ದಿನದ ಸುದ್ದಿ
ಗೃಹಜ್ಯೋತಿ ಯೋಜನೆ | ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೂ ಅನ್ವಯ : ಸಚಿವ ಕೆ.ಜೆ. ಜಾರ್ಜ್
ಸುದ್ದಿದಿನ, ಬೆಂಗಳೂರು : ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೂ ಅನ್ವಯಿಸಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಡಿಗೆದಾರರು ಮಾಲೀಕರಿಂದ ಪಡೆದ ಒಪ್ಪಂದ ಪತ್ರ ಅಥವಾ ವಾಸ ದೃಢೀಕರಣದ ಯಾವುದೇ ದಾಖಲೆ ನೀಡಬಹುದು ಎಂದರು.
ರಾಜ್ಯದಲ್ಲಿ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ 2ಕೋಟಿ 14 ಲಕ್ಷ ಗ್ರಾಹಕರಿದ್ದು, ಅವರಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ. ಯೋಜನೆಯ ಲಾಭ ಪಡೆಯಲು ಬಯಸುವವರು ಆರ್‌ಆರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್‌ನ್ನು ಸಲ್ಲಿಸಬೇಕಾಗುತ್ತದೆ. ಮಾಹಿತಿ ಸಿಂಧು, ಬೆಂಗಳೂರು ಒನ್, ಗ್ರಾಮ ಒನ್ ಸೇರಿದಂತೆ ಯಾವುದೇ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ಅರ್ಜಿ ಸಲ್ಲಿಸಲು ಗೃಹಜ್ಯೋತಿ ಆಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಜೂನ್ 15 ರಿಂದ ಜುಲೈ 5 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿ ಮನೆಯ ವಾರ್ಷಿಕ ಸರಾಸರಿ ಬಳಕೆ ಆಧಾರದಲ್ಲಿ ಯೂನಿಟ್ ನಿಗದಿ ಮಾಡಲಾಗುವುದು, ಅದಕ್ಕಿಂತ ಶೇಕಡಾ 10 ರಷ್ಟು ಹೆಚ್ಚುವರಿ ಉಚಿತ ವಿದ್ಯುತ್ ದೊರೆಯಲಿದೆ.
200 ಯೂನಿಟ್ ದಾಟಿದರೆ ಇಡೀ ಬಳಕೆಯ ಶುಲ್ಕ ಪಾವತಿಸಬೇಕು, ಉಚಿತ ಬಳಕೆಗೆ ಯಾವುದೇ ಕನಿಷ್ಠ ಶುಲ್ಕ, ತೆರಿಗೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಬಳಕೆದಾರರಿಗೆ ಹಂಚಿಕೆಯಾದ ಯೂನಿಟ್‌ಗಳಿಗಿಂತ ಹೆಚ್ಚು ಬಳಸಿದರೆ ಹೆಚ್ಚುವರಿ ಪಾವತಿ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243