಗುತ್ತದೆ.
ಒಮ್ಮೆ ನಾನು ಫೇಸ್ಬುಕ್ಕಿನಲ್ಲಿ ನಮ್ಮೂರಿನ ವಿಶೇಷ ಅಡುಗೆಯಾದ ಕೋಳಿ-ಕಜ್ಜಾಯದ ಫೋಟೋ ಹಾಕಿದ್ದೆ. ಆಗ ಗೌರಿ ಮೇಡಂ ಬರೀ ಹೊಟ್ಟೆ ಉರಿಸ್ತೀರ, ನನ್ನನ್ನು ಎಂದಾದರೂ ಅಕ್ಕಾ ಬಾ ಅಂತ ಕರೆದಿದ್ದೀರಾ ಎಂದು ನನಗೂ, ಪ್ರಗತನಿಗೂ ಛೇಡಿಸಿದ್ದರು. ಇದಾದ ಕೆಲವು ತಿಂಗಳ ನಂತರ ಒಂದು ಕೇಸಿಗಾಗಿ ಗೌರಿ ಮೇಡಂ ಶಿವಮೊಗ್ಗಕ್ಕೆ ಬರುತ್ತಾರೆಂದು ಅವರ ವಕೀಲರಾಗಿದ್ದ ಶ್ರೀಪಾಲ್ ತಿಳಿಸಿದರು.
ಆ ದಿನ ನಾನು ಊರಿನಲ್ಲಿದ್ದೆ. ಕೋಳಿ ಕಜ್ಜಾಯ ರೆಡಿ ಮಾಡುವುದು ಎಂದು ಮನೆಯಲ್ಲಿ ಹೇಳಿ ಗೌರಿ ಮೇಡಂಗೆ ಫೋನ್ ಮಾಡಿದರೆ ಅವರು ಆ ದಿನ ಕೇಸಿಗೆ ಬಂದಿರಲೇ ಇಲ್ಲ. “ಇಲ್ಲ ಮರಿ, ಸಾರಿ, ಬೇರೊಂದು ಕೆಲಸ ತುರ್ತಾಗಿ ಬಂದು ಬರಲಾಗಲಿಲ್ಲ, ಮುಂದಿನ ಡೇಟಿಗೆ ಖಂಡಿತಾ ಬರುತ್ತೇನೆ, ಆಗ ಕೊಳಿ-ಕಜ್ಜಾಯ ಮಾಡಿಸುವಿಯಂತೆ” ಅಂದಿದ್ದರು. “ಆಯ್ತು ಮೇಡಂ” ಅಂದೆ. ಆದರೆ ಆ ಮತ್ತೊಂದು ಡೇಟ್ ಎಂದೂ ಬರಲೇ ಇಲ್ಲ!
2017ರ ಮಾರ್ಚ್ –ಏಪ್ರಿಲ್ ತಿಂಗಳು ಎಂದು ಕಾಣುತ್ತದೆ. ಡಾ.ಸಿ.ಎಸ್,ದ್ವಾರಕಾನಾಥ್ ಅವರ ಮಾರ್ಗದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿ ಕೆಲಸ ಮಾಡುವ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆಗಾಗಿ ಅಲೆಮಾರಿ ಸಮುದಾಯಗಳ ಕುರಿತು ಒಂದು ಸಂಶೋಧನೆ ಮಾಡುವ ಅವಕಾಶ ಬಂದಿತ್ತು. ಇದು ನಡೆಯುತ್ತಿದ್ದ ಸಮಯದಲ್ಲಿ ಒಂದು ರಾತ್ರಿ 11 ಗಂಟೆಗೆ ಗೌರಿ ಮೇಡಂ ಒಂದು ದೊಡ್ಡ ಮೆಸೇಜ್ ಕಳಿಸಿದರು.
ಅದರಲ್ಲಿ ನನ್ನ ಕುರಿತು ಕೆಲವು ಆರೋಪಗಳಿದ್ದವು. ಆ ಸಂಶೋಧನೆ ಯೋಜನೆಯ ಕುರಿತು ಕೆಲವು ತಪ್ಪು ಮಾಹಿತಿಗಳಿಂದ ಕೂಡಿದ ಆರೋಪಗಳೂ ಇದ್ದವು. ನನಗೆ ಅದನ್ನು ನೋಡಿ ಮೇಡಂ ಹೀಗೆಲ್ಲಾ ಯೋಚಿಸುವುದಾ ಅನಿಸಿದರೂ, ಅವುಗಳಿಗೆ ಉತ್ತರಿಸುವುದು ನನ್ನ ಜವಾಬ್ದಾರಿ ಎಂದೆಣಿಸಿ ಅವರು ಬರೆದಿದ್ದ ಪ್ರತಿಯೊಂದು ಅಂಶಕ್ಕೂ ವಿವರಣೆಯನ್ನು ಬರೆದು ರಾತ್ರಿ 2 ಗಂಟೆಯ ಸುಮಾರಿಗೆ ಕಳಿಸಿದೆ. ಅದನ್ನು ಓದಿದ ಮೇಡಂ ನಿಜಕ್ಕೂ ಕನ್ವಿನ್ಸ್ ಆಗಿದ್ದರು. ಮೊದಲು ಬಹಳ ಬಿರುಸಿನಿಂದ ಶುರುವಾಗಿದ್ದ ಆ ಮೆಸೆಂಜರ್ ಮಾತುಕತೆ ಮುಗಿಯುವಾಗ ಪರಸ್ಪರ ಸಾರಿ ಕೇಳಿಕೊಳ್ಳುವಲ್ಲಿಗೆ ಸುಖಾಂತ್ಯ ಕಂಡಿತ್ತು.
ಗೌರಿ ಮೇಡಂ ಹತ್ಯೆಯಾಗುವ ಕೆಲವು ದಿನಗಳ ಮೊದಲು ಗೌರಿಯವರು ಇಷ್ಟಪಡುತ್ತಿದ್ದ ಕೆಲವಾರು ಪ್ರಗತಿಪರ ಶಕ್ತಿಗಳು ತಮ್ಮ ತಮ್ಮೊಳಗೆ ಕಚ್ಚಾಡುತ್ತಿದ್ದುದನ್ನು ಕಂಡು ತುಂಬಾ ಮನಸಿಗೆ ಹಚ್ಚಿಕೊಂಡಿದ್ದರು. ಆಗಷ್ಟೇ ಅವರು ಟ್ವಿಟರ್ ಅಕೌಂಟ್ ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದರು. ಅದರಲ್ಲೂ ನಾವೆಲ್ಲಾ ಒಂದು ಉದ್ದೇಶಕ್ಕಾಗಿ ಕೆಲಸ ಮಾಡೋಣ, ನಮ್ಮ ನಮ್ಮಲ್ಲೇ ಕಚ್ಚಾಟ ಬೇಡ ಎಂದು ಕೋರಿಕೊಂಡಿದ್ದರು.
ಇದು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಜಗಳಗಳ ಹಿನ್ನೆಲೆಯಲ್ಲೇ ಅವರು ಮಾಡಿದ್ದ ಟ್ವೀಟ್ ಆಗಿತ್ತು. ಆದರೆ ಇದನ್ನು ವಿಕೃತ ರೀತಿಯಲ್ಲಿ ಬಳಸಿಕೊಂಡಿದ್ದು ಕೆಲ ಬಲಪಂಥೀಯ ಪತ್ರಕರ್ತರಾಗಿದ್ದರು. ಈ ಸಂದರ್ಭದಲ್ಲಿ ನಾವು ಯಾರಾದರೂ ಸಿದ್ದರಾಮಯ್ಯ ಅವರ ಕುರಿತು ಏನಾದರೂ ವಿಮರ್ಶೆ ಬರೆದರೆ ಗೌರಿ ಮೇಡಂ ತುಂಬಾ ಸಿಡಿಮಿಡಿಯಾಗುತ್ತಿದ್ದರು. ಬಿಜೆಪಿ-ಸಂಘಪರಿವಾರವನ್ನು ಎದುರಿಸಲು ನಮಗೆ ಅನಿವಾರ್ಯವಾದ ಆಯ್ಕೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಎಂಬುದು ಅವರ ಗಟ್ಟಿ ನಂಬಿಕೆಯಾಗಿತ್ತು. ಈ ಕುರಿತು ಒಂದೆರಡು ಸಲ ನನಗೂ ಗೌರಿ ಮೇಡಂಗೂ ಫೇಸ್ಬುಕ್ಕಿನಲ್ಲಿ ಸಣ್ಣ ತಿಕ್ಕಾಟವೂ ಆಗಿತ್ತು. ಆದರೆ ಅದು ವೈಯಕ್ತಿಕ ಮಟ್ಟದಲ್ಲಂತೂ ಇರಲಿಲ್ಲ.
2017ರ ಸೆಪ್ಟೆಂಬರ್ 05ರಂದು ಗೌರಿ ಮೇಡಂ ಹತ್ಯೆ ಕನ್ಪರ್ಮ್ ಆದ ಕ್ಷಣದಲ್ಲಿ ಕುಸಿದು ಬಿದ್ದಂತಾಯಿತು. “ನಾನು ಗೌರಿ” ಎಂದು ಫೇಸ್ಬುಕ್ಕಿನಲ್ಲಿ ಒಂದು ವಾಕ್ಯವನ್ನು ಬರೆದು ಕೆಲವು ಗಂಟೆಗಳ ಕಾಲ ಸುಮ್ಮನೇ ಕುಳಿತುಬಿಟ್ಟೆ.
ತಾನಿರುವ ಕಾಲವನ್ನು, ಕಾಲದ ಬಿಕ್ಕಟ್ಟುಗಳನ್ನು ಸರಿಯಾಗಿ ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ಪಕ್ಷ ಸಿದ್ಧಾಂತಗಳ ಗಡಿಗಳನ್ನು ಮೀರಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ತನ್ನನ್ನು ತಾನು ತೇಯ್ದುಕೊಳ್ಳುತ್ತಿದ್ದರು ಗೌರಿ ಲಂಕೇಶ್.
ತಾನೊಬ್ಬ ಹೈಫೈ ಪತ್ರಕರ್ತೆಯಾಗುವ ಎಲ್ಲಾ ಅವಕಾಶಗಳನ್ನು ಬಿಟ್ಟು ತನಗೆ ಆತ್ಮತೃಪ್ತಿಯಾಗುವ ರೀತಿಯಲ್ಲಿ ಕನ್ನಡ ಪತ್ರಿಕೋದ್ಯಮವನ್ನೇ ಆರಿಸಿಕೊಂಡು, ಕೆಲವೇ ವರ್ಷಗಳಲ್ಲಿ ಅದ್ಭುತವಾಗಿ ವಿಶ್ಲೇಷಣೆ ನಡೆಸಿ ಬರೆಯುವ ಮಟ್ಟಿಗೆ ಒಬ್ಬ ಧೀಮಂತ ಪತ್ರಕರ್ತೆಯಾಗಿ ಬೆಳೆದಿದ್ದು ಗೌರಿ ಲಂಕೇಶ್. ಹೇಗೆ ಅವರಪ್ಪ ಲಂಕೇಶ್ ‘ಪ್ರಗತಿ ರಂಗ” ಕಟ್ಟಿಕೊಂಡು ರಾಜ್ಯವನ್ನೆಲ್ಲಾ ಸುತ್ತಿದ್ದರೋ ಹಾಗೆಯೇ ಗೌರಿ ಲಂಕೇಶ್ ಕೂಡಾ ನಾಡಿನ ಎಲ್ಲಾ ಜನಪರ ಶಕ್ತಿಗಳ ಕಣ್ಮಣಿಯಾಗಿ ಕೆಲಸ ಮಾಡುತ್ತಿದ್ದು. ಅವರೆಷ್ಟು ಸರಳತೆಯನ್ನು ಮೈಗೂಡಿಸಿಕೊಂಡಿದ್ದರು ಎಂದರೆ ಆಶ್ಚರ್ಯವಾಗುತ್ತದೆ.
ಗೌರಿ ಮೇಡಂ ಅವರು ಕೆಲಸ ಮಾಡುತ್ತಿದ್ದ ರೀತಿಯನ್ನು ಹತ್ತಿರದಿಂದ ನೋಡಿರುವ ನಾನು ಎಷ್ಟೋ ಸಲ ದಂಗಾಗಿದ್ದೇನೆ. ಗೈಡ್, ಲಂಕೇಶ್ ಪತ್ರಿಕೆ, ಹಲವಾರು ಪುಸ್ತಕಗಳ ಪ್ರಕಾಶನ ಇತ್ಯಾದಿ ಕೆಲಸಗಳನ್ನು ಅವರು ಅದ್ಯಾವ ಪರಿ ಮಾಡುತ್ತಿದ್ದರೆಂದರೆ ಕೆಲವೊಮ್ಮೆ ಹತ್ತಾರು ಗಂಟೆಗಳ ಕಾಲ ಎಡೆಬಿಡದೇ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಎಲ್ಲಾ ಕೆಲಸವನ್ನೂ ಅವರೊಬ್ಬರೇ ಮಾಡಬೇಕಾದ ಪರಿಸ್ಥಿತಿ ಎದುರಾದಾಗಲೂ ತಾಳ್ಮೆಯಿಂದಲೇ ಎಲ್ಲವನ್ನೂ ನಿರ್ವಹಿಸುತ್ತಿದ್ದರು.
ಬಹುಶಃ ನಾನಾಗಲೀ, ಕುಮಾರ್ ಬುರಡಿಕಟ್ಟಿಯಾಗಲೀ ಲಂಕೇಶ್ ತೊರೆದು ಬೇರೆ ಕೆಲಸ ನೋಡಿಕೊಳ್ಳದೇ ಹೋಗಿದ್ದರೆ ಅವರ ಹೊರೆಯಲ್ಲಿ ಒಂದಷ್ಟು ನಾವೂ ಹೊತ್ತು ಅವರಿಗೆ ಒಂದಷ್ಟು ಹಗರುವಾಗುತ್ತಿತ್ತು ಎನಿಸುತ್ತದೆ. ಆದರೆ ಈಗ ಹಳಹಳಿಸಿ ಏನೂ ಪ್ರಯೋಜನವಿಲ್ಲ. ಅಂದಿನ ಪರಿಸ್ಥಿತಿಗಳೂ ಹಾಗಿರಲಿಲ್ಲ.
ಒಟ್ಟಿಗೇ ಕೆಲಸ ಮಾಡಿದ, ಒಟ್ಟಿಗೇ ಊಟ ಮಾಡಿದ, ಒಟ್ಟಿಗೇ ಶಟಲ್ ಆಡಿದ, ಒಟ್ಟಿಗೇ ಹೋರಾಟಗಳಲ್ಲಿ ಭಾಗಿಯಾದ ಗೌರಿ ಮೇಡಂ ಈಗಲೂ ಇರಬೇಕಿತ್ತು ಎಂದು ಅನಿಸುತ್ತಲೇ ಇರುತ್ತದೆ.
ನನಗೆ ನನ್ನ ಬದುಕಿನಲ್ಲಿ ಹೊಸ ದಾರಿಯೊಂದಕ್ಕೆ ಅಡಿಪಾಯ ಹಾಕಿಕೊಟ್ಟ ಅವರನ್ನು ಕೃತಜ್ಞತೆಯಿಂದ ನೆನೆಯದೇ ಇದ್ದರೆ ನನ್ನಷ್ಟು ಕೃತಘ್ನ ಯಾರೂ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ4 days agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ಅಂಕಣ7 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ4 days agoಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ7 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
-
ದಿನದ ಸುದ್ದಿ5 days agoನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
-
ದಿನದ ಸುದ್ದಿ6 days agoಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
-
ದಿನದ ಸುದ್ದಿ5 days agoನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ
-
ಅಂಕಣ2 days agoನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ



